ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯು.ವಿ.ಸಿಂಗ್ ಮೇಲೆ ದುಷ್ಕರ್ಮಿಗಳ ಹಲ್ಲೆ

Last Updated 20 ಫೆಬ್ರುವರಿ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು:  ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥ ಡಾ.ಯು.ವಿ.ಸಿಂಗ್ ಅವರ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಬಿಬಿಎಂಪಿ ಸದಸ್ಯರೊಬ್ಬರ ಕೈವಾಡ ಇರುವ ಸಂಶಯ ವ್ಯಕ್ತವಾಗಿದೆ.

ಜಲಮಂಡಳಿಯ ಕೊಳಚೆ ನೀರು ಸಂಸ್ಕರಣಾ ಘಟಕದ (ಎಸ್‌ಟಿಪಿ) ಮೂಲಕ ನಾಗವಾರ ಕೆರೆಗೆ ನಿರಂತರವಾಗಿ ಅಪಾಯಕಾರಿ ರಾಸಾಯನಿಕಯುಕ್ತ ಕೊಳಚೆ ನೀರನ್ನು ಬಿಡುತ್ತಿರುವ ಬಗ್ಗೆ ಸಿಂಗ್ ಅವರಿಗೆ ಮಾಹಿತಿ ದೊರಕಿತ್ತು.

ಈ ಸಂಬಂಧ ಪರಿಶೀಲನೆ ನಡೆಸಲು ತೆರಳಿದ್ದ ವೇಳೆ ವಿಷಕಾರಿ ನೀರನ್ನು ಕೆರೆಗೆ ಬಿಡುತ್ತಿದ್ದ ಜಾಲದ ಸದಸ್ಯರೇ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಅಮೃತಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಿಂಗ್ ಅವರು ಭಾನುವಾರ ಮಧ್ಯಾಹ್ನ ನಾಗವಾರ ಕೆರೆ ಪರಿಶೀಲನೆಗೆ ಇತರೆ ಅಧಿಕಾರಿಗಳ ಜೊತೆ ತೆರಳಿದ್ದರು. ಈ ವೇಳೆ ಸಮೀಪದ ಎಸ್‌ಟಿಪಿಯ ಮೂಲಕ ರಾಸಾಯನಿಕಯುಕ್ತ ಕೊಳಚೆ ನೀರನ್ನು ಕೆರೆಗೆ ಬಿಡಲು ಕೆಲವರು ಪ್ರಯತ್ನಿಸುತ್ತಿರುವುದು ಕಂಡುಬಂತು.

ಆ ನಂತರ ಅವರು ಅಧಿಕಾರಿಗಳೊಂದಿಗೆ ಘಟಕದ ಆವರಣಕ್ಕೆ ಹೋಗಿ ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿಗಳು ಟ್ಯಾಂಕರ್ ಒಂದರಿಂದ ರಾಸಾಯನಿಕಯುಕ್ತ ಕೊಳಚೆ ನೀರನ್ನು ಘಟಕಕ್ಕೆ ಸುರಿಯುತ್ತಿರುವುದು ಗೊತ್ತಾಯಿತು. ಈ ಹಂತದಲ್ಲಿ ಸಿಂಗ್ ಮತ್ತು ಅಧಿಕಾರಿಗಳು ಆ ವ್ಯಕ್ತಿಗಳನ್ನು ಹಿಡಿದು ಟ್ಯಾಂಕರ್ ವಾಹನವನ್ನು ವಶಕ್ಕೆ ತೆಗೆದುಕೊಂಡರು. ಟ್ಯಾಂಕರ್‌ನಲ್ಲಿದ್ದ ಕೊಳಚೆ ನೀರಿನ ಮಾದರಿಯನ್ನೂ ಸಂಗ್ರಹಿಸಿದರು.

ಇದರಿಂದ ಕೋಪಗೊಂಡ ವ್ಯಕ್ತಿಗಳ ಗುಂಪಿನ ಸದಸ್ಯನೊಬ್ಬ ಬೇರೊಬ್ಬ ವ್ಯಕ್ತಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಸೂಚಿಸಿದ. ಸ್ವಲ್ಪ ಸಮಯದ ನಂತರ ಕಾರುಗಳಲ್ಲಿ ಸ್ಥಳಕ್ಕೆ ಬಂದ ಏಳೆಂಟು ಮಂದಿ, ಸಿಂಗ್ ಅವರೊಂದಿಗೆ ವಾಗ್ವಾದ ನಡೆಸಿದರು.

ಟ್ಯಾಂಕರ್ ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದರು. ಆಗ ಅಧಿಕಾರಗಳು ಅದಕ್ಕೆ ಅಡ್ಡಿಪಡಿಸಿದರು. ಈ ವೇಳೆ ದುಷ್ಕರ್ಮಿಗಳು ಸಿಂಗ್ ಅವರ ಕೈಗಳನ್ನು ಹಿಡಿದು ಎಳೆದಾಡಿ, ಹಲ್ಲೆ ನಡೆಸಿ ಪರಾರಿಯಾದರು ಎಂದು ಪೊಲೀಸರು ಹೇಳಿದ್ದಾರೆ.

ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT