ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಜನೋತ್ಸವಕ್ಕೆ ಸಜ್ಜು

ಕೀಲಾರದಲ್ಲಿ ಇಂದಿನಿಂದ ಮೂರು ದಿನ ಕಾರ್ಯಕ್ರಮ
Last Updated 14 ಡಿಸೆಂಬರ್ 2013, 9:14 IST
ಅಕ್ಷರ ಗಾತ್ರ

ಮಂಡ್ಯ: ಡಿ.14 ರಿಂದ ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯಮಟ್ಟದ ಯುವಜನೋತ್ಸವಕ್ಕೆ ತಾಲ್ಲೂಕಿನ ಕೀಲಾರ ಗ್ರಾಮವು ಸಜ್ಜುಗೊಂಡಿದೆ.

ಶಾಸ್ತ್ರೀಯ ಸಂಗೀತ, ವಾದ್ಯ ನುಡಿಸುವುದು, ಜನಪದ ನೃತ್ಯ, ಏಕಾಂಕ ನಾಟಕ ಸೇರಿದಂತೆ 18 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1,500 ಮಂದಿ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ.ಎನ್‌. ಕೃಷ್ಣಯ್ಯ ತಿಳಿಸಿದರು.

ಮಾಜಿ ಸಚಿವ ಕೆ.ವಿ. ಶಂಕರಗೌಡ ಬಯಲು ರಂಗಮಂದಿರ ಸೇರಿದಂತೆ ಮೂರು ವೇದಿಕೆಗಳನ್ನು ನಿರ್ಮಿಸಲಾಗಿದೆ. ಅಲ್ಲಿ ವಿವಿಧ ಪ್ರದರ್ಶನಗಳು ನಡೆಯಲಿದ್ದು, ವೇದಿಕೆ ನಿರ್ಮಾಣ ಕಾರ್ಯಕ್ಕೆ ಅಂತಿಮ ಟಚ್‌್ ನೀಡಲಾಗುತ್ತಿದೆ.
ರಾಜ್ಯ ಯುವನೀತಿಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡುತ್ತಿರುವುದು ಈ ಮೇಳದ ಮತ್ತೊಂದು ವಿಶೇಷ.

ಮಹಿಳಾ ಸ್ಪರ್ಧಿಗಳನ್ನು ರಕ್ಷಣಾ ಹಿತದೃಷ್ಟಿಯಿಂದ ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಅದಕ್ಕಾಗಿ 40 ಮನೆಗಳನ್ನು ಗುರುತಿಸಲಾಗಿದೆ. ಪುರುಷ ಸ್ಪರ್ಧಾಳುಗಳನ್ನು ಕೊಮ್ಮೇರಹಳ್ಳಿಯ ಶಾಲೆಯಲ್ಲಿ ವಸತಿಗೆ ವ್ಯವಸ್ಥೆ ಮಾಡಲಾಗಿದೆ.

ಗ್ರಾಮದ ಮೂರು ಕಡೆಗಳಲ್ಲಿ ಸಮುದಾಯ ಶೌಚಾಲಯ ನಿರ್ಮಿಸಲಾಗಿದೆ. ವಸತಿ ವ್ಯವಸ್ಥೆ ಕಲ್ಪಿಸಿದಲ್ಲಿ ಸ್ನಾನಗೃಹಗಳನ್ನೂ ನಿರ್ಮಿಸಲಾಗಿದೆ. ಎಲ್ಲ ಕಲಾವಿದರಿಗೂ ಹಾಗೂ ತೀರ್ಪುಗಾರರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರದಿಂದ 15 ಲಕ್ಷ ರೂಪಾಯಿ ಬಿಡುಗಡೆ ಆಗಿದೆ. ಕೆಲವು ಸಕ್ಕರೆ ಕಾರ್ಖಾನೆಗಳಿಂದಲೂ ನೆರವು ಕೋರಲಾಗಿದೆ. ಸ್ಪರ್ಧಾಳುಗಳಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದರು.

ವೈಯಕ್ತಿಕ ವಿಭಾಗದಲ್ಲಿ 5 ಸಾವಿರ ರೂ, 3 ಸಾವಿರ ರೂ ಹಾಗೂ 2 ಸಾವಿರ ರೂ ಗಳನ್ನು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಗುಂಪು ಸ್ಪರ್ಧೆಯಲ್ಲಿ 2 ಸಾವಿರ ರೂ, 1,500 ರೂ ಹಾಗೂ ಒಂದು ಸಾವಿರ ರೂ ಗಳನ್ನು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು.

ಫಲಿತಾಂಶ ನಿರ್ಣಯಿಸಲು ಬೆಂಗಳೂರಿನಿಂದ ಪರಿಣಿತ 50 ನಿರ್ಣಾಯಕರು ಆಗಮಿಸಲಿದ್ದಾರೆ.
ಏಕಾಂಕ ನಾಟಕವನ್ನು ಮಾತ್ರ ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್‌್್ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಯುವಜನೋತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಸ್ಪರ್ಧಾಳುಗಳನ್ನು ಮಂಡ್ಯದಿಂದ ಕೀಲಾರಕ್ಕೆ ಕರೆ ತರಲು ಬಸ್‌ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಸಾರ್ವಜನಿಕರ ಸಂಚಾರದ ಅನುಕೂಲಕ್ಕಾಗಿಯೂ ಹೆಚ್ಚುವರಿಯಾಗಿ ಹತ್ತು ಬಸ್‌್ ಸಂಚರಿಸಲಿವೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಎಂ.ಎಸ್‌. ರಮೇಶ್‌, ಜಿ.ಪಂ ಸಿಇಒ ಪಿ.ಸಿ. ಜಯಣ್ಣ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಎಚ್‌.ಪಿ. ಮಂಜುಳಾ, ಕೆ.ಆರ್‌್. ಶಂಕರ್‌, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್‌. ವಿಜಯಾನಂದ, ಕಾಂಗ್ರೆಸ್‌ ಮುಖಂಡ ಅಮರಾವತಿ ಚಂದ್ರಶೇಖರ್‌ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಅಂಬರೀಷ್‌ ಚಾಲನೆ
ಮಂಡ್ಯ: ತಾಲ್ಲೂಕಿನ ಕೀಲಾರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಡಿ.14 ರಂದು ಸಂಜೆ 5.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್‌ ಚಾಲನೆ ನೀಡಲಿದ್ದಾರೆ.

ರಾಜ್ಯ ಯುವನೀತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ. ಅಭಯಚಂದ್ರ ಚಾಲನೆ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್‌, ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಭಾಗವಹಿಸಲಿದ್ದಾರೆ. ರಾಜ್ಯ ಯುವ ಮಧುರ ಉತ್ಸವ ಸ್ಮರಣ ಸಂಚಿಕೆಯನ್ನು ಸಂಸದೆ ರಮ್ಯಾ ಬಿಡುಗಡೆ ಮಾಡಲಿದ್ದಾರೆ. ಜಿ.ಪಂ. ಅಧ್ಯಕ್ಷೆ ಭಾರತಿ ಕೃಷ್ಣಮೂರ್ತಿ ಪ್ರತಿಜ್ಞಾವಿಧಿ ಬೋಧನೆ ಮಾಡಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಡಿ.15 ರಂದು ಬೆಳಿಗ್ಗೆ 9 ಗಂಟೆಗೆ ರಾಜ್ಯ ಯುವ ನೀತಿ: ನೆಲೆ–ಹಿನ್ನೆಲೆ ಯುವ ಆಪ್ತ ಸಂವಾದ ಏರ್ಪಡಿಸಲಾಗಿದೆ. ಡಿ.16 ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಚಿವ ಅಂಬರೀಷ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಸಮಾರೋಪ ಭಾಷಣ ಮಾಡಲಿದ್ದಾರೆ.

ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಬಹುಮಾನ ವಿತರಿಸಲಿದ್ದಾರೆ. ನಗರಸಭೆ ಅಧ್ಯಕ್ಷ ಬಿ. ಸಿದ್ದರಾಜು, ಜಿ.ಪಂ. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್‌್್್. ವಿಜಯಾನಂದ, ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಿ ಭಾಗವಹಿಸಲಿದ್ದಾರೆ.

ಉದ್ಯಮಿ ಸಿ. ಚಂದ್ರಶೇಖರ್‌, ನಿವೃತ್ತ ಪ್ರಾಂಶುಪಾಲ ಎಂ.ಎಲ್‌್್. ಸರಸ್ವತಿ, ಹಿರಿಯ ಜನಪದ ಕಲಾವಿದ ಕೆ.ಎಂ. ಮಧುಪ್ರಕಾಶ್‌, ಡಾ.ಕೆ.ಟಿ. ಗುರುಮೂರ್ತಿ, ಬ್ಯಾಸ್ಕೆಟ್‌ಬಾಲ್‌್ ಕ್ರೀಡಾಪಟು ಎಚ್‌.ಎಂ. ಬಾಂಧವ್ಯ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT