ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನತೆಗೆ ಕೃಷಿ ಪಾಠ ಅಗತ್ಯ

ನಿರ್ಣಯಕ್ಕೆ ಪುಟ್ಟಣ್ಣಯ್ಯ ಆಗ್ರಹ
Last Updated 21 ಡಿಸೆಂಬರ್ 2013, 5:00 IST
ಅಕ್ಷರ ಗಾತ್ರ

ಮೂಡುಬಿದಿರೆ: ‘ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‌ನಂತಹ ಬೃಹತ್ ಸಮಾವೇಶದಲ್ಲಿ ರೈತರ ಪರವಾದ ನಿರ್ಣಯವನ್ನು ಮಂಡಿಸಬೇಕು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಹಣದ ವಹಿವಾಟಿನ ಬಗ್ಗೆಯೇ ಪಾಠ ಪ್ರವಚನಗಳು ನಡೆಯುತ್ತಿವೆ. ಆದರೆ ಜೀವನ ಅವಶ್ಯಕವಾದ ನೀರಿನ ಸಂಗ್ರಹ, ನಿರ್ವಹಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾದ ಜರೂರತ್ತು ಇದೆ.  ಆ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಮಾಡಿ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ. ಎಸ್. ಪುಟ್ಟಣ್ಣಯ್ಯ ಹೇಳಿದರು.

ಅವರು ಶುಕ್ರವಾರ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಸಮಾವೇಶದ ರತ್ನಾಕರವರ್ಣಿ ವೇದಿಕೆಯಲ್ಲಿ 'ಕನ್ನಡ ನಾಡಿನ ಕೃಷಿ ಬದುಕು' ಎಂಬ ವಿಷಯದ ಬಗ್ಗೆ ಮಾತನಾಡಿದರು. ‘ನಮ್ಮ ದೇಶದಲ್ಲಿ ಕೃಷಿಯನ್ನು ಜ್ಞಾನ ಶಾಖೆಯನ್ನಾಗಿ ಗುರುತಿಸಿಲ್ಲ, ಬಂಡವಾಳ ಅಂತ ಪರಿಗಣಿಸಿ ನಷ್ಟವನ್ನು ಲೆಕ್ಕ ಹಾಕುವ ವ್ಯವಸ್ಥೆ ಮಾಡಿಲ್ಲ. ಇದರಿಂದಾಗಿಯೇ ಕೃಷಿಕರು ಇಷ್ಟು ಹಿನ್ನಡೆ ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ’ ಎಂದ ಅವರು, ‘ರೈತ ಸಂಘದವರು ಆಹಾರ ಸಂಸ್ಕೃತಿಯ ರಕ್ಷಣೆಗಾಗಿ, ರಾಜ್ಯದ ಜನರು ಹಸಿದುಕೊಂಡು ಇರಬಾರದು ಎಂಬ ಜವಾಬ್ದಾರಿಯಿಂದ ರೈತರ ಪರ ಕೆಲಸ ಮಾಡುತ್ತಿದೆಯೇ ಹೊರತು ಸಾಲ ಮನ್ನಾ ಮಾಡೋಕೆ ಹಸಿರು ಶಾಲು ಹಾಕ್ಕೊಂಡು ಓಡಾಡುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಜನಾರ್ದನ ರೆಡ್ಡಿಯಂತಹವರು ₨ 30 ಸಾವಿರಕ್ಕೂ ಅಧಿಕ ಕೋಟಿ ಸಾಲ ಮಾಡಿ ನೆಮ್ಮದಿಯಿಂದ ಇರುವಾಗ ಹತ್ತಾರು ಸಾವಿರ ಸಾಲಕ್ಕೆ ಅಂಜಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಹೋರಾಟದ ಛಲದೊಂದಿಗೆ ಸಂಘಟಿತರಾಗಬೇಕು’ ಎಂದರು.

‘ಮೂರು ಹೊತ್ತು ಊಟ ಮಾಡುವ ಎಲ್ಲ ಮನುಷ್ಯರಿಗೂ ಕೃಷಿಗೂ ಸಂಬಂಧವಿದೆ. ಆದರೆ ಇಂದಿನ ಜನತೆ ಕೃಷಿಗೂ ತಮಗೂ ಸಂಬಂಧವಿಲ್ಲ ಎಂದು ಉಡಾಫೆ ಮಾತಾಡುತ್ತಾರೆ. ಚಿನ್ನ ಮತ್ತಿತರ ವಸ್ತುಗಳ ಮೂಲಕ ಹಸಿವನ್ನು ತಣಿಸಿಕೊಳ್ಳಲಾಗದೆ ಇರುವ ದಿನಗಳು ಬಂದಾಗ ಕೃಷಿಯ ಮಹತ್ವ ಅರ್ಥವಾಗುತ್ತದೆ’ ಎಂದ ಅವರು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯ ಬಗ್ಗೆ ವಿವರಿಸಿದರು. ‘ಹಣದ ಅಗತ್ಯವಿದೆ ಎಂದು ಒಂದೆಡೆ ಕೂಡಿ ಹಾಕುತ್ತೇವೆ. ಒಬ್ಬ ವ್ಯಕ್ತಿಗೆ ಮೂರು ಸಾವಿರ ಲೀಟರ್ ನೀರು ಬೇಕಾಗುತ್ತದೆ. ಅದನ್ನು ಒಂದೆಡೆ ಕೂಡಿ ಹಾಕೋಕೆ ಆಗುತ್ತದೆಯೇ? ಹಾಗಿದ್ದರೆ ಇಂದಿನ ಜನಾಂಗಕ್ಕೆ ಜೀವನಾವಶ್ಯಕವಾದ ವಿಚಾರ­ಗಳನ್ನು ತಿಳಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆಯಲ್ಲವೇ’ ಎಂದು ಹೇಳಿದರು.

‘ಹಿರಿಯ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಪ್ರಧಾನಿಯಾದರೂ ಬರಗಾಲ ನಿರ್ವಹಣೆಯ ಕುರಿತು ಒಂದು ನೀತಿಯನ್ನು ಬರೆಯುವುದು ಸಾಧ್ಯವಾಗಿಲ್ಲ.  ಕೃಷಿ ನೀತಿ ರಚಿಸಿ ಎಂದು ಹೋರಾಟ ಮಾಡಬೇಕಾಗಿದೆ. ಪ್ರತಿಯೊಂದನ್ನೂ ಬೇಡಿ ಪಡೆಯುವ ಸ್ಥಿತಿ ರೈತರಿಗೆ ಬಂದಿದೆ. ಬ್ರಿಟಿಷರು ನಮ್ಮ ದೇಶದಿಂದ ಕಾಲ್ಕಿತ್ತರೂ ಸಾಹೇಬ್ರೇ ಅಂತ ಅರ್ಜಿ ಸಲ್ಲಿಸುವ, ಬೇಡುವ ಪದ್ಧತಿ ನಮ್ಮಲ್ಲಿ ಇನ್ನೂ ಇದೆ. ಎಲ್ಲ ನೌಕರರಿಗೂ ವೇತನ ಆಯೋಗ ಮುಂತಾದ ವ್ಯವಸ್ಥೆಗಳಿವೆ.  ಕೃಷಿಕರಿಗೂ ಒಂದು ವೇತನ ಆಯೋಗ ಯಾಕಿಲ್ಲ.

ಸ್ವಾತಂತ್ರ್ಯಾನಂತರ ಇಷ್ಟು ವರ್ಷಗಳಲ್ಲಾದರೂ ಒಬ್ಬ ಆರ್ಥಿಕ ತಜ್ಞನಾದರೂ ಕೃಷಿ ಬಂಡವಾಳ ಕುರಿತು ಯಾಕೆ ಬರೆದಿಲ್ಲ’ ಎಂದು ಪ್ರಶ್ನಿಸಿದ ಅವರು ಕೃಷಿಕರ ನಿರ್ಲಕ್ಷ್ಯದ ಕುರಿತು ಬೇಸರ ವ್ಯಕ್ತಪಡಿಸಿದರು. ಗುಣಪಾಲ ಕಡಂಬ ಕಾರ್ಯಕ್ರಮ ನಿರೂಪಿಸಿದರು. ಡಾ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು.
 

ಸೂಳೆಕೆರೆ
ನಮ್ಮ ರಾಜ್ಯದಲ್ಲಿ 15 ಸಾವಿರ ಸೂಳೆಕೆರೆ­ಗಳಿದ್ದವು. ಹೆಂಗಸರು ಮೈಮಾರಿಕೊಂಡು ಚಿನ್ನ ಒಡವೆ ಮಾಡದೇ ಉಣ್ಣುವ ಅನ್ನ ಸಮೃದ್ಧಿಯಾಗಲಿ ಎಂದು ಕೆರೆಗಳನ್ನು ಕಟ್ಟಿಸಿದರು. ಅಂತಹ ಮಹಾತಾಯಿಯರಿಗೆ ಈ ವೇದಿಕೆ ಮೂಲಕ ನಮಸ್ಕಾರ ಹೇಳುತ್ತೇನೆ. ಆದರೆ ಆ ಮಹಾತಾಯಿಯರು ಕಟ್ಟಿದ ಕೆರೆಗಳನ್ನು ಇಂದು ನಿರ್ದಯವಾಗಿ ಮುಚ್ಚಿದ್ದೇವೆ ಎನ್ನುವುದು ವಿಪರ್ಯಾಸ
- ಕೆ. ಎಸ್.ಪುಟ್ಟಣ್ಣಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT