ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಪಡೆಯತ್ತಲೇ ದೋನಿ ಚಿತ್ತ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್: ಬುಧವಾರ ಮಧ್ಯಾಹ್ನದ  ಚುರುಕು ಬಿಸಿಲಿನಲ್ಲಿ ಹುಮ್ಮಸ್ಸಿನಿಂದ ಬೌಲಿಂಗ್ ಮಾಡುತ್ತಿದ್ದ ಕರ್ನಾಟಕದ ಎಡಗೈ ಮಧ್ಯಮ ವೇಗಿ ಎಸ್. ಅರವಿಂದ್ ಮತ್ತು ಬಲಗೈ ವೇಗಿ ವಿನಯಕುಮಾರ್ ಅವರನ್ನು ಮಹೇಂದ್ರಸಿಂಗ್ ದೋನಿ ತದೇಕಚಿತ್ತದಿಂದ ಗಮನಿಸುತ್ತಿದ್ದರು. 

ಅಕ್ಟೋಬರ್ 14ರಂದು ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಅನುಭವಿ ಪ್ರವೀಣಕುಮಾರ್ ಅವರೊಂದಿಗೆ ಬೌಲಿಂಗ್ ಜವಾಬ್ದಾರಿಯನ್ನು ಹೊರುವ  ಸಮರ್ಥರ ಹುಡುಕಾಟ ಅವರ ಕಣ್ಣುಗಳಲ್ಲಿ ಇತ್ತು.  `ಮುತ್ತಿನ ನಗರಿ~ ಹೈದರಾಬಾದಿನ ಉಪ್ಪಳದಲ್ಲಿರುವ ರಾಜೀವಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದ ನೆಟ್ಸ್‌ನಲ್ಲಿ ಬುಧವಾರ ಮಧ್ಯಾಹ್ನ ಅಭ್ಯಾಸ ಮಾಡುತ್ತಿದ್ದ  ತಮ್ಮ ಯಂಗ್ ಬ್ರಿಗೆಡ್‌ನ ಆಟದ ಮೇಲೆಯೇ ಅವರ ಚಿತ್ತ ಇತ್ತು.

ಕಳೆದ ತಿಂಗಳು ಇಂಗ್ಲೆಂಡ್‌ನಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಗಳಲ್ಲಿ ಹೀನಾಯವಾಗಿ ಸೋತ ಸೇಡನ್ನು ತೀರಿಸಿಕೊಳ್ಳಲು,  ಇದೀಗ ತಂಡದಲ್ಲಿರುವ ಯುವಪಡೆಯನ್ನೇ ಅವರು ನೆಚ್ಚಿಕೊಂಡಿದ್ದಾರೆ.  ಭಾರತದ ಪಾಲಿಗೆ ದುರದೃಷ್ಟದ ಮೈದಾನವೇ ಆಗಿರುವ ರಾಜೀವಗಾಂಧಿ ಕ್ರೀಡಾಂಗಣದಲ್ಲಿ  ಅಕ್ಟೋಬರ್ 14ರಂದು ಇಂಗ್ಲೆಂಡ್ ವಿರುದ್ಧದ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಇಲ್ಲಿ ನಡೆಯಲಿದೆ. ಭಾರತ ಇಲ್ಲಿ ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಸೋತಿದೆ.

`ಗಾಯ~ದ ಸಮಸ್ಯೆಯಿಂದ ಬಳಲಿದ ಹಿರಿಯ ಆಟಗಾರರೂ ಈ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಇಲ್ಲ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, ಯುವರಾಜ್‌ಸಿಂಗ್ ಇಲ್ಲದ ಬ್ಯಾಟಿಂಗ್ ಪಡೆಯಲ್ಲಿ ವೀರಾಟ್ ಕೋಹ್ಲಿ, ಸುರೇಶ್ ರೈನಾ, ಗೌತಮ್ ಗಂಭೀರ್ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಬೌಲಿಂಗ್‌ನಲ್ಲಿ ಜಹೀರ್ ಖಾನ್ ಸೇವೆ ಲಭ್ಯವಿಲ್ಲ. ಆದ್ದರಿಂದ ಬುಧವಾರ ಬೆಳಿಗ್ಗೆ ಹೈದರಾಬಾದಿಗೆ ಬಂದ ತಂಡ ಮಧ್ಯಾಹ್ನ ಅಭ್ಯಾಸ ನಡೆಸಲು ಮೈದಾನಕ್ಕೆ ಆಗಮಿಸಿತ್ತು.

ಫುಟ್‌ಬಾಲ್ ಆಡಿ, ಫೀಲ್ಡಿಂಗ್ ಅಭ್ಯಾಸ ನಡೆಸಿದ ನಂತರ. ಎಲ್ಲ ಆಟಗಾರರೂ ನೆಟ್ಸ್‌ನಲ್ಲಿ ಸುಮಾರು ಎರಡು ತಾಸಿಗೂ ಹೆಚ್ಚು ಹೊತ್ತು ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸ   ನಡೆಸಿದರು. ಬೌಲರ್‌ಗಳಾದ ಆರ್. ಅಶ್ವಿನ್  ಮತ್ತು ಪ್ರವೀಣಕುಮಾರ ಕೂಡ ಬ್ಯಾಟಿಂಗ್ ಅಭ್ಯಾಸ ನಡೆಸಿದರು.


ಸ್ಪಲ್ಪ ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದ ಮಹಿ, ಉಳಿದ ಸಮಯವನ್ನು ಯುವ ಆಟಗಾರರ ಅಭ್ಯಾಸದತ್ತಲೇ ಗಮನ ಹರಿಸಿದರು. ಕೋಚ್ ಡಂಕನ್ ಫ್ಲೆಚರ್ ಜೊತೆ ನಿರಂತರ ಸಮಾಲೋಚನೆ ನಡೆಸುತ್ತಿದ್ದರು.
 
ವಿನಯಕುಮಾರ ಮತ್ತು ಅರವಿಂದ್ ಅವರಿಗೆ ಹೆಚ್ಚು ಹೊತ್ತು ಬೌಲಿಂಗ್ ಅಭ್ಯಾಸಕ್ಕೆ ಅವಕಾಶ ನೀಡಲಾಗಿತ್ತು. ಇನ್ನೊಂದು ನೆಟ್‌ನಲ್ಲಿ ಸ್ಪಿನ್ನರ್ ರಾಹುಲ್ ಶರ್ಮಾ ಅವರ ಬೌಲಿಂಗ್‌ಗೆ ಒತ್ತು ನೀಡಲಾಗಿತ್ತು.  ಗೌತಮ್  ಗಂಭೀರ ಹೊರತು ಪಡಿಸಿ ಎಲ್ಲರೂ ನೆಟ್ಸ್‌ನಲ್ಲಿ ಭಾಗವಹಿಸಿದ್ದರು.

ಮೊದಲ ಎರಡು ಪಂದ್ಯಗಳಲ್ಲಿ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿರುವ ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ ಕೂಡ ಬ್ಯಾಟಿಂಗ್ ಅಭ್ಯಾಸದ ಮೇಲೆ ಹೆಚ್ಚು ಗಮನ ನೀಡಿದರು.  ಈಗ ಸುರೇಶ್ ರೈನಾ, ವೀರಾಟ್ ಕೋಹ್ಲಿ, ಗೌತಮ್ ಗಂಭೀರ್ ಅವರ ಅನುಭವ ಮತ್ತು ಹೊಸ ಹುಡುಗರ ಹುರುಪಿನ ಮಿಶ್ರಣವನ್ನು ಹದವಾಗಿ ಬಳಸಿಕೊಳ್ಳುವ ಯೋಜನೆಯಲ್ಲಿ ದೋನಿ ಮುಳುಗಿದ್ದಾರೆ. 

ನಿರಂತರ ಕ್ರಿಕೆಟ್ ಟೂರ್ನಿಗಳಿಂದ ಆಡಿದ ಬಳಲಿಕೆಯನ್ನು ಮುಖದ ಮೇಲೆ ತೋರಿಸಿಕೊಳ್ಳದ ಮಹಿ ತಮ್ಮ ಎಂದಿನ ನಸುನಗುವಿನೊಂದಿಗೆ ಇದ್ದರು.

ಆದರೆ ಇತ್ತ ಪ್ರವಾಸಿ ಇಂಗ್ಲೆಂಡ್ ತಂಡದ ಚಿತ್ರಣವೇ ಬೇರೆ ಇತ್ತು. ಆತ್ಮವಿಶ್ವಾಸದಿಂದ ತುಂಬಿ ತುಳುಕುತ್ತಿರುವ ಅಲಿಸ್ಟರ್ ಕುಕ್ ಬಳಗ ಅತ್ಯಂತ ಉತ್ಸಾಹದಿಂದ ಅಭ್ಯಾಸ ನಡೆಸಿತು. ನಗೆಚಟಾಕಿಯ ವಿನಿಮಯ ಮಾಡುತ್ತ ಅಭ್ಯಾಸ ನಡೆಸಿದರು. ಕೋಚ್ ಆ್ಯಂಡಿ ಫ್ಲವರ್ ಕೂಡ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು.

ಎರಡು ಅಭ್ಯಾಸ ಪಂದ್ಯಗಳ್ಲ್ಲಲಿ ಭರ್ಜರಿ ಗೆಲುವು ಸಾಧಿಸಿರುವ ತಂಡ ಹೈದರಾಬಾದಿನ ಬಿಸಿಲಿಗೆ ಒಗ್ಗಿಕೊಂಡಿದೆ. ಇಲ್ಲಿನ `ದಮ್ ಬಿರಿಯಾನಿ~ ರುಚಿಯನ್ನೂ ಸವಿದಿರುವ ಅವರ ಬಳಿ ಹಲವು ಪ್ಲಸ್ ಪಾಯಿಂಟ್‌ಗಳಿವೆ. ಭಾರತ  ತಂಡದಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳಿಲ್ಲದಿರುವುದು, ತಮ್ಮ ತಂಡದ ಬಹುತೇಕ ಎಲ್ಲ ಆಟಗಾರರೂ ಉತ್ತಮ ಫಾರ್ಮ್‌ನಲ್ಲಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ.

ಹೈದರಾಬಾದಿನಲ್ಲಿ ಒಂದು ಕಡೆ ತೆಲಂಗಾಣ ರಾಜ್ಯಕ್ಕಾಗಿ ಹೋರಾಟ ನಡೆಯುತ್ತಿದ್ದರೂ, ಬುಧವಾರ ಮಧ್ಯಾಹ್ನ ಟಿಕೆಟು, ಪಾಸುಗಳಿಗಾಗಿ ಯುವಕರ ದಂಡು ಮೈದಾನದ ಸುತ್ತ ಠಳಾಯಿಸುತ್ತಿತ್ತು. ಹೊಸ ಪ್ರತಿಭೆಗಳ ಉಪ್ಪಳದ ಅಂಗಳದಲ್ಲಿ ಗೆಲುವಿನ ಅಧ್ಯಾಯ ತೆರೆಯುತ್ತಾರೆ ಎಂಬ ವಿಶ್ವಾಸದೊಂದಿಗೆ ಟಿಕೆಟ್ ಕೊಳ್ಳಲು ಓಡಾಡುತ್ತಿದ್ದರು. ಅವರ ಆಶಯ ಈಡೇರಿದರೆ,  ಸತತ ಸೋಲಿನಿಂದ ಬಳಲಿರುವ ಭಾರತದ ಪಡೆ ಮತ್ತೆ ತಲೆ ಎತ್ತಿ ನಿಲ್ಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT