ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ ಗ್ರಂಥ ಕನ್ನಡಕ್ಕೆ ಅನುವಾದ: ಸಿಎಂ

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಆನೇಕಲ್: ಯೋಗದ ಬಗೆಗಿನ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಿಸಿ, ವಿಶ್ವವಿದ್ಯಾಲಯಗಳು ಹಾಗೂ ಗ್ರಂಥಾಲಯಗಳಿಗೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ನುಡಿದರು.

ಅವರು ತಾಲ್ಲೂಕಿನ ಜಿಗಣಿ ಸಮೀಪದ `ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ~ ಸಂಸ್ಥೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಯೋಗಪಟು ಪದ್ಮಭೂಷಣ ಬಿ.ಕೆ.ಎಸ್.ಅಯ್ಯಂಗಾರ್ ಅವರನ್ನು ಸನ್ಮಾನಿಸಿ ಮಾತನಾಡಿದರು.

ಬಿ.ಕೆ.ಎಸ್.ಅಯ್ಯಂಗಾರ್ ಅವರು ರಚಿಸಿರುವ 35 ಯೋಗಗ್ರಂಥಗಳ ಪೈಕಿ ಕೇವಲ ಎರಡು ಗ್ರಂಥಗಳು ಮಾತ್ರ ಕನ್ನಡದಲ್ಲಿ ಲಭ್ಯವಿವೆ. ಹಾಗಾಗಿ ಈ ಪೈಕಿ ಪ್ರಮುಖ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಿ ವಿತರಿಸುವ ಕಾರ್ಯವನ್ನು ಸರ್ಕಾರದ ಮುಖಾಂತರ ಮಾಡಲಾಗುವುದು ಎಂದರು. ಭಾರತದಲ್ಲಿರುವ ಯೋಗದ ಬಗೆಗಿನ ಏಕೈಕ ಡೀಮ್ಡ ವಿಶ್ವವಿದ್ಯಾಲಯ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆಯು ರಾಜ್ಯದಲ್ಲಿರುವುದು ಹೆಮ್ಮೆಯ ಸಂಗತಿ. ಈ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.

ಶಿಕ್ಷಣ, ಸಂಶೋಧನೆ ಹಾಗೂ ಚಿಕಿತ್ಸೆಗಳೆಲ್ಲವೂ ಒಂದೇ ಸೂರಿನಲ್ಲಿ ದೊರೆಯುತ್ತಿರುವುದು ಶ್ಲಾಘನೀಯ. ಯೋಗ ವಿದ್ಯೆಯು ಭಾರತೀಯರ ಅಪೂರ್ವ ಕೊಡುಗೆಯಾಗಿದೆ. ವ್ಯಕ್ತಿಯಲ್ಲಿನ ಶಕ್ತಿ ಹಾಗೂ ಅಂತರ್ಗತವಾಗಿರುವ ಸತ್ವವನ್ನು ಸಮಾಜಕ್ಕೆ ಅರ್ಪರ್ಪಿಸಲು ಇರುವ ಏಕೈಕ ಮಾರ್ಗ ಯೋಗಮಾರ್ಗವಾಗಿದೆ. ವಿದೇಶಗಳಲ್ಲಿ ಸಹ ಯೋಗ ಜನಪ್ರಿಯವಾಗಿದೆ. ಒತ್ತಡಗಳನ್ನು ನಿಭಾಯಿಸಲು ಸಂಪೂರ್ಣ ಸಾಮರ್ಥ್ಯ ಯೋಗಾಭ್ಯಾಸದಿಂದ ದೊರೆಯುತ್ತದೆ. ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ವೇಗಕ್ಕೆ ಮನುಷ್ಯ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದೇ ತನ್ನ ಶಕ್ತಿಗಿಂತ ಹೆಚ್ಚಿನದನ್ನು ಪಡೆಯಬೇಕೆಂಬ ಧಾವಂತದಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾನೆ. ಇದಕ್ಕೆ ಪರಿಹಾರವೆಂದರೆ ಯೋಗಮಾರ್ಗ ಎಂದು ಮುಖ್ಯಮಂತ್ರಿಗಳು ನುಡಿದರು.

ಯೋಗಪಟು ಪದ್ಮಭೂಷಣ ಬಿ.ಕೆ.ಎಸ್.ಅಯ್ಯಂಗಾರ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಪ್ರತಿ ಕುಟುಂಬವೂ ಯೋಗದ ಅಭ್ಯಾಸ ಮಾಡುವ ಅವಶ್ಯಕತೆ ಇದೆ. ಯೋಗದ ಬಗ್ಗೆ ಜಾಗೃತಿ ಮೂಡಿಸಬೇಕು. ವ್ಯಕ್ತಿಯ ಸರ್ವಾಂಗೀಣ ವಿಕಾಸಕ್ಕೆ ಯೋಗಮಾರ್ಗ ಅತ್ಯಂತ ಅವಶ್ಯಕ. ಇಂದ್ರಿಯಗಳ ನಿಗ್ರಹಕ್ಕೆ ಯೋಗದ ಅಭ್ಯಾಸ ಬೇಕು. ಯೋಗಿಕ ಕ್ರಿಯೆಗಳ ಮುಖಾಂತರ ಸಾಧನೆ ಮಾಡಿ ಸಾಧಕರಾಗಬೇಕು. ಯೋಗದ ಉತ್ತುಂಗ ಶಿಖರವನ್ನು ತಲುಪಿ ಆತ್ಮಜ್ಞಾನವನ್ನು ಪಡೆಯಲು ನಿರಂತರ ಅಭ್ಯಾಸ ಸಾಧನೆ ಅವಶ್ಯಕ ಎಂದರು.

ವಿವೇಕಾನಂದ ಅನು ಸಂಧಾನ ಸಂಸ್ಥೆಯ ಅಧ್ಯಕ್ಷ ಡಾ.ಹೆಚ್.ಆರ್.ನಾಗೇಂದ್ರ ಅವರು ಮಾತನಾಡಿ ರಜತ ಮಹೋತ್ಸವದ ಸಂದರ್ಭದಲ್ಲಿ ಯುವಕರಲ್ಲಿ ಪರಿವರ್ತನೆ ತರುವ ಸಲುವಾಗಿ ಯೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಆಯೋಜಿಸಿದ್ದ `ಯೋಗ ದಸರ~ ಉತ್ತಮ ಪರಿಣಾಮ ಬೀರಿದೆ. ಸ್ಟಾಪ್ ಡಯಾಬಿಟೀಸ್ ಎಂಬ ಕಾರ್ಯಕ್ರಮವನ್ನು ರಾಷ್ಟ್ರೀಯ ಆಂದೋಲನವನ್ನಾಗಿ ಸಂಸ್ಥೆಯು ರೂಪಿಸಿದೆ. ಕೇಂದ್ರ ಸರ್ಕಾರ ಹೆಚ್ಚಿನ ನೆರವು ನೀಡಿದೆ. ಏಡ್ಸ್ ಮತ್ತು ಹೆಚ್‌ಐವಿ ಬಗ್ಗೆ ಸಹ ಸಂಶೋಧನೆ ಕೈಗೊಳ್ಳಲು ನೆರವು ದೊರೆತಿದೆ. 172 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಪ್ರಬಂಧಗಳನ್ನು ಸಂಸ್ಥೆಯ ಮುಖಾಂತರ ಮಂಡಿಸಲಾಗಿದೆ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ.ಸುಧಾರಾವ್, ಯೋಗ ಅನುಸಂದಾನ ಸಂಸ್ಥೆಯ ಕೆ.ಸುಬ್ರಮಣ್ಯ, ಡಾ.ಹೆಚ್.ಆರ್.ನಾಗರತ್ನ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತೇಜಶ್ರೀ ನಟರಾಜ್, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಜಿಗಣಿ ರಮೇಶ್ ಮತ್ತಿತರರು ಹಾಜರಿದ್ದರು.

ಯೋಗ, ಆಯುರ್ವೇದಕ್ಕೆ ಪ್ರತ್ಯೇಕ ವಿವಿ: ಸಚಿವ

ಪ್ರಜಾವಾಣಿ ವಾರ್ತೆ
ಆನೇಕಲ್:
ಅಂತಾರಾಷ್ಟ್ರೀಯ ಯೋಗ ಸಮ್ಮೇಳನವನ್ನು 2012 ಫೆಬ್ರವರಿ 10ರಿಂದ 13ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎ.ಎಸ್.ರಾಮದಾಸ್ ನುಡಿದರು.

ಅವರು ಜಿಗಣಿ ಸಮೀಪದ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಯೂರೋಪ್‌ನ ಕೆಲವು ರಾಷ್ಟ್ರಗಳಲ್ಲಿ ಕಳೆದ ಮೇ ತಿಂಗಳಿನಲ್ಲಿ ವೈಜ್ಞಾನಿಕ ಸಂಶೋಧನೆಗಳಿಂದ ಸಾಬೀತಾಗಿಲ್ಲ ಎಂದು ಕಾರಣ ನೀಡಿ ಯೋಗ ಮತ್ತು ಆಯುರ್ವೇದಕ್ಕೆ ನಿಷೇಧ ಹೇರಲಾಗಿದೆ. ಹಾಗಾಗಿ ಯೋಗ ಮತ್ತು ಆಯುರ್ವೇದದ ಬಗೆಗೆ ಹೆಚ್ಚಿನ ಸಂಶೋಧನೆ ಕೈಗೊಳ್ಳಲು ಪ್ರತ್ಯೇಕ ವಿಶ್ವವಿದ್ಯಾಲಯ ತೆರೆಯುವ ಉದ್ದೇಶ ಸರ್ಕಾರ ಹೊಂದಿದೆ. ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸಂಶೋಧನೆಗಳ ಬಗ್ಗೆ ವೈಜ್ಞಾನಿಕವಾಗಿ ಉತ್ತರ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ವೈದ್ಯ ಶಿಕ್ಷಣ ಪಡೆದವರು ಕಡ್ಡಾಯವಾಗಿ ಒಂದು ವರ್ಷ ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕೆಂಬ ನಿಯಮ ರೂಪಿಸಲು ಕರಡು ಸಿದ್ಧವಾಗಿದೆ. ಕೇಂದ್ರ ಸರ್ಕಾರ ರಾಷ್ಟ್ರಮಟ್ಟದಲ್ಲಿ ಇದನ್ನು ಜಾರಿಗೆ ತರುವ ಚಿಂತನೆ ನಡೆಸಿದೆ ಎಂದರು. ಗ್ರಾಮಾಂತರ ಪ್ರದೇಶಗಳ ಆಸ್ಪತ್ರೆಗಳಲ್ಲಿ ಕನಿಷ್ಠ ಇಬ್ಬರು ವೈದ್ಯರಿರುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳ ದೂರವಾಣಿ ಸಂಖ್ಯೆಗಳನ್ನು ತಾವು ಪಡೆಯುತ್ತಿದ್ದು ಆಯ್ದ ಕೆಲವು ರೋಗಿಗಳೊಡನೆ ದೂರವಾಣಿ ಮೂಲಕ ಸಮಾಲೋಚಿಸಿ ಚಿಕಿತ್ಸೆ ಹಾಗೂ ಅಲ್ಲಿನ ಯಾವುದೇ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದೆ. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾ ಆಸ್ಪತ್ರೆಗಳ ಸಿಬ್ಬಂದಿ ಭ್ರಷ್ಟಾಚಾರವಿಲ್ಲದೇ ಸೌಲಭ್ಯಗಳನ್ನು ನೀಡುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT