ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನಾಂಗಕ್ಕೆ ಶಿಕ್ಷಣ, ಅವಕಾಶ ಅಗತ್ಯ

Last Updated 7 ಫೆಬ್ರುವರಿ 2012, 9:30 IST
ಅಕ್ಷರ ಗಾತ್ರ

ಮಂಗಳೂರು: `ಅತ್ಯಧಿಕ ಪ್ರಮಾಣದಲ್ಲಿ ಯುವ ಜನಾಂಗವನ್ನು ಹೊಂದಿರುವುದು ಭಾರತಕ್ಕೆ ಇರುವ ಅನುಕೂಲ ನಿಜ. ಆದರೆ ಅವರಿಗೆ ಸರಿಯಾದ ಶಿಕ್ಷಣ, ಸೂಕ್ತ ಅವಕಾಶ ಸಿಗದಿದ್ದಲ್ಲಿ ಈ ಸಿಂಹಪಾಲು ಜನಸಂಖ್ಯೆ ದೇಶಕ್ಕೆ ಲಾಭವಾಗುವ ಬದಲು ಶಾಪವಾಗುವ ಆತಂಕವಿದೆ~ ಎಂದು ನವದೆಹಲಿಯ ಡೇವಿಡ್ ಅಂಡ್ ಲುಸೈಲ್ ಪೆಕಾರ್ಡ್ ಪ್ರತಿಷ್ಠಾನದ ಕಂಟ್ರಿ ಅಡ್ವೈಸರ್ ವಿ.ಎಸ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಎಸ್‌ಡಿಎಂ ನಿರ್ವಹಣಾ ವಿಜ್ಞಾನ ಅಧ್ಯಯನ ಮತ್ತು ಸಂಶೋಧನೆ ಸ್ನಾತಕೋತ್ತರ ಕೇಂದ್ರ ಸೋಮವಾರ ಆಯೋಜಿಸಿದ್ದ `ಜಾಗತಿಕ ಮನೋಭೂಮಿಕೆ-ಸವಾಲು ಎದುರಿಸಲು ಯುವಕರನ್ನು ಸಜ್ಜುಗೊಳಿಸುವಿಕೆ~ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಈಗಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಮಾಹಿತಿ ಪಡೆಯುವುದು ಕಷ್ಟವೇನಲ್ಲ. ಹಿಂದೆಂದಿಗಿಂತ ಹೆಚ್ಚು ಅವಕಾಶವಿದೆ. ಆದರೆ ನಮಗೇನು ಬೇಕು. ಮಾಹಿತಿಯ ಉಪಯೋಗವನ್ನು ಯಾವ ರೀತಿ ಪಡೆಯಬೇಕು ಎಂಬುದು ಮುಖ್ಯ~ ಎಂದು ಅವರು ಹೇಳಿದರು.

`ಈಗ ಅವಕಾಶಗಳು ಹಿಂದಿಗಿಂತ ಹೆಚ್ಚು ಇವೆ. ಹೀಗಾಗಿ ಕನಸು ಕಾಣಲು ಸಾಧ್ಯವಿದೆ. ಅವಕಾಶಗಳನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ವಿದ್ಯಾರ್ಥಿಗಳು ನಿರ್ಧರಿಸಬೇಕು. ತೀವ್ರ ಸ್ಪರ್ಧೆ ಈಗ ಎದುರಾಗಿರುವ ಇನ್ನೊಂದು ಸವಾಲು. ಆದರೆ ಸ್ಪರ್ಧೆ ಎದುರಿಸಲು ಒಳ್ಳೆಯ ಶಿಕ್ಷಣ ಅಗತ್ಯ~ ಎಂದು ಅವರು ಅಭಿಪ್ರಾಯಪಟ್ಟರು.

ಗುಣಮಟ್ಟದ ಶಿಕ್ಷಣ: ಈಗ ದೇಶದ ಬಹುತೇಕ ಕಡೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಒಳ್ಳೆಯ ಶಿಕ್ಷಣದ ಅಡಿಪಾಯ ಇಲ್ಲದೇ ಹೋದರೆ ದೇಶದ ಆರ್ಥಿಕತೆಗೆ ಕೊಡುಗೆ ಸಾಧ್ಯವಾಗುವುದಿಲ್ಲ. ಕೆಲವೇ ನಗರಗಳನ್ನು ಬಿಟ್ಟರೆ ದೇಶದ ಬಹುತೇಕ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ ಸೇವೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಗಮನ ಸೆಳೆದರು.

`ಭಾರತಕ್ಕೆ ಯುವ ಜನಸಂಖ್ಯೆಯ ದೊಡ್ಡ ಶಕ್ತಿ ಇದೆ. ಈ ಅನುಕೂಲ ವಿಶ್ವದ ಇತರ ರಾಷ್ಟ್ರಗಳಿಗೆ ಇಲ್ಲ. ಆದರೆ ಅಧಿಕ ಪ್ರಮಾಣದಲ್ಲಿರುವ ಯುವ ಸಮೂಹಕ್ಕೆ ಯಾವ ರೀತಿ ಅಗತ್ಯವಿರುವ ನೈಪುಣ್ಯ ಒದಗಿಸುತ್ತದೆ ಎಂಬುದರ ಮೇಲೆ ದೇಶದ ಭವಿಷ್ಯ ನಿಂತಿದೆ~ ಎಂದು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಕೆ.ಅನಿಲ್ ಅಭಿಪ್ರಾಯಪಟ್ಟರು.

ಕಾರ್ಪೊರೇಷನ್ ಬ್ಯಾಂಕ್ ಅಧ್ಯಕ್ಷ-ಆಡಳಿತ ನಿರ್ದೇಶಕ ಅಜಯ್ ಕುಮಾರ್ ಸಮ್ಮೇಳನ ಉದ್ಘಾಟಿಸಿದರು. `ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ ಎಂದರು.

ಆದರೆ ಕಾರ್ಯಕ್ಷಮತೆ ಸುಧಾರಿಸುವಲ್ಲಿ ತಂತ್ರಜ್ಞಾನದ ಲಾಭ ಬಳಸಬೇಕಿದೆ. ಇನ್ನು ಜಾಗತೀಕರಣದ ಹಿನ್ನೆಲೆಯಲ್ಲಿ ಪೈಪೋಟಿ ಹೆಚ್ಚಾಗಿದೆ. ನಮ್ಮ ಗ್ರಾಹಕ ಯಾರು ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ ಎಂದರು.

`ನಮ್ಮಲ್ಲಿ ಧನಾತ್ಮಕ ಮತ್ತು ನಕಾರಾತ್ಮಕ ಚಿಂತನೆಯಿದೆ. ಆದರೆ ಯಶಸ್ಸಿಗೆ ಧನ್ಮಾತ್ಮಕ ಮನೋಭಾವ ಬೇಕು. ಹೊಸ ಆಲೋಚನೆಗಳಿಗೆ ತೆರೆದುಕೊಳ್ಳಬೇಕು. ಪರಿಶ್ರಮ, ಪ್ರಾಮಾಣಿಕತೆ, ಕಾರ್ಯನಿಷ್ಠೆ ರೂಢಿಸಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು~ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಎಸ್‌ಡಿಎಂ ಕಾನೂನು ಕಾಲೇಜು ಪ್ರಾಂಶುಪಾಲ ಕೆ.ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಕೆ.ದೇವರಾಜ್, ಫ್ಯಾಕಲ್ಟಿ ಸಂಚಾಲಕರಾದ ಪ್ರಮೀಳಾ ಶೆಟ್ಟಿ, ವಿದ್ಯಾರ್ಥಿ ಸಂಚಾಲಕರಾದ ಸುರಕ್ಷಾ ಜೈನ್, ಅರ್ಜುನ್ ಜಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT