ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರೇ ರಾಜಕಾರಣಕ್ಕೆ ಬನ್ನಿ: ಕೃಷ್ಣ ಭೈರೇಗೌಡ

Last Updated 23 ಫೆಬ್ರುವರಿ 2011, 6:25 IST
ಅಕ್ಷರ ಗಾತ್ರ

ದಾವಣಗೆರೆ: ‘ಕಲುಷಿತ ರಾಜಕೀಯ ವ್ಯವಸ್ಥೆ ಬದಲಾಯಿಸಲು ಯುವಕರು ರಾಜಕಾರಣಕ್ಕೆ ಬರಬೇಕು’ ಎಂದು ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣ ಭೈರೇಗೌಡ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ಅಂಗವಾಗಿ ನಡೆದ ಯುವ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.ದೇಶದಲ್ಲಿ ಶೇ. 70ರಷ್ಟು ಯುವಕರು ಇದ್ದಾರೆ. ರಾಜಕೀಯ ಅಸಹ್ಯ ಎಂದು ಅವರು ಈ ಕ್ಷೇತ್ರದಿಂದ ದೂರ ಸರಿದರೆ ವ್ಯವಸ್ಥೆ ಇನ್ನಷ್ಟು ಅಸಹ್ಯಕರವಾಗಿ ಮಾರ್ಪಡಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇತ್ತೀಚೆಗೆ ಸಮಾಜವನ್ನು ಒಡೆದು ಆಳುವ ಪಕ್ಷಗಳು, ಕುಟುಂಬ ಹಿತಾಸಕ್ತಿಯ ಪ್ರಾದೇಶಿಕ ಪಕ್ಷಗಳಿಂದಾಗಿ ಕಾಂಗ್ರೆಸ್ ಗೆಲ್ಲುವ ಸ್ಥಿತಿಯಲ್ಲಿಲ್ಲ. ನಮ್ಮಲ್ಲಿ ಸಂಘಟನೆಯ, ಅವಿರತವಾಗಿ ಶ್ರಮಿಸುವ ಕಾರ್ಯಕರ್ತರ ಪಡೆಯ ಕೊರತೆಯಿದೆ. ನಿಜವಾದ ಆಸಕ್ತಿಯುಳ್ಳ ಯುವಕರಿಗೆ ರಾಜಕೀಯ ಅವಕಾಶ ಸಿಗುತ್ತಿಲ್ಲ. ಮಾರ್ಚ್‌ನಲ್ಲಿ ರಾಹುಲ್ ಗಾಂಧಿಯವರೂ ಕೂಡಾ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ 18ರಿಂದ 35 ವರ್ಷದ ಒಳಗಿನ, ಕ್ರಿಮಿನಲ್ ಮೊಕದ್ದಮೆ ಇಲ್ಲದ ಯಾರೂ ಕೂಡಾ ಸದಸ್ಯತ್ವ ಹೊಂದಬಹುದು. ಯುವ ಕಾಂಗ್ರೆಸ್‌ನ ಎಲ್ಲ ಹಂತಗಳ ನಾಯಕರನ್ನು ಚುನಾವಣೆ ಮೂಲಕವೇ ಆಯ್ಕೆ ಮಾಡಲಾಗುತ್ತದೆ ಎಂದು ನುಡಿದರು.

ರಾಜ್ಯದಲ್ಲಿ 46,280 ಬೂತ್‌ಗಳಿವೆ. ಪ್ರತಿ ಬೂತ್‌ನಲ್ಲಿಯೂ ಯುವ ಕಾಂಗ್ರೆಸ್ ಸಮಿತಿ ಇರಬೇಕು. ಅಲ್ಲಿಂದಲೇ ಯುವ ಮತ್ತು ಸ್ವಚ್ಛ ರಾಜಕಾರಣದ ಶಕೆ ಆರಂಭವಾಗುತ್ತದೆ. ಇದು ದೇಶದಲ್ಲಿ ಆಗುತ್ತಿರುವ ಶಾಂತಿಯುತ ‘ಮೌನಕ್ರಾಂತಿ’ ಎಂದು ಬಣ್ಣಿಸಿದರು.ಪಕ್ಷದ ರಾಷ್ಟ್ರೀಯ ಯುವ ಘಟಕದ ಕಾರ್ಯದರ್ಶಿ ವಿಶ್ವರಂಜನ್ ಮೊಹಂತಿ ಮಾತನಾಡಿ, ಇಡೀ ದೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್.  ಯಡಿಯೂರಪ್ಪ ಅವರದ್ದು ಅತ್ಯಂತ ಭ್ರಷ್ಟ ಸರ್ಕಾರ ಎಂಬ ಧ್ವನಿಯಿದೆ. ಅದನ್ನು ತೊಲಗಿಸಬೇಕು. ಮುಂದಿನ 20 ವರ್ಷಗಳಲ್ಲಿ ಆಗುವ ಬದಲಾವಣೆಯ ಸಂದರ್ಭದಲ್ಲಿ ಇಂದಿನ ಸದಸ್ಯತ್ವ ಅಭಿಯಾನ ನೆನಪಿಸಿಕೊಳ್ಳಬಹುದು ಎಂದು ಹೇಳಿದರು.

ಮಾಜಿ ಶಾಸಕ ಮಹಿಮ ಜೆ. ಪಟೇಲ್ ಮಾತನಾಡಿ, ಯುವಕರ ಜತೆ ಯುವತಿಯರೂ ಸೇರಿಕೊಳ್ಳಬೇಕು. ಅದಕ್ಕಾಗಿ ಯುವತಿಯರನ್ನೇ ಮೊದಲು ಸೇರಿಸಬೇಕು. ಆಗ ಯುವಕರು ತಾನಾಗಿಯೇ ಬರುತ್ತಾರೆ. ಚನ್ನಗಿರಿಯಲ್ಲಿ ಈ ಪ್ರಯತ್ನ ನಡೆದಿದೆ. ರಾಹುಲ್ ಗಾಂಧಿ ಚಿಂತನೆಗಳು ಇಂದು ಪ್ರಸ್ತುತ. ನಾವು ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಶ್ರೀನಿವಾಸ ಮಾಣಿ, ವಿಶಾಲ್, ಡಿ. ಬಸವರಾಜ್, ಡಾ.ದಿನೇಶ್, ಎಂ.ಪಿ. ರವೀಂದ್ರ, ಲತಾ ತೇಜಸ್ವಿ ಪಟೇಲ್, ಜಾನ್ಸನ್ ಮಹೇಶ್, ಅಯೂಬ್ ಪೈಲ್ವಾನ್, ಮಾಜಿ ಶಾಸಕರಾದ ಕೆ. ಮಲ್ಲಪ್ಪ, ಡಿ.ಜಿ. ಶಾಂತನಗೌಡ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT