ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಪಡೆಯ ಸತ್ವಪರೀಕ್ಷೆ

Last Updated 3 ಜೂನ್ 2011, 19:30 IST
ಅಕ್ಷರ ಗಾತ್ರ

ಪೋರ್ಟ್ ಆಫ್ ಸ್ಪೇನ್; ಟ್ರಿನಿಡ್ಯಾಡ್ (ಪಿಟಿಐ): ಐಪಿಎಲ್ ಟ್ವೆಂಟಿ-20 ಟೂರ್ನಿಯ ಸುಗ್ಗಿಯ ಸಂಭ್ರಮದ ನೆನಪಿನ್ನೂ ಹಸಿರಾಗಿದೆ. ಭಾರತದ ಆಟಗಾರರಂತೂ ಇನ್ನೂ ಚುಟುಕು ಕ್ರಿಕೆಟ್ ಮೂಡ್‌ನಲ್ಲಿಯೇ ಇದ್ದಾರೆ. ಆದ್ದರಿಂದ ವೆಸ್ಟ್ ಇಂಡೀಸ್ ವಿರುದ್ಧ ಈ ಪ್ರಕಾರದ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧ್ಯವೆಂದು ನಿರೀಕ್ಷೆ ಮಾಡಬಹುದು.

ಕೆರಿಬಿಯನ್ನರ್ ನಾಡಿನಲ್ಲಿ ಟಿ-20 ಪಂದ್ಯದೊಂದಿಗೆ ಕಾರ್ಯಾಚರಣೆ ಆರಂಭ ಮಾಡಲಿರುವ ಭಾರತ ತಂಡದವರು ಯಶಸ್ಸಿನೊಂದಿಗೆ ಪ್ರವಾಸಕ್ಕೆ ಮುನ್ನುಡಿ ಬರೆಯುವ ಆಶಯ ಹೊಂದಿದ್ದಾರೆ. ಶನಿವಾರ ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯವು ಯುವ ಕ್ರಿಕೆಟಿಗರೇ ಹೆಚ್ಚಿರುವ ಪ್ರವಾಸಿ ತಂಡಕ್ಕೆ `ಸತ್ವಪರೀಕ್ಷೆ~! ಪ್ರಮುಖ ಆಟಗಾರರು ಇಲ್ಲದಿದ್ದರೂ ಗೆಲ್ಲುವ ಛಲವಿದೆ ಎನ್ನುವುದನ್ನು ಸಾಬೀತು ಪಡಿಸಬೇಕು.

ಪೂರ್ಣಾವಧಿಯ ನಾಯಕ ಮಹೇಂದ್ರ ಸಿಂಗ್ ದೋನಿ ಅನುಪಸ್ಥಿತಿಯಲ್ಲಿ ಉಸ್ತುವಾರಿ ವಹಿಸಿಕೊಂಡಿರುವ ಸುರೇಶ್ ರೈನಾ ತಾವೊಬ್ಬ ಯಶಸ್ವಿ ನಾಯಕ ಆಗಲು ಸಾಧ್ಯವೆಂದು ಸಾಬೀತುಪಡಿಸಲು ಕೂಡ ಇದೊಂದು ಉತ್ತಮ ಅವಕಾಶವಾಗಿದೆ.

ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಅವರಂಥ ಅನುಭವಿಗಳ ಬಲವಿಲ್ಲದೆಯೇ ಪಂದ್ಯ ಗೆಲ್ಲಬೇಕು. ಅದೇ ರೈನಾ ಬಳಗದ ಮುಂದಿರುವ ಸವಾಲು. ಟಿ-20ಯಲ್ಲಿ ವಿಂಡೀಸ್ ಎದುರು ಗೆಲುವೊಂದು ಸಾಧ್ಯವಾಗುವಂತೆ ಮಾಡಿದರೆ ಅದೊಂದು ವಿಶಿಷ್ಟ ಸಾಧನೆ ಎನಿಸುವುದು ನಿಜ. ಈ ತಂಡದ ಎದುರು ಈ ಪ್ರಕಾರದ ಕ್ರಿಕೆಟ್‌ನಲ್ಲಿ ಯಶಸ್ಸು ಪಡೆದ ಹರ್ಷವೂ ಭಾರತದ್ದಾಗುತ್ತದೆ.

ಅದಕ್ಕೆ ಅವಕಾಶ ಮಾಡಿಕೊಡಬಾರದೆಂದು ಎದುರಾಳಿ ತಂಡದ ಕೋಚ್ ಓಟಿಸ್ ಗಿಬ್ಸನ್ ಬಯಸಿದ್ದಾರೆ. ಆದರೂ ಅವರು ಪ್ರವಾಸಿ ತಂಡ ಬಲವುಳ್ಳದ್ದೆಂದು ಖಂಡಿತ ಒಪ್ಪುತ್ತಾರೆ. ಜೊತೆಗೆ ವಿಂಡೀಸ್ ತಂಡದಲ್ಲಿರುವ ಅನೇಕ ಯುವ ಆಟಗಾರರು ಇಲ್ಲಿನ ಪರಿಸ್ಥಿತಿಯಲ್ಲಿ ನಿರಾತಂಕವಾಗಿ ಆಡುವುದು ಕಷ್ಟವೆಂದು ಕೂಡ ಗಿಬ್ಸನ್ ಹೇಳುತ್ತಾರೆ.

ಈ ಅಂಗಳದ ಪಿಚ್‌ನಲ್ಲಿ ಚೆಂಡು ತೀರ ಕೆಳಮಟ್ಟದಲ್ಲಿ ಉಳಿಯುತ್ತದೆ ಎನ್ನುವುದೇ ಅವರು ಹೀಗೆ ಹೇಳಲು ಕಾರಣ. ಚೆಂಡು ಪುಟಿದೇಳುವಂಥ ಪಿಚ್‌ನಲ್ಲಿ ಆಡುವು ದಕ್ಕೆ ಒಗ್ಗಿಕೊಂಡವರಿಗೆ ಇಲ್ಲಿ ಆಡು ವುದು ಸುಲಭವಾಗದೆಂದು ಬಿಗುಮಾನ ವಿಲ್ಲದೇ ಒಪ್ಪಿಕೊಂಡಿದ್ದಾರೆ.

ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಉಭಯ ತಂಡಗಳನ್ನು ತೂಗಿ ನೋಡಿದಾಗ ಭಾರತವೇ ಹೆಚ್ಚು ಬಲವಾಗಿ ಕಾಣಿಸುತ್ತದೆ.  ಬ್ಯಾಟಿಂಗ್ ವಿಭಾಗದಲ್ಲಿ ಎರಡೂ ತಂಡಗಳು ಸಮನಾಗಿ ಕಾಣಿಸುತ್ತವೆ.

ಬ್ಯಾಟಿಂಗ್ ಕ್ರಮಾಂಕ ಏನೇ ಆಗಿದ್ದರೂ ಚೆಂಡನ್ನು ದಂಡಿಸುವುದೊಂದೇ ಉದ್ದೇಶ ಎನ್ನುವಂಥ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅನುಭವ ಮುಖ್ಯವಾಗುತ್ತದೆ ಎಂದು ಅನಿಸುವುದಿಲ್ಲ. ಪರಿಸ್ಥಿತಿಗೆ ಚುರುಕಾಗಿ ಹೊಂದಿಕೊಳ್ಳುವ ತಂಡಕ್ಕೆ ಯಶಸ್ಸು ಎನ್ನುವುದೇ ಈ ಪ್ರಕಾರದ ಆಟದ ನಿಯಮ.

ತಂಡಗಳು
ಭಾರತ:
ಸುರೇಶ್ ರೈನಾ (ನಾಯಕ), ಹರಭಜನ್ ಸಿಂಗ್, ಎಸ್.ಬದರೀನಾಥ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಪಾರ್ಥೀವ್ ಪಟೇಲ್, ಯೂಸುಫ್ ಪಠಾಣ್, ವೃದ್ಧಿಮಾನ್ ಸಹಾ, ರೋಹಿತ್ ಶರ್ಮ, ಮನೋಜ್ ತಿವಾರಿ, ವಿನಯ್ ಕುಮಾರ್, ಇಶಾಂತ್ ಶರ್ಮ, ಆರ್.ಅಶ್ವಿನ್, ಪ್ರವೀಣ್ ಕುಮಾರ್, ಅಮಿತ್ ಮಿಶ್ರಾ ಮತ್ತು ಮುನಾಫ್ ಪಟೇಲ್.

ವೆಸ್ಟ್ ಇಂಡೀಸ್:
ಡೆರನ್ ಸ್ಯಾಮಿ (ನಾಯಕ), ಕ್ರಿಸ್ಟೋಫರ್ ಬಾರ್ನ್‌ವೆಲ್, ದೇವೇಂದ್ರ ಬಿಶೂ, ಡೆರನ್ ಬ್ರಾವೊ, ಆ್ಯಂಡ್ರೆ ಫ್ಲೆಚರ್, ಡ್ಯಾಂಜಾ ಹೇಟ್ಟ್, ಆ್ಯಶ್ಲೆ   ನರ್ಸ್, ರವಿ ರಾಮ್‌ಪಾಲ್, ಆ್ಯಂಡ್ರೆ ರಸಲ್, ಮರ್ಲಾನ್ ಸ್ಯಾಮ್ಯೂಯಲ್ಸ್, ಕ್ರಿಶ್ಮರ್ ಸಂತೋಕಿ ಮತ್ತು ಲೆಂಡ್ಲ್ ಸಿಮಾನ್ಸ್.
ಪಂದ್ಯ ಆರಂಭ (ಭಾರತೀಯ ಕಾಲಮಾನ): ಸಂಜೆ 7.30ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT