ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಎಂಜಿನಿಯರ್‌ಗಳ ಗಾಂಧಿ-ಶಾಸ್ತ್ರಿಗಿರಿ

Last Updated 3 ಅಕ್ಟೋಬರ್ 2011, 5:25 IST
ಅಕ್ಷರ ಗಾತ್ರ

ಧಾರವಾಡ: ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು `ಯುವ ಎಂಜಿನಿಯರ್‌ಗಳ ಸಾಮಾಜಿಕ ಜವಾಬ್ದಾರಿ~ ದಿನವಾಗಿ ಭಾನುವಾರ ಅರ್ಥಪೂರ್ಣವಾಗಿ ಆಚರಿಸಿದರು.

ತಮ್ಮ ಅಧ್ಯಾಪಕರೊಂದಿಗೆ ಸಮೀಪದ ಕಲಕೇರಿ ಸಂಗೀತ ವಿದ್ಯಾಲಯಕ್ಕೆ `ಸಹಲ್~ಗೆ ತೆರಳಿದ್ದರು. ಸುಂದರವಾದ ಗುಡ್ಡಗಳ ಮಧ್ಯೆ ಕಣಿವೆ. ಆ ಕಣಿವೆ ಸೀಳಿಕೊಂಡು ಹೋದ ಕಾಲುದಾರಿ. ಅಕ್ಕಪಕ್ಕ ತೊರೆಗಳು ಹಾಗೂ ಅಂತ್ಯದಲ್ಲಿ ಏರ್ಪಟ್ಟ ಕೆರೆಗಳು.

ಅಲ್ಲಿ ಕಮಲದ ಹೂ, ಪುಟಾಣಿ ಜಲಚರ ಪಕ್ಷಿಗಳು, ಬಿಳಿ ಹಾಗೂ ನೀಲಿ ನಾಮಗೋಳಿಗಳು. ಹೀಗೆ ನಿಸರ್ಗದ ಮಡಿಲಲ್ಲಿ ಟ್ರೆಕ್ಕಿಂಗ್ ಮೂಲಕ ಗುಡ್ಡ ಹತ್ತಿ ಕಲಕೇರಿ ಸಂಗೀತ ವಿದ್ಯಾಲಯ ತಲುಪಿ, ಇಬ್ಬರು ಮಹಾತ್ಮರನ್ನು ಸ್ಮರಿಸಿದವರು 55 ಯುವ ಎಂಜಿನಿಯರ್‌ಗಳು.  

ಉದ್ದೇಶ ಅಲ್ಲಿನ ಮಕ್ಕಳಿಂದ ಗಾಯನ, ಸಿತಾರ್ ಹಾಗೂ ವಯೋಲಿನ್ ವಾದ್ಯಗಳ ಸಂಗೀತ ಕಛೇರಿ ನಡೆಸಿ, ದೇಶ ಕಟ್ಟಿದ ಇಬ್ಬರು ಮಹನೀಯರಿಗೆ ಶ್ರದ್ಧಾಂಜಲಿ ಅರ್ಪಿಸುವುದು. ಜತೆಗೆ, ತಾವೂ ಸಹ ದೇಶ ಭಕ್ತಿಗೀತೆ ಹಾಗೂ ನೃತ್ಯಗಳ ಪ್ರದರ್ಶನ ನೀಡಿ ಅವರಲ್ಲಿ ಆತ್ಮವಿಶ್ವಾಸ ತುಂಬುವುದು.

ಕೆನಡಾ ದೇಶದ ಮ್ಯೋಥ್ಯೂ ದಂಪತಿಯಾದಿಯಾಗಿ, ಆಡಮ್ ವುಡ್ ವರ್ಡ್ಸ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಸಂಗೀತ ಶಾಲೆಗೆ ಕೈಲಾದ ಹಣಕಾಸಿನ ಸಹಾಯ ಮಾಡುವುದು. ಮಹಾತ್ಮಾ ಗಾಂಧಿ ಹಾಗೂ ಲಾಲ್  ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಈ ವಿದ್ಯಾರ್ಥಿಗಳು ಅಲ್ಲಿಯೇ ಆಚರಿಸಿದರು.

ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ, ಅಲ್ಲಿನ ಮಕ್ಕಳಿಗೆ ಯುವ ಎಂಜಿನಿಯರ್‌ಗಳು ಸಿಹಿ ಹಂಚಿದರು. ಕೆಲವರು ಪಾಠ ಹೇಳಿಕೊಟ್ಟರು. ವಿದ್ಯಾರ್ಥಿನಿಯರು ಮಕ್ಕಳನ್ನು ಅಪ್ಪಿ, ಮುದ್ದಿಸಿ ಅವರ ಕೈಗಳ ಮೇಲೆ ಮೆಹಂದಿ ರಂಗು ಮೂಡಿಸಿದರು. ಭಾವಗೀತೆ ಹಾಗೂ ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
 
ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಿ ಮಕ್ಕಳ ಮನ ರಂಜಿಸಿದರು. ಪುಟ್ಟ ಕಾಣಿಕೆಗಳನ್ನು ಸಹ ನೀಡಿ ಹರಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ, ಎಸ್‌ಡಿಎಂ ಎಲೆಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ, ಪ್ರೊ. ವಿಜಯ ಮೂರ್ತಿ, ತಮ್ಮ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಲ್ಲಿ ಎರಡು ಬ್ಯಾಚ್‌ಗಳು ಕಲಕೇರಿ ಸಂಗೀತ ಮಹಾವಿದ್ಯಾಲಯಕ್ಕೆ ವಿದ್ಯುತ್ ವ್ಯವಸ್ಥೆ ಸಮರ್ಪಕವಾಗಿ ಪೂರೈಸಿ ಕೊಡುವ ಕುರಿತು ಯೋಜನೆ ರೂಪಿಸಲಿವೆ ಎಂದು ಹೇಳಿದರು.

ಬರುವ ನಾಲ್ಕು ತಿಂಗಳಲ್ಲಿ ಯೋಜನೆ ಅನ್ವಯ ವಿದ್ಯುತ್ ಲೋಡ್ ಲೆಕ್ಕಾಚಾರ, ಬೇಕಾಗುವ ಉಪಕರಣಗಳು, ಸೂಕ್ತ ರೂಟಿಂಗ್ ವ್ಯವಸ್ಥೆ ಹಾಗೂ ಸುರಕ್ಷಿತ ಬಳಕೆ, ತಗಲುವ ವೆಚ್ಚ ಹಾಗೂ ಅದರಲ್ಲಿ ಮಹಾವಿದ್ಯಾಲಯದ ಕೊಡುಗೆ ಕುರಿತು ನೀಲನಕ್ಷೆ ರಚಿಸಿ ಕಲಕೇರಿ ಸಂಗೀತ ವಿದ್ಯಾಲಯದ ಆಡಳಿತಾಧಿಕಾರಿಗೆ ನೀಡಲಿವೆ. ವಿದ್ಯುತ್ ಸೌಕರ್ಯ ಕಲ್ಪಿಸುವ ಜವಾಬ್ದಾರಿ ನಮ್ಮದು ಎಂದರು.

ಈ ವಿಶಿಷ್ಟ ಕಾರ್ಯಕ್ರಮದ ರೂವಾರಿ ಪಶ್ಚಿಮ ಬಂಗಾಳದ ಬರ್ದವಾನ್ ವಾಸಿ ಸಪ್ತರ್ಷಿ ಬಕ್ಷಿ. ಸದ್ಯ ಎಸ್‌ಡಿಎಂ ಮಹಾವಿದ್ಯಾಲಯದ ಇ ಆಂಡ್ ಇ ವಿಭಾಗದಲ್ಲಿ 7ನೇ ಸೆಮಿಸ್ಟರ್ ಓದುತ್ತಿರುವ ಭಾವಿ ಎಂಜಿನಿಯರ್. ತಮ್ಮ ಸೀನಿಯರ್ ಆಗಿದ್ದ ಸೌರಭ್‌ಕುಮಾರ್ ಸಿನ್ಹಾ ಅವರಿಂದ ಪ್ರೇರಣೆ ಪಡೆದು ಈ ಕೆಲಸ ಮಾಡುತ್ತಿರುವುದಾಗಿ ಹೇಳಿದರು.

ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಮೂಲಕ ಕಲಕೇರಿ ಸಂಗೀತ ಮಹಾವಿದ್ಯಾಲಯಕ್ಕೆ ಸೂಕ್ತ ಹಣಕಾಸು ನೆರವು ಕಲ್ಪಿಸಲು ಸಮುದಾಯವನ್ನು ಹುಟ್ಟುಹಾಕಿದ ಶ್ರೇಯ ಇವರದು.

ತಮ್ಮ ಸಹಪಾಠಿಗಳು ತಲಾ ನೂರು, ಇನ್ನೂರು ರೂಪಾಯಿಗಳನ್ನು ಕೂಡಿಸಿದ್ದು, ಮುಂಬರುವ ದಿನಗಳಲ್ಲಿ ಎಸ್.ಡಿ.ಎಂ. ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ನೇಮಕಾತಿಯಲ್ಲಿ ಆಯ್ಕೆಯಾದ ಅಂತಿಮ ವರ್ಷದ ವಿದ್ಯಾರ್ಥಿಗಳು ಪ್ರತಿ ತಿಂಗಳು 1500 ರೂಪಾಯಿ ದೇಣಿಗೆ ನೀಡಿ, ಮಗುವೊಂದನ್ನು ದತ್ತು ಪಡೆದು ಓದಿಸುವ ನಿರ್ಣಯ ಮಾಡಿದ್ದಾಗಿ ಹೇಳಿದರು. ಪ್ರಥಮ ಪ್ರಯತ್ನವಾಗಿ ತಮ್ಮ ಸಹಪಾಠಿಗಳನ್ನು ಅವರು ಶಾಲೆ ತೋರಿಸಲು ಕರೆದೊಯ್ದಿದ್ದರು.

ಈಗಾಗಲೇ ಪ್ರಥಮ ಹಂತದಲ್ಲಿ, ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ವತಿಯಿಂದ `ಥಿಂಕ್ -2011  ರಾಷ್ಟ್ರೀಯ ತಾಂತ್ರಿಕ ಮೇಳದಲ್ಲಿ ಕಲಕೇರಿ ಸಂಗೀತ ವಿದ್ಯಾಲಯದ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಗಿತ್ತು. ಗೌರವ ಧನವಾಗಿ ರೂ ಎಂಟು ಸಾವಿರ ಗೌರವಧನವನ್ನು ಸಹ ನೀಡಲಾಗಿತ್ತು ಎಂದು ಸಪ್ತರ್ಷಿ ಭಕ್ಷಿ ಸ್ಮರಿಸಿದರು.

ಈ ಸಂದರ್ಭದಲ್ಲಿ ಸಂಗೀತ ವಿದ್ಯಾಲಯದ ಆಡಮ್ ವುಡ್‌ವರ್ಡ್ಸ್, ಅರುಣ್, ಚರಣ್, ಖಾನ್ ಹಾಗೂ ಬಳಗ, ಪಂಡಿತ ರವಿ ಕೂಡ್ಲಿಗಿ, ರಮೇಶ ಗೊರಟಾ, ಪ್ರೊ. ಚಕ್ರಸಾಲಿ ಸೇರಿದಂತೆ ಎಸ್‌ಡಿಎಂ ಮಹಾವಿದ್ಯಾಲಯದ ತಾಂತ್ರಿಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT