ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆಂಕಟ್ ಸುಬ್ಬಿ ಏನಾದ್ಲು?

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವರ್ಷಕ್ಕೆ ಹನ್ನೊಂದೇ ತಿಂಗಳು ಇದ್ದಿದ್ರೆ ಏನು ಮಜಾ ಇರ‌್ತಿತ್ತು. ಈ ಫೆಬ್ರುವರಿ ಯಾಕೆ? ತಿಂಗಳ ಹದಿನಾಲ್ಕನೆ ತಾರೀಖು ಹತ್ತಿರ ಬರ್ತಿದ್ದಂಗೆ, ಮೈಮೇಲೆ ಮುಳ್ಳುಹಂದಿ ಹಾಯ್ದಂಗೆ ಉರಿಯೋ ಉರಿ. ಅವತ್ತೇ ನನ್ ವೆಂಕಟಸುಬ್ಬಿ ಕಾಣೆಯಾದದ್ದು. ಅದೇನು ಸಂಕ್ರಾಂತಿಯೇ, ಉಗಾದಿಯೇ, ಇಲ್ಲ ಶಿವರಾತ್ರಿಯೇ?


ಮೂರು ಜಾವ ಜಾಗರಣೆ ಮಾಡುಕ್ಕೆ. ಅವತ್ತು ಒಂದು ದಿನ ಲವ್ ಮಾಡಿ, ಡೌವ್ ಮಾಡಿ, ಹಾಯ್ ಬಾಯ್ ಹೇಳಿ, ತಲೆಗೆ ಮೂರು ಚೊಂಬು ತಣ್ಣೀರು ಹುಯ್ಕಂಡ್ರೆ ಮತ್ತೆ ಮುಂದಿನ ವರ್ಷವೇ. ನಮ್ ಪುರೋಹಿತರ ಮಗಳನ್ನ, ಪ್ರೇಮಿಗಳ ದಿನ ಕೈ ಹಿಡಿದದ್ದೇ ಎಡವಟ್ಟಾಯಿತು.

`ಶ್ರೀರಂಗಪಟ್ಟಣಕ್ಕೆ ಹೋಗಿ `ಕ್ಷಣಕಾಲ~ ಗುಡಿ ನೋಡಿಕೊಂಡು ಬರೋಣವೆ?~ ಅಂತ ಸುಬ್ಬಿ ದಾಳ ಬೀಸಿದಾಗಲೆ ನನಗೆ ಗುಮಾನಿ. ಕಾಯಿಗಳು ಎತ್ತೆತ್ಲಾಗೋ ಹೋಗ್ತಿವೆ ಅರೇಂಜ್ಡ್ ಮದುವೆ ಮಾಡ್ಕೊಂಡು ಪ್ರೀತಿಸುಕ್ಕೆ ಶುರು ಹಚ್ಚೋಣ ಅಂತ ನಾನು, ಇವಳು ಕ್ಷಣಾಂಬ ಅಮ್ಮನ ಗುಂಗಿನಲ್ಲಿದ್ದಾಳೆ.

`ಅಲ್ವೆ ಸುಬ್ಬಿ. ಇವತ್ತು ಹದಿನಾಲ್ಕು. ಹೋಗಿ ಹೋಗಿ ಇವತ್ತೇ ಶ್ರೀರಂಗಪಟ್ಟಣಕ್ಕೆ ಹೋಗೂದೆ?~ ಅಂತೂ ಸುಬ್ಬಿ ಎಂದೂ ಇಲ್ಲದಂತೆ ಮುತ್ತಿನ ಮಳೆಗರೆದು ರೈಲು ಹತ್ತಿಸಿದಳು. ಈ ಮುತ್ತಿನ ಪ್ರಕರಣ, ವಿವಾಹ ಪೂರ್ವ ಅನುಭವವೆ? ಇರಲಾರದು. ಪುರೋಹಿತರ ಮಗಳು. ಆಗೈರತ್ತು ಇವಳಿಗೆಲ್ಲಿ. ಮರೆಯುವ ಮುನ್ನ ಒಂದು ಮಾತು. ಮುದಿಯರಿಗೆ ಮೂವತ್ತು ಪರ್ಸೆಂಟ್ ರಿಯಾಯಿತಿಯಲ್ಲಿ ರೈಲು ಸಂಚಾರ. ಆದರೆ ಅದು ಎಕ್ಸ್‌ಪ್ರೆಸ್ ಗಾಡಿಯಲ್ಲಿ ಮಾತ್ರ. ನಸುಕಿನಲ್ಲಿ, ಕೌಂಟರ್ ಬಳಿ ಕ್ಯೂ ನಿಲ್ಲಬೇಕು. ಟಿಕೆಟ್ ಕೊಡುವವನ (ಳ) ಮೂತಿ ನೋಡಬೇಕು. ಥೇಟ್ ಮುಳಬಾಗಲು ಆಂಜನೇಯ ಸ್ವಾಮಿಯ ಝೆರಾಕ್ಸ್! ಎಕ್ಸ್‌ಪ್ರೆಸ್ ಗಾಡಿ, ಎಲ್ಲೆಲ್ಲಿ ನಿಲ್ಲುತ್ತೆ ಎಲ್ಲೆಲ್ಲಿ ಜಿಗಿಯುತ್ತೆ, ತಿಳಿಸುವಷ್ಟು ತಾಳ್ಮೆ ಇಲ್ಲ. ನಲವತ್ತು ರೂಪಾಯಿ ನೋಟು ತೂರಿಸಿ, ಎರಡು ಪಟ್ಟಣ ಅಂದ್ರೆ ಸಾಕು ಮರುಕ್ಷಣ ಎರಡು ಟಿಕೆಟ್, ಎರಡು ರೂಪಾಯಿ ನಾಣ್ಯ ಕೌಂಟರ್ ಹೊರಗೆ ತೂರಿಬರುತ್ತೆ. ಶ್ರೀರಂಗಪಟ್ಟಣಕ್ಕೆ ಕೇವಲ ಮೂವತ್ತೆಂಟೇ! ಅದೂ ಇಬ್ಬರಿಗೆ! ಮೈ ಉಬ್ಬುತ್ತೆ. ಯೊಚಿಸುವಷ್ಟು ಸಮಯವಿಲ್ಲ. `ನೆಕ್ಸ್ಟ್~ ಎಂದು ಆವಾಜು ಹಾಕುತ್ತಾನೆ.
ರೈಲು ಸ್ಟೇಷನ್ ಬಿಡುತ್ತಿದ್ದಂತೆ, ಕೆಂಗೇರಿಯಿಂದ ಶುರುವಾಗುತ್ತೆ, ಕಾಲಿ ದೋಸೆ, ತಟ್ಟೆ ಇಡ್ಲಿ, ಹಳೆಯ ಕಾಲದ ಮೂರು ಕಾಸಿನಗಲದ ಉದ್ದಿನ ವಡೆ, ರೈಸ್ ಬಾತ್, ಕಾಫಿ, ಟೀಗಳ ದಾಳಿ. ಮೂವತ್ತು ರೂಪಾಯಿ ತೆತ್ತು ಎರಡು ಪ್ಯಾಕೆಟ್ ತಟ್ಟೆ ಇಡ್ಲಿ ಕೊಂಡು ಪೊಟ್ಟಣ ಬಿಚ್ಚಿ, ತೋರು ಬೆರಳಲ್ಲಿ ಚಟ್ನಿ ನೆಕ್ಕಿದ್ದಷ್ಟೆ ನೆನಪು. ಖಾರ ನೆತ್ತಿಗೇರಿ, ಬೆಳ್ಳಂಬೆಳಿಗ್ಗೆ ಅಂಬರದಲ್ಲಿ ಚಂದ್ರತಾರೆಯರು ಏಕ್‌ದಂ ಘೇರಾಯಿಸಿದಂತಾಗಿ, ಉಲ್ಕಾಪಾತ, ನೀಹಾರಿಕೆ, ಕ್ಲಾಸಿನಲ್ಲಿ ಏನೇನೆಲ್ಲ ಓದಿದ್ದೆನೋ ಅಷ್ಟೂ ಕಣ್ಣಮುಂದೆ ಹಾದು ಹೋಯಿತು. ಯಾರೋ ನೆತ್ತಿಗೆ ನೀರು ತಟ್ಟಿದರು. ಮತ್ತಾರೋ ಗಂಟಲಿಗೆ ಬಿಸಲೇರಿ ಸುರುವಿದರು.

`ಕಣ್ಬಿಡೋ ಕಮಂಗಿ. ನಾನು .... ಅಮ್ಮೂ - ಅಲಮೇಲು~
ಎಲ್ಲೋ ಕೇಳಿದ ದನಿ. ಯಾರಿವಳು ಈ ಕಲಕಂಠಿ?
`ನಿನ್ನ ಕಾಲೇಜ್‌ಮೇಟ್ .... ಸರ್ಕೊ. ಇಲ್ಲೇ ಕೂರ್ತೀನಿ~ ಎಂದು ಭುಜಕ್ಕೆ ಭುಜತಾಗಿಸಿ ಕೂತಾಗಲೆ ಕಾಲೇಜು ದಿನಗಳ ನೆನಪಾದದ್ದು.
`ಯಾರದು, ನಿನ್ನೆದುರಿಗೆ ..... ಖಾಸ್‌ಬಂಗ್ಲೆ ಡ್ರಾಪ್ ಔಟ್~!
`ನನ್ನ ಹೆಂಡತಿ ಕಣೆ ಗೂಬೆ~

`ಅರೇಂಜ್ಡ್ ಮ್ಯಾರೇಜೇ? .... ಅನ್ಕೊಂಡೆ; ನಿನ್ನ ಉದ್ದಿನವಡೆ ಮೂತಿಗೆ, ಈ ಎಳ್ಳುಂಡೇನೇ ಸೆಟ್ ಆಗೋದು ಅಂತ. ನನ್ನ ಲೆಕ್ಕಾಚಾರ ಹುಸಿಹೋಗಲಿಲ್ಲ. ತಡಿ ಅವಳನ್ನ ವಿಚಾರಿಸ್ಕೋತೀನಿ~ ಅಂತ ಅವಳ ಬದಿಗೆ ಜಿಗಿದು ಕೂತಳು.

`ಮೇಡಂ ನಿಮ್ಮ ಗಂಡನ ಬಯೋಡ್ಯಾಟಾ ಭಯಾನಕ. ಕಾಲೇಜಿನಲ್ಲಿ ಜೂನಿಯರ್ ಬಿ.ಎಸ್.ಸಿ ಯಲ್ಲಿ ಲತಾಮಂಗೇಶ್ಕರ್ ಹಾಗೆ ಹಾಡ್ತಿದ್ದ... ಏ ಮಾಲಿಕ್ ತೇರೇ ಬಂದೇ ಹಮ್~ ಹಾಡಿ ಹುಡುಗೇರಿಗೆ ಚುಡಾಯಿಸ್ತಿದ್ದ. ಗಿಡುಗನ ಮೂತಿ, ಕೋಗಿಲೆ ಕಂಠ. ನಾನೂ ಇವನ ಬೀಸಣಿಗೆ. ಸೀನಿಯರ್‌ಗೆ ಬಂದ. ಗಂಟಲು ಒಡೆದು ರಫಿ ಹಾಡಿಗೆ ಶುರು ಹಚ್ಚಿದ. `ತೂ ಹೈಮೇರಾ ಪ್ರೇಮ್ ದೇವ್‌ತಾ~ ಭಕ್ತಿಗೀತೆ. ಈ ಪೋಲಿ ಅದನ್ನ ಪ್ರೇಮಗೀತೆ ಥರಾ ಹಾಡುವ. ಇವ ಮುಂದೆ ಬಿಂದಾಸ್ ಪ್ಲೇ ಬ್ಯಾಕ್ ಆಗ್ತಾನೆ ಅನ್ಕೊಂಡೆ. ಇವನನ್ನ ಮದುವೆ ಆಗೋ ಇರಾದೆನೂ ಇತ್ತು. ದ್ರಾಬೆ. ಬಿ.ಎಡ್ ಮಾಡ್ತೀನಿ ಅಂತ ಹೋದ. ಇವನ ಕಾಲೇಜು ಅಡ್ರೆಸ್ ಪತ್ತೆ ಹಚ್ಚಿ ಪೋಸ್ಟ್ ಕಾರ್ಡ್ ಹಾಕಿದೆ.

`ಮನೆಗೆ ಬಾರೋ, ನಿನ್ನ ಹಾಡು ಕೇಳಬೇಕು~ ಇರು ಬರ‌್ತೀನಿ ಕಣೆ, ಆ ಸಂಧ್ಯಾ ಪ್ರಮೀಳಾ, ಗಿರಿಜ ಎಲ್ಲರನ್ನೂ ಕರಿ ಅಂತ ಬರೆಯೋದೇನೋ ಬರೆದ. ಅಡ್ರೆಸ್ ಬರೆಯೋವಾಗ `ಕುಮಾರಿ ಅಲಮೇಲು, ಗ್ರಂಧಿಗೆ ಅಂಗಡಿ ಗುಜ್ಜಾರಪ್ಪನವರ ಪಕ್ಕದ ಮನೆ. ಸನ್ನಿಧಿ ರಸ್ತೆ, ಬಸವನಗುಡಿ~ ಅಂತ ಬರೆದು ಪೋಸ್ಟ್ ಮಾಡಿದಾನೆ ಪೆಕ್ರ.
 ಅದು ಗುಜ್ಜಾರಪ್ಪನ ಮನೆಯಿಂದ ಇಡೀ ರಸ್ತೆ ದಾಟಿ, ಈಸ್ಟ್ ಆಂಜನೇಯ ಟೆಂಪಲ್ ಗರ್ಭಗುಡೀಲಿ ಬಂದು ಬಿತ್ತು. ದೊಡ್ಡ ಸ್ಕ್ಯಾಂಡಲ್ ಆಯ್ತು. ನನ್ನ ಮದುವೆ ನಿಂತೇ ಹೋಯಿತು. ಅದಕ್ಕೂ ಮುಂಚೆ, ಅದೇ ರಸ್ತೇಲಿ ಪ್ರೇಮ ಅಂತ ಒಬ್ಬಳು ಮುದ್ದಾಗಿದ್ದಳು.
ಎಣ್ಣೆಗೆಂಪು. ಬಂಜಾರಾ ಲಂಗ ದಾವಣಿ ತೊಡ್ತಿದ್ಲು. ಈ ಗೂಬೆ ದಿನಾಲು ಅವಳ ಮನೆ ತಾವು ಚೆಂಗುಲಾಬಿ ಹೂ ಚೆಲ್ಲಿಕೊಂಡು ಹೋಗುತ್ತಿದ್ದ. ಸುಮಾರು ಒಂದು ಕ್ವಿಂಟಾಲ್ ಹೂವು ಸುರಿದಿರಬಹುದು; ಆ ಹುಡುಗಿನೋ ನಕ್ಕರೇ ದಾಳಿಂಬೆ ಹಲ್ಲು. ಕಣ್ಬಿಟ್ರೆ ಕಾಬೂಲ್ ದ್ರಾಕ್ಷಿ. ಸಂಪಿಗೆ ಮೂಗು, ಸೊಂಡೆಕಾಯಿ ತುಟಿ. ಅವಳೂ ಕೈತಪ್ಪಿ ಹೋದಳು.

ಆಮೇಲೆ ಆ ಪೊಲೀಸ್ ಕ್ವಾರ್ಟಸ್ ಹುಡುಗಿ ಮಾಲತಿ. ಒನ್‌ಸಾಂಗ್  ಮಿಸ್ಟರಿ. ಸರ್ದಾರ್ ಮಲ್ಲಿಕ್‌ದು `ತುಮ್ಹೇಯಾದ್ ಹೋನಾ ಕಭೀ ಹಮ್ ಮಿಲೇ ಥೆ~ ಹಾಡಿ ಕಪ್ ದೇವಿಕೊಂಡು ಹೋಗೋವ್ಳ. ಅವಳಿಗೊಂದು ಲವ್‌ಲೆಟರ್ ಬರೆದ. ಲೆಟರ್ ಓದ್‌ತ್ತಿದ್ದಂಗೆ ಹುಡುಗಿ ಸ್ಪಾಟ್ ಔಟ್. ಕೊನೆಗೆ ನಿಮ್ ಸೆರಗಿಗೆ ಗಂಟು ಬಿದ್ದ. ಇದೆಲ್ಲಕೂ ಫೆಬ್ರುವರಿ 14ಏ ಮುಹೂರ್ತವೆ!

ಅಷ್ಟರಲ್ಲೆ ಅವಳ ಗಂಡ ಬಂದ. `ಅಮ್ಮೂ ನಿನಗೆ ಸೀಟ್ ರಿಸರ್ವ್ ಮಾಡಿದೀನಿ ಬಾ~ ಎಂದು ಅವನ ಪರಿಚಯ ಮಾಡಿಕೊಟ್ಲು. `ಮೈಕ್.... ಮೈಕೇಲ್ ಜ್ಯಾಕ್ಸೆನ್. ಬಿ.ಬಿ.ಸಿ. ರಿಪೋರ್ಟರ್~

`ರಿಪೋರ್ಟರೆ! ಒಳ್ಳೆ ಪೋರ್ಟರ್ ಇದ್ದಾಗೆ ಇದಾನಲ್ಲೆ? `ಸೊಂಟ ಐಬು?~
`ಅದಕ್ಕೆ ಮೈಕೇಲ್ ಜಾಕ್ಸನ್ ಅಂತ ನಾನೇ ಹೆಸರಿಟ್ಟೆ. ಅಷ್ಟರಲ್ಲಿ ರೈಲು ಪಶ್ಚಿಮವಾಹಿನಿ ದಾಟಿತ್ತು. ನಾ ಕೊಂಡದ್ದು ಪ್ಯಾಸೆಂಜರ್‌ಗಾಡಿ ಟಿಕೆಟ್. ಎಕ್ಸ್‌ಪ್ರೆಸ್ ಮಂಡ್ಯದಿಂದ ನಾನ್‌ಸ್ಟಾಪ್ ಮೈಸೂರಿನಲ್ಲಿ ಟಿ. ಸಿ. ಹತ್ತಿರ ಸಿಕ್ಕಿಬಿದ್ದರೆ ಒಂದಕ್ಕೆ ಹತ್ತು ಪಟ್ಟು ದಂಡ.

ಮೈಕ್ ಲಗ್ಗೇಜ್ ಹೊತ್ತು. ನನ್ನ ಅಮ್ಮೂಳ ಸೊಂಟ ಬಳಸಿ, ಸರಸರನೆ ನಡೆದೆ. ನನ್ನ ಹೆಂಡತಿ ಹೆಳವನ ಕಟ್ಟೆ ಗಿರಿಯಮ್ಮನಂತೆ ಮುಖಕ್ಕೆ ಮುಸುಕು ಹಾಕಿ, ಹಾಗೂ ಹೀಗೂ ಜೀವಣ್ಣರಾಯನ ಕಟ್ಟೆ ಪೆಟ್ರೋಲ್ ಬಂಕ್ ತಲುಪಿದೆವು.

ಅಮ್ಮು `ಟಾಟಾ~ ಹೇಳಿ ಹೋದಳು. ನಾನು ಹಿಂತಿರುಗಿ ನೋಡ್ತೇನೆ ಸುಬ್ಬಿ ಕಾಣೆ!
`ಯಾರಿಗೆ ತಡಕ್ತೀವ್ರಿ ಯಜಮಾನ್ರೆ?~ ಗೌಡನೊಬ್ಬ ಕೇಳಿದ.

`ನನ್ನ ಎಂಡ್ರು. ಯೆಂಕಟ್‌ಸುಬ್ಬಿ ಏನಾದ್ಲು~?
`ಐ! ನಿಮ್ ಮುಂದೇಯ ಆಯಮ್ಮ ಬಸವೇಗೌಡನ ಕಾರ್ ಅತ್ಕಂಡ್ ಓದ್ಲಲ್ಲ ಬುದ್ದಿ! ಬತ್ತಾಳೆ ಬುಡಿ. ಇವತ್ತು ಹದಿನಾಲ್ಕು ತಾರೀಖು. ಅಂಬ್ಲಿ ರಿಜಾರ್ಟ್‌ಗೆ ಓಗವ್ರೆ. ನಾಳೆ ಬತ್ತಾರೆ ಬುಡಿ. ಯಾವೂರ ನಿಮ್ದೂ!

`ನನ್ನ ಎಂಡ್ರ ಕತೇನೂ ಇದೇಯ. ನಿಮಿಸಾಂಬ ಗುಡಿಗೆ ಓಗಾಣಿ ಅಂತ ಕನ್ನಂಬಾಡಿ ಕಟ್ಟೆಯಿಂದ ಎಳ್ಕಂಡ್ ಬಂದ್ಲು. ಪ್ರತಿ ವರುಸ ಈ ತಿಂಗಳು 14 ಬಂತೂಂದ್ರೆ ಸರೆ. ಅವಳು ಇಂಗೇನೇ ..... ಬತ್ತಾಳೆ ಬುಡಿ. ಎಲ್ಲಿಗೋಯ್ತಾಳೆ!....

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT