ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನತೆಗೆ ಕಂಚಿನ ಕಂಠದ ಕರೆ...

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಯೌವನವು ಪ್ರತಿಯೊಬ್ಬರ ಬದುಕಿನಲ್ಲೂ ಅಪರಿಮಿತ ಚೈತನ್ಯ ತುಂಬಿರುವ, ಸೃಜನಶೀಲತೆ ಅತ್ಯುತ್ಕೃಷ್ಠ ಸ್ತರದಲ್ಲಿರುವ ಹಾಗೂ ಯಾವುದಕ್ಕೂ ಮಣಿಯದ ಅದಮ್ಯ ಸ್ಫೂರ್ತಿ ಗರಿಷ್ಠ ಮಟ್ಟದಲ್ಲಿರುವ ಒಂದು ಅದ್ಭುತವಾದ ಅವಧಿ.

ನಮ್ಮ ಸುತ್ತಲ ಜಗತ್ತಿನಲ್ಲಿ ಜೀವನದ ಪ್ರತಿಯೊಂದು ರಂಗದಲ್ಲೂ ಶ್ರೇಷ್ಠ ಸಾಧನೆ ಮಾಡಿದವರ ನೂರಾರು ಜನರ ಬಗ್ಗೆ ನಾವು ನೋಡುತ್ತಾ, ಓದುತ್ತಾ ಇರುತ್ತೇವೆ. ಮಾನವ ಸಂಪನ್ಮೂಲದ ದೃಷ್ಟಿಯಿಂದ ನೋಡಿದರೆ ನಮ್ಮ ರಾಷ್ಟ್ರಕ್ಕೆ ಇದು ಅತ್ಯಂತ ಪ್ರಶಸ್ತವಾದ ಅವಧಿ. ರಾಷ್ಟ್ರದ ಒಟ್ಟು ಜನಸಂಖ್ಯೆಯಲ್ಲಿ ಶೇ 78ರಷ್ಟು ಜನ 40 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ.
 
ಈ ಕೋಟ್ಯಂತರ ಯುವಕರಲ್ಲಿ ಇರುವ ಶಕ್ತಿ ಎಷ್ಟೆಂಬುದನ್ನು ಒಮ್ಮೆ ಕಲ್ಪಿಸಿಕೊಂಡರೆ ಸಾಕು, ರಾಷ್ಟ್ರದ ಮುಂದಿರುವ ಯಾವುದೇ ಸವಾಲನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಬಹುದು ಎಂಬ ವಿಶ್ವಾಸ ಮೂಡಿಬಿಡುತ್ತದೆ.

ಯೌವನ, ನಮಗಿಷ್ಟವಾದ ಆದರ್ಶ ವ್ಯಕ್ತಿಯನ್ನು ಅನುಸರಣೆ ಮಾಡಿ ಅದೇ ರೀತಿ ನಮ್ಮ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸುವ ಅವಸ್ಥೆಯಾಗಿದೆ. ಎದುರಿಗಿನ ಸವಾಲು ಎಷ್ಟೇ ಕ್ಲಿಷ್ಟಕರದ್ದಾಗಿರಲಿ ಅದನ್ನು ಎದುರಿಸಲು ಹಾತೊರಿಸುವ ವಯಸ್ಸು ಇದು; ನಾವು ನಂಬಿದ ಆದರ್ಶಗಳು ನಮ್ಮ  ಕ್ರಿಯೆಗಳನ್ನು ನಿರ್ದೇಶಿಸುವ, ನಿರ್ಧರಿಸುವ ಸುಸಮಯ ಇದು;

ಜಗತ್ತಿನಲ್ಲಿ ಕಂಡು ಕೇಳಿದ್ದೆಲ್ಲವನ್ನೂ ನಾವು ಕೂಡ ಮಾಡಿ ತೋರಿಸಬಹುದು ಎಂದು ಮುನ್ನಗ್ಗುವ ಕಾಲ ಇದು; ನಮ್ಮ ಸುತ್ತಲ ಸನ್ನಿವೇಶ, ಪರಿಸರ, ವಿದ್ಯಮಾನ ಹಾಗೂ ನಾವು ನಂಬಿದ ಮೌಲ್ಯಗಳಿಂದ ಸುಲಭವಾಗಿ ಪ್ರಭಾವಿತರಾಗುವ ಅವಧಿಯೂ ಇದಾಗಿದೆ.
ಈ ಅವಸ್ಥೆಯಲ್ಲಿ ವ್ಯಕ್ತಿಯ ಚೈತನ್ಯದ ಅಗಾಧತೆಯನ್ನು ಸ್ವಾಮಿ ವಿವೇಕಾನಂದರು ಸ್ಪಷ್ಟವಾಗಿ ಮನಗಂಡಿದ್ದರಿಂದಲೇ ಪದೇಪದೇ `ಯುವ ಪೀಳಿಗೆಯೇ ನನ್ನ ಆಶಾಕಿರಣ~ ಎಂದು ಹೇಳುತ್ತಿದ್ದರು.
 
ಯುವಕರೆಲ್ಲಾ ತಮ್ಮ ಶಕ್ತಿಯನ್ನು ರಾಷ್ಟ್ರ ನಿರ್ಮಾಣಕ್ಕೆ ವಿನಿಯೋಗಿಸಬೇಕು ಎಂದು ಕಂಚಿನ ಕಂಠದಲ್ಲಿ ಕರೆ ನೀಡುತ್ತಿದ್ದರು. ಸ್ವಾಮೀಜಿಯವರ ಅನೇಕ ಸ್ಫೂರ್ತಿಯುತ ಬರವಣಿಗೆಗಳಲ್ಲಿ ಮೂರು `ಎಚ್~ಗಳ ಗಮನ ಕೇಂದ್ರೀಕರಿಸಲು ಯುವಕರಿಗೆ ನೀಡಿದ ಕರೆ ಗಮನ ಸೆಳೆಯುವಂತಹುದ್ದಾಗಿದೆ.

ಅವರು ಪ್ರಸ್ತಾಪಿಸುವ ಮೊದಲನೆಯ `ಎಚ್~ ಎಂದರೆ `ಹಾರ್ಟ್ ಟು ಫೀಲ್~. ಅಂದರೆ, ಮಿಡಿಯುವ ಹೃದಯ. ಪ್ರತಿಯೊಬ್ಬರೂ ಬಡವರಿಗಾಗಿ, ಅವಕಾಶ ವಂಚಿತರಿಗಾಗಿ ಮಿಡಿಯಬೇಕು ಎಂಬುದು ಅವರ ಆಶಯ. ನಾವು ಅಂಥವರಿಗಾಗಿ ತಲೆಯೆಲ್ಲಾ ಧಿಮ್ಮೆನ್ನುವವರಿಗೆ, ತಲೆ ಸುತ್ತು ಬರುವವರೆಗೆ, ಹೃದಯವೇ ಸ್ತಬ್ಧವಾಗುತ್ತಿದೆಯೇನೋ ಎಂಬ ಭಾವನೆ ಮೂಡುವಷ್ಟು ಮಿಡಿಯಬೇಕು ಎಂಬುದು ಅವರ ಇಚ್ಛೆಯಾಗಿತ್ತು.
 
ಇಂತಹ ಪ್ರಬಲ, ಪವಿತ್ರ ಭಾವನೆಗಳ ಬಲದಿಂದ ಮಾತ್ರ ವ್ಯಕ್ತಿಯೊಬ್ಬ ಸ್ವಯಂ ಸ್ಫೂರ್ತಿ ಪಡೆಯಲು ಅಥವಾ ಅನ್ಯರನ್ನು ಸಾಮಾನ್ಯ ಸಂಗತಿಗಳಿಗೆ ಹೊರತಾದ ವಿಷಯಗಳ ಬಗ್ಗೆ ಚಿಂತಿಸುವಂತೆ ಪ್ರೇರೇಪಿಸಲು ಸಾಧ್ಯ. ಏಕಾಂತದಲ್ಲಿ ಮೂಡುವ ಭಾವನೆಗಳಿಗೆ ತನ್ನದೇ ಮಿತಿಗಳಿವೆ. ಆದರೆ ಚಿಂತನೆಯ ಬಲದಿಂದ ಈ ಮಿತಿಗಳನ್ನು ದಾಟಿ ಭಾವನೆಗಳನ್ನು ಕಾರ್ಯರೂಪಕ್ಕೆ ಇಳಿಸಬೇಕು ಎಂಬುದು ಅವರ ಬಯಕೆಯಾಗಿತ್ತು.

ನಮ್ಮ ರಾಷ್ಟ್ರದ ಮುಂದಿರುವ ಪ್ರಸ್ತುತದ ಸಂಕೀರ್ಣ ಸಾಮಾಜಿಕ, ಆರ್ಥಿಕ, ಮೂಲಸೌಕರ್ಯದ, ರಾಜಕೀಯ ಹಾಗೂ ಬಡತನ ಸಂಬಂಧಿ ಬಿಕ್ಕಟ್ಟುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬೇಕಿರುವುದು ದೊಡ್ಡ ಸವಾಲಾಗಿದೆ. ಇವನ್ನು ಮೆಟ್ಟಿ ನಿಲ್ಲಲು ಅಗಾಧ ಶಕ್ತಿ, ಹೊಸ ರೀತಿಯ ಗ್ರಹಿಕೆ, ದಿವ್ಯ ದೂರದೃಷ್ಟಿ ಹಾಗೂ ಅತಿಮಾನುಷ ಪ್ರಯತ್ನ ಅಗತ್ಯ. ನಮಗೆ ಸೂಕ್ತವಾಗಿ ಚಿಂತಿಸಿ, ಕಾರ್ಯತಂತ್ರ ರೂಪಿಸಿ, ಕಾರ್ಯಸಾಧು ಸೂತ್ರ ಕಂಡುಕೊಳ್ಳಲು ಸಾಧ್ಯವಾಗಬೇಕು. ಈ ಜ್ಞಾನ ಗ್ರಹಿಕೆಯ  ಹಂತವನ್ನು ಸ್ವಾಮೀಜಿ ಎರಡನೆಯ `ಎಚ್~- ಹೆಡ್ ಟು ಥಿಂಕ್, ಅಂದರೆ `ಚಿಂತಿಸುವ ಮೆದುಳು~ ಎಂದು ಪ್ರತಿಪಾದಿಸುತ್ತಿದ್ದರು.

 ಬಡವರಿಗಾಗಿ ಕೇವಲ ಮಿಡಿದು, ಪರಿಹಾರದ ಬಗ್ಗೆ ಚಿಂತಿಸಿ ಅಷ್ಟಕ್ಕೇ ಸುಮ್ಮನಾದರೆ ಅದೊಂದು ಶುಷ್ಕ ಪ್ರಯತ್ನವಾಗುತ್ತದೆ. ನಮ್ಮಳಗೆ ಮೂಡಿದ ಯೋಜನೆ ಹಾಗೂ ಕಾರ್ಯತಂತ್ರಗಳನ್ನು ಅನುಷ್ಠಾನಕ್ಕೆ ಇಳಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಮುಖ್ಯ.

ಇದು ಸ್ವಾಮೀಜಿಯವರು ಮಂಡಿಸುತ್ತಿದ್ದ ಮೂರನೆಯ `ಎಚ್~ (ಹ್ಯಾಂಡ್ಸ್), ಅಂದರೆ ಉದ್ದೇಶಿತ ಕಾರ್ಯ ಸಾಕಾರಕ್ಕಿಳಿಸಬಲ್ಲ `ಕೈಗಳು~. ನಮ್ಮಳಗಿನ ಭಾವನೆಗಳನ್ನು ಕಾರ್ಯತಂತ್ರವಾಗಿ ಮಾರ್ಪಡಿಸುವ, ಅಂತಿಮವಾಗಿ ಅದನ್ನು ಪ್ರಾಯೋಗಿಕ ಕ್ರಿಯೆಯಾಗಿ ಅನುಷ್ಠಾನಕ್ಕೆ ಇಳಿಸಲು ಅಗತ್ಯವಾದ ಶಿಸ್ತು ಹಾಗೂ ಇಚ್ಛಾಶಕ್ತಿಯನ್ನು ಯುವಜನತೆ ಮೈಗೂಡಿಸಿಕೊಳ್ಳಬೇಕೆಂಬುದು ಅವರ ಆಶಯವಾಗಿತ್ತು. ಇದು ನಮ್ಮ ಯುವಕರಲ್ಲಿ ಸಾಧ್ಯವಾದಾಗ ಮಾತ್ರ ರಾಷ್ಟ್ರದ ಬಗ್ಗೆ ವಿವೇಕಾನಂದರು ಕಂಡ ಕನಸುಗಳನ್ನು ನನಸು ಮಾಡಲು ಸಾಧ್ಯವಾಗುತ್ತದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT