ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಯುವಕರಿಗೆ ಮತದಾನದ ಅರಿವು ಅಗತ್ಯ'

Last Updated 4 ಏಪ್ರಿಲ್ 2013, 8:13 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಯುವಜನಾಂಗ ಮತದಾನದಲ್ಲಿ ಭಾಗವಹಿಸುವಂತೆ ಪೋಷಕರು ಅರಿವು ಮೂಡಿಸಿ, ಸರಿಯಾದ ರೀತಿಯಲ್ಲಿ ಮತ ಚಲಾಯಿಸಲು ಮಾಹಿತಿ ನೀಡಬೇಕು ಎಂದು ತಹಶೀಲ್ದಾರ್ ಜೆ.ಕೃಷ್ಣಮೂರ್ತಿ ತಿಳಿಸಿದರು.

ಇಲ್ಲಿನ ಅಂಬೇಡ್ಕರ್‌ಭವನದಲ್ಲಿ ಬುಧವಾರ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಮತ್ತು ಬೂತ್‌ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೂಳ್ಳುವಿಕೆ ಯೋಜನೆ ಕುರಿತು ನಡೆದ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

ವಿದ್ಯೆದಾನ, ಅನ್ನದಾನದಂತೆ ಮತದಾನವು ಸಹ ಒಂದು ಶ್ರೇಷ್ಠವಾದ ದಾನ. ಇದರಿಂದ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಕೂಲಿ ಕಾರ್ಮಿಕರಿಗೆ ಹಾಗೂ ಗ್ರಾಮಸ್ಥರಿಗೆ ಮತದಾನದ ಮಹತ್ವದ ಬಗ್ಗೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮಾಹಿತಿ ನೀಡಿ ಮತದಾನದಲ್ಲಿ ಭಾಗವಹಿಸುವಂತೆ ಪ್ರೇರೆಪಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಉಷಾ, ಮತದಾನದ ಹಕ್ಕನ್ನು ಹೊಂದಿರುವ ಪ್ರತಿಯೊಬ್ಬರು ಮತದಾನದಲ್ಲಿ ಭಾಗವಹಿಸುವಂತೆ ಪ್ರೇರಿಸುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಉಪನ್ಯಾಸ ನೀಡಿದ ದೈಹಿಕ ಶಿಕ್ಷಕ ಎಂ.ಪಿ.ಪ್ರಕಾಶ್, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಿ ಬಲಿಷ್ಠ ರಾಷ್ಟ್ರ ನಿರ್ಮಿಸಲು ಪ್ರತಿಯೊಬ್ಬರು ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.

ಮತದಾರರ ಪಟ್ಟಿಗೆ ಹೆಸರು ಸೇರಿಸುವವರು ನಮೂನೆ 6ರಲ್ಲಿ, ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮಾಡಲು ನಮೂನೆ 7 ಹಾಗೂ ಯಾವುದೇ ಹೆಸರು ತಿದ್ದುಪಡಿಮಾಡಲು ನಮೂನೆ 8ರಲ್ಲಿ ತಹಶೀಲ್ದಾರರ ಕಚೇರಿಗೆ ಅರ್ಜಿಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.

ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರೋಗ್ಯಶಿಕ್ಷಣಾಧಿಕಾರಿ ಲಲಿತಾ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಮೌನೇಶ್ವರಾಚಾರ್ ಮಾತನಾಡಿದರು.

ಶಿಶು ಅಭಿವೃದ್ದಿ ಯೋಜನಾಧಿಕಾರಿ ಜ್ಯೋತಿಲಕ್ಷ್ಮಿ, ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ.ಸೌಮ್ಯಾ, ಮೊಗಣ್ಣಗೌಡ, ಗಾಯಿತ್ರಿ, ಶಿವಲಿಂಗಪ್ಪ ಇದ್ದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಬಸ್‌ನಿಲ್ದಾಣ ದಿಂದ ಅಂಬೇಡ್ಕರ್‌ಭವನದವರೆಗೆ ಮತದಾನದ ಜಾಗೃತಿಯ ಬಗ್ಗೆ ಜಾಥಾ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT