ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೇಸು ಕಾರುಣ್ಯದಲ್ಲಿ ಮಿಂದರೆಲ್ಲರೂ..

Last Updated 25 ಡಿಸೆಂಬರ್ 2013, 5:53 IST
ಅಕ್ಷರ ಗಾತ್ರ

ಕೋಲಾರ: ನಗರದ ಎಲ್ಲೆಡೆ ಮಂಗಳವಾರ ಸಾವಿರಾರು ಕ್ರೈಸ್ತರು ಸಡಗರ, ಸಂಭ್ರಮದಿಂದ ಕ್ರಿಸ್ ಮಸ್‍ ಈವ್ ಆಚರಿಸಿ, ಹೊಸ ವರ್ಷಕ್ಕೆ ಸ್ವಾಗತ ಕೋರಿದರು.

ಚರ್ಚ್‌ಗಳಲ್ಲಿ,ಮನೆಗಳಲ್ಲಿ ಸಂಜೆ 6ರಿಂದಲೇ ವಿಶೇಷ ಪ್ರಾರ್ಥನೆ, ಭಜನೆಗಳು ಶುರುವಾದವು. ಮಧ್ಯರಾತ್ರಿ ಕಳೆದು 25ರ ಬುಧವಾರದ ಮೊದಲ ಕ್ಷಣ ಆರಂಭವಾಗುತ್ತಲೇ  ಯೇಸು ಕ್ರಿಸ್ತನ ಜನನದ ಸಂಕೇತವಾಗಿ ಪ್ರಾರ್ಥನೆ, ಪೂಜೆ, ಹಬ್ಬದೂಟ, ಶುಭಾಶಯ, ಉಡುಗೊರೆಗಳ ವಿನಿಮಯ ಮಾಡಿಕೊಂಡರು.

ಇಡೀ ನಗರವು ಹೀಗೆ ಯೇಸು ಕ್ರಿಸ್ತನ ಕಾರುಣ್ಯದಲ್ಲಿ ಮಿಂದ ಧನ್ಯತೆಯನ್ನು ಅನುಭವಿಸಿತು. ಕ್ರಿಸ್ಮಸ್ ತಾತಾ ‘ಸಾಂತಾ ಕ್ಲಾಸ್’ನನ್ನು ಬರಮಾಡಿಕೊಂಡ ಮಕ್ಕಳು ಆತ ನೀಡಿದ ಚಾಕೊಲೆಟ್ ಸವಿದರು. ಕ್ರಿಸ್ತ ಜನಿಸಿದ ಸಂದರ್ಭದಲ್ಲಿ ದೇವದೂತರು ಇಡೀ ಜಗತ್ತಿಗೆ ಸಾರಿದ ಶುಭವಾರ್ತೆಯು (ಕ್ರಿಸ್ಮಸ್ ಟೈಡ್) ಮತ್ತೆ ಪ್ರತಿಧ್ವನಿಸಿತು.

ಮೆಥೋಡಿಸ್ಟ್, ರೋಮನ್ ಕ್ಯಾಥೊಲಿಕ್, ಸೆವೆಂತ್ ಡೇ, ನ್ಯೂ ಲೈಫ್ ಚರ್ಚ್, ಪೆಂಟಿಕಾಸ್ಟಲ್ ಚರ್ಚ್, ಬ್ರದರನ್ ಅಸೆಂಬ್ಲಿ ಚರ್ಚುಗಳು ಸೇರಿದಂತೆ ನಗರದ 25 ಚರ್ಚುಗಳಲ್ಲಿ ಮಧ್ಯರಾತ್ರಿಯಿಂದ ಬೆಳಗಿನ ಜಾವದರೆಗೂ ವಿಶೇಷ ಪ್ರಾರ್ಥನೆ ನಡೆಯಿತು. ನಗರದ ಸುಮಾರು 8 ಸಾವಿರ ಕ್ರೈಸ್ತ ಸಮುದಾಯದವರ ಮನೆಗಳಲ್ಲಿ ಕ್ರಿಸ್ ಮಸ್ ಸಂಭ್ರಮ ಮೈದಾಳಿತ್ತು.

ಅದು ಏಕಾಂತದ ಪೂಜೆ ಮತ್ತು ಲೋಕಾಂತ ಉತ್ಸವದ ಸಂಭ್ರಮ ಮೇಳೈಸಿದ ಸ್ಥಿತಿ.  ಚರ್ಚ್‌ಗಳಲ್ಲಿ, ಹಲವು ಮನೆಗಳಲ್ಲಿ ಗೋದಲಿ (ಕ್ರಿಸ್ತನ ಜನ್ಮಿಸಿದ ದನದ ಕೊಟ್ಟಿಗೆಯ ಸುಂದರ ಪ್ರತಿಕೃತಿ), ಕ್ರಿಸ್ ಮಸ್ ಟ್ರೀಗಳು ದೀಪಾ­ಲಂಕಾರ­ದಲ್ಲಿ ಹೊಳೆದವು.  ತಮಗಿಂತಲೂ ಬಡವರಿಗೆ ಕ್ರೈಸ್ತರು ವಸ್ತುಗಳನ್ನು ದಾನ ಮಾಡಿದರು.

ನಗರದ ಮೆಥೋಡಿಸ್‍ಟ್ ಚರ್ಚ್, ಬೆಂಗಳೂರು ರಸ್ತೆಯಲ್ಲಿರುವ ಬೆತ್ತನಿ, ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಈಲಂ, ಬೇತಮಂಗಲ ರಸ್ತೆಯಲ್ಲಿರುವ ನಜರೇತ್ ಗ್ರಾಮದ ಚರ್ಚುಗಳಲ್ಲಿಯೂ ಕ್ರಿಸ್ಮಸ್ ಸಂಭ್ರಮ ಮೇರೆ ಮೀರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT