ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವರಾಜ್‌ಗೆ ಅಗ್ನಿಪರೀಕ್ಷೆಯ ಸರಣಿ

ಕ್ರಿಕೆಟ್‌: ಇಂದು ಪಂದ್ಯ, ಹುಮ್ಮಸ್ಸಿನಲ್ಲಿ ಭಾರತ ಎ ತಂಡ , ಗೆಲುವಿನ ವಿಶ್ವಾಸದಲ್ಲಿ ವಿಂಡೀಸ್‌
Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾನ್ಸರ್‌ ಎಂಬ ಹೆಮ್ಮಾರಿಯಿಂದ ಚೇತರಿಸಿಕೊಂಡು  ಅಮೋಘವಾಗಿ ಕ್ರಿಕೆಟ್‌ ಅಂಗಳಕ್ಕೆ ಮರಳಿರುವ  ಯುವರಾಜ್‌ ಸಿಂಗ್‌ ಮುಂದೆ ಈಗ ಸಾಲು ಸಾಲು ಸವಾಲು. ವೆಸ್ಟ್‌ ಇಂಡೀಸ್‌  ‘ಎ‘ ಎದುರಿನ ಏಕದಿನ ಸರಣಿಗೆ ಭಾರತ ‘ಎ‘ ತಂಡವನ್ನು ಅವರು ಮುನ್ನಡೆಸಲಿದ್ದು, ಈ ಸರಣಿ ಯುವಿ ಪಾಲಿಗೆ ಅಗ್ನಿಪರೀಕ್ಷೆ ಎನಿಸಿದೆ.

ಉಭಯ ತಂಡಗಳ ನಡುವಿನ ಮೂರು ಏಕದಿನ ಮತ್ತು ಒಂದು ಟ್ವೆಂಟಿ–20 ಸರಣಿಯ ಮೊದಲ ಪಂದ್ಯ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ, ಸತತ ಮಳೆಯ ಕಾಟ ಇರುವುದರಿಂದ ಕ್ರಿಕೆಟ್ ಆಟ ನಡೆಯುವುದೇ ಎನ್ನುವ ಅನುಮಾನ ಮೂಡಿದೆ. ಈ ಆತಂಕದ ನಡುವೆಯೂ ಕ್ರಿಕೆಟ್‌ ಪ್ರಿಯರ ಗಮನ  ಯುವರಾಜ್‌ ಮೇಲಿದೆ.

ಆಲ್‌ರೌಂಡರ್‌ ಯುವರಾಜ್‌ ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ನಂತರ ಬೆಂಗಳೂರಿನಲ್ಲಿ ಆಡುತ್ತಿರುವ  ಮೊದಲ ಏಕದಿನ ಸರಣಿ ಇದಾಗಿದೆ. 2011ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಅವರು ಐರ್ಲೆಂಡ್‌ ಎದುರು ಆಡಿದ್ದು ಇಲ್ಲಿ ಕೊನೆಯ ಪಂದ್ಯವಾಗಿತ್ತು. ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುವಾಗ ಸಾಕಷ್ಟು ಸಮಯವನ್ನು ಇಲ್ಲಿಯೇ ಕಳೆದಿದ್ದಾರೆ. ಬೆಂಗಳೂರಿನ ಕ್ರಿಕೆಟ್‌ ಪ್ರಿಯರ ಅಭಿಮಾನವನ್ನೂ ಕಂಡಿದ್ದಾರೆ. ತಮ್ಮ ನೆಚ್ಚಿನ ಕ್ರಿಕೆಟ್‌ ಪ್ರಿಯರಿಗೆ ಬ್ಯಾಟ್‌ ಮೂಲಕವೇ ಖುಷಿಪಡಿಸಲು ‘ಯುವಿ’ ಕಾತರದಿಂದ ಕಾಯುತ್ತಿದ್ದಾರೆ. ಆದ್ದರಿಂದ ಕೆರಿಬಿಯನ್‌ ನಾಡಿನ ಎದುರಿನ ಪಂದ್ಯದಲ್ಲಿ ಎಲ್ಲರ ಗಮನ ಪಂಜಾಬ್‌ನ ಆಟಗಾರನ ಮೇಲಿದೆ.

ವಿಶಾಖ ಪಟ್ಟಣದಲ್ಲಿ ನಡೆದ ನ್ಯೂಜಿಲೆಂಡ್ ‘ಎ’ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ   ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿದ್ದು ಸಹಜವಾಗಿ ತಂಡದ ವಿಶ್ವಾಸ ಹೆಚ್ಚಿಸಿದೆ. ಅದರ ಜೊತೆಗೆ, ಕಿವೀಸ್‌ ಎದುರಿನ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಉನ್ಮುಕ್ತ್‌ ಚಾಂದ್‌ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಮೂರು ಪಂದ್ಯಗಳಿಂದ ದೆಹಲಿಯ ಬ್ಯಾಟ್ಸ್‌ಮನ್‌ ಒಟ್ಟು 164 ರನ್‌ ಕಲೆ ಹಾಕಿದ್ದಾರೆ. ಕರ್ನಾಟಕದ ರಾಬಿನ್‌ ಉತ್ತಪ್ಪ ಕಿವೀಸ್‌ ಎದುರಿನ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದರು.

ವೇಗಿ ಪ್ರವೀಣ್‌ ಕುಮಾರ್‌ ಗಾಯಗೊಂಡಿರುವ ಕಾರಣ ‘ದಾವಣೆಗೆರೆ ಎಕ್ಸ್‌ಪ್ರೆಸ್‌’ ವಿನಯ್‌ ಕುಮಾರ್ ತವರೂರು ಅಂಗಳದಲ್ಲಿ ಆಡುವ ಆವಕಾಶ ಪಡೆದಿದ್ದಾರೆ. ಎಲ್ಲಾ ವಿಭಾಗಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಭಾರತ ತಂಡ ವಿಂಡೀಸ್‌ ತಂಡದ ಎದುರು ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದೆ. ತಂಡದ ಕೋಚ್‌ ಲಾಲ್‌ ಚಂದ್‌ ರಜಪೂತ್‌ ಸಹ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಇದೇ ಮಾತು ಹೇಳಿದರು.

ಮುಂದಿನ ತಿಂಗಳು ಆಸ್ಟ್ರೇಲಿಯಾ ಎದುರು ನಡೆಯಲಿರುವ ಏಳು ಏಕದಿನ ಪಂದ್ಯಗಳ ಸರಣಿ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಅನುಭವಿ ಮತ್ತು ಯುವ ಆಟಗಾರರ ನಡುವೆ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಉತ್ತಪ್ಪ ಮತ್ತು ಉನ್ಮುಕ್ತ್‌ ಭಾರತದ ಇನಿಂಗ್ಸ್‌ ಆರಂಭಿಸುವ ನಿರೀಕ್ಷೆಯಿದೆ. ಮಧ್ಯಮ ಕ್ರಮಾಂಕದ ಕೇದಾರ್‌ ಜಾಧವ್‌ ಮತ್ತು ಮನ್‌ದೀಪ್‌ ಸಿಂಗ್‌ ನ್ಯೂಜಿಲೆಂಡ್‌ ಎದುರು ಜವಾಬ್ದಾರಿಯುತ ಪ್ರದರ್ಶನ ತೋರಿದ್ದರು. ಆದ್ದರಿಂದ ಇವರ ಮೇಲೂ ಹೆಚ್ಚಿನ ನಿರೀಕ್ಷೆಯಿದೆ.

ವಿಶ್ವಾಸದಲ್ಲಿ ವಿಂಡೀಸ್‌: ಪ್ರವಾಸಿ ವಿಂಡೀಸ್ ತಂಡವೂ ಉತ್ತಮ ಆರಂಭ ಪಡೆಯುವ ವಿಶ್ವಾಸದಲ್ಲಿದೆ. ಇದೇ ವರ್ಷದ ಜೂನ್‌ನಲ್ಲಿ ನಡೆದ ಶ್ರೀಲಂಕಾ ‘ಎ’ ಎದುರಿನ ಸರಣಿಯಲ್ಲಿ ಕೆರಿಬಿಯನ್‌ ನಾಡಿನ ತಂಡ ಉತ್ತಮ ಪ್ರದರ್ಶನ ತೋರಿತ್ತು.ಟೆಸ್ಟ್‌ ಪಂದ್ಯವನ್ನಾಡಲು ವಿಂಡೀಸ್‌ ತಂಡ ಮುಂದಿನ ತಿಂಗಳು ಭಾರತಕ್ಕೆ ಬರಲಿದೆ. ಆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ‘ಎ’ ತಂಡದ ಆಟಗಾರರಿಗೆ ಈ ಸರಣಿ ಅತ್ಯುತ್ತಮ ಅವಕಾಶ ಎನಿಸಿದೆ. ತಂಡದ ನಾಯಕ ಕೀರನ್‌ ಪೊಲಾರ್ಡ್‌, ಕಿರ್ಕ್‌ ಎಡ್ವರ್ಡ್‌ ಅವರ ಉಪಸ್ಥಿತಿ ಕಿರಿಯ ಆಟಗಾರರಿಗೆ ನೆರವಾಗಲಿದೆ.

ತಂಡಗಳು ಇಂತಿವೆ:
ಭಾರತ ‘ಎ’ ತಂಡ: ಯುವರಾಜ್ ಸಿಂಗ್ (ನಾಯಕ), ಉನ್ಮುಕ್ತ್ ಚಾಂದ್, ರಾಬಿನ್ ಉತ್ತಪ್ಪ, ಬಾಬಾ ಅಪರಾಜಿತ್, ಕೇದಾರ್ ಜಾಧವ್, ನಮನ್ ಓಜಾ (ವಿಕೆಟ್ ಕೀಪರ್), ಯೂಸುಫ್ ಪಠಾಣ್, ಸಿದ್ಧಾರ್ಥ್‌ ಕೌಲ್‌, ಜಯದೇವ್  ಉನದ್ಕತ್, ಆರ್‌. ವಿನಯ್‌ ಕುಮಾರ್‌, ಸುಮಿತ್ ನಾರ್ವಲ್, ಶಹಬಜ್ ನದೀಮ್, ಮನ್‌ದೀಪ್‌ ಸಿಂಗ್ ಮತ್ತು ರಾಹುಲ್ ಶರ್ಮಾ.

ವೆಸ್ಟ್‌ ಇಂಡೀಸ್‌ ‘ಎ’: ಕೀರನ್‌ ಪೊವೆಲ್‌ (ನಾಯಕ), ವೀರಸ್ವಾಮಿ ಪೆರುಮಾಳ್‌, ರೊನ್ಸ್‌ಫರ್ಡ್‌ ಬೇಟನ್‌, ನುಕ್ರಮಹಾ ಬೊನ್ನರ್‌, ಜೊನಾಥನ್‌ ಚಾರ್ಟರ್‌, ಶೆಲ್ಡನ್‌ ಕಾಟ್ರಿಯಲ್‌, ಮುಗಿಯಲ್‌ ಕಮಿನ್ಸ್‌, ನರಸಿಂಗ್‌ ಡಿಯೊನಾರಾಯಣ್‌, ಕಿರ್ಕ್‌ ಎಡ್ಸರ್ಡ್‌್ಸ, ಅಂಡ್ರೆ ಫ್ಲೆಚರ್‌, ಲಿಯಾನ್‌ ಜಾನ್ಸನ್‌, ನಿಕಿತ ಮಿಲ್ಲರ್‌, ಅಷ್ಲ್ಯೆ ನರ್ಸ್‌, ಅಂಡ್ರಿ ರಸೆಲ್‌ ಮತ್ತು ಡೆವೊನ್‌ ಥಾಮಸ್‌.
ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ
ಆರಂಭ: ಬೆಳಿಗ್ಗೆ 9ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT