ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ, ಪ್ರವಚನದ ಧ್ಯಾನ

Last Updated 1 ಜುಲೈ 2012, 9:50 IST
ಅಕ್ಷರ ಗಾತ್ರ

ವಿಶೇಷ ಸಂದರ್ಭಗಳಲ್ಲಿ ಮಠಗಳಲ್ಲಿ ಧಾರ್ಮಿಕ ಪ್ರವಚನಗಳು ಸಾಮಾನ್ಯ. ಆದರೆ, ಮುಂಡರಗಿ ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾ ಮಠದ ಪ್ರವಚನ ಸಮಿತಿಯು ಈ  ಆಷಾಡ ಮಾಸದ ಪ್ರಯುಕ್ತ ತಿಂಗಳ ಪರ್ಯಂತ `ರೋಗದಿಂದ ಯೋಗದೆಡೆಗೆ~ ಎಂಬ ವಿನೂತನ ಆಧ್ಯಾತ್ಮಿಕ ಪ್ರವಚನವನ್ನು ಏರ್ಪಡಿಸಿದೆ.

ಇಲ್ಲಿನ ತೋಂಟದಾರ್ಯ ಶಾಖಾ ಮಠದಲ್ಲಿ ಇದೇ ತಿಂಗಳ 20ರಿಂದ ಜರುಗುತ್ತಿರುವ ಪ್ರವಚನವು ಭಿನ್ನವಾಗಿದೆ. `ರೋಗದಿಂದ ಯೋಗದೆಡೆಗೆ~ ಎಂಬ ವಿಷಯ ಕುರಿತು ಸುದೀರ್ಘ ಪ್ರವಚನ ನೀಡುತ್ತಿರುವ ಮನಗುಂಡಿಯ ಬಸವಾನಂದ ಸ್ವಾಮೀಜಿ ತಮ್ಮ ಕಾರ್ಯಕ್ರಮವನ್ನು ಕೇವಲ ಪ್ರವಚನಕ್ಕೆ ಮಾತ್ರ ಸೀಮಿತಗೊಳಿಸದೆ ಸಾರ್ವಜನಿಕರ ದೈಹಿಕ ಮತ್ತು ಮಾನಸಿಕ ರೋಗಕ್ಕೆ ಚಿಕಿತ್ಸೆ ನೀಡುತ್ತಿದ್ದಾರೆ.

ಆಧ್ಯಾತ್ಮ ಪ್ರವಚನವು ಪ್ರತಿದಿನ ಸಂಜೆ 7ರಿಂದ 8ರವರೆಗೆ ನಡೆಯುತ್ತದೆ. ಬಸವಾನಂದ ಸ್ವಾಮೀಜಿ ತಮ್ಮ ಪ್ರವಚನದಲ್ಲಿ ಎಲ್ಲ ಜನರಿಗೂ ಅಗತ್ಯವಾಗಿ ಬೇಕಾಗಿರುವ ದೈಹಿಕ ಮತ್ತು ಮಾನಸಿಕ ಆರೋಗ್ಯ ಕುರಿತು ಸುದೀರ್ಘ ಮಾಹಿತಿ ನೀಡುತ್ತಾರೆ. ದೇಹ ಮತ್ತು ಮನಸ್ಸು ಎಂದರೇನು?, ಅದರ ಅಸ್ಥಿತ್ವ ಹೇಗಿದೆ?, ಹೇಗಿರಬೇಕು?, ರೋಗಗಳು ಹೇಗೆ ಬರುತ್ತವೆ, ಏಕೆ ಬರುತ್ತವೆ?, ಉತ್ತಮ ಆರೋಗ್ಯಕ್ಕೆ, ಆಯುಷ್ಯಕ್ಕೆ ಏನು ಮಾಡಬೇಕು? ಇವೆ ಮೊದಲಾದ ಮಾಹಿತಿಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ತಿಳಿಸುತ್ತಾರೆ.

ಪ್ರವಚನದ ನಿಮಿತ್ತ ಪ್ರತಿನಿತ್ಯ ಮುಂಜಾನೆ 5.30ರಿಂದ 6.30ರವರೆಗೆ ಮಠದ ಆವರಣದಲ್ಲಿ ಸಾರ್ವಜನಿಕರಿಗೆ ಉಚಿತ ಯೋಗ ತರಬೇತಿ ನೀಡಲಾಗುತ್ತಿದೆ. ಸುಮಾರು 150-200 ಮಂದಿ ಉಚಿತ ಯೋಗ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಚಿತ್ರದುರ್ಗದ ಚಂದ್ರು ಅಚ್ಚುಕಟ್ಟಾಗಿ ಯೋಗ ಹೇಳಿಕೊಡುತ್ತಾರೆ.

 ಯೋಗ ತರಬೇತಿ ಮುಗಿದ ನಂತರ ಮುಂಜಾನೆ 9.30ರಿಂದ ಮಧ್ಯಾಹ್ನ 12.30ರವರೆಗೂ ಬಸವಾನಂದ ಸ್ವಾಮೀಜಿ ಅವರು ಸಾರ್ವಜನಿಕರ ಆರೋಗ್ಯ ತಪಾಸಣೆ, ಸಮಾಲೋಚನೆ ನಡೆಸುತ್ತಾರೆ. ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಬಿಳಿಕಾಮಣಿ, ಅಸ್ತಮಾ ಮೊದಲಾದ ಕಾಯಿಲೆಗಳಿಂದ ಬಳಲುವವರು ಸ್ವಾಮೀಜಿ ಅವರ ಜೊತೆ ಸಮಾಲೋಚನೆ ನಡೆಸುತ್ತಾರೆ. ಅವರವರ ಕಾಯಿಲೆ, ಅದರ ತೀವ್ರತೆ, ಅವರ ವಯಸ್ಸು, ತೂಕ, ಎತ್ತರ ಮೊದಲಾದವುಗಳ ಆಧಾರದ ಮೇಲೆ ಇಂತಿಷ್ಟು ದಿವಸ ಉಪವಾಸ ಮಾಡುವಂತೆ ತಿಳಿಸಲಾಗುತ್ತದೆ. ಉಪವಾಸದ ಸಂದರ್ಭದಲ್ಲಿ ದಿನಕ್ಕೆ ಮೂರು ಬಾರಿಯಂತೆ ಶುದ್ಧವಾದ ನೀರು, ಜೇನು ಮತ್ತು ನಿಂಬೆಹಣ್ಣಿನ ರಸವನ್ನು ಮಾತ್ರ ಬಳಸಲು ಸೂಚಿಸಲಾಗುತ್ತದೆ.

ಪಟ್ಟಣದಲ್ಲಿ ಈಗಾಗಲೇ ನೂರಾರು ಜನರು ಉಪವಾಸ ವ್ರತವನ್ನು ಕೈಗೊಂಡಿದ್ದಾರೆ. ಉಪವಾಸ ಚಿಕಿತ್ಸೆಯಿಂದ ಈಗಾಗಲೇ ಹಲವಾರು ಜನರು ತಮ್ಮ ಆರೋಗ್ಯ ಸುಧಾರಿಸಿರುವುದಾಗಿ ತಿಳಿಸಿದ್ದಾರೆ. ಸ್ಥಳೀಯ ಜಗದ್ಗುರು ತೋಂಟದಾರ್ಯ ಪ್ರವಚನ ಸಮಿತಿಯ ಅಧ್ಯಕ್ಷ ಕೊಟ್ರೇಶ ಅಂಗಡಿ ಹಾಗೂ ಸದಸ್ಯರು ಈ ಎಲ್ಲ ಕಾರ್ಯಕ್ರಮ ಆಯೋಜನೆಯ ಉಸ್ತುವಾರಿ ಹೊತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT