ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುರೇನಿಯಂ ಗಣಿಗಾರಿಕೆ: ಅನುಮತಿಗೆ ಕೇಂದ್ರ ಪರಿಸರ ಇಲಾಖೆ ನಕಾರ

Last Updated 15 ಫೆಬ್ರುವರಿ 2013, 11:05 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ವಿವಾದಿತ ಗೋಗಿ ಯುರೇನಿಯಂ ಘಟಕಕ್ಕೆ ಅನುಮತಿ ನೀಡಲು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ನಿರಾಕರಿಸಿದ್ದು, ಸದ್ಯಕ್ಕೆ ಗೋಗಿ ಹಾಗೂ ಸುತ್ತಲಿನ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕಳೆದ ಡಿಸೆಂಬರ್ 28 ರಂದು ಯುರೇನಿಯಂ ಕಾರ್ಪೋರೇಶನ್ ಆಫ್ ಇಂಡಿಯಾಕ್ಕೆ ಪತ್ರ ಬರೆದಿರುವ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು, ಗೋಗಿ ಯುರೇನಿಯಂ ಗಣಿಗಾರಿಕೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಇದರಿಂದಾಗಿ ಭಾರಿ ವಿರೋಧದ ಮಧ್ಯೆ ಗೋಗಿಯಲ್ಲಿ ಯುರೇನಿಯಂ ಗಣಿಗಾರಿಕೆ ನಡೆಸಲು ಮುಂದಾಗಿದ್ದ ಯುಸಿಐಎಲ್‌ಗೆ ಹಿನ್ನಡೆ ಉಂಟಾದಂತಾಗಿದೆ.

ಪತ್ರದಲ್ಲಿ ಏನಿದೆ?:  ಯುರೇನಿಯಂ ಕಾರ್ಪೋರೇಶನ್ ಆಫ್ ಇಂಡಿಯಾದಿಂದ 2011 ರ ಮಾರ್ಚ್ 14 ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿಗಾಗಿ ಪತ್ರ ಬರೆಯಲಾಗಿತ್ತು. ಇದರ ಜೊತೆಗೆ ಎನ್ವಿರಾನ್‌ಮೆಂಟ್ ಇಂಪ್ಯಾಕ್ಟ್ ಅಸೆಸ್‌ಮೆಂಟ್ (ಇಐಎ) ವರದಿ ಹಾಗೂ ಸಾರ್ವಜನಿಕ ಅಹವಾಲು ಸಭೆಯ ನಡುವಳಿಕೆಗಳನ್ನು ಸಲ್ಲಿಸಲಾಗಿತ್ತು. 2012 ರ ಮೇ 14 ರಂದು ಕೆಲ ವಿವರಣೆಗಳನ್ನು ಸಲ್ಲಿಸಲಾಗಿತ್ತು.

ಇಲಾಖೆಯ ಪರಿಣಿತರ ಸಮಿತಿಯು 2011 ರ ನವೆಂಬರ್ 28-30 ರವರೆಗೆ ಈ ಪ್ರಸ್ತಾವನೆಯನ್ನು ಪರಿಶೀಲಿಸಿತು. ಈ ಸಂದರ್ಭದಲ್ಲಿ ಸಾರ್ವಜನಿಕ ಅಹವಾಲು ಸಭೆಯು ಯಾದಗಿರಿ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದಿರುವುದನ್ನು ಗಮನಿಸಿದ ಸಮಿತಿಯು, ಎನ್ವಿರಾನ್‌ಮೆಂಟ್ ಇಂಪ್ಯಾಕ್ಟ್ ಅಸೆಸ್‌ಮೆಂಟ್ (ಇಐಎ) ಅಧಿಸೂಚನೆಯ 2006 ರ ಪ್ರಕಾರ ಸಾರ್ವಜನಿಕ ಅಹವಾಲು ಸಭೆ ನಡೆಸಲು ಸಹಾಯಕ ಆಯುಕ್ತರಿಗೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಿತು. ಅಲ್ಲದೇ ಈ ಅಧಿಸೂಚನೆಯ ಮಾರ್ಗಸೂಚಿಯಂತೆ ಸಾರ್ವಜನಿಕ ಅಹವಾಲು ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಬೇಕು ಎಂದು ತಿಳಿಸಿತು.

ಈ ಸಮಿತಿಯ ಪರಿಶೀಲನೆಯಿಂದಾಗಿ ಗೋಗಿ ಯುರೇನಿಯಂ ಗಣಿಗಾರಿಕೆಗೆ ಸಂಬಂಧಿಸಿದಂತೆ 2010 ರ ನವೆಂಬರ್ 16 ರಂದು ನಡೆಸಲಾದ ಸಾರ್ವಜನಿಕ ಅಹವಾಲು ಸಭೆಯೇ ಅಸಿಂಧು ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹೇಳಿದೆ.

ಎನ್ವಿರಾನ್‌ಮೆಂಟ್ ಇಂಪ್ಯಾಕ್ಟ್ ಅಸೆಸ್‌ಮೆಂಟ್ (ಇಐಎ) ಅಧಿಸೂಚನೆಯ 2006 ರ ಪ್ರಕಾರ ಈ ಸಭೆ ನಡೆಯದೇ ಇರುವುದರಿಂದ ಇದಕ್ಕೆ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಲ್ಲದೇ ಅಧಿಸೂಚನೆಯಲ್ಲಿರುವ ನಿಯಮಾವಳಿಗಳ ಪ್ರಕಾರ ಮತ್ತೊಮ್ಮೆ ಸಾರ್ವಜನಿಕ ಅಹವಾಲು ಸಭೆ ನಡೆಸಬಹುದು. ಅಲ್ಲಿಯವರೆಗೆ ಈ ಯೋಜನೆಗೆ ಸಂಬಂಧಿಸಿದ ಕಡತವನ್ನು ಮುಚ್ಚಲಾಗಿದೆ. ಇಲಾೆಯಲ್ಲಿ ಬಾಕಿ ಉಳಿದಿರುವ ಯೋಜನೆಗಳ ಪಟ್ಟಿಯಿಂದ ಗೋಗಿ ಗಣಿಗಾರಿಕೆಯನ್ನು ಕೈಬಿಡಲಾಗಿದೆ ಎಂದು ತಿಳಿಸಿದೆ.

ಇದರಿಂದಾಗಿ ಯುಸಿಐಎಲ್‌ನಿಂದ ಗೋಗಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಯುರೇನಿಯಂ ಗಣಿಗಾರಿಕೆಗೆ ತೀವ್ರ ಹಿನ್ನಡೆ ಉಂಟಾದಂತಾಗಿದೆ. ಪರಿಸರವಾದಿಗಳ ಹಾಗೂ ಸ್ಥಳೀಯರ ತೀವ್ರ ವಿರೋಧದ ಮಧ್ಯೆ ಆರಂಭಿಸಲಾಗುತ್ತಿದ್ದ ಗಣಿಗಾರಿಕೆಗೆ ಸದ್ಯಕ್ಕೆ ತಡೆ ಬಿದ್ದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT