ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರೊ ಫುಟ್‌ಬಾಲ್ ಇಲ್ಲೂ ಕ್ರೇಜ್

Last Updated 22 ಜೂನ್ 2012, 19:30 IST
ಅಕ್ಷರ ಗಾತ್ರ

ಫುಟ್‌ಬಾಲ್ ಜಗತ್ತು ಇದೀಗ `ಯೂರೊ -2012~ ಚಾಂಪಿಯನ್‌ಷಿಪ್ ಗುಂಗಿನಲ್ಲಿ ಮುಳುಗಿದೆ. ಉಕ್ರೇನ್ ಮತ್ತು ಪೋಲೆಂಡ್‌ನಲ್ಲಿ ಈ ಟೂರ್ನಿ ನಡೆಯುತ್ತಿದೆಯಾದರೂ ಅದರ ಕಾವು ಎಲ್ಲೆಡೆ ಹರಡಿದೆ. ಕ್ರೀಡೆಯನ್ನು ಅತಿಯಾಗಿ ಪ್ರೀತಿಸುವ ಉದ್ಯಾನಗರಿಯನ್ನೂ ಅದು ಬಿಟ್ಟಿಲ್ಲ. ಇಲ್ಲಿನ ಫುಟ್‌ಬಾಲ್ ಪ್ರೇಮಿಗಳು ದೈನಂದಿನ ಕೆಲಸ ಕಾರ್ಯಗಳ ನಡುವೆಯೂ `ಯೂರೊ ಕಪ್~ನ ಜಪ ಮಾಡುತ್ತಿದ್ದಾರೆ.

ಪೋಲೆಂಡ್ ಮತ್ತು ಉಕ್ರೇನ್‌ನ ಹಸಿರು ಹಾಸಿನ ಅಂಗಳದಲ್ಲಿ ಚೆಂಡು ಅತ್ತಿತ್ತ ಹರಿದಾಡುವಾಗ ಬೆಂಗಳೂರಿನ ಎಷ್ಟೋ ಫುಟ್‌ಬಾಲ್ ಪ್ರೇಮಿಗಳ ಹೃದಯದ ಬಡಿತ ಹೆಚ್ಚುತ್ತದೆ. ಯೂರೋಪಿನ ಯಾವುದೋ ಎರಡು ತಂಡಗಳು ಪೈಪೋಟಿ ನಡೆಸುವುದನ್ನು ಅತಿಯಾದ ಆಸಕ್ತಿಯಿಂದ ನೋಡುವ ಸಾಕಷ್ಟು ಜನರು ನಮ್ಮ ನಡುವೆ ಇದ್ದಾರೆ. ನೆಚ್ಚಿನ ಆಟಗಾರ ಗೋಲು ಗಳಿಸಿದಾಗ ಜಗತ್ತನ್ನೇ ಮರೆತು ಸಂಭ್ರಮಿಸುವವರು ಹಲವರಿದ್ದಾರೆ. ಸುಂದರ ಕ್ರೀಡೆ ಎನಿಸಿರುವ ಫುಟ್‌ಬಾಲ್‌ಗೆ ಇರುವ ಶಕ್ತಿ ಅಂತಹದ್ದು.

ಕಾಲ್ಚೆಂಡಾಟದಲ್ಲಿ ಭಾರತ ಮಹಾನ್ ಸಾಧನೆ ಮಾಡಿಲ್ಲವಾದರೂ ಇಲ್ಲಿ ಫುಟ್‌ಬಾಲ್ ಪ್ರೇಮಿಗಳಿಗೆ ಕೊರತೆಯಿಲ್ಲ. ಫುಟ್‌ಬಾಲ್‌ನಲ್ಲಿ ವಿಶ್ವಕಪ್ ನಂತರದ ಅತಿದೊಡ್ಡ ಟೂರ್ನಿ `ಯೂರೊ ಕಪ್~. ಈಗಾಗಲೇ ಟೂರ್ನಿಯ ಲೀಗ್ ಪಂದ್ಯಗಳು ಕೊನೆಗೊಂಡು ಈಗ ನಾಕೌಟ್ ಹಂತದ ಪಂದ್ಯಗಳು ನಡೆಯುತ್ತಿವೆ. ಇದರಿಂದ ಕಾವು ಮತ್ತಷ್ಟು ಹೆಚ್ಚಾಗಿದೆ.

ಪಂದ್ಯಗಳು ಭಾರತೀಯ ಕಾಲಮಾನ ಮಧ್ಯರಾತ್ರಿ 12.15ಕ್ಕೆ ಆರಂಭವಾಗುತ್ತವೆ. ಹಾಗಿದ್ದೂ ಜನರ ಆಸಕ್ತಿಗೆ ಕೊರತೆ ಉಂಟಾಗಿಲ್ಲ. ಕೆಲವರು ಪಂದ್ಯದ ನೇರಪ್ರಸಾರ ನೋಡಲು ತಮ್ಮ ದಿನಚರಿಯಲ್ಲಿ ಅಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ. ಪಂದ್ಯಗಳ ನೇರ ಪ್ರಸಾರ ಮಾಡುವ `ನಿಯೊ ಪ್ರೈಮ್~ ಮತ್ತು `ನಿಯೊ ಸ್ಪೋಟ್ಸ್~ ಚಾನೆಲ್ ವೀಕ್ಷಿಸುವವರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಿದೆ.

ಹೋಟೆಲ್, ಪಬ್ ಮತ್ತು ಬಾರ್‌ಗಳಲ್ಲಿ ಬೃಹತ್ ಸ್ಕ್ರೀನ್‌ಗಳಲ್ಲಿ ಪಂದ್ಯದ ನೇರ ಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಈ ಬಾರಿ ಮಧ್ಯರಾತ್ರಿಯಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಹೆಚ್ಚಿನವರು ಮನೆಯಲ್ಲೇ ಕುಳಿತು ಪಂದ್ಯ ವೀಕ್ಷಿಸಲು ಒತ್ತು ನೀಡಿದ್ದಾರೆ. ನೇರಪ್ರಸಾರ ನೋಡಲು ಆಗದವರು `ಹೈಲೈಟ್ಸ್~ ಮೊರೆಹೋಗುತ್ತಿದ್ದಾರೆ. ಏನೇ ಆದರೂ ಆಟದ ಸೊಬಗನ್ನು `ಮಿಸ್~ ಮಾಡಿಕೊಳ್ಳಲು ಯಾರೂ ಸಿದ್ಧರಿಲ್ಲ.

ಕ್ರಿಸ್ಟಿಯಾನೊ ರೊನಾಲ್ಡೊ, ವೇಯ್ನ ರೂನಿ, ಫ್ರಾಂಕ್ ರಿಬೆರಿ, ಫೆರ್ನಾಂಡೊ ಟೊರೆಸ್ ಮತ್ತು ಕರೀಮ್ ಬೆಂಜೆಮ ಅವರು ಗೋಲು ಗಳಿಸಲು ಚೆಂಡಿನೊಂದಿಗೆ ಮುನ್ನುಗ್ಗುವ ಸಂದರ್ಭದಲ್ಲಿ ರೋಮಾಂಚನಗೊಳ್ಳದವರು ಕಡಿಮೆ. ನಿಖರ ಪಾಸ್, ಅದ್ಭುತ ಡ್ರಿಬ್ಲಿಂಗ್ ಮತ್ತು ಗೋಲ್‌ಕೀಪರ್ ನಡೆಸುವ ಆಕರ್ಷಕ ಸೇವ್‌ಗಳನ್ನು ಮತ್ತೆ ಮತ್ತೆ ನೆನಪಿಸಿ ಸಂತಸಪಡುತ್ತಿದ್ದಾರೆ.

ಬ್ರೆಜಿಲ್ ಮತ್ತು ಅರ್ಜೆಂಟೀನಾ ತಂಡಗಳು ಇಲ್ಲದ ಕಾರಣ ಆ ತಂಡದ ಅಭಿಮಾನಿಗಳು ಅನಿವಾರ್ಯವಾಗಿ ಬೇರೆ ತಂಡಗಳಿಗೆ ಬೆಂಬಲ ನೀಡಬೇಕಾಗಿದೆ. `ನಾನು ಬ್ರೆಜಿಲ್‌ನ ಅಭಿಮಾನಿ. ಆದರೆ ಯೂರೊ ಚಾಂಪಿಯನ್‌ಷಿಪ್‌ನಲ್ಲಿ ಯೂರೋಪಿನ ತಂಡಗಳನ್ನು ಮಾತ್ರ ಕಾಣಲು ಸಾಧ್ಯ. ಇದೀಗ ಸ್ಪೇನ್ ತಂಡದ ಬೆಂಬಲಕ್ಕೆ ನಿಂತಿದ್ದೇನೆ~ ಎಂಬುದು ಸಾಫ್ಟ್‌ವೇರ್ ಕಂಪೆನಿಯೊಂದರ ಉದ್ಯೋಗಿ ಅರುಣ್ ಕುಮಾರ್ ಹೇಳಿಕೆ.

ಇಂದು ರಾತ್ರಿ ನಡೆಯಲಿರುವ (ಭಾರತೀಯ ಕಾಲಮಾನ 12.15ಕ್ಕೆ ಆರಂಭ) ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವನ್ನು ಹಲವರು ಉತ್ಸಾಹದಿಂದ ಎದುರು ನೋಡುತ್ತಿದ್ದಾರೆ. ಜುಲೈ 1ರಂದು ನಡೆಯುವ ಫೈನಲ್ ಪಂದ್ಯದವರೆಗೆ ಫುಟ್‌ಬಾಲ್ ಪ್ರೇಮಿಗಳಿಗಂತೂ ಪುರುಸೊತ್ತಿಲ್ಲ.

~ಯೂರೊ ಕಲೆಕ್ಷನ್~

ಇಂತಹ ಟೂರ್ನಿಗಳು ನಡೆಯುವಾಗ ನಗರದ ಪ್ರಮುಖ ಕ್ರೀಡಾ ಪೋಷಾಕು ಮಾರಾಟ ಮಳಿಗೆಗಳು ತಮ್ಮ ಲಾಭಕ್ಕಾಗಿ ವಿವಿಧ ತಂತ್ರಗಳನ್ನು ರೂಪಿಸುವುದು ವಾಡಿಕೆ. ನೈಕಿ ಮತ್ತು ಅಡಿಡಾಸ್‌ನಂತಹ ಖ್ಯಾತ ಕಂಪೆನಿಗಳು `ಯೂರೊ ಕಲೆಕ್ಷನ್~ ಶ್ರೇಣಿಯಲ್ಲಿ ಪೋಷಾಕು ಹಾಗೂ ಇನ್ನಿತರ ಕ್ರೀಡಾ ಪರಿಕರಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ.

ಜರ್ಸಿ (ಟಿ- ಶರ್ಟ್) , ಶೂ, ಶಾರ್ಟ್ಸ್, ಟೋಪಿಗಳು ಮತ್ತು ಸಾಕ್ಸ್ ಬಿಡುಗಡೆಗೊಳಿಸಿವೆ. ನೈಕಿ ಕಂಪೆನಿ ಫ್ರಾನ್ಸ್, ಪೋರ್ಚುಗಲ್ ಮತ್ತು ಹಾಲೆಂಡ್ ತಂಡಗಳ ಪ್ರಾಯೋಜಕತ್ವ ವಹಿಸಿಕೊಂಡಿದೆ. ಈ ದೇಶಗಳ ಜೆರ್ಸಿಗಳುನ್ನು ನೈಕಿ ಮಳಿಗೆಗಳಲ್ಲಿ ಕಾಣಬಹುದು. ಜರ್ಮನಿ ಹಾಗೂ ಸ್ಪೇನ್ ತಂಡಗಳ ಅಧಿಕೃತ ಪ್ರಾಯೋಜಕರಾದ ಅಡಿಡಾಸ್ ಕೂಡ ಹಿಂದೆ ಬಿದ್ದಿಲ್ಲ. ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಒಳಗೊಂಡಂತೆ ವಿವಿಧ ಕಡೆ ಇರುವ ಮಳಿಗೆಗಳಲ್ಲಿ ಬಣ್ಣಬಣ್ಣದ ಜೆರ್ಸಿಗಳು ರಾರಾಜಿಸುತ್ತಿವೆ.

ಅದರ ಜೊತೆಗೆ ಫುಟ್‌ಪಾತ್ ಹಾಗೂ ಇತರ ಸಣ್ಣ ಅಂಗಡಿಗಳಲ್ಲೂ ವಿವಿಧ ತಂಡಗಳ ಆಟಗಾರರ ಜೆರ್ಸಿ ಸಂಖ್ಯೆ ಹಾಗೂ ಹೆಸರನ್ನು ಹೊಂದಿರುವ ಟಿ- ಶರ್ಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ನೈಕಿ, ಅಡಿಡಾಸ್ ಮಳಿಗೆಗಳಿಂದ ರೂ. 2000- 3000 ನೀಡಿ ಜೆರ್ಸಿ ಕೊಳ್ಳಲು ಸಾಧ್ಯವಾಗದವರು ಫುಟ್‌ಪಾತ್‌ನಲ್ಲಿ 200- 250 ರೂ.ಗಳಿಗೆ ದೊರೆಯುವ ಜೆರ್ಸಿ ತೊಟ್ಟು ಸಂತಸಪಡುತ್ತಿದ್ದಾರೆ.

ಆಟ ನೋಡಿ ಕಲಿ...

`ಯೂರೊ ಒಂದು ರೀತಿಯಲ್ಲಿ ಫನ್ ಗೇಮ್ ಇದ್ದಂತೆ. ಇದು ನಗರದ ಫುಟ್‌ಬಾಲ್ ಪ್ರೇಮಿಗಳಲ್ಲಿ ಕ್ರೇಜ್ ಉಂಟುಮಾಡಿರುವುದು ನಿಜ. ವಿಶ್ವದ ಪ್ರಮುಖ ತಾರೆಯರ ಆಟವನ್ನು ನೋಡುವುದರಿಂದ ಸಾಕಷ್ಟು ಕಲಿಯಬಹುದು. ಆದರೆ ವಿದೇಶದಲ್ಲಿ ದೊರೆಯುವಂತಹ ಸೌಲಭ್ಯಗಳನ್ನು ಇಲ್ಲಿನ ಆಟಗಾರರಿಗೆ ಕಲ್ಪಿಸಿ ಕೊಡಬೇಕು. ತಳಮಟ್ಟದಲ್ಲೇ ಫುಟ್‌ಬಾಲ್ ಕ್ರೀಡೆಯ ಅಭಿವೃದ್ಧಿಗೆ ಆದ್ಯತೆ ದೊರೆಯಬೇಕು~ ಎಂಬುದು ಎಚ್‌ಎಎಲ್ ತಂಡದ ವ್ಯವಸ್ಥಾಪಕ ಎಚ್. ಚಂದ್ರಶೇಖರ್ ಅವರ ಹೇಳಿಕೆ.

`ಯೂರೊ ಟೂರ್ನಿಯ ಪಂದ್ಯಗಳನ್ನು ನೋಡಿ ಯುವ ಆಟಗಾರರು ಏನೆಲ್ಲಾ ಕನಸು ಕಾಣುತ್ತಾರೆ. ಅದು ಈಡೇರಬೇಕಾದರೆ ಅವರಿಗೆ ಸೂಕ್ತ ನೆರವು ನೀಡಬೇಕು~ ಎಂದೂ ಅವರು ಮಾತು ಸೇರಿಸುತ್ತಾರೆ.

ಬಿಡಿಎಫ್‌ಎ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ಸೂಪರ್ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುವ ವಿವಿಧ ತಂಡಗಳ ಹೆಚ್ಚಿನ ಆಟಗಾರರು ಯೂರೊ ಪಂದ್ಯಗಳನ್ನು ತಪ್ಪದೇ ವೀಕ್ಷಿಸುತ್ತಿದ್ದಾರೆ. ಜಗತ್ತಿನ ಖ್ಯಾತ ತಾರೆಯರ ತಂತ್ರ ಹಾಗೂ ಆಟದ ಶೈಲಿಯನ್ನು ತಮ್ಮಲ್ಲೂ ಅಳವಡಿಸಿಕೊಂಡು ಪ್ರದರ್ಶನಮಟ್ಟ ಉತ್ತಮಪಡಿಸಿಕೊಳ್ಳುವ ಪ್ರಯತ್ನ ಯುವ ಆಟಗಾರರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT