ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಮನಸ್ಸಿನ ಹಚ್ಚೆ ಹುಚ್ಚು

Last Updated 13 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬದಲಾವಣೆ ಜಗದ ನಿಯಮ. ಈ ಮಾತು ಯುವ ಸಮೂಹಕ್ಕೂ ಅನ್ವಯಿಸುತ್ತದೆ. ಪ್ರತಿದಿನ ಹೊಸದೊಂದು ಬದಲಾವಣೆಗೆ ತೆರೆದುಕೊಳ್ಳುವುದು ಯುವಜನರ ಪ್ರವೃತ್ತಿಯಾಗಿದೆ. ಇತ್ತೀಚಿನ ದಿನಗಳಲ್ಲಿ `ಹಚ್ಚೆ~ ಕೂಡ ಯುವ ಸಮೂಹವನ್ನು ಸನ್ನಿಯಂತೆ ಆವರಿಸಿಕೊಂಡಿದೆ.

ಜಾತ್ರೆ ಸಂದರ್ಭದಲ್ಲಿ ಹಚ್ಚೆ ಹಾಕಿಸಿಕೊಳ್ಳುವ ಕಾಲವೊಂದಿತ್ತು. ಆದರೆ, ಈಗ ಕಾಲ ಬದಲಾಗಿದೆ. ಹಚ್ಚೆ ಇಂದು ಎಲ್ಲರಿಗೂ ಬಹಳ ಅಚ್ಚುಮೆಚ್ಚು. ಅದರಲ್ಲೂ ಯುವಕ/ಯುವತಿಯರಂತೂ ಇದಕ್ಕೆ ಮಾರು ಹೋಗಿದ್ದಾರೆ.

ಹಳ್ಳಿಯಲ್ಲಿ ನಡೆಯುವ ಜಾತ್ರೆಯಲ್ಲಿ ಹೆಚ್ಚಿನ ಜನ ತಮ್ಮ ಮನೆದೇವರು ಅಥವಾ ತಂದೆ ತಾಯಿ ಹೆಸರಿನ ಹಚ್ಚೆಯನ್ನು ಕೈ ಮೇಲೆ ಹಾಕಿಸಿಕೊಳ್ಳುತ್ತಿದ್ದರು. ಇನ್ನುಳಿದಂತೆ ವಿವಾಹಿತ ಮಹಿಳೆ ಗಂಡನ ಹೆಸರು ಹಾಕಿಸಿಕೊಂಡರೆ, ಗಂಡ ಹೆಂಡತಿಯ ಹೆಸರನ್ನು ಹಾಕಿಸಿಕೊಳ್ಳುವ ಪರಿಪಾಠವಿತ್ತು. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಈ ರೂಢಿ ಚಾಲ್ತಿಯಲ್ಲಿದೆ.
 
ಆದರೆ, ಮಹಾನಗರಗಳಲ್ಲಿ ಹಚ್ಚೆ ಬಗೆಗಿನ ಪರಿಕಲ್ಪನೆ ಸಂಪೂರ್ಣವಾಗಿ ಭಿನ್ನ. ಯುವಜನತೆಯ ಬದಲಾದ ಮನಸ್ಥಿತಿ ಒಂದು ಕಾರಣವಾದರೆ, ಎಲ್ಲವನ್ನೂ ವಾಣಿಜ್ಯೀಕರಣಗೊಳಿಸುವ ಹುನ್ನಾರವೂ ಇದರ ಹಿಂದೆ ಅಡಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಮಹಾನಗರಗಳಲ್ಲಂತೂ ಹಚ್ಚೆ, ಉದ್ಯಮದ ಸ್ವರೂಪ ಪಡೆದುಕೊಂಡಿದೆ. ಉದಾಹರಣೆಗೆ ಬೆಂಗಳೂರಿನ ಪ್ರಮುಖ ಮಾಲ್‌ಗಳಲ್ಲಿ `ಟ್ಯಾಟೂ~ ಸ್ಟೋರ್‌ಗಳು ತಲೆ ಎತ್ತಿರುವುದು. ಹಚ್ಚೆ ಬೆಲೆ 200 ರೂಪಾಯಿಯಿಂದ 10 ಸಾವಿರ ರೂಪಾಯಿವರೆಗೂ ಇದೆ. ಈ ಹಿಂದೆ ಕೇವಲ ಕಪ್ಪು ಬಣ್ಣದ ಹಚ್ಚೆ ಮಾತ್ರ ಹಾಕಲಾಗುತ್ತಿತ್ತು. ಆದರೆ, ಇಂದು ಹಲವು ಬಣ್ಣಗಳಲ್ಲಿ ಹಚ್ಚೆ ಹಾಕಿಸಿಕೊಳ್ಳಬಹುದು.

ಹಚ್ಚೆಗಳಲ್ಲಿ ಎರಡು ಪ್ರಕಾರ..
ಹಚ್ಚೆಯಲ್ಲಿ ತಾತ್ಕಾಲಿಕ ಮತ್ತು ಶಾಶ್ವತವಾಗಿ ಉಳಿಯಬಲ್ಲಂತಹ ಎರಡು ಪ್ರಕಾರಗಳಿವೆ. ಕೇವಲ ಒಂದು ವಾರ ಮಾತ್ರ ಉಳಿಯುವ ತಾತ್ಕಾಲಿಕ ಹಚ್ಚೆ ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯತೆ ಗಳಿಸಿದೆ. ತಾತ್ಕಾಲಿಕ ಹಚ್ಚೆಗೆ ಹಾಕಿಸಿಕೊಳ್ಳಲು ತೆರಬೇಕಾದ ಬೆಲೆ ಕೂಡ ಕಡಿಮೆ. 200 ರೂಪಾಯಿ ಮಾತ್ರ. ಯುವ ಜನತೆ ಕೂಡ ಇವುಗಳತ್ತ ಮುಖಮಾಡಿವೆ.

ಬೆಲೆಯೂ ಕಡಿಮೆ. ಅಲ್ಲದೇ ಆಗಾಗ ತಮ್ಮ ಮನಸ್ಸಿಗೆ ತೋಚಿದ ಮಾದರಿಯ ಹಚ್ಚೆ ಹಾಕಿಸಿಕೊಳ್ಳಬಹುದು. ಯುವ ಫ್ಯಾಷನ್ ಪ್ರಿಯರಿಗೆ ಬೇಕಾಗಿದ್ದು ಅದೇ. ಈ ಹಚ್ಚೆ ಹಾಕಲು ಸೂಜಿ ಬಳಸುವುದಿಲ್ಲ. ರೆಡಿಮೇಡ್ ಮಾದರಿಯ ಸ್ಟೀಕರ್ ಅಂಟಿಸಿ ತೆಗೆದರೆ ಸಾಕು.

ಇಂದು 800ಕ್ಕೂ ಹೆಚ್ಚು  ವಿವಿಧ ವಿನ್ಯಾಸದ ಹಚ್ಚೆ ಹಾಕಲಾಗುತ್ತದೆ.  ಶಾಶ್ವತವಾಗಿ ಉಳಿಯುವ ಹಚ್ಚೆ ಬೆಲೆ ದುಬಾರಿಯಾದದ್ದು.   ಒಂದು ಸಲ ಹಾಕಿದರೆ ಕೊನೆವರೆಗೆ ಉಳಿದು ಬಿಡುತ್ತದೆ. ಸದ್ಯ ಮಾರುಕಟ್ಟೆಯಲ್ಲಿ 1 ಇಂಚಿಗೆ 600ರಿಂದ 800 ರೂಪಾಯಿವರೆಗೆ ಇದೆ. 

ಹಚ್ಚೆಯ ವಿನ್ಯಾಸಗಳಲ್ಲಿ ವೈವಿಧ್ಯವನ್ನು ಕಾಣಬಹುದು. ಹಚ್ಚೆಯಲ್ಲಿ ಬದಲಾವಣೆಯಾಗಿರುವಂತೆ ಹಚ್ಚೆ ಹಾಕಿಸಿಕೊಳ್ಳುವವರ ಆಸಕ್ತಿಯು ಬದಲಾಗಿದೆ. ಹಚ್ಚೆ ಇಂದು ಹಣೆ, ಗಲ್ಲಕ್ಕೆ ಮಾತ್ರ ಸೀಮಿತವಾಗಿಲ್ಲ. ತೋಳು, ಬೆನ್ನು ಮತ್ತು ಕತ್ತಿನ ಹಿಂಭಾಗ, ಎದೆ ಹಾಗೂ ನಾಭಿ ಸುತ್ತಲೂ ಹಚ್ಚೆ ಹಾಕಿಸಿಕೊಂಡಿರುವುದನ್ನು ಕಾಣುತ್ತೇವೆ.
 
ಹಚ್ಚೆ ಹುಚ್ಚು ಪಡ್ಡೆ ಹುಡುಗರಿಗೆ ಮಾತ್ರವಲ್ಲ ಸಿನಿಮಾ ನಟ-ನಟಿಯರು ಹಾಗೂ ಇನ್ನಿತರ ಕ್ರೀಡಾಪಟುಗಳಿಗೂ ಇದೆ. ಕತ್ತು ಹಾಗೂ ಬೆನ್ನಿನ ಹಿಂಭಾಗದ ಅರ್ಧ ಭಾಗ ಕೂಡ ಹಚ್ಚೆ ಹಾಕಿಸಿಕೊಳ್ಳಲಾಗುತ್ತಿದೆ. ಯಾಕೆ ದೇಹವಿಡೀ ಹಚ್ಚಯಿಂದಲೇ ಆವೃತವಾಗಿರುವ ವ್ಯಕ್ತಿಗಳೂ ಕಾಣಸಿಗುತ್ತಾರೆ. 

ಯುವ ಜನತೆಯಲ್ಲಿರುವ ಹಚ್ಚೆ ಬಗೆಗಿನ ಉತ್ಸಾಹವು ಅದನ್ನು ಹಾಕಿಸಿಕೊಳ್ಳುವಾಗಿನ ನೋವನ್ನು ಮರೆ ಮಾಚುತ್ತದೆ!. ಇಷ್ಟದೇವರು, ಆಯಾ ಧರ್ಮದ ಚಿಹ್ನೆಯ ಹಚ್ಚೆ ಹಾಕಿಸಿಕೊಳ್ಳುವವರು ಕೆಲವರಾದರೆ, ಮತ್ತೆ ಕೆಲವರು ತನ್ನ ಪ್ರಿಯಕರ/ಪ್ರಿಯತಮೆಯ ಹೆಸರ ಹಚ್ಚೆ ಹಾಕಿಸಿಕೊಂಡು ಪ್ರೀತಿ ಮೆರೆಯುತ್ತಾರೆ. ಇನ್ನೂ ಕೆಲವು ವಿಚಿತ್ರ, ವಿಶಿಷ್ಟ ಹಚ್ಚೆಗಳನ್ನು ಹಾಕಿಸಿಕೊಂಡು ಎಲ್ಲರ ಹುಬ್ಬು ಏರುವಂತೆ  ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT