ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಆಟಗಾರರ ಸವಾಲು

ಕ್ರಿಕೆಟ್: ಜಿಂಬಾಬ್ವೆ ಎದುರು ಸೇಡು ತೀರಿಸಿಕೊಳ್ಳಲು ಭಾರತ ಕಾತರ
Last Updated 23 ಜುಲೈ 2013, 20:21 IST
ಅಕ್ಷರ ಗಾತ್ರ

ಹರಾರೆ (ಪಿಟಿಐ): ಎರಡು ವರ್ಷಗಳ ಹಿಂದೆ ಸುರೇಶ್ ರೈನಾ ಸಾರಥ್ಯದಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ಭಾರತ ಆತಿಥೇಯ ತಂಡದ ಎದುರು ಸೋಲು ಕಂಡಿತ್ತು. ಆದರೆ ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ತಂಡಕ್ಕೆ ಈಗ ಅವಕಾಶ ಸಿಕ್ಕಿದೆ.

ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ-ಜಿಂಬಾಬ್ವೆ ಮತ್ತೆ ಮುಖಾಮುಖಿಯಾಗಲಿವೆ. ಮಹೇಂದ್ರ ಸಿಂಗ್ ದೋನಿ ವಿಶ್ರಾಂತಿ ಮೊರೆ ಹೋಗಿರುವ ಕಾರಣ ಭಾರತ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಲಿದ್ದಾರೆ. ಯುವ ಆಟಗಾರರನ್ನು ಒಳಗೊಂಡಿರುವ ಈ ತಂಡ ಜಿಂಬಾಬ್ವೆ ಎದುರು ಗೆಲುವಿನ ವಿಶ್ವಾಸದಲ್ಲಿದೆ. ಜೊತೆಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಭಾರತದ ಮಟ್ಟಿಗೆ ಹೇಳುವುದಾದರೆ ಈ ಸರಣಿ ಹೊಸ ಪ್ರಯೋಗ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಜೊತೆಗೆ ಯಾವುದೇ ಒತ್ತಡ ಇಲ್ಲದೆ ಆಡಲು ಅನುವು ಮಾಡಿಕೊಟ್ಟಿದೆ. ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಉತ್ತಮ ಪ್ರದರ್ಶನದ ಮೂಲಕ ತಮ್ಮ ಇರುವಿಕೆಯನ್ನು ಸಾಬೀತುಪಡಿಸಲು ಯುವ ಆಟಗಾರರಿಗೆ ಇದೊಂದು ಅತ್ಯುತ್ತಮ ಅವಕಾಶ ಕೂಡ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ನಡೆದ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಉತ್ತಮ ಆರಂಭ ನೀಡಿದ್ದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಟೆಸ್ಟ್‌ನಲ್ಲಿ ಯಶಸ್ವಿಯಾಗಿರುವ ಚೇತೇಶ್ವರ ಪೂಜಾರ ಅವರಿಗೆ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಪ್ರತಿಭೆ ತೋರಲು ಅವಕಾಶ ಲಭಿಸಿದೆ. ಅನುಭವಿ ಬೌಲರ್‌ಗಳ ಅನುಪಸ್ಥಿತಿಯಲ್ಲಿ ಆರ್.ವಿನಯ್ ಕುಮಾರ್, ಶಮಿ ಅಹ್ಮದ್ ಅವರ ಮೇಲೆ ಹೆಚ್ಚಿನ ಭಾರ ಬಿದ್ದಿದೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಜಮ್ಮು ಕಾಶ್ಮೀರದ ಮೊದಲ ಆಟಗಾರ ಎನಿಸಿರುವ ಆಫ್ ಸ್ಪಿನ್ನರ್ ಪರ್ವೇಜ್ ರಸೂಲ್ ಮೇಲೂ ಭರವಸೆ ಇಡಲಾಗಿದೆ.

ಜಿಂಬಾಬ್ವೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. 2002ರಿಂದ ಈ ತಂಡದವರು ಭಾರತ ಪ್ರವಾಸವನ್ನೇ ಕೈಗೊಂಡಿಲ್ಲ. ಹಾಗೇ, ಭಾರತ ತಂಡದವರು ಈ ದೇಶಕ್ಕೆ 2002ರ ಬಳಿಕ ಮೂರು ಬಾರಿ ಮಾತ್ರ ಪ್ರವಾಸ ಕೈಗೊಂಡಿದ್ದಾರೆ.

ಈ ತಂಡದವರು ಈ ಸರಣಿಗಾಗಿ ಎರಡು ತಿಂಗಳಿನಿಂದ ಅಭ್ಯಾಸ ನಡೆಸುತ್ತಿದ್ದಾರೆ. ಈ ಸರಣಿ ಗೆದ್ದು ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿಯಾಗಿ ಮರು ಪ್ರವೇಶ ಮಾಡುವ ಉತ್ಸಾಹವನ್ನು ಬ್ರೆಂಡನ್ ಟೇಲರ್ ಬಳಗ ಹೊಂದಿದೆ.

ಪಾಕಿಸ್ತಾನ ಮೂಲದ ಆಟಗಾರ ಸಿಕಂದರ್ ರಾಜಾ ಅವರ ಮೇಲೆ ಈ ತಂಡದವರು ಭರವಸೆ ಇಟ್ಟಿದ್ದಾರೆ. 27 ವರ್ಷ ವಯಸ್ಸಿನ ಈ ಬ್ಯಾಟ್ಸ್‌ಮನ್ ದೇಶಿ ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಎಲ್ಟಾನ್ ಚಿಗುಂಬರ, ಮಾಜಿ ನಾಯಕ ಪ್ರಾಸ್ಪರ್ ಉತ್ಸೆಯಾ, ಹ್ಯಾಮಿಲ್ಟನ್ ಮಸಕಜಾ ಅವರಂಥ ಅನುಭವಿ ಆಟಗಾರರು ಈ ತಂಡದಲ್ಲಿದ್ದಾರೆ. ಅಷ್ಟು ಮಾತ್ರವಲ್ಲದೇ, ಕೈಲ್ ಜಾರ್ವಿಸ್ ಸೇರಿದಂತೆ ಐವರು ವೇಗಿಗಳು ಈ ತಂಡದಲ್ಲಿದ್ದಾರೆ.

ಉಭಯ ತಂಡಗಳು ಇದುವರೆಗೆ 51 ಬಾರಿ ಮುಖಾಮುಖಿಯಾಗಲಿವೆ. ಅದರಲ್ಲಿ 10 ಬಾರಿ ಮಾತ್ರ ಭಾರತ ತಂಡವನ್ನು ಮಣಿಸುವಲ್ಲಿ ಆತಿಥೇಯರು ಯಶಸ್ವಿಯಾಗಿದ್ದಾರೆ. ಆದರೆ 2010ರಲ್ಲಿ ನಡೆದ ತ್ರಿಕೋನ ಏಕದಿನ ಸರಣಿ ವೇಳೆ ಭಾರತ ತಂಡವನ್ನು ಮಣಿಸಿದ್ದೇ ಜಿಂಬಾಬ್ವೆಗೆ ಸದ್ಯದ ಸ್ಫೂರ್ತಿ.

                                  ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಚೇತೇಶ್ವರ ಪೂಜಾರ, ಸುರೇಶ್ ರೈನಾ, ಅಂಬಟಿ ರಾಯುಡು, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ಪರ್ವೇಜ್ ರಸೂಲ್, ಶಮಿ ಅಹ್ಮದ್, ಆರ್.ವಿನಯ್ ಕುಮಾರ್, ಜಯದೇವ್ ಉನದ್ಕತ್ ಹಾಗೂ ಮೋಹಿತ್ ಶರ್ಮ.

ಜಿಂಬಾಬ್ವೆ: ಬ್ರೆಂಡನ್ ಟೇಲರ್ (ನಾಯಕ ಹಾಗೂ ವಿಕೆಟ್ ಕೀಪರ್), ಸಿಂಕದರ್ ರಾಜಾ,  ಟೆಂಡೈ ಚತಾರ, ಮೈಕೆಲ್ ಚಿನೋಯಾ, ಎಲ್ಟಾನ್ ಚಿಗುಂಬರ, ಗ್ರೇಮ್ ಕ್ರೆಮರ್, ಕೈಲ್ ಜಾರ್ವಿಸ್, ಟಿಮಿಸೆನ್ ಮರುಮಾ, ಹ್ಯಾಮಿಲ್ಟನ್ ಮಸಕಜಾ, ನಟ್ಸಾಯಿ ಮಶಾಂಗ್ವೆ, ಟಿನೊಟೆಂಡಾ ಮುಟೊಂಬೊಜಿ, ವಸಿಮುಜಿ ಸಿಬಂದಾ, ಪ್ರಾಸ್ಪರ್ ಉತ್ಸೆಯಾ, ಬ್ರಯಾನ್ ವಿಟೋರಿ, ಮಾಲ್ಕಂ ವಾಲರ್ ಹಾಗೂ ಸೀನ್ ವಿಲಿಯಮ್ಸ.  

ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ (ಭಾರತೀಯ ಕಾಲಮಾನ). ನೇರ ಪ್ರಸಾರ: ಟೆನ್ ಕ್ರಿಕೆಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT