ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರು ಗ್ರಾಮಗಳಲ್ಲಿ ಕೆಲಸ ಮಾಡಿ

Last Updated 5 ಆಗಸ್ಟ್ 2013, 5:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಯಶಸ್ವಿ ಉದ್ಯಮಶೀಲರಾಗಬಯಸುವ ಯುವಕರು ಕನಿಷ್ಠ 6 ತಿಂಗಳು ಕಾಲ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವುದು ಅಗತ್ಯ' ಎಂದು ಡಿಸ್ನಿ- ಯುಟಿವಿ ವ್ಯವಸ್ಥಾಪಕ ನಿರ್ದೇಶಕ ರೊನಿ ಸ್ಕ್ರೂವಾಲಾ ಪ್ರತಿಪಾದಿಸಿದರು.

ದಿ ಇಂಡಸ್ ಎಂಟರ್‌ಪ್ರಿನರ್-ಹುಬ್ಬಳ್ಳಿ (ಟಿಐಇ-ಹುಬ್ಬಳ್ಳಿ) ಹಾಗೂ ದೇಶಪಾಂಡೆ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಬಿವಿಬಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿರುವ ಪ್ರತಿಷ್ಠಾನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು  ಈ ಸಲಹೆ ನೀಡಿದರು.

ನಮ್ಮ ಗ್ರಾಮೀಣ ಪ್ರದೇಶ ಬೃಹತ್ ಮಾರುಕಟ್ಟೆ. ಗ್ರಾಮೀಣ ಜನರಿಗೆ ಬೇಡಿಕೆಗಳು ಏನು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಅಗತ್ಯ. ಹೀಗಾಗಿ 16-21 ವರ್ಷ ವಯೋಮಾನದ ಯುವಕರು ಕನಿಷ್ಠ 6 ತಿಂಗಳು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಿ, ನಂತರ ಉದ್ಯಮ ಸ್ಥಾಪಿಸಬೇಕು ಎಂದೂ ಹೇಳಿದರು.

ಇಂಡೋನೇಶಿಯಾ ಸೇರಿದಂತೆ ದಕ್ಷಿಣ ಏಷ್ಯಾದ ಅನೇಕ ರಾಷ್ಟ್ರಗಳು ಅಭಿವೃದ್ಧಿ ಪಥದಲ್ಲಿವೆ. ಆದರೆ, ಅವುಗಳಿರುವ ಮಾರುಕಟ್ಟೆ ವ್ಯಾಪ್ತಿ ಚಿಕ್ಕದು. ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಉದ್ಯಮಶೀಲತೆಗೆ ಸಾಕಷ್ಟು ಅವಕಾಶಗಳಿದ್ದು, ಈ ಅವಕಾಶಗಳ ಸದುಪಯೋಗಕ್ಕೆ ಯುವ ಸಮುದಾಯ ಮುಂದಾಗಬೇಕು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಹಾಗೂ ಸುರಕ್ಷಿತ ನೀರು ಪೂರೈಕೆಗೆ ಆದ್ಯತೆ, ಆರೋಗ್ಯ, ಶಿಕ್ಷಣ ಮತ್ತು ಜೀವನ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆ ತರುವ ಅಗತ್ಯ ಇದೆ. ಹೀಗಾಗಿ ಈ ಕ್ಷೇತ್ರಗಳಲ್ಲಿ ಉದ್ದಿಮೆ ಸ್ಥಾಪಿಸಲು ವಿಪುಲ ಅವಕಾಶಗಳಿವೆ ಎಂದು ವಿವರಿಸಿದರು.

ನಿರ್ದಿಷ್ಟ ಗುರಿ, ಕೌಶಲ್ಯಗಳ ಅಭಿವೃದ್ಧಿ, ಆಸ್ಥೆ ಹೊಂದಿರುವ ಜೊತೆಗೆ ಉತ್ತಮ ಮೌಲ್ಯಗಳನ್ನು ಮೈಗೂಡಿಸಿಕೊಂಡಾಗ ಯಶಸ್ವಿ ಉದ್ಯಮಶೀಲರಾಗಿ ಹೊರಹೊಮ್ಮಲು ಸಾಧ್ಯ. ಇದರ ಜೊತೆಗೆ, ನಾವು ಮಾಡುವ ಪ್ರತಿ ಕಾರ್ಯವನ್ನು ಪ್ರೀತಿಸಬೇಕು ಹಾಗೂ ಅದನ್ನು ಖುಷಿಯಿಂದ ಮಾಡುವುದು ಬಹಳ ಮುಖ್ಯ ಎಂದೂ ಹೇಳಿದರು.

ಯುಟಿವಿ ಸಮೂಹದ ಸಂಸ್ಥಾಪಕ ನಿರ್ದೇಶಕರಲ್ಲೊಬ್ಬರು ಹಾಗೂ ಸ್ವದೇಶ್ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿಯೂ ಆಗಿರುವ ಝರೀನಾ ಮೆಹ್ತಾ ಸ್ಕ್ರೂವಾಲಾ ಮಾತನಾಡಿ, ಯಶಸ್ವಿ ಉದ್ಯಮಶೀಲರಾಗಲು ಮೌಲ್ಯಗಳೊಂದಿಗೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು ಎಂದು ಹೇಳಿದರು.

ಆದರೆ, ಇಲ್ಲಿನ ಸಾಮಾಜಿಕ-ರಾಜಕೀಯ ವ್ಯವಸ್ಥೆಯಲ್ಲಿ ಒಬ್ಬ ಉದ್ಯಮಶೀಲ ವ್ಯಕ್ತಿ ಮೌಲ್ಯಗಳನ್ನು ಸೃಷ್ಟಿಸಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ರೊನಿ ದನಿಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT