ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಕಾಂಗ್ರೆಸ್ ಸಮಿತಿ ಚುನಾವಣೆ: ತೀವ್ರ ಸೆಣಸಾಟ

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ಯುವ ನೇತಾರ ರಾಹುಲ್ ಗಾಂಧಿ ಆದೇಶದಂತೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರದೇಶ ಯುವ ಕಾಂಗ್ರೆಸ್ ಸಮಿತಿಗೆ ಇದೇ 12 ಮತ್ತು 13ರಂದು ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳ ನಡುವೆ ತೀವ್ರ ಸೆಣಸಾಟ ಆರಂಭವಾಗಿದೆ.

ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಎಂಟು ಪ್ರಧಾನ ಕಾರ್ಯದರ್ಶಿ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎಂಟರಲ್ಲಿ ಐದು ಪ್ರಧಾನ ಕಾರ್ಯದರ್ಶಿ ಸ್ಥಾನಗಳನ್ನು ಮೀಸಲಿಡಲಾಗಿದೆ. ತಲಾ ಒಂದು ಸ್ಥಾನವನ್ನು ಎಸ್‌ಸಿ/ಎಸ್‌ಟಿ ಮಹಿಳೆ, ಎಸ್‌ಸಿ/ಎಸ್‌ಟಿ (ಸಾಮಾನ್ಯ), ಹಿಂದುಳಿದ ವರ್ಗ, ಮಹಿಳೆ (ಸಾಮಾನ್ಯ) ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಮೀಸಲಿಡಲಾಗಿದೆ.

ಅತಿ ಹೆಚ್ಚು ಮತ ಪಡೆದವರು ಅಧ್ಯಕ್ಷರಾದರೆ ಅದಕ್ಕಿಂತ ಕಡಿಮೆ ಮತ ಪಡೆದವರು ಉಪಾಧ್ಯಕ್ಷರಾಗುತ್ತಾರೆ. ಅವರಿಗಿಂತ ಕಡಿಮೆ ಮತ ಪಡೆದವರು ಪ್ರಧಾನ ಕಾರ್ಯದರ್ಶಿಗಳಾಗಲಿದ್ದಾರೆ. ನೇರವಾಗಿ ನಿರ್ದಿಷ್ಟ ಹುದ್ದೆಗೇ ಚುನಾವಣೆ ನಡೆಯದಿದ್ದರೂ ಮತಗಳ ಆಧಾರದ ಮೇಲೆ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ.

ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ, ಮೈಸೂರಿನ ರಿಜ್ವಾನ್ ಅರ್ಷದ್, ಬೆಂಗಳೂರಿನ ಬಿ.ವಿ.ಶ್ರೀನಿವಾಸ್, ಹಾಸನದ ಎ.ಪಿ.ಬಸವರಾಜು, ಮಾಜಿ ಸಂಸದ ಮಂಜುನಾಥ್ ಕುನ್ನೂರು ಅವರ ಪುತ್ರ ರಾಜು ಕುನ್ನೂರು, ಬಿಬಿಎಂಪಿ ಸದಸ್ಯ ಲೋಕೇಶ ನಾಯಕ್ ಕಣದಲ್ಲಿರುವ ಪ್ರಮುಖರು. ಇಬ್ಬರು ಮಹಿಳೆಯರಾದ ಕೆರೋಲಿನ್ ಅಲ್ವಿನ್ ಮತ್ತು ಕೆ.ಗೀತಾ ಕೂಡ ಕಣದಲ್ಲಿದ್ದಾರೆ.

ಈ ಚುನಾವಣೆಯಲ್ಲಿ ಯಾವೊಬ್ಬ ಅಭ್ಯರ್ಥಿ ಪರವೂ ಪಕ್ಷದ ಮುಖಂಡರು ಪ್ರಚಾರ ಮಾಡಬಾರದೆಂಬ ನಿಯಮ ಇದ್ದರೂ ಅದನ್ನು ಯಾರೂ ಪಾಲಿಸಿದಂತೆ ಕಾಣುತ್ತಿಲ್ಲ.

ಬಹುತೇಕ ಮುಖಂಡರು ಗುಟ್ಟಾಗಿ ತಮಗೆ ಬೇಕಾದ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ. ಅಕ್ರಮಗಳಿಂದ ಮುಕ್ತವಾಗಿ ಚುನಾವಣೆ ನಡೆಯಬೇಕೆಂಬ ರಾಹುಲ್ ಕನಸಿಗೂ ಭಂಗ ಉಂಟಾಗಿದೆ. ವಿಧಾನಸಭಾ ಚುನಾವಣೆಯ ಹಾಗೆ ಇದು ಕೂಡ ರಂಗೇರಿದ್ದು, ಹಣ, ಹೆಂಡ ಮತ್ತು ಪ್ರವಾಸಗಳಿಗೇನೂ ಕಡಿಮೆ ಇಲ್ಲ.

ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಗಳ ಯುವ ಕಾಂಗ್ರೆಸ್ ಸಮಿತಿಗಳ ಚುನಾವಣೆಯಲ್ಲಿ ಇವು ಪ್ರಮುಖವಾಗಿ ಎದ್ದು ಕಾಣುತ್ತಿದ್ದು, ಬೆಂಗಳೂರಿನ ಕೆಲ ಅಭ್ಯಥಿಗಳು ಈಗಾಗಲೇ ತಮ್ಮ ವ್ಯಾಪ್ತಿಯ ಮತದಾರ ಕಾರ್ಯಕರ್ತರನ್ನು ದೂರದ ಊರುಗಳಿಗೆ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಚುನಾವಣೆ ದಿನ ಕರೆತಂದು ಮತದಾನ ಮಾಡಿಸುವುದು ಇದರ ಹಿಂದಿನ ಉದ್ದೇಶ.

ಮಲ್ಲಿಕಾರ್ಜುನ ಖರ್ಗೆ ಅವರು ಪರೋಕ್ಷವಾಗಿ ತಮ್ಮ ಪುತ್ರನ ಪರ ಪ್ರಚಾರ ಮಾಡುತ್ತಿದ್ದು, ಪ್ರಮುಖ ನಾಯಕರಿಗೆ ದೂರವಾಣಿ ಕರೆ ಮಾಡಿ ಮತ ಯಾಚಿಸುತ್ತಿದ್ದಾರೆ. ಇದನ್ನು ಖರ್ಗೆ ಅವರ ದೂರವಾಣಿ ಕರೆ ಸ್ವೀಕರಿಸಿದ ಮುಖಂಡರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆ ವೇಳೆ ಖರ್ಗೆ ಅವರಿಂದ ಟಿಕೆಟ್ ಪಡೆದ ಶಾಸಕರ ಮೇಲೂ ಒತ್ತಡ ಹೆಚ್ಚಾಗಿದೆ. ಕೇವಲ ಪ್ರಧಾನ ಕಾರ್ಯದರ್ಶಿ ಸ್ಥಾನ ಸಾಕು ಎನ್ನುತ್ತಿದ್ದ ಖರ್ಗೆ ಅವರ ಪುತ್ರ ಈಗ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವುದು ಹಲವರ ಕಣ್ಣು ಕೆಂಪಾಗಿಸಿದೆ. ಪ್ರಿಯಾಂಕ ಕೂಡ ಅಪ್ಪನ ನೆರಳಲ್ಲಿ ಅರಳಲು ಶ್ರಮಿಸುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಹೆಚ್ಚು ಗಮನಹರಿಸಿದ್ದಾರೆ.

ಇದು ಖರ್ಗೆ ಮತ್ತು ಅವರ ಬೆಂಬಲಿಗರ ವರಸೆಯಾದರೆ, ಇನ್ನು ಪಕ್ಷದ ಬಹುತೇಕ ಹಿರಿಯ ಮುಖಂಡರು ಮೈಸೂರಿನ ರಿಜ್ವಾನ್ ಪರ ನಿಂತಿದ್ದಾರೆ. ಏಕೆ ಹೀಗೆ ಎಂದು ಕೇಳಿದರೆ ಅದಕ್ಕೆ ಕಾರಣವೂ ನೀಡುತ್ತಾರೆ. ಕೆಪಿಸಿಸಿ ಅಧ್ಯಕ್ಷ, ಸೇವಾದಳ ಅಧ್ಯಕ್ಷ, ಕೇಂದ್ರದಲ್ಲಿ ಇಬ್ಬರು ಸಚಿವರು ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನ ಸ್ಥಾನ- ಇವೆಲ್ಲವೂ ಪರಿಶಿಷ್ಟ ಜಾತಿಗೆ ಸೇರಿದವರ ಬಳಿಯೇ ಇವೆ. ಹೀಗಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೂ ಅದೇ ಸಮುದಾಯದವರನ್ನು ಆಯ್ಕೆ ಮಾಡುವುದು ಸರಿಯಲ್ಲ ಎಂಬ ವಿವರಣೆ ನೀಡುತ್ತಾರೆ.

ಹೀಗಾಗಿಯೇ ಪಕ್ಷದ ಮುಖಂಡರೇ ಪಕ್ಷದಲ್ಲಿ ಜಾತಿ ಲೆಕ್ಕಾಚಾರವನ್ನು ಸಮತೋಲನ ಮಾಡುವ ಉದ್ದೇಶದಿಂದ ಅಲ್ಪಸಂಖ್ಯಾತರ ಕಡೆ ವಾಲಿದ್ದಾರೆ ಎನ್ನಲಾಗಿದೆ. `ಅಲ್ಪಸಂಖ್ಯಾತರಿಗೆ ಯಾವ ಪ್ರಮುಖ ಸ್ಥಾನವನ್ನೂ ನೀಡಿಲ್ಲ. ಆದರೆ, ಅವರ ಮತಗಳು ಬೇಕು. ಅದು ಹೇಗೆ ಸಾಧ್ಯ?~ ಎನ್ನುವ ಚರ್ಚೆ ಪಕ್ಷದಲ್ಲೇ ಆರಂಭವಾಗಿದೆ. ಇದರ ಜತೆಗೆ ಕಳೆದ ಆರು ತಿಂಗಳಿಂದ ರಿಜ್ವಾನ್ ರಾಜ್ಯ ಸುತ್ತಿ ಸದಸ್ಯತ್ವ ಮಾಡಿಸಿದ್ದಾರೆ. ಅದರ ಲಾಭವೂ ಅವರಿಗಿದೆ.

ಜಾತಿ ಪ್ರಭಾವ ಈ ಚುನಾವಣೆಯನ್ನೂ ಬಿಟ್ಟಿಲ್ಲ. ಅರಸೀಕೆರೆಯ ಎ.ಪಿ.ಬಸವರಾಜು ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಕೆಲ ಮಠಗಳ ಪ್ರತಿನಿಧಿಗಳಿಂದ ಮುಖಂಡರ ಮೇಲೆ ಒತ್ತಡ ತರುತ್ತಿದ್ದಾರೆ. ಕೋಡಿ ಮಠದ ನೇರ ಸಂಪರ್ಕದಲ್ಲಿರುವ ಅವರು ಕೂಡ ರಾಜ್ಯ ಸುತ್ತಿ ಸದಸ್ಯತ್ವ ಮಾಡಿಸಿದ್ದು, ತನ್ನದೇ ಆದ ಹಿಡಿತ ಸಾಧಿಸಿದ್ದಾರೆ.
ಒಕ್ಕಲಿಗ ಸಮುದಾಯಕ್ಕೆ ಸೇರಿದ ಬೆಂಗಳೂರಿನ ಶ್ರೀನಿವಾಸ್ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಡಿ.ಕೆ.ಶಿವಕುಮಾರ್ ಸೇರಿದಂತೆ ಇತರ ಪ್ರಮುಖರು ಅವರ ಬೆಂಬಲಕ್ಕೆ ನಿಂತಿದ್ದು, ಅಧ್ಯಕ್ಷ ಸ್ಥಾನ ಕೈತಪ್ಪಿದರೂ ಪ್ರಧಾನ ಕಾರ್ಯದರ್ಶಿ ಗ್ಯಾರಂಟಿ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಇವರು ಕೂಡ ರಾಜ್ಯ ಸುತ್ತಿ, ಪ್ರಚಾರ ಮಾಡುತ್ತಿದ್ದಾರೆ.

ಶಿವಕುಮಾರ್ ಅವರು ಕನಕಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 1,031 ಮಂದಿಯ ಸದಸ್ಯತ್ವ ಮಾಡಿಸಿದ್ದು, ಇದು ಅವರಿಗೆ ಲಾಭವಾಗಲಿದೆ. ಇದಲ್ಲದೆ, ಒಕ್ಕಲಿಗ ಸಮುದಾಯ ಹೆಚ್ಚಿರುವ ಕ್ಷೇತ್ರಗಳಲ್ಲೂ ಅವರು ತಮ್ಮ ಪ್ರಭಾವ ಬೀರಿ ಶ್ರೀನಿವಾಸ್‌ಗೆ ಅನುಕೂಲ ಮಾಡುತ್ತಿದ್ದಾರೆ ಎನ್ನಲಾಗಿದೆ.

ರಾಜು ಕುನ್ನೂರು ದಿಢೀರ್ ಪ್ರತ್ಯಕ್ಷವಾಗಿದ್ದು, ತಮ್ಮ ಪ್ರಭಾವ ಬಳಸಿ ಪ್ರಚಾರಕ್ಕೆ ಇಳಿದಿದ್ದಾರೆ. ಸದಸ್ಯತ್ವದ ಅಭಿಯಾನ ನಡೆದಾಗ ಹೆಚ್ಚು ತಲೆಕೆಡಿಸಿಕೊಳ್ಳದ ಅವರು ಈಗ ಚುನಾವಣೆಯಲ್ಲಿ ಹೆಚ್ಚು ಮತ ಪಡೆಯಲು ಹವಣಿಸುತ್ತಿದ್ದಾರೆ. ಇದು ಅನೇಕರಲ್ಲಿ ಬೇಸರ ಮೂಡಿಸಿದೆ.

ಕಣದಲ್ಲಿರುವ ಇತರ ಅಭ್ಯರ್ಥಿಗಳಾದ ಗೋಪಾಲಕೃಷ್ಣ ನಾಯಕ್, ಹರೀಶ, ಜಿ.ಎಸ್.ಕಾರ್ತಿಕ್, ಮೊಹಮದ್ ಅಕ್ರಂ, ಡಾ.ಬಿ.ಸಿ.ಮುದ್ದುಗಂಗಾಧರ, ಡಿ.ಎಸ್.ಪ್ರದೀಪ್ ಗೌಡ, ಬಿ.ಜೆ.ರಮೇಶ್, ಶಾಜಿ ಜಿ. ಥಾಮಸ್, ಕೆ.ಶಶಿಕುಮಾರ್, ಸೈಯದ್ ಸುಶೀಲ್ ಅವರು ಕೂಡ ಪ್ರಚಾರದಲ್ಲಿ ತೊಡಗಿದ್ದು, ಪೈಪೋಟಿ ನೀಡುತ್ತಿದ್ದಾರೆ.

10 ಕ್ಷೇತ್ರಗಳಲ್ಲಿ ಮತದಾರರೇ ಇಲ್ಲ!

ರಾಜ್ಯದ ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸದಸ್ಯತ್ವವನ್ನೇ ಮಾಡಿಸಿಲ್ಲ. ಇದು ಪಕ್ಷದ ಮುಖಂಡರ ಅವಕೃಪೆಗೆ ಪಾತ್ರವಾಗಿದ್ದು, ಕೆಪಿಸಿಸಿಯ ಪದಾಧಿಕಾರಿಗಳಾದ ಅನೇಕರ ಕ್ಷೇತ್ರಗಳಲ್ಲಿ ಒಬ್ಬರೇ ಒಬ್ಬರು ಸದಸ್ಯತ್ವ ಪಡೆದಿಲ್ಲ.

ಕಾಂಗ್ರೆಸ್‌ನ ಮತದಾರರ ಪಟ್ಟಿಯ ಪ್ರಕಾರ ವಿಜಾಪುರ ಜಿಲ್ಲೆಯ ದೇವರಹಿಪ್ಪರಗಿ, ತುಮಕೂರು ಜಿಲ್ಲೆಯ ಪಾವಗಡ, ದಾವಣಗೆರೆಯ ಚನ್ನಗಿರಿ, ಹಾವೇರಿಯ ಬ್ಯಾಡಗಿ, ಕೊಪ್ಪಳ ಜಿಲ್ಲೆಯ ಕನಕಗಿರಿ, ಕೊಪ್ಪಳ, ಮಸ್ಕಿ, ಮೈಸೂರಿನ ಕೆ.ಆರ್.ನಗರ, ಶಿವಮೊಗ್ಗದ ಭದ್ರಾವತಿ- ಈ ಕ್ಷೇತ್ರಗಳಿಗೆ ಚುನಾವಣೆಯೇ ನಡೆಯುವುದಿಲ್ಲ.
ಕಾರಣ ಇಲ್ಲಿ ಮತದಾರರೇ ಇಲ್ಲ. ಇದಲ್ಲದೆ, 30ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ 50ಕ್ಕಿಂತ ಕಡಿಮೆ ಸಂಖ್ಯೆಯ ಮತದಾರರಿದ್ದಾರೆ.

ಮತದಾರರು ಯಾರು?
ಯುವ ಕಾಂಗ್ರೆಸ್‌ನ ಬೂತ್ ಮಟ್ಟದ ಸಮಿತಿಗಳಿಗೆ ಆಯ್ಕೆಯಾದ ಪದಾಧಿಕಾರಿಗಳೇ ಈ ಚುನಾವಣೆಯ ಮತದಾರರು. ಅವರ ಸಂಖ್ಯೆ 37,378.

ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರದ ಸಮಿತಿ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿಗೆ ಎರಡು ದಿನ ಚುನಾವಣೆ ನಡೆಯಲಿದೆ. ಮೂರು ಸಮಿತಿಗಳ ಚುನಾವಣೆಗೂ ಈ ಮತದಾರರು ಮತದಾನ ಮಾಡಬಹುದು.

ಮತ ಎಣಿಕೆ
ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಗಳ ಸಮಿತಿಯ ಮತ ಎಣಿಕೆ ಇದೇ 13ರ ಸಂಜೆ ಆಯಾ ಕ್ಷೇತ್ರಗಳ ಕೇಂದ್ರ ಸ್ಥಾನಗಳಲ್ಲಿ ನಡೆಯಲಿದೆ. ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಮತ ಎಣಿಕೆ ಮಾತ್ರ ಇದೇ 15ರಂದು ಬೆಂಗಳೂರು ಅಥವಾ ಹುಬ್ಬಳ್ಳಿಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT