ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಲೇಖಕರಿಗೆ ಉತ್ತೇಜನ ಅಗತ್ಯ: ಜಿಲ್ಲಾಧಿಕಾರಿ

ಸಂಜೆ ಸಂಭ್ರಮದಲ್ಲಿ ಹರಿದ ಸಂಗೀತ ಸುಧೆ
Last Updated 6 ಫೆಬ್ರುವರಿ 2013, 5:21 IST
ಅಕ್ಷರ ಗಾತ್ರ

ಕೋಲಾರ: ಹಿರಿಯ ಲೇಖಕರು ಯುವ ಲೇಖಕರಿಗೆ ಪ್ರೋತ್ಸಾಹ ನೀಡಬೇಕು. ಸಾಹಿತ್ಯ, ಸಾರಸ್ವತ ಲೋಕವನ್ನು ಉಳಿಸಿ ಬೆಳೆಸಬೇಕಾದರೆ ಪ್ರೋತ್ಸಾಹದಾಯಕ ವಾತಾವರಣ ನಿರ್ಮಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅಭಿಪ್ರಾಯಪಟ್ಟರು.

ನಗರದ  ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ರಾತ್ರಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು ಏರ್ಪಡಿಸಿದ್ದ ಸಂಜೆ ಸಂಭ್ರಮ ಕಾರ್ಯಕ್ರಮದಲ್ಲಿ ಮಂಜುಕನ್ನಿಕಾ ಅವರ ಐದು ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಸಾಹಿತ್ಯ ಕ್ಷೇತ್ರದಲ್ಲಿ ಯುವ ಪ್ರತಿಭಾವಂತರ ಬೆನ್ನುತಟ್ಟುವ ವಾತಾವರಣವೇ ಇಲ್ಲವಾಗುತ್ತಿದೆ. ಹಿರಿಯ ಲೇಖಕರು ಕಿರಿಯ ಲೇಖಕರ ಪ್ರತಿಭೆಯ ಕುರಿತು ಮತ್ಸರವಿಲ್ಲದೆ ಗ್ರಹಿಸುವ ಮತ್ತು ಮೆಚ್ಚುವ ಸನ್ನಿವೇಶಗಳು ವಿರಳವಾಗುತ್ತಿವೆ, ಸಾಹಿತಿಗಳಲ್ಲಿ ಬೆನ್ನುತಟ್ಟುವ ಗುಣ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.

ವಿಮರ್ಶೆ ನೆಚ್ಚಿಕೊಂಡು ಸಾಹಿತ್ಯ ರಚನೆ ಮಾಡುವ ಪರಿಪಾಠ ಸರಿಯಲ್ಲ. ಸಾಹಿತ್ಯವೆಂಬುದು ವಿಮರ್ಶೆಯ ಮೂಲದಿಂದ ಹುಟ್ಟುವ ಸಂಗತಿ ಅಲ್ಲವೇ ಅಲ್ಲ. ಅದೇನಿದ್ದರೂ ಲೇಖಕನ ಪ್ರತಿಭೆ ಪ್ರವಾಹದಿಂದ  ಜನ್ಮ ತಾಳಬೇಕು , ವಿಮರ್ಶೆಯನ್ನು ನೆಚ್ಚಿ ಸಾಹಿತ್ಯ ರಚನೆ ಮಾಡಬಾರದು ಎಂದರು.

ಇತರೆ ಲೇಖಕರ ಕುರಿತು ಅಸೂಯೆ, ಮತ್ಸರ ಮೊದಲಾದ ನಕಾರಾತ್ಮಕ ಭಾವನೆಗಳನ್ನು ಬಿಟ್ಟು ಹೊರಬರಬೇಕು. ಮುಕ್ತವಾಗಿ ಮಾತನಾಡಬೇಕು. ಮೆಚ್ಚುವ ಅಂಶಗಳಿದ್ದರೆ ಹೇಳಬೇಕು. ಟೀಕೆಗಳಿದ್ದರೂ ನಿಷ್ಠುರವಾಗಿ ಮಂಡಿಸಬೇಕು. ಆಗ ಮಾತ್ರ ಸಾಹಿತ್ಯ ಲೋಕದಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿಯಾಗಬಲ್ಲದು ಎಂದರು.

ಯುವ ಲೇಖಕರು ಹಳೆಯ ಕೃತಿಗಳ ಗಂಭೀರವಾದ ಓದಿನ ಮೂಲಕವೇ ಸಾಹಿತ್ಯ ರಚನೆಗೆ ಮುಂದಾಗಬೇಕು. ಕಾಲ ಕಳೆಯುವ ಉದ್ದೇಶದಿಂದ ಲಘುವಾದ ಸಾಹಿತ್ಯ ರಚನೆ ಮಾಡಬಾರದು. ಈ ನಿಟ್ಟಿನಲ್ಲಿ ಹಿರಿಯ ಲೇಖಕರು  ಮಾರ್ಗದರ್ಶನ ನೀಡಬೇಕು. ವಿಮರ್ಶೆಯೂ ಯುವಲೇಖಕರನ್ನು ಉತ್ತೇಜಿಸಿದರೆ ಚೆನ್ನ ಎಂದರು.

ಹಿರಿಯ ವಕೀಲ ಕೆ.ವಿ.ಶಂಕರಪ್ಪ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಜಿ.ನಾಗರಾಜ್ ಮಾತನಾಡಿದರು. ಪರಿಷತ್ತಿನ ಕೋಲಾರ ಮತ್ತು ಶ್ರೀನಿವಾಸಪುರ ಘಟಕದ ಅಧ್ಯಕ್ಷರಾದ ನಾರಾಯಣಪ್ಪ, ರವಿಕುಮಾರ್, ಮಂಜುಕನ್ನಿಕಾ ವೇದಿಕೆಯಲ್ಲಿದ್ದರು.

ಸಂಗೀತ:ಪುಸ್ತಕ ಬಿಡುಗಡೆ ಕಾರ್ಯಕ್ರಮದ ಬಳಿಕ ವಿದ್ವಾನ್ ಭಾನುಪ್ರಕಾಶ್ ನೇತೃತ್ವದ ಯುವ ಕಲಾವಿದರು ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಹಲವು ಕೀರ್ತನೆಗಳ ಭಕ್ತಿಭಾವ ರಸಧಾರೆಯನ್ನು ಅವರು ವಾದ್ಯಸಂಗೀತದ ಮೂಲಕ ಪ್ರೇಕ್ಷಕರಲ್ಲಿ ಹೊಮ್ಮಿಸಿದರು.

ಪಿಟೀಲು ನುಡಿಸಿದ ವಿದ್ವಾನ್ ಸಾಯಿಕೀರ್ತಿ, ಕೊಳಲು ನುಡಿಸಿದ ವಿದ್ವಾನ್ ಎ.ಆರ್.ಗುರುದತ್ ಸಭಿಕರ ಮನಸೂರೆಗೊಂಡರು. ವಿದ್ವಾನ್ ಜಿ.ಎಸ್.ನಾಗರಾಜ್ (ಮೃದಂಗ) ಮತ್ತು  ವಿದ್ವಾನ್ ಭಾನುಪ್ರಕಾಶ್(ಮೋರ್ಚಿಂಗ್) ಪಕ್ಕವಾದ್ಯದಲ್ಲಿ ಸಹಕರಿಸಿದರು.
ನಿರ್ಗಮನ: ದೀರ್ಘವಾಗಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಬಳಿಕ ಸಂಗೀತ ಕಾರ್ಯಕ್ರಮ ಶುರುವಾಗುವ ಹೊತ್ತಿಗೆ ಬಹಳಷ್ಟು ಪುಸ್ತಕ ಪ್ರೇಮಿಗಳು ಸಭಾಂಗಣದಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT