ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಿ, ರಾಹುಲ್‌ ಮಿಂಚು

ಕ್ರಿಕೆಟ್‌: ಟ್ವೆಂಟಿ-20 ಪಂದ್ಯದಲ್ಲಿ ಭಾರತ ‘ಎ’ ತಂಡಕ್ಕೆ ಭರ್ಜರಿ ಜಯ; ರಸೆಲ್‌ ‘ಹ್ಯಾಟ್ರಿಕ್‌’ ಸಾಧನೆ
Last Updated 21 ಸೆಪ್ಟೆಂಬರ್ 2013, 19:36 IST
ಅಕ್ಷರ ಗಾತ್ರ

ಬೆಂಗಳೂರು: ಯುವರಾಜ್‌ ಸಿಂಗ್‌ ಆಲ್‌ರೌಂಡ್‌ ಆಟ ಮತ್ತು ರಾಹುಲ್‌ ಶರ್ಮ ತೋರಿದ ಸಮರ್ಥ ಬೌಲಿಂಗ್‌ ನೆರವಿನಿಂದ ಭಾರತ ‘ಎ’ ತಂಡಕ್ಕೆ 93 ರನ್‌ಗಳ ಭರ್ಜರಿ ಗೆಲುವು ಲಭಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಏಕೈಕ ಟ್ವೆಂಟಿ-20 ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ‘ಎ’ ವಿರುದ್ಧ ಅಧಿಕಾರಯುತ ಜಯ ಸಾಧಿಸಿದ ‘ಯುವಿ’ ಬಳಗ ಏಕದಿನ ಸರಣಿಯಲ್ಲಿ ಎದುರಾದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಭಾರತ ಭರ್ಜರಿ ಬ್ಯಾಟಿಂಗ್‌ ಮೂಲಕ ಪ್ರೇಕ್ಷಕರನ್ನು ರಂಜಿಸಿತಲ್ಲದೆ, 20 ಓವರ್‌ಗಳಲ್ಲಿ 7 ವಿಕೆಟ್‌ಗೆ 214 ರನ್‌ ಪೇರಿಸಿತು. ಯುವರಾಜ್‌ (52, 35ಎಸೆತ, 4 ಬೌಂ, 3 ಸಿಕ್ಸರ್‌), ಉನ್ಮುಕ್ತ್‌ ಚಾಂದ್‌ (47, 29 ಎ, 4 ಬೌಂ, 2 ಸಿ), ಕೇದಾರ್‌ ಜಾಧವ್‌ (42, 21 ಎ, 4 ಬೌಂ, 2 ಸಿ) ಹಾಗೂ ರಾಬಿನ್‌ ಉತ್ತಪ್ಪ (35, 21 ಎ, 1 ಬೌಂ, 3 ಸಿ)ಉತ್ತಮ ಆಟ ತಂಡದ ಬೃಹತ್‌ ಮೊತ್ತಕ್ಕೆ ಕಾರಣ.

ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಪ್ರವಾಸಿ ತಂಡ 16.2 ಓವರ್‌ಗಳಲ್ಲಿ 121 ರನ್‌ಗಳಿಗೆ ಆಲೌಟಾಯಿತು. 23 ರನ್‌ಗಳಿಗೆ ಐದು ವಿಕೆಟ್‌ ಪಡೆದ ಲೆಗ್‌ಸ್ಪಿನ್ನರ್‌ ರಾಹುಲ್‌ ಶರ್ಮ ವಿಂಡೀಸ್‌ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಯುವಿ ಬೌಲಿಂಗ್‌ನಲ್ಲೂ (24ಕ್ಕೆ 2) ಕೈಚಳಕ ಮೆರೆದರು.

ಉತ್ತಮ ಆರಂಭ: ಟಾಸ್‌ ಗೆದ್ದ ಯುವರಾಜ್‌ ಬ್ಯಾಟಿಂಗ್‌ ಆಯ್ದುಕೊಂಡರು. ಏಕದಿನ ಸರಣಿಯಲ್ಲಿ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾಗಿದ್ದ ರಾಬಿನ್‌ ಮತ್ತು ಉನ್ಮುಕ್ತ್‌ ಆ ತಪ್ಪನ್ನು ಪುನರಾವರ್ತಿಸಲಿಲ್ಲ. ತಂಡದ ಇನಿಂಗ್ಸ್‌ಗೆ ಭದ್ರ ಅಡಿಪಾಯ ಹಾಕಿಕೊಟ್ಟರು.

ಮೊದಲ ವಿಕೆಟ್‌ಗೆ 40 ಎಸೆತಗಳಲ್ಲಿ  74 ರನ್‌ಗಳು ಬಂದವು. ರಾಬಿನ್‌ ಮೊದಲ ಓವರ್‌ನಲ್ಲೇ  ಸಿಕ್ಸರ್‌ ಸಿಡಿಸಿ ವಿಂಡೀಸ್‌ಗೆ ಅಪಾಯದ ಸೂಚನೆ ನೀಡಿದರು. 3.5 ಓವರ್‌ಗಳಲ್ಲಿ ತಂಡದ ಮೊತ್ತ 50ರ ಗಡಿ ದಾಟಿತು. ಉನ್ಮುಕ್ತ್‌ ಕೂಡಾ ವಿಂಡೀಸ್‌ ದಾಳಿಯನ್ನು ಧೈರ್ಯದಿಂದ ಎದುರಿಸಿದರು.

22 ಹಾಗೂ 42 ರನ್‌ ಗಳಿಸಿದ್ದ ವೇಳೆ ಚಾಂದ್‌ಗೆ ಜೀವದಾನ ಲಭಿಸಿತ್ತು. ರಾಬಿನ್‌ ಅವರನ್ನು ಎಲ್‌ಬಿ ಬಲೆಯಲ್ಲಿ ಬೀಳಿಸಿದ ವೀರಸ್ವಾಮಿ ಪೆರುಮಾಳ್‌ ವಿಂಡೀಸ್‌ಗೆ ಮೊದಲ ಯಶಸ್ಸು ತಂದಿತ್ತರು.

ಚಾಂದ್‌ ಹಾಗೂ ಬಾಬಾ ಅಪರಾಜಿತ್‌ (3) ಅಲ್ಪ ಅಂತರದಲ್ಲಿ ಮರಳಿದರೂ, ಯುವರಾಜ್‌ ಮತ್ತು ಜಾಧವ್‌ ತಂಡಕ್ಕೆ ಆಸರೆಯಾದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 38 ಎಸೆತಗಳಲ್ಲಿ 80 ರನ್‌ ಸೇರಿಸಿದ್ದರಿಂದ ತಂಡದ ಮೊತ್ತ 200ರ ಗಡಿ ದಾಟಿತು. ಏಕದಿನ ಸರಣಿಯ ಮೂರೂ ಪಂದ್ಯಗಳಲ್ಲಿ ಮಿಂಚಿದ್ದ ‘ಯುವಿ’ ಮತ್ತೊಮ್ಮೆ ವಿಂಡೀಸ್‌ ಬೌಲರ್‌ಗಳಿಗೆ ತಲೆನೋವಾಗಿ ಪರಿಣಮಿಸಿದರು.

ಮೊದಲ 20 ಎಸೆತಗಳಲ್ಲಿ ಕೇವಲ 18 ರನ್‌ ಗಳಿಸಿದ್ದ ಈ ಎಡಗೈ ಬ್ಯಾಟ್ಸ್‌ಮನ್‌ ಬಳಿಕ ಆಕ್ರಮಣಕಾರಿ ಪ್ರದರ್ಶನ ತೋರಿದರು. ಜಾಧವ್‌ ಆರಂಭದಿಂದಲೇ ಎದುರಾಳಿ ಬೌಲರ್‌ಗಳ ಮೇಲೆ ಹಿಡಿತ ಸಾಧಿಸಿದರು.

ಮೊದಲ ಆರು ಓವರ್‌ಗಳಲ್ಲಿ 70 ರನ್‌ ಪೇರಿಸಿದ್ದ ಭಾರತ ಮುಂದಿನ ಆರು ಓವರ್‌ಗಳಲ್ಲಿ ಗಳಿಸಿದ್ದು 40 ರನ್‌ ಮಾತ್ರ. ಆದರೆ ಕೊನೆಯ ಎಂಟು ಓವರ್‌ಗಳಲ್ಲಿ ಅಬ್ಬರದ ಆಟ ತೋರಿ 104 ರನ್‌ ಕಲೆಹಾಕಿತು.

ಆ್ಯಂಡ್ರೆ ರಸೆಲ್‌ ಹ್ಯಾಟ್ರಿಕ್: ಭಾರತದ ಬ್ಯಾಟ್ಸ್‌ಮನ್‌ಗಳ ಅಬ್ಬರದ ನಡುವೆಯೂ ವಿಂಡೀಸ್‌ ತಂಡದ ವೇಗದ ಬೌಲರ್‌ ಆ್ಯಂಡ್ರೆ ರಸೆಲ್‌ ಸತತ ನಾಲ್ಕು ವಿಕೆಟ್‌ ಪಡೆದು ಗಮನ ಸೆಳೆದರು. ಆದರೆ ಎಲ್ಲ ವಿಕೆಟ್‌ಗಳೂ ಭಾರತದ ಬ್ಯಾಟ್ಸ್‌ಮನ್‌ಗಳು ‘ಉಡುಗೊರೆ’ಯಾಗಿ ನೀಡಿದಂತೆ ಕಂಡುಬಂತು.

19ನೇ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಜಾಧವ್‌, ಯುವರಾಜ್‌ ಹಾಗೂ ನಮನ್ ಓಜಾ ವಿಕೆಟ್‌ ಪಡೆದು ಹ್ಯಾಟ್ರಿಕ್‌ ಪೂರೈಸಿದರು. ಮುಂದಿನ ಎಸೆತದಲ್ಲಿ ಯೂಸುಫ್‌ ಪಠಾಣ್‌ ಅವರನ್ನೂ ಔಟ್‌ ಮಾಡಿದರು. ಈ ಎಲ್ಲ ಬ್ಯಾಟ್ಸ್‌ಮನ್‌ಗಳು ದೊಡ್ಡ ಹೊಡೆತಕ್ಕೆ ಮುಂದಾಗಿ ಫೀಲ್ಡರ್‌ಗಳಿಗೆ ಸುಲಭ ಕ್ಯಾಚ್‌ ನೀಡಿದರು.

ರಾಹುಲ್‌ ಮಿಂಚು: ಸವಾಲಿನ ಗುರಿ ಬೆನ್ನಟ್ಟಿದ ವಿಂಡೀಸ್‌ ಯೂಸುಫ್‌ ಪಠಾಣ್‌ ಎಸೆದ ಮೊದಲ ಓವರ್‌ನಲ್ಲಿ 19 ರನ್‌ ಕಲೆಹಾಕಿ ಪ್ರಬಲ ಪೈಪೋಟಿಯ ಸೂಚನೆ ನೀಡಿತ್ತು. ಆದರೆ ರನ್‌ ರೇಟ್‌ ಹೆಚ್ಚಿಸುವ ಭರದಲ್ಲಿ ಒಂದೊಂದೇ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ರಾಹುಲ್‌ ಹೆಣೆದ ಸ್ಪಿನ್‌ ಬಲೆಯಲ್ಲಿ ಬಿದ್ದು ಒದ್ದಾಡಿತು.

65 ರನ್‌ಗಳಾಗುವಷ್ಟರಲ್ಲೇ ಐದು ವಿಕೆಟ್‌ಗಳು ಪತನಗೊಂಡವು. ಕ್ರೀಸ್‌ಬಳಿ ಹೆಚ್ಚುಹೊತ್ತು ನಿಲ್ಲಲು ಯಾರಿಗೂ ಮನಸ್ಸಿರಲಿಲ್ಲ. ‘ಹೊಡಿ... ಇಲ್ಲ ಔಟಾಗಿ ಹೋಗು’ ಎಂಬ ಬ್ಯಾಟಿಂಗ್‌ ಯೋಜನೆ ರೂಪಿಸಿದಂತೆ ಕಂಡುಬಂತು.  32 ರನ್‌ ಗಳಿಸಿದ ಆ್ಯಂಡ್ರೆ ಫ್ಲೆಚರ್‌ ಈ ತಂಡದ ಪರ ಅತಿಹೆಚ್ಚಿನ ಮೊತ್ತ ಗಳಿಸಿದರು.

ರಾಹುಲ್‌ ಮತ್ತು ಯುವರಾಜ್‌ಗೆ ತಕ್ಕ ಸಾಥ್‌ ನೀಡಿದ ವಿನಯ್‌ ಕುಮಾರ್‌ 22 ರನ್‌ಗಳಿಗೆ ಎರಡು ವಿಕೆಟ್‌ ಪಡೆದರು.

ಸ್ಕೋರ್ ವಿವರ
ಭಾರತ ‘ಎ’: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 214
ಉತ್ತಪ್ಪ ಎಲ್‌ಬಿಡಬ್ಲ್ಯು ಬಿ ವೀರಸ್ವಾಮಿ ಪೆರುಮಾಳ್‌  35
ಉನ್ಮುಕ್ತ್‌ ಚಾಂದ್‌ ಸಿ ಎಡ್ವರ್ಡ್ಸ್‌ ಬಿ ಆ್ಯಶ್ಲೆ ನರ್ಸ್‌  47
ಯುವರಾಜ್‌ ಸಿಂಗ್‌ ಸಿ ಪೊವೆಲ್‌ ಬಿ ಆ್ಯಂಡ್ರೆ ರಸೆಲ್‌  52
ಬಾಬಾ ಅಪರಾಜಿತ್‌ ಸಿ ಎಡ್ವರ್ಡ್ಸ್‌  ಬಿ ಆ್ಯಶ್ಲೆ ನರ್ಸ್‌  03
ಕೇದಾರ್‌ ಜಾಧವ್‌ ಸಿ ಬಾನೆರ್‌ ಬಿ ಆ್ಯಂಡ್ರೆ ರಸೆಲ್‌  42
ಯೂಸುಫ್‌ ಪಠಾಣ್‌ ಸಿ ಫ್ಲೆಚರ್‌ ಬಿ ಆ್ಯಂಡ್ರೆ ರಸೆಲ್‌  00
ನಮನ್ ಓಜಾ ಸಿ ಪೆರುಮಾಳ್‌ ಬಿ ಆ್ಯಂಡ್ರೆ ರಸೆಲ್‌  00
ಸುಮಿತ್‌ ನರ್ವಾಲ್‌ ಔಟಾಗದೆ  18
ಆರ್‌. ವಿನಯ್‌ ಕುಮಾರ್‌ ಔಟಾಗದೆ  01
ಇತರೆ: (ಲೆಗ್‌ಬೈ–1, ವೈಡ್‌–15)  16
ವಿಕೆಟ್‌ ಪತನ: 1–74 (ರಾಬಿನ್‌; 6.4), 2–94 (ಚಾಂದ್‌; 9.6),  3–109 (ಅಪರಾಜಿತ್‌; 11.5), 4–189 (ಜಾಧವ್‌; 18.1), 5–189 (ಯುವರಾಜ್‌; 18.2), 6–189 (ಓಜಾ; 18.3), 7–189 (ಪಠಾಣ್‌; 18.4)
ಬೌಲಿಂಗ್‌: ರನ್ಸ್‌ಫರ್ಡ್‌ ಬೀಟನ್‌ 4–0–58–0, ಆ್ಯಂಡ್ರೆ ರಸೆಲ್‌ 4–0–45–4, ನಿಕಿತಾ ಮಿಲ್ಲರ್‌ 2–0–28–0, ವೀರಸ್ವಾಮಿ ಪೆರುಮಾಳ್‌ 4–0–35–1, ಆ್ಯಶ್ಲೆ ನರ್ಸ್‌ 4–0–18–2, ನಕರುಮಾ ಬಾನೆರ್‌ 2–0–29–0
ವೆಸ್ಟ್‌ ಇಂಡೀಸ್‌ ‘ಎ’: 16.2 ಓವರ್‌ಗಳಲ್ಲಿ 121
ಆ್ಯಂಡ್ರೆ ಫ್ಲೆಚರ್‌ ಬಿ ರಾಹುಲ್‌ ಶರ್ಮ  32
ಕೀರನ್‌ ಪೊವೆಲ್‌ ಸಿ ಜಾಧವ್‌ ಬಿ ವಿನಯ್‌ ಕುಮಾರ್ 08
ನಕರುಮಾ ಬಾನೆರ್‌ ಸಿ ಚಾಂದ್‌ ಬಿ  ಉನದ್ಕತ್‌  18
ಕರ್ಕ್‌ ಎಡ್ವರ್ಡ್ಸ್‌  ಸಿ ಪಠಾಣ್‌ ಬಿ ರಾಹುಮ್‌ ಶರ್ಮ  00
ಕಾರ್ಟರ್‌ ಸಿ ಅಪರಾಜಿತ್‌ ಬಿ ಯುವರಾಜ್‌ ಸಿಂಗ್‌  06
ಡೆವೊನ್‌ ಥಾಮಸ್‌ ಸಿ ಓಜಾ ಬಿ ರಾಹುಲ್‌ ಶರ್ಮ  21
ಆ್ಯಂಡ್ರೆ ರಸೆಲ್‌ ಸಿ ಚಾಂದ್‌ ಬಿ ಯುವರಾಜ್‌ ಸಿಂಗ್‌  12
ಆ್ಯಶ್ಲೆ ನರ್ಸ್‌ ಸಿ ರಾಬಿನ್‌ ಬಿ ರಾಹುಲ್‌ ಶರ್ಮ  16
ಪೆರುಮಾಳ್‌ ಸಿ ಚಾಂದ್‌ ಬಿ ವಿನಯ್‌ ಕುಮಾರ್‌  01
ನಿಕಿತಾ ಮಿಲ್ಲರ್‌ ಔಟಾಗದೆ  04
ಬೀಟನ್‌ ಸಿ ಉನದ್ಕತ್‌ ಬಿ ರಾಹುಲ್‌ ಶರ್ಮ  00
ಇತರೆ: (ಲೆಗ್‌ಬೈ–1, ವೈಡ್‌–2)  03
ವಿಕೆಟ್‌ ಪತನ: 1–21 (ಪೊವೆಲ್‌; 1.3), 2–49 (ಬಾನೆರ್‌; 4.5) 3–55 (ಎಡ್ವರ್ಡ್ಸ್‌; 5.3), 4–62 (ಕಾರ್ಟರ್‌; 6.4) 5–65 (ಫ್ಲೆಚರ್‌; 7.2), 6–80 (ರಸೆಲ್‌; 8.6), 7–115 (ನರ್ಸ್‌; 14.1),  8–117 (ಥಾಮಸ್‌; 14.5), 9–119 (ಪೆರುಮಾಳ್‌; 15.3), 10–121 (ಬೀಟನ್‌; 16.2)
ಬೌಲಿಂಗ್‌: ಯೂಸುಫ್‌ ಪಠಾಣ್‌ 1–0–19–0, ಆರ್‌. ವಿನಯ್ ಕುಮಾರ್‌ 3–0–22–2, ಜಯದೇವ್‌ ಉನದ್ಕತ್‌ 2–0–11–1, ರಾಹುಲ್‌ ಶರ್ಮ 3.2–0–23–5, ಯುವರಾಜ್ ಸಿಂಗ್‌ 4–0–24–2, ಸುಮಿತ್‌ ನರ್ವಾಲ್‌ 3–0–21–0
ಫಲಿತಾಂಶ: ಭಾರತ ‘ಎ’ ತಂಡಕ್ಕೆ 93 ರನ್‌ ಗೆಲುವು ಹಾಗೂ 1–0 ರಲ್ಲಿ ಸರಣಿ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT