ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರಿಗೆ ಕಲಾ ಶ್ರೀಮಂತಿಕೆ ತಲುಪಿಸುವ ಆಳ್ವಾಸ್‌: ಶ್ಲಾಘನೆ

Last Updated 24 ಸೆಪ್ಟೆಂಬರ್ 2013, 8:48 IST
ಅಕ್ಷರ ಗಾತ್ರ

ಶೃಂಗೇರಿ: ನಮ್ಮ ಪ್ರಾಚೀನ ಸಾಂಸ್ಕೃತಿಕ ವೈಭವ ಮತ್ತು ಕಲಾ ಶ್ರೀಮಂತಿಕೆ ಯನ್ನು ಇಂದಿನ ಯುವ ಜನತೆಗೆ ತಲುಪಿಸುವಲ್ಲಿ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಡಾ. ಮೋಹನ್‌ ಆಳ್ವ ಅವರ ಕೊಡುಗೆ ಅಪಾರ ಎಂದು ಶಾರದಾ ಪೀಠದ ಆಡಳಿತಾಧಿಕಾರಿ ವಿ.ಆರ್‌. ಗೌರೀಶಂಕರ್‌ ಹೇಳಿದರು.

ಪಟ್ಟಣ ಪಂಚಾಯಿತಿ ಎದುರಿನ ಸಭಾಂಗಣದಲ್ಲಿ ಭಾನುವಾರ ಆಳ್ವಾಸ್‌ ವಿಶ್ವನುಡಿಸಿರಿ ವಿರಾಸತ್‌ ಘಟಕ ಉದ್ಘಾಟಿಸಿ ಅವರು ಮಾತ ನಾಡಿದರು.

ನಮ್ಮ ಸಂಸ್ಕೃತಿಯನ್ನು ವಿಶ್ವವ್ಯಾಪಿಯಾಗಿಸಲು ಆಳ್ವ ಅವರು ಹಲವು ವರ್ಷಗಳ ನಿರಂತರ ಪ್ರಯತ್ನದಿಂದ ಒಂದು ದೊಡ್ಡ ತಂಡವನ್ನೇ ಕಟ್ಟಿದ್ದಾರೆ. ಬದಲಾದ ಜೀವನ ಶೈಲಿಯಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದರೆ ಇಂತಹ ಪ್ರಯತ್ನ ಅತ್ಯಗತ್ಯ. ಮೂಡುಬಿದಿರೆಯಲ್ಲಿ ಸತತವಾಗಿ ನುಡಿಸಿರಿ ಜಾತ್ರೆ ಹಾಗೂ ವಿರಾಸತ್‌ ನಡೆಸುವ ಮೂಲಕ ಜೈನಕಾಶಿಯನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿಸಿದ್ದಲ್ಲದೆ ಇಂತಹ ಯಶಸ್ವಿಕಾರ್ಯಕ್ರಮವನ್ನು ದೇಶದ ಉದ್ದಗಲಕ್ಕೂ ಕೊಂಡೊಯ್ಯುವ ಅವರ ಕನಸನ್ನು ನನಸಾಗಿಸಲು ನಾವೆಲ್ಲರೂ ಕೈಜೋಡಿಸೋಣ ಎಂದರು.

ಡಾ. ಮೋಹನ್‌ ಆಳ್ವ ಮಾತನಾಡಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಲಾವಿದರನ್ನು ಕರೆಸಿ ಅವರ ಕಲೆಯನ್ನು ಆಸ್ವಾದಿಸಲು ಹಾಗೂ ಕಲಿಯುವ ಅವಕಾಶವನ್ನು ಕಲ್ಪಿಸಬೇಕು ಎಂಬ ಕಾರಣಕ್ಕಾಗಿ ಇಂತಹ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಲಾಗುತ್ತಿದೆ. ನಮ್ಮ ವಿದ್ಯಾಲಯದಲ್ಲಿ ಕಲಿಯುತ್ತಿರುವ ದೇಶ ವಿದೇಶದ ವಿದ್ಯಾರ್ಥಿಗಳಿಗೆ ನಮ್ಮ ಮೂಲ ನೆಲೆಯ ನೃತ್ಯ ಮತ್ತು ಸಂಗೀತವನ್ನು ಕಲಿಸುವ ಜೊತೆಗೆ ನಮ್ಮ ಊರಿನ ಯುವಕರೂ ಇದರಲ್ಲಿ ಪಾಲ್ಗೊಂಡು ಕಲೆಯನ್ನು ಊರೂರಿನಲ್ಲಿ ಪಸರಿಸಲಿ ಎಂಬ ಉದ್ದೇಶದಿಂದ ವಿರಾಸತ್‌ ಆರಂಭಿಸಲಾಯಿತು.

ಇಪ್ಪತ್ತು ವಿರಾಸತ್ ಹಾಗೂ ಒಂಬತ್ತು ನುಡಿಸಿರಿ ಜಾತ್ರೆಯನ್ನು ಮೂಡುಬಿದಿರೆಯಲ್ಲಿ ಇದುವರೆಗೆ ಆಯೋಜಿಸಲಾಗಿದ್ದು ರಾಜ್ಯ, ಹೊರರಾಜ್ಯ ಹಾಗೂ ವಿದೇಶದಲ್ಲೂ ಯಶಸ್ವಿ ಪ್ರದರ್ಶನ ನೀಡಿ 60ಕ್ಕೂ ಹೆಚ್ಚು ಘಟಕಗಳನ್ನು ಅಲ್ಲಲ್ಲಿ ಸ್ಥಾಪಿಸಲಾಗಿದೆ. ಶೃಂಗೇರಿಯಲ್ಲೂ ಇಂದು ಘಟಕವನ್ನು ಆರಂಭಿಸಿದ್ದು ಸಹೃದಯಿ ಕಲಾಪೋಷಕರು ಸಂಸ್ಥೆಯ ಯಶಸ್ಸಿಗೆ ಸಹಕಾರ ನೀಡಬೇಕೆಂದರು.

ಸ್ಥಳೀಯ ಘಟಕಾಧ್ಯಕ್ಷ ಬಾಳೆಮನೆ ನಟರಾಜ್‌ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಎ.ಎಸ್‌. ನಯನ, ನಾಗೇಶ್‌ಕಾಮತ್‌, ಪಿ. ರಾಮಚಂದ್ರರಾವ್‌, ಹೆಚ್ಗುಂದ ವೆಂಕಟೇಶ್‌ ಮತ್ತಿತರರು ಇದ್ದರು.
ಸಭಾ ಕಾರ್ಯಕ್ರಮದ ನಂತರ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ದೇಶ ವಿದೇಶಗಳ ನೃತ್ಯ ಪ್ರದರ್ಶನ, ಕಿರುನಾಟಕ, ಯಕ್ಷಗಾನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT