ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಹೃದಯದಲ್ಲಿ ಮೊಗೆದಷ್ಟು ಕವಿತೆಗಳು

Last Updated 4 ಅಕ್ಟೋಬರ್ 2011, 6:10 IST
ಅಕ್ಷರ ಗಾತ್ರ

ಮೈಸೂರು: ಮಹಾಜನ ಪ್ರಥಮ ದರ್ಜೆ ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ದಸರಾ ಕವಿಗೋಷ್ಠಿ ಉಪಸಮಿತಿಯು ಸೋಮವಾರ ಏರ್ಪಡಿಸಿದ್ದ ಯುವ ಕವಿಗೋಷ್ಠಿಯ ಕೆಲವು ಝಲಕ್‌ಗಳು.
ನನ್ನ ಮೊಬೈಲ್ ಒದರಿತ್ತು
ಎಲ್ಲಿದೆ ಎಂದು ನೋಡಿದರೆ ಹೃದಯಾಘಾತ!
ಹಾಳಾದ್ದು ಅಮ್ಮನ ಕೈಯಲ್ಲಿತ್ತು.
ಮುಂದಿನ ಸಂಗತಿ ನೀವೇನು ಕೇಳ್ತೀರಿ?
ಪ್ರಿಯ ಮೊಬೈಲು ದುರ್ಮರಣ ಹೊಂದಿತ್ತು.
ದೇವಸ್ಥಾನದಲ್ಲಿ ಒಡೆದಿರೋ ತೆಂಗಿನಕಾಯಿ ಇರುತ್ತಲ್ಲ?
ಅದೇ ಥರಾ ಕಾಣ್ತಿತ್ತು.

-ಹೀಗೆ ದಕ್ಷ ಮಾಲಗತ್ತಿ `ಮೊಬೈಲ್ ದುರ್ಮರಣ~ ಕವಿತೆಯನ್ನು ವಾಚಿಸಿಸುತ್ತಿದ್ದರೆ ಸಭಾಂಗಣ ಚಪ್ಪಾಳೆಮಯವಾಗಿತ್ತು. ಈ ಕವಿತೆ ಮುಗಿಯುವ ಹೊತ್ತಿಗೆ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು `ಇದು ನಮ್ಮದೇ ಕವಿತೆ ಗುರು~ ಎನ್ನುವಂತೆ ಮತ್ತಷ್ಟು ಚಪ್ಪಾಳೆಯಿಂದ ಮೆಚ್ಚುಗೆ ಸೂಚಿಸಿದರು. ಈ ಕವಿತೆ ಯುವ ಕವಿಗೋಷ್ಠಿಗೆ ಒಳ್ಳೆಯ ಆರಂಭವನ್ನೇ ಒದಗಿಸಿಕೊಟ್ಟತು.

ಅರಸೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಚ್.ಎನ್.ಪುನೀತ್ ಕಚಗುಳಿ ಇಡುವ ಹನಿಗವಿಕೆಗಳನ್ನು ವಾಚಿಸಿದರು. ಕೆಲವು ಸ್ಯಾಂಪಲ್ ಇಲ್ಲಿವೆ.
ಚುನಾವಣೆಯಲ್ಲಿ ಅಭ್ಯರ್ಥಿಗಳ ಹೆಸರು ನೂರಾರು
ಗೆದ್ದವನಿಗೆ ಗೂಟದ ಕಾರು, ಸೋತವರಿಗೆಲ್ಲ ನಂದಾ ಬಾರು
***
ಆಫೀಸಿನಲ್ಲಿ ಅವನು ಜಟ್ಟಿ
ಅವನ ಹೆಂಡತಿ ಪುಟ್ಟಿ
ದಿನ ಮನೆಯಲ್ಲಿ ತಟ್ಟಿ
ಅವನಿಂದ ಮಾಡಿಸುತ್ತಿದ್ದಳು ಕಾಫಿ-ಟೀ.
ಇಂತಹ ನಾಲ್ಕು ಸಾಲಿನ ಕವಿತೆ ಮೂಲಕ ಪುನೀತ್ ಯುವ ಮನಸ್ಸುಗಳಿಗೆ ಲಗ್ಗೆ ಇಟ್ಟಿದ್ದರು.
ಮಹಾರಾಜ ಕಾಲೇಜಿನಲ್ಲಿ ತೃತೀಯ ಬಿ.ಎ. ವಿದ್ಯಾರ್ಥಿನಿ ಮೌಲ್ಯ ಎಂ. `ಅಮ್ಮನೆಂದರೆ...~ ಕವಿತೆಯ ಮೂಲಕ ಇಡೀ ಕವಿಗೋಷ್ಠಿಗೇ  `ಮೌಲ್ಯ~ವನ್ನು ತುಂಬಿದರು. ಆ ಕವಿಕೆಯ ಕೆಲವು ಸಾಲುಗಳು ಹೀಗಿವೆ.
ಅಮ್ಮನೆಂದರೆ...
ಕೇವಲ ನನ್ನಪ್ಪನ ಕರಿಮಣಿಯ-
ನ್ನೆದೆಗೇರಿಸಿಕೊಂಡವಲ್ಲ;
ಅತ್ತಾಗ ಸೆರಗಾದವಳು
ಬಿದ್ದಾಗ ನೆಲವಾದವಳು
ನಾ ತಪ್ಪು ಮಾಡಿ ಅಪ್ಪ ಗದರಿದಾಗ
ವಹಿಸಿಕೊಂಡು-
ಮರೆಯಲ್ಲಿ ದಂಡಿಸಿದವಳು
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಕವಯತ್ರಿ ಈ ಕವಿತೆಯನ್ನು ಬಹುವಾಗಿ ಮೆಚ್ಚುಕೊಂಡರು. ಇದೇನಾದರೂ ಸ್ಪರ್ಧೆಯಾಗಿದ್ದರೆ ಮೌಲ್ಯ ಪ್ರಥಮ ಬಹುಮಾನ ಗ್ಯಾರಂಟಿಯಾಗುತ್ತಿತ್ತು.

ಮೋಹನ್‌ಕುಮಾರ್ ಡಿ.ಎಸ್.ಗೆ ಪ್ರಸ್ತುತ ರಾಜಕೀಯ ದೊಂಬರಾಟಕ್ಕೆ ಕನ್ನಡಿ ಹಿಡಿಯುವ ಬಯಕೆ. ಆದ್ದರಿಂದಲೇ `ಕುರ್ಚಿಗಾಗಿ ಕಿತ್ತಾಟ~ ಕವಿತೆ  ಜೀವಪಡೆದಿತ್ತು.

ಬಂಧನದ ಭೀತಿ ಉಂಟಾದರೆ
ಆಸ್ಪತ್ರೆಗಳತ್ತ ಓಟ
ನ್ಯಾಯಾಲಯಗಳ ನಿರೀಕ್ಷಣ
ಜಾಮೀನಿನತ್ತ ನೋಟ
ಇವರ ಸ್ವಾಗತಕ್ಕಾಗಿ ಕಾದು ಕುಳಿತಿವೆ
ಜೈಲಿನಲ್ಲಿರುವ ಅಲ್ಯೂಮಿನಿಯಂ ತಟ್ಟೆ-ಲೋಟ
ದಯವಿಟ್ಟು ಇನ್ನು ಮುಂದೆ ಕೊಡಬೇಡಿ
ಈ ಭ್ರಷ್ಟರಿಗೆ ಅಧಿಕಾರದ ಪಟ್ಟ.

ವ್ಯಂಗ್ಯ, ಗೇಲಿ, ಆಕ್ರೋಶದ ಧಾಟಿಯಲ್ಲಿ ಮೋಹನ್‌ಕುಮಾರ್ ಕವಿತೆಯನ್ನು ಪ್ರಸ್ತುತಪಡಿಸುವಾಗ ಯುವಮನಸ್ಸುಗಳು ಚಪ್ಪಾಳೆ ಮುಖಾಂತರ ಅನುಮೋದನೆ ನೀಡಿದವು.

ಕವಿಗೋಷ್ಠಿ ಸ್ವಲ್ಪ ಗಂಭೀರ, ಬೋರ್ ಅನಿಸಿದಾಗ ವಕೀಲ ಚಂದನ್‌ಕುಮಾರ್ ಅಸ್ವಾಳ್ ಹನಿಗವಿಕೆ ಮೂಲಕ ನಗೆ ಟಾನಿಕ್ ನೀಡಿದ್ದು ಹೀಗೆ-
ನಮ್ಮೂರ್ನಾಗ ಒಂದು ನವಿಲು ಬಂದೈತ
ಎಲ್ಲ ಪಡ್ಡೆ ಹೈಕ್ಳು ಅದರ ಹಿಂದಾನಾ ಇರ್ತಾವ
ನಾ ಹಂಗೆಲ್ಲ ಹೋಗೋನಲ್ರೀ
ಯಾಕಂದ್ರ ನಮ್ ಮನಿಯಾಗೂ ಒಂದ್ ನವಿಲೈಯ್ತಲ್ಲಾ...!

-ಹೀಗೆ ಒಂದರ ಹಿಂದೆ ಒಂದರಂತೆ ಯುವ ಹೃದಯಗಳ 30 ಕವಿತೆಗಳನ್ನು ಮೊಗೆ ಮೊಗೆದು ಕೊಟ್ಟವು. ರವಿಕುಮಾರ್ ಬಾಗಿ `ತಲೆತಲಾಂತರ~ದಲ್ಲಿ ಸಕಲೆಂಟು ಜಾತಿಗಳಿಗೂ ಬೇಕಾಗಿದ್ದ ದಲಿತರ ಸೂಲಗಿತ್ತ ಸಿದ್ದವ್ವನನ್ನು ನೆನೆಯುವ ಮೂಲಕ ಮಾನವೀತೆಯ ಮೆರೆದರು. ಪ್ರತಿಭಾ ಸ.ರಾ. `ದಿಗಂತದಾಚೆ ಬೆಳಕಿನವಳು~ ಕವಿತೆಯನ್ನು ಇಂಪಾಗಿ ಹಾಡಿದರು. ಲವ ಪಿ.ಆರ್. ಶಾಂತಿಯನ್ನು, ಎಚ್.ಕೆ. ನಂದೀಶ್ ಕಾಡು ಮತ್ತು ಭೂಮಿ ಸಂವಾದವನ್ನು ಅನಾವರಣಗೊಳಿಸಿದರು. ಗಣೇಶಶಾಸ್ತ್ರಿ ರಾಜಕಾರಣಿಗಳು, ಭ್ರಷ್ಟರು, ಬಾಡಿಗೆ ತಾಯಂದಿರು ವಿರುದ್ಧ ಗುಡುಗಿದರು. ಯು.ಎಸ್.ಕಾವ್ಯ ತಾಯಿ ಕುರಿತು ಹಂಬಲಿಸಿದರೆ, ಪಿ.ಎಸ್.ದೀಪಿಕಾ ಸಮಾನತೆ, ಜಾತ್ಯತೀತ ಸಮಾಜಕ್ಕಾಗಿ ಕನವರಿಸಿದರು. ಮಾನಸ `ಅಂದು ಗಾಂಧಿ-ಇಂದು ಅಣ್ಣಾ~ ಎನ್ನುವ ಮೂಲಕ ಅವರಲ್ಲಿ ಇವರನ್ನು ಕಂಡರು. ಯುವ ಮನಸ್ಸು ಅಂದ ಮೇಲೆ ಪ್ರೀತಿ, ಪ್ರೇಮದಂತಹ ರಮ್ಯ ಭಾವನೆ ಇಲ್ಲದೇ ಹೋದರೆ ಹೇಗೆ? ಇಂತಹ ಕೊರತೆಯನ್ನು ಕೆ.ಎಸ್. ನವ್ಯಶ್ರೀ ತುಂಬಿದ್ದು ಹೀಗೆ- `ಪ್ರೀತಿ ಇರಲಿ, ಪ್ರೀತಿ ಚಂದ್ರನಂತಿರಲಿ~ ಎಂದರೆ, ಎಲ್.ಶ್ರುತಿ `ಎಂದೂ ಕಾಣದವನೇ ನಿನಗಾಗಿ~ ಎಂದು ಧ್ಯಾನಿಸಿದರು.

ಎಂ.ಯೋಗೇಶ್ವರಿ (ಅಂದು ಕಲ್ಕಿ, ಇಂದು ಕಾಳಿ), ನಮ್ರತಾದೇವಿ (ಸರ್ವಕಾಲಿಕ ಸಿರಿದೇವಿಯೊಡನೆ ಮೈಸೂರು), ಮೈತ್ರಿ ಎಸ್. (ದಸರೆ ವೈಭವ), ಮಹಾದೇವಸ್ವಾಮಿ ಎಂ. (ಕನ್ನಡ ದೀಪ) ಪ್ರಿಯಾಂಕ ಡಿ. (ನನ್ನೊಳಗೊಂದು ಪದದ ಸೊಬಗು), ಜೀವಿತ ಕೆ. (ಶಾಂತಿ), ರಾಮಚಂದ್ರ ಎಂ. ( ಹೊಳಪು), ಮಾನಸ (ಬಾಪು ನೀ ಮತ್ತೆ ಹುಟ್ಟಿಬಾ), ಪವಿತ್ರ ಎಂ.ಸಿ. (ರಂಗಮಂಟಪ) ಗಣೇಶ್ ಬಿ. (ಸ್ವಪ್ನಕನ್ಯೆ), ಪ್ರಹ್ಲಾದ ಕೆ. (ಲೋಕ ಕಲ್ಯಾಣಕ್ಕಾಗಿ), ಅಂಕಿತ (ಜೀವನ ಕುಸುಮ), ಸುಮ ರಾಜ್‌ಕುಮಾರ್ ಎಸ್. (ವರದಕ್ಷಿಣೆ ಪ್ರಹಸನ), ವಿನೋದ ಎಂ. (ಜಾನಪದ ಕುಣಿತ), ಸಂದೇಶ್ ಜೋಸೆಫ್ ಡಿಸೋಜಾ (ಕಾಯಕ), ಕೆ.ಎಂ. ಆನಂದ ಸ್ವರಚಿತ ಕವಿತೆಗಳನ್ನು ವಾಚಿಸಿ ಗಮನ ಸೆಳೆದರು.

ಉಪಸಮಿತಿ ಸಹ ಕಾರ್ಯದರ್ಶಿ ಡಾ.ಎಚ್.ಆರ್.ತಿಮ್ಮೇಗೌಡ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಡಾ.ಎ.ರಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ತೇ.ಸಿ.ವಿಶ್ವೇಶ್ವರಯ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT