ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿ ಮೇಲೆ ಸರಣಿ ಅತ್ಯಾಚಾರ

Last Updated 26 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕಾಸರಗೋಡು: ದೆಹಲಿಯಲ್ಲಿ ಬಸ್‌ನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಚರ್ಚೆಯ ಬಿರುಗಾಳಿ ಎಬ್ಬಿಸಿರುವ ಸಂದರ್ಭದಲ್ಲೇ, ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ಮತ್ತೊಂದು ಪಾಶವೀ ಕೃತ್ಯ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕನ್ಯಾನದ ಯುವತಿಯ (18 ವರ್ಷ) ಮೇಲೆ ಕೇರಳ ಮೂಲದ ತಲಾ ನಾಲ್ವರು ದುಷ್ಕರ್ಮಿಗಳ ಎರಡು ಪ್ರತ್ಯೇಕ ತಂಡಗಳು ಸೋಮವಾರ ರಾತ್ರಿ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ವಿವರ: ಮಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಕೆಲಸಕ್ಕಿದ್ದ ಯುವತಿಗೆ ಕಾಸರಗೋಡು ಜಿಲ್ಲೆಯ ಉಪ್ಪಳದ ಅಸ್ಗರ್ ಎಂಬಾತ ಪರಿಚಯವಾಗಿದ್ದ. ಆಕೆಯ ಮನವೊಲಿಸಿದ್ದ ಆತ ಇದೇ 24ರಂದು ಉಪ್ಪಳಕ್ಕೆ ಬರುವಂತೆ ಪುಸಲಾಯಿಸಿದ್ದ. ಯುವತಿ ಅಂದು ಮಧ್ಯಾಹ್ನದ ವೇಳೆ ಉಪ್ಪಳಕ್ಕೆ ತೆರಳಿದ್ದು, ಅಸ್ಗರ್ ಸಹಿತ ನಾಲ್ವರು ದುಷ್ಕರ್ಮಿಗಳ ತಂಡ ಆಕೆಯನ್ನು ಆಮ್ನಿ ವಾಹನದಲ್ಲಿ ಮಂಗಳೂರಿನ ಕಡೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದೆ. ಯುವತಿಯನ್ನು ದುಷ್ಕರ್ಮಿಗಳು ಕುಂಬಳೆ ರೈಲ್ವೆ ನಿಲ್ದಾಣದ ಬಳಿ ರಾತ್ರಿ ವೇಳೆ ಬಿಟ್ಟು ಪರಾರಿಯಾಗಿದ್ದಾರೆ.

ಮತ್ತೊಂದು ಆಘಾತ: ಅತ್ಯಾಚಾರಕ್ಕೊಳಗಾಗಿ ದಿಕ್ಕು ತೋಚದ ಯುವತಿ ಕುಂಬಳೆ ರೈಲ್ವೆ ನಿಲ್ದಾಣದಿಂದ ಅನತಿ ದೂರದ ಬಸ್ ನಿಲ್ದಾಣಕ್ಕೆ ಬಂದಿದ್ದಳು. ರಾತ್ರಿ 8ರ ಸುಮಾರಿಗೆ ಬಿಕ್ಕಳಿಸುತ್ತ ಅಡ್ಡಾಡುತ್ತಿದ್ದ ಯುವತಿಯನ್ನು ರಿಕ್ಷಾ ಚಾಲಕ ಗಣೇಶ (24) ಗಮನಿಸಿದ್ದು, ರಿಕ್ಷಾದಲ್ಲಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಇದಾದ ಬಳಿಕ ಆತ ಮೂವರು ಗೆಳೆಯರನ್ನೂ ಕರೆದುಕೊಂಡು ಬಂದಿದ್ದು, ಅವರೂ ಆಕೆಯ ಮೇಲೆ ಮತ್ತೊಮ್ಮೆ ಅತ್ಯಾಚಾರ ನಡೆಸಿದ್ದಾರೆ. ಬಳಿಕ ದುಷ್ಕರ್ಮಿಗಳ ತಂಡ, ಆಘಾತಕ್ಕೊಳಗಾದ ಯುವತಿಯನ್ನು ಕುಂಬಳೆ ಬಸ್ ನಿಲ್ದಾಣಕ್ಕೆ ಮಧ್ಯರಾತ್ರಿ ವೇಳೆ ಕರೆತಂದು ಬಿಟ್ಟು ಅಲ್ಲಿಂದ ಪರಾರಿಯಾಗಿದೆ.

ಮಂಗಳವಾರ ಮುಂಜಾನೆ 2 ಗಂಟೆ ವೇಳೆ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಯುವತಿಯನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಕುಂಬಳೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.ಪ್ರಜ್ಞೆ ಮರಳಿದ ಬಳಿಕ ಯುವತಿಯು ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ವಿವರಿಸಿದ್ದಾಳೆ. ಚೈಲ್ಡ್ ವೆಲ್‌ಫೇರ್ ಸಮಿತಿ ಅಧ್ಯಕ್ಷೆ ಪಿ.ಪಿ.ಮಣಿಯಮ್ಮ ಠಾಣೆಗೆ ಬಂದು ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಒಬ್ಬ ಸೆರೆ-7 ಮಂದಿ ಪರಾರಿ: ಯುವತಿಯು ನೀಡಿದ ಮಾಹಿತಿ ಆಧಾರದಲ್ಲಿ ರಿಕ್ಷಾ ಚಾಲಕನಾಗಿರುವ ಆರೋಪಿ ಕೊಯಿಪ್ಪಾಡಿ ಹೊಸಬೆಟ್ಟು ನಿವಾಸಿ ಗಣೇಶನನ್ನು ಸರ್ಕಲ್ ಇನ್‌ಸ್ಪೆಕ್ಟರ್ ಟಿ.ಪಿ.ರಂಜಿತ್ ನೇತೃತ್ವದ ಪೊಲೀಸರ ತಂಡ ಬುಧವಾರ ಬಂಧಿಸಿದೆ. ಇತರ ಏಳು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಡಿವೈಎಫ್‌ಐ ಪ್ರತಿಭಟನೆ:ಯುವತಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಡಿವೈಎಫ್‌ಐ, ಮಹಿಳಾ ಘಟಕದ ಪ್ರಮುಖರು ಬುಧವಾರ ಕುಂಬಳೆ ಪೊಲೀಸ್ ಠಾಣೆಗೆ ಧಾವಿಸಿ ಪ್ರತಿಭಟಿಸಿದರು.ಅತ್ಯಾಚಾರ ನಡೆಸಿದ ಆರೋಪಿಗಳ ಪೈಕಿ ಪ್ರಭಾವಿ ವ್ಯಕ್ತಿಗಳ ಪುತ್ರರೂ ಸೇರಿದ್ದಾರೆ ಎನ್ನಲಾಗಿದೆ. ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸದಿರುವುದನ್ನು ಡಿವೈಎಫ್‌ಐ ಬಲವಾಗಿ ಖಂಡಿಸಿದೆ.

ತಾಯಿ ಇದ್ದೂ ತಬ್ಬಲಿ
ಯುವತಿಯ ತಂದೆಯ ಸಾವಿನ ಬಳಿಕ ತಾಯಿ ಬೇರೊಂದು ವಿವಾಹವಾಗಿದ್ದರು. ಆ ಬಳಿಕ ಮಾವನ ಜತೆ ವಾಸಿಸುತ್ತಿದ್ದ ಯುವತಿ ಕೆಲವು ತಿಂಗಳ ಹಿಂದಷ್ಟೇ ಮಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಅಲ್ಲಿ ಆಕೆಗೆ ಉಪ್ಪಳದ ಅಸ್ಗರ್ ಎಂಬ ಯುವಕನ ಪರಿಚಯವಾಗಿದೆ. ಅಪಾರ್ಟ್‌ಮೆಂಟ್ ಒಂದರಲ್ಲಿ ಉದ್ಯೋಗಿಯಾಗಿದ್ದ ತಂದೆಯನ್ನು ಕಳೆದುಕೊಂಡಿದ್ದ ಯುವತಿ ಜೀವನದಲ್ಲಿ ಬಹಳಷ್ಟು ನೊಂದಿದ್ದಳು. ತಾಯಿಯೂ ಎರಡನೆ ಮದುವೆಯಾದ ಬಳಿಕ ಆಕೆ ಮತ್ತಷ್ಟು ಸಂಕಟ ಅನುಭವಿಸಿದ್ದಳು. ಇದಾದ ಬೆನ್ನಲ್ಲೇ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿರುವುದು ಆಕೆಯ ಬದುಕಿನ ಸ್ಥೈರ್ಯವನ್ನೇ ಕುಗ್ಗಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT