ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುರೇನಿಯಂ ಖರೀದಿ ಮಾತುಕತೆ: ಆಸ್ಟ್ರೇಲಿಯಾಕ್ಕೆ ಎಸ್.ಎಂ. ಕೃಷ್ಣ ಭೇಟಿ

Last Updated 17 ಜನವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಣು ಶಕ್ತಿ ಇಂಧನ ಪೂರೈಕೆ ಮಾಡುವ ಗುಂಪಿನಲ್ಲಿರುವ ಆಸ್ಟ್ರೇಲಿಯಾದಿಂದ ಭಾರತವು ಯುರೇನಿಯಂ ಖರೀದಿಸಲು ನಿರ್ಧರಿಸಿದ್ದು, ಈ ಬಗ್ಗೆ ಮಾತುಕತೆ ನಡೆಸಲು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಆಸ್ಟ್ರೇಲಿಯಾಕ್ಕೆ ಮೂರು ದಿನಗಳ ಪ್ರವಾಸವನ್ನು ಮಂಗಳವಾರದಿಂದ ಕೈಗೊಳ್ಳಲಿದ್ದಾರೆ.

 ಕೃಷ್ಣ, ಈ ಕುರಿತು ಮೂರನೇ ಸುತ್ತಿನ ಮಾತುಕತೆಯನ್ನು ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಕೆವಿನ್ ರುಡ್ ಅವರೊಂದಿಗೆ ಬುಧವಾರ ನಡೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ (ಎನ್‌ಪಿಟಿ) ಸಹಿ ಮಾಡದ ರಾಷ್ಟ್ರಗಳಿಗೆ ಯುರೇನಿಯಂ ಮಾರಾಟ ಮಾಡಬಾರದು ಎಂಬ ನೀತಿಯನ್ನು ಆಸ್ಟ್ರೇಲಿಯಾ ಪಾಲಿಸಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ಕೃಷ್ಣ ಆಸ್ಟ್ರೇಲಿಯಾದ ಪ್ರಧಾನಿ ಜುಲಿಯಾ ಗಿಲ್ಲಾರ್ಡ್ ಅವರೊಂದಿಗೂ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಎನ್‌ಪಿಟಿ ಒಪ್ಪಂದಕ್ಕೆ ಭಾರತ ಸಹಿಹಾಕದಿದ್ದರೂ ಯುರೇನಿಯಂ ಖರೀದಿ ಬಗ್ಗೆ ಭಾರತ ನೈಜ ಕಾಳಜಿ ತೋರಿದರೆ ಆಸ್ಟ್ರೇಲಿಯಾ ಈ ಬಗ್ಗೆ ಮಾತುಕತೆ ನಡೆಸಲು ಸಿದ್ಧವಿದೆ ಎಂದು ಕೃಷ್ಣ ಅವರ ಈ ಭೇಟಿಯ ಹಿನ್ನೆಲೆಯಲ್ಲಿ ಭಾರತದಲ್ಲಿ ಆಸ್ಟ್ರೇಲಿಯಾದ ಹೈಕಮೀಷನರ್ ಆಗಿರುವ ಪೀಟರ್ ಎನ್. ವರ್ಗೀಸ್ ಹೇಳಿದ್ದಾರೆ.

ಎರಡೂ ದೇಶಗಳು ದ್ವಿಪಕ್ಷೀಯ, ಜಾಗತಿಕ ವಿಷಯಗಳ ಬಗ್ಗೆ ಮತ್ತು ಏಷ್ಯಾದ ಮತ್ತು ಜಿ 20 ದೇಶಗಳ ನಡುವೆ ರಕ್ಷಣಾ ವಿಚಾರವಾಗಿ ಇರುವ ಪರಸ್ಪರ ಸಹಕಾರದ ಕೊರತೆ ಕುರಿತು ಮಾತುಕತೆ ನಡೆಸಲಿವೆ.

ಹಾಗೆಯೇ ಏಷ್ಯಾ- ಪೆಸಿಫಿಕ್ ಆರ್ಥಿಕ ಸಮುದಾಯ(ಎಪಿಇಸಿ)ದ ಗುಂಪಿಗೆ ಭಾರತ ಸೇರ್ಪಡೆಯಾಗುವ ವಿಚಾರವಾಗಿಯೂ ಮಾತುಕತೆ ನಡೆಯಲಿದೆ. ಆಸ್ಟ್ರೇಲಿಯಾಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಭೇಟಿ ಮತ್ತು ಅವರು ಇದೇ ವರ್ಷ ಪರ್ತ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಭೆಯಲ್ಲಿ ಭಾಗವಹಿಸುವ ಬಗ್ಗೆಯೂ ಕೃಷ್ಣ ಮಾತುಕತೆ ನಡೆಸಲಿದ್ದಾರೆ.

ಇದೇ ಸಮಯದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ತಪ್ಪಿಸಲು ಮತ್ತು ಭಾರತೀಯರ ಸುರಕ್ಷತೆಗೆ ಆಸ್ಟ್ರೇಲಿಯಾ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಕೃಷ್ಣ ಮಾಹಿತಿ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT