ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಸಿಎಲ್‌ನಿಂದ ಪರಿಸರಕ್ಕೆ ಹಾನಿಯಾದರೆ ಬಂದ್‌ಗೂ ಹಿಂಜರಿಯೆ

Last Updated 8 ಏಪ್ರಿಲ್ 2011, 9:25 IST
ಅಕ್ಷರ ಗಾತ್ರ

ಸಾಂತೂರು ಯುಪಿಸಿಎಲ್ ಘಟಕ (ಉಡುಪಿ): ‘ಹಾರುಬೂದಿ ಹೊಂಡದಿಂದ ನೀರು ಸೋರಿಕೆಯಾಗಿ ಸುತ್ತಮುತ್ತಲ ಕೃಷಿಭೂಮಿಗೆ, ಕೆರೆಬಾವಿಗಳಿಗೆ ಹೋಗದಂತೆ ಎಚ್ಚರಿಕೆ ವಹಿಸಬೇಕು. ಹಾರುಬೂದಿ ಹೊಂಡದ ನೀರು ಶೇಖರಣೆಗೆ ಪ್ರತ್ಯೇಕ ಹೊಂಡ ನಿರ್ಮಿಸಿ ಅಲ್ಲಿ ಶೇಖರವಾಗುವ ನೀರನ್ನೇ ಮರಳಿ ಹಾರುಬೂದಿ ಹೊಂಡಕ್ಕೆ ಬಳಕೆ ಮಾಡಬೇಕು. ಸಮುದ್ರದಿಂದ ಬರುವ ಪೈಪ್‌ಲೈನ್‌ನಲ್ಲಿ ಸೋರಿಕೆ ತಡೆಗಟ್ಟಬೇಕು ಹಾಗೂ ಘಟಕದ ಕೂಲಿಂಗ್ ಪ್ಲಾಂಟ್‌ಗೆ ಬಳಸುವ ಉಪ್ಪು ನೀರಿನ ಬದಲಿಗೆ ಸಿಹಿನೀರನ್ನು ಬಳಸಬೇಕು, ಸಮುದ್ರನೀರನ್ನು ಸಿಹಿ ನೀರಾಗಿ ಪರಿವರ್ತಿಸಿ ಪರಿಸರ ಹಾನಿ ತಡೆಯಬೇಕು’
 

ಇವೆಲ್ಲ ಸಲಹೆ, ಸೂಚನೆಗಳನ್ನು ಪರಿಸರ ಸಚಿವ ಕೃಷ್ಣ ಜೆ.ಪಾಲೆಮಾರ್ ಹಾಗೂ ಸಂಸದ ಡಿ.ವಿ.ಸದಾನಂದ ಗೌಡ ಯುಪಿಸಿಎಲ್ ಅಧಿಕಾರಿಗಳಿಗೆ ನೀಡಿದರು. ಗುರುವಾರ ಬೆಳಿಗ್ಗೆ ಸಾಂತೂರಿನ ಹಾರುಬೂದಿ ಹೊಂಡದ ಪ್ರದೇಶಕ್ಕೆ ಪಾಲೆಮಾರ್ ಹಾಗೂ ಸದಾನಂದ ಗೌಡ ಭೇಟಿ ನೀಡಿ ಮಾತನಾಡಿದರು. ಇವುಗಳನ್ನು ನಿಗದಿತ ಕಾಲಾವಕಾಶದಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಆದರೆ ಎಷ್ಟು ಕಾಲಾವಕಾಶ ಎನ್ನುವುದನ್ನು ಚರ್ಚಿಸಿ ನಂತರ ತಿಳಿಸುವುದಾಗಿಯೂ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.
 

ಹಾರುಬೂದಿಗೆ ಬಿಡುವ ನೀರು ಕುಡಿದರು, ಉಪ್ಪಿಲ್ಲ ಎಂದರು...: ಹಾರುಬೂದಿ ಹೊಂಡ ಪ್ರದೇಶಕ್ಕೆ ಭೇಟಿ ನೀಡಿದ ಪಾಲೆಮಾರ್ ಅಲ್ಲಿನ ಸ್ಥಳ ಪರಿಶೀಲಿಸಿದರು. ಹಾರುಬೂದಿ ಹೊಂಡಕ್ಕೆ ನೀರು ನಿಗದಿತವಾಗಿ ಬಿಡಲಾಗುತ್ತಿದೆಯೇ ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದರು. ಹೊಂಡಕ್ಕೆ ಬಿಡುತ್ತಿದ್ದ ನೀರನ್ನು ಚಿಕ್ಕ ಕ್ಯಾನ್‌ನಲ್ಲಿ ಸಂಗ್ರಹಿಸಿ ಒಂದು ಗುಟುಕು ಚಪ್ಪರಿಸಿ ನೋಡಿದರು, ಬೂದಿ ಹೊಂಡದಲ್ಲಿದ್ದ ನೀರಿನ ರುಚಿ ಕೂಡ ನೋಡಿದರು. ಅವರೊಂದಿಗೆ ಸಂಸದ ಡಿ.ವಿ.ಸದಾನಂದ ಗೌಡರು ನೋಡಿದರು. 
 

‘ಉಪ್ಪಿಲ್ಲ, ಸರಿಯಾಗಿದೆ’ ಎಂದರು. ಅಲ್ಲಿದ್ದ ಸ್ಥಳೀಯರು ಇದನ್ನು ಆಕ್ಷೇಪಿಸಿದರು. ‘ಇವತ್ತು ನೀವು ಬಂದಿದ್ದೀರಿ ಎಂದು ಸಿಹಿನೀರು ಬಿಟ್ಟಿದ್ದಾರೆ. ಇದಕ್ಕೆ ಉಪ್ಪು ನೀರನ್ನೇ ಬಿಡುವುದು’ ಎಂದು ದೂರಿದರು. ‘ನಮ್ಮ ಮನೆಗಳಿಗೆ ಬನ್ನಿ. ಬಾವಿಯ ನೀರು ಎಷ್ಟು ಉಪ್ಪಾಗಿದೆ ಎಂಬುದು ಗೊತ್ತಾಗುತ್ತದೆ. ಪಾದೆಬೆಟ್ಟುವಿಗೆ ಬನ್ನಿ. ಬಾವಿಯ ನೀರು ಕಲುಷಿತವಾಗಿದ್ದು ಗೊತ್ತಾಗುತ್ತದೆ’ ಎಂದು ಮುದರಂಗಡಿ ಗ್ರಾ.ಪಂ.ಅಧ್ಯಕ್ಷ ಸುನಿಲ್ ರಾಜ್ ಶೆಟ್ಟಿ ಸವಾಲೆಸೆದರು. ‘ಹೋಗೋಣ ಅಲ್ಲಿಗೆ’ ಎಂದೇನೋ ಎಲ್ಲರೂ ದನಿಗೂಡಿಸಿದರು. ಆದರೆ ಯಾರೂ ಅಲ್ಲಿಗೆ ಹೋಗಲಿಲ್ಲ. 
 

‘ನಾಗಾರ್ಜುನ ಪರಿಸರದಿಂದ ಹಾನಿಯಾಗುವುದಾದರೆ ನಾವು ಅದನ್ನು ಬೆಂಬಲಿಸುವುದಿಲ್ಲ. ಶೇ 100ರಷ್ಟು ನಾವು ಕಂಪೆನಿ ಪರವಾಗಿಲ್ಲ. ಪರಿಸರ ಇಲಾಖೆಯ ನೀತಿ ನಿಯಮಗಳನ್ನು ಕಂಪೆನಿ ಉಲ್ಲಂಘಿಸಿದ್ದು ಸ್ಪಷ್ಟವಾಗಿ ಇಲ್ಲಿ ಕಂಡುಬರುತ್ತಿದೆ. ಇಷ್ಟು ದಿನ ಆಗಿದ್ದು ಆಗಿದೆ. ಮುಂಬರುವ ದಿನಗಳಲ್ಲಿ ಯಾವ ರೀತಿ ಸರಿಪಡಿಸಬೇಕು ಎಂಬುವುದರ ಬಗ್ಗೆ ನಮ್ಮ ಗಮನ ಹರಿಸಬೇಕು. ಎಲ್ಲ ಸರಿಪಡಿಸುವವರೆಗೆ ಅಗತ್ಯ ಬಿದ್ದರೆ ಕಂಪೆನಿ ಬಂದ್ ಮಾಡಿಸುತ್ತೇವೆ ’ ಎಂದು ಸಂಸದ ಡಿ.ವಿ.ಸದಾನಂದ ಗೌಡ ಹೇಳಿದರು.
 

ಡಾ.ಆಚಾರ್ಯ ಪರಿಸರ ಸಚಿವರಲ್ಲ, ಪೇಜಾವರ ಶ್ರೀ ಸರ್ಕಾರವಲ್ಲ...: ‘ನೀವೇನೋ ಹೀಗೆ ಹೇಳುತ್ತೀರಿ. ಆದರೆ ಇತ್ತೀಚೆಗೆ ಭೇಟಿ ನೀಡಿದ ಸಚಿವ ಡಾ.ವಿ.ಎಸ್.ಆಚಾರ್ಯರು ಯಾವ ಕಾರಣಕ್ಕೂ ಕಂಪೆನಿ ಬಂದ್ ಮಾಡುವುದಿಲ್ಲ’ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಪಾಲೆಮಾರ್ ‘ಆಚಾರ್ಯರು ಪರಿಸರ ಸಚಿವರಲ್ಲ. ನಮ್ಮ ಇಲಾಖೆ ಸಾಕಷ್ಟು ಬಲಿಷ್ಟವಾಗಿದೆ ’ ಎಂದರು. ಅಷ್ಟಕ್ಕೂ ರಾಜ್ಯಕ್ಕೆ ವಿದ್ಯುತ್ ಕೂಡ ಮುಖ್ಯ. ಕರೆಂಟ್ ಸಮಸ್ಯೆಯುಂಟಾದರೆ ನೀವೇ (ಮಾಧ್ಯಮ) ರಾಜ್ಯದಲ್ಲಿ ವಿದ್ಯುತ್ ಕೊರತೆ ಎಂದು ಬರೆಯುತ್ತೀರಿ. ಹೀಗಾಗಿ ಎಲ್ಲವನ್ನೂ ನಿಭಾಯಿಸಬೇಕಿದೆ’ ಎಂದರು.
 

‘ಪೇಜಾವರ ವಿಶ್ವೇಶತೀರ್ಥರು ಇಲ್ಲಿಗೆ ಬಂದು ನೋಡಿದರು, ಸಭೆ ಮಾಡಿದರು, ಸರ್ಕಾರಕ್ಕೆ ಪತ್ರ ಬರೆದರು, ನಿರಶನಕ್ಕೆ ಕುಳಿತರು, ಯಾವುದಕ್ಕೂ ಕಂಪೆನಿ ಬಗ್ಗಿಲ್ಲ. ಸರ್ಕಾರ ಇತ್ತ ನೋಡಿಲ್ಲ. ಈಗ ಪರಿಸರ ಇಲಾಖೆ ಹೇಳಿದರೆ ಕೇಳುತ್ತದೆಯೇ?’ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು ‘ಪೇಜಾವರಶ್ರೀಗಳು ಸರ್ಕಾರವಲ್ಲ, ಈಗ ಪರಿಸರ ಇಲಾಖೆಯೇ ಹೇಳುತ್ತಿದೆ ಎಂದ ಮೇಲೆ ಮಾಡಲೇಬೇಕು. ಈಗಾಗಲೇ 6 ಮಂದಿಯ ತಂಡ ಕೂಡ ರಚನೆಯಾಗಿ ಸರ್ಕಾರಕ್ಕೆ ವರದಿ ನೀಡುತ್ತಿದೆ. ಬಂದ್ ಮಾಡುವುದು ಬಿಡುವುದು ಸರ್ಕಾರದ ಕೈಯಲ್ಲಿದೆ ’ಎಂದರು.
 

ಯುಪಿಸಿಎಲ್ ಘಟಕಕ್ಕೆ ಭೇಟಿ: ಅಲ್ಲಿಂದ ಸಚಿವರ ತಂಡ ತೆರಳಿದ್ದು ಯುಪಿಸಿಎಲ್ ಘಟಕದ ಒಳಕ್ಕೆ. ಒಳಾವರಣದಲ್ಲಿ ಮುಕ್ತವಾಗಿಯೇ ಕಲ್ಲಿದ್ದಲನ್ನು ಸಂಗ್ರಹ ಮಾಡಿಟ್ಟಿರುವುದನ್ನು ಮಾಧ್ಯಮದವರು ಸಚಿವರ ಗಮನಕ್ಕೆ ತಂದಾಗ ಅವರು ಕೂಡ ಅದನ್ನು ನೋಡಿ ಅಧಿಕಾರಿಗಳ ಗಮನಕ್ಕೆ ತಂದರು. ಅದನ್ನು ಮಳೆಗಾಲದಲ್ಲಿ ಸೂಕ್ತವಾಗಿ ಮುಚ್ಚಿಡುವ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ಉತ್ತರಿಸಿದರು.
 

ಯುಪಿಸಿಎಲ್ ಕೂಲಿಂಗ್ ಟವರ್‌ನ ಎತ್ತರ ಕೂಡ ಕಡಿಮೆ ಇದೆ, ಅದನ್ನು ಪರಶೀಲನೆ ಮಾಡಲಿ ಎಂದು ಕೆಲವರು ಆಗ್ರಹಿಸಿದರು. ಸ್ಥಳೀಯ ಗ್ರಾ.ಪಂ. ಸದಸ್ಯರು ಪಂಚಾಯಿತಿಯಿಂದ ಕಂಪೆನಿ ಈವರೆಗೂ ಯಾವುದೇ ಅನುಮತಿ ಪಡೆದುಕೊಂಡಿಲ್ಲ ಎಂದು ದೂರಿದರು. ಎಲ್ಲವನ್ನೂ ಆಲಿಸಿದ ಸಚಿವರು ಪರಿಸರ ಇಲಾಖೆಯ ದಾಖಲೆ ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದರು. ‘ನಾವು ಜನರೊಂದಿಗೆ ಇದ್ದೇವೆ. ಕಂಪೆನಿ ಊಟದಲ್ಲಿ ಬದುಕುತ್ತಿಲ್ಲ. ಅಗತ್ಯ ಬಿದ್ದರೆ ಕಂಪೆನಿ ಬಂದ್ ಮಾಡಿ ಎಲ್ಲವನ್ನೂ ಸರಿಪಡಿಸುತ್ತೇವೆ, ಜನರ ವಿಶ್ವಾಸ ಮರಳಿ ಪಡೆಯುತ್ತೇವೆ’ ಎಂದು ಹೇಳಿ ಕಾರು ಏರಿದರು.

‘ಕೆಲವರು ರಾಜಕೀಯ ಲಾಭಕ್ಕೆ ಬರ್ತಾರೆ...ನಾವು ಪ್ರಚಾರ ಬಯಸಿ ಬಂದಿಲ್ಲ’

ನೀವು ಬರುವುದನ್ನು ಮುಂಚಿತವಾಗಿ ಹೇಳಬೇಕಿತ್ತು. ಜನರೊಂದಿಗೆ ಸಮಸ್ಯೆ ಆಲಿಸುವುದು ಬಿಟ್ಟು ಅಧಿಕಾರಿಗಳ ಮಾತು ಆಲಿಸುತ್ತೀರಲ್ಲ?’ ಎಂದು ಹೇಗೋ ಸುದ್ದಿ ಗೊತ್ತಾಗಿ ಅಲ್ಲಿಗೆ ಬಂದಿದ್ದ ಕೆಲವು ಸ್ಥಳೀಯರು ದೂರಿದರು.‘ನಾವು ಪ್ರಚಾರ ಬಯಸಿ ಬರಲಿಲ್ಲ. ಕೆಲವರು ತಮ್ಮ ತಮ್ಮ ರಾಜಕೀಯ ಲಾಭಕ್ಕಾಗಿ ಇಲ್ಲಿಗೆ ಬರುತ್ತಾರೆ. ಪ್ರಚಾರ ಪಡೆಯುತ್ತಾರೆ. ನಾನು ಈ ಭಾಗದ ಸಂಸದನಾಗಿ ನಿರಂತರವಾಗಿ ಇಲ್ಲಿನ ಸಮಸ್ಯೆಗಳ ಬಗ್ಗೆ ಗಮನವಿಟ್ಟಿದ್ದೇನೆ. ಈಗಾಗಲೇ ಇಲ್ಲಿನ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ.

ಹೀಗಾಗಿ ಮತ್ತೆ ಜನರನ್ನು ಇಲ್ಲಿ ಸೇರಿಸಿದರೆ ಅಧಿಕಾರಗಳಿಗೆ ಸೂಚನೆ ನೀಡಲು ಸಾಧ್ಯವಿಲ್ಲ. ಡಾ.ಆಚಾರ್ಯರು ಧರ್ಮರಾಯನಂತೆ ಅಭಿವೃದ್ಧಿ ಕೆಲಸದ ಪರವಾಗಿದ್ದಾರೆ ಎಂಬ ಮಾತು ಈ ಭಾಗದಲ್ಲಿದೆ. ಆದರೆ ನಮಗೆ ಅಭಿವೃದ್ಧಿಯೂ ಬೇಕು, ವಿದ್ಯುತ್ ಬೇಕು, ಜತೆಗೆ ಪರಿಸರ ಕೂಡ ಉಳಿಯಬೇಕು. ನಮ್ಮ ಕೆಲಸವನ್ನು ನಾವು ಪ್ರಚಾರ ಬಯಸದೇ ಮಾಡುತ್ತ ಬಂದಿದ್ದೇವೆ. ಕಂಪೆನಿ ನಮ್ಮ ಮಾವನ ಮನೆಯದಲ್ಲ. ನಾವು ಚಹಾ ಕೂಡ ಕುಡಿದಿಲ್ಲ. ನಾವು ಯಾವ ಲಾಭ ಕಂಪೆನಿಯಿಂದ ಪಡೆದಿಲ್ಲ. ಜನರ ಸಮಸ್ಯೆ ಪರಿಹಾರ ಮಾಡಲು ಬಂದಿದ್ದೇವೆ’ ಎಂದು ಸಂಸದ ಡಿ. ವಿ. ಸದಾನಂದ ಗೌಡ ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT