ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ದೆಹಲಿ ಬಸ್‌ನಲ್ಲಿ ಹೇಯ ಕೃತ್ಯ, ನಾಲ್ವರ ಬಂಧನ
Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅರೆ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಮೇಲೆ ಚಲಿಸುತ್ತಿದ್ದ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಇಲ್ಲಿನ ವಸಂತ್ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ವಸಂತ ವಿಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ : ಉತ್ತರಾಖಂಡದ 23ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿ ಭಾನುವಾರ ರಾತ್ರಿ ತನ್ನ ಗೆಳೆಯನೊಂದಿಗೆ ಸಿನಿಮಾ ನೋಡಿಕೊಂಡು ಮುನಿರ್ಕಾದಿಂದ ದ್ವಾರಕಾಕಕ್ಕೆ ಹೋಗಲು ಖಾಸಗಿ ಬಸ್ ಏರಿದರು. ಆಗ ಬಸ್‌ನಲ್ಲಿ ಯಾವ ಪ್ರಯಾಣಿಕರೂ ಇರಲಿಲ್ಲ.

ಬಸ್‌ನಲ್ಲಿದ್ದ ಆರೇಳು ಮಂದಿ ಚಾಲಕರು ಈಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅದನ್ನು ತಡೆಯಲು ಮುಂದಾದ ಗೆಳೆಯನ ಮೇಲೂ ಹಲ್ಲೆ ಮಾಡಿದ್ದಾರೆ. ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಇಬ್ಬರನ್ನೂ ಮಹಿಪಾಲಪುರದ ಬಳಿ ಬಸ್‌ನಿಂದ ಹೊರ ದಬ್ಬಿದ್ದಾರೆ.

`ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಎಐಐಎಂಎಸ್ ತುರ್ತು ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಫ್ದರ್‌ಜಂಗ್ ಆಸ್ಪತ್ರೆಗೆ ಸೇರಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

`ತೀವ್ರವಾಗಿ ಅಸ್ವಸ್ಥಗೊಂಡಿರುವ ಯುವತಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಯುವಕನಿಗೆ ಚಿಕಿತ್ಸೆ ನೀಡಿ, ಆತನಿಂದ ಹೇಳಿಕೆ ದಾಖಲಿಸಿಕೊಂಡು ಮನೆಗೆ ಕಳುಹಿಸಲಾಯಿತು' ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಗೊಳಗಾದ ಯುವಕನ ಸಂಬಂಧಿಕರೊಬ್ಬರ ಹೇಳಿಕೆ ಪ್ರಕಾರ, `ಆರೇಳು ಚಾಲಕರು ಇವರಿಬ್ಬರ ಮೇಲೆ ದಾಳಿ ಮಾಡಿದ್ದಾರೆ. ನಮ್ಮ ಹುಡುಗ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾನೆ. ಆತನಿಗೆ ಕಬ್ಬಿಣದ ಸಲಾಖೆಯಿಂದ ಹೊಡೆದು, ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ'.

ತನಿಖೆಗೆ ಒತ್ತಾಯ: ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಗೆ ನಡೆಸುವಂತೆ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಒತ್ತಾಯಿಸುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಮಮತಾ ಶರ್ಮಾ ತಿಳಿಸಿದ್ದಾರೆ.

ರಾಜಧಾನಿಯಲ್ಲಿ ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿವೆ. ಮುರ್ನಿಕಾದಂತಹ ಜನನಿಬಿಡ ಪ್ರದೇಶದಲ್ಲೇ ಇಂಥ ಘಟನೆ ನಡೆದಿರುವುದಕ್ಕೆ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಅವರು ದೂರಿದ್ದಾರೆ.

`ಘಟನೆಯಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಯ ಗೆಳೆಯನೂ ಭಾಗಿಯಾಗಿರಬಹುದೆಂದು' ಎಂದು ಮಮತಾ ಶಂಕೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ವಕ್ತಾರ ಮುಕ್ತಾರ್ ಅಬ್ಬಾಸ್ ನಖ್ವಿ `ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದಾಗಿ ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ' ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT