ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ ಸಾಧಕರ ರಾಯಲ್ ಶಾಲೆ

Last Updated 16 ನವೆಂಬರ್ 2011, 10:40 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಮಾತ್ರವೇ ಕಾಯಕವಲ್ಲ. ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸುವುದು ಮತ್ತು ಬೆಳಕಿಗೆ ತರುವುದು ಮೂಲ ಉದ್ದೇಶವೆಂದು ಕೆಲ ಶಿಕ್ಷಣ ಸಂಸ್ಥೆಗಳು ಹೇಳುತ್ತವೆ. ಅಂತಹ ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ಚಿಂತಾಮಣಿಯ ರಾಯಲ್ ಶಿಕ್ಷಣ ಸಂಸ್ಥೆಯೂ ಒಂದು.

ಯೋಗಪಟುಗಳನ್ನು ಸಿದ್ಧಪಡಿಸುತ್ತಿರುವ ರಾಯಲ್ ಇಂಗ್ಲಿಷ್ ಮಾಧ್ಯಮ ಶಾಲೆಯು ವಿದ್ಯಾರ್ಥಿಗಳ ಮೂಲಕ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದೆ.

ಯೋಗದಲ್ಲಿ ಪರಿಣತಿ ಸಾಧಿಸಿರುವ ವಿದ್ಯಾರ್ಥಿಗಳಾದ ಎಂ.ಸಿ.ಪ್ರಿಯಾಂಕಾ, ಸುಮನ್ ನಾರಾಯಣ್ ಮತ್ತು ಜಿ.ಬಿ.ಸಾಯಿಚಿತ್ರ ಅವರು ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಗಳಿಸಿದ್ದಾರೆ. ಪಠ್ಯಕ್ಕೆ ನೀಡಲಾಗುವ ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡುವಂತೆ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರು ಪ್ರೋತ್ಸಾಹಿಸುತ್ತಿದ್ದಾರೆ.

2006ರಿಂದ ಸತತವಾಗಿ ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಶಾಲೆಯ ವಿದ್ಯಾಥಿಗಳು ಪ್ರಶಸ್ತಿ ಗಳಿಸುತ್ತಿದ್ದಾರೆ. ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಎಂ.ಸಿ.ಪ್ರಿಯಾಂಕಾ 2008, 2009 ಮತ್ತು 2010ನೇ ಸಾಲುಗಳಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸತತವಾಗಿ ಬೆಳ್ಳಿ ಪದಕವನ್ನು ಗಳಿಸಿದ್ದಾರೆ.

ಪ್ರಸಕ್ತ ಸಾಲಿನ ಜನವರಿಯಲ್ಲಿ ಕೋಲ್ಕತ್ತದಲ್ಲಿ ನಡೆದ ಅಖಿಲ ಭಾರತ ಯೋಗ ಸ್ಪರ್ಧೆಯಲ್ಲಿ ಎಂ.ಸಿ.ಪ್ರಿಯಾಂಕಾ ಮತ್ತು ಸುಮನ್ ನಾರಾಯಣ್ ಅವರು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿ ಬಾಚಿಕೊಂಡರು. ಗುಜರಾತ್‌ನ ಅಂಬಾಜಿತಾದಲ್ಲಿ ಫೆಬ್ರುವರಿಯಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲೂ ಸಹ ಪ್ರಶಸ್ತಿಯನ್ನು ಗಳಿಸಿದ್ದಾರೆ.

ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರೂ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗಳಿಸಿದ್ದಾರೆ.

ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಗದು ಬಹುಮಾನಗಳನ್ನು ಎಂ.ಸಿ.ಪ್ರಿಯಾಂಕಾ ಗಳಿಸಿದ್ದಾರೆ. ದಸರಾ ಕೇಸರಿಯಲ್ಲಿ ಪಾಲ್ಗೊಂಡ ಎಂ.ಸಿ.ಪ್ರಿಯಾಂಕಾ ಮತ್ತು ಸುಮನ್‌ನಾರಾಯಣ್ ಅವರು ಪ್ರಥಮ ಸ್ಥಾನ ಗಳಿಸಿ 10 ಸಾವಿರ ರೂಪಾಯಿ ನಗದು ಬಹುಮಾನ ಪಡೆದಿದ್ದಾರೆ.

ಕಲಾಶ್ರೀ ಪ್ರಶಸ್ತಿಯನ್ನು ಗಳಿಸಿರುವ ಪ್ರಿಯಾಂಕಾ ನವೆಂಬರ್ 15 ರಿಂದ 21ರವರೆಗೆ ಬೆಂಗಳೂರಿನ ಬಾಲಭವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಚೀನಾದ ಹಾಂಕಾಂಗ್‌ನಲ್ಲಿ ಮುಂದಿನ ವರ್ಷ ಫೆಬ್ರುವರಿ 5 ರಿಂದ 11ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಆಯ್ಕೆಯಾಗಿದ್ದಾರೆ.

`ಭಾರತ, ಚೀನಾ, ಜಪಾನ್ ಮತ್ತು ಥಾಯ್ಲೆಂಡ್ ಒಟ್ಟು ನಾಲ್ಕು ರಾಷ್ಟ್ರಗಳು ಸೇರಿ ಯೋಗದ ಕುರಿತು ಪುಸ್ತಕವೊಂದನ್ನು ತರುತ್ತಿವೆ. ಪುಸ್ತಕದ ಚಿತ್ರಗಳ ಚಿತ್ರೀಕರಣಕ್ಕಾಗಿ ನಾಲ್ಕು ರಾಷ್ಟ್ರಗಳಿಂದ ಒಬ್ಬೊಬ್ಬ ವಿದ್ಯಾರ್ಥಿ ಆಯ್ಕೆಯಾಗಿದ್ದಾರೆ. ಭಾರತದಿಂದ ಪ್ರಿಯಾಂಕ ಆಯ್ಕೆಯಾಗಿದ್ದಾರೆ.

ಚೆನ್ನೈನಲ್ಲಿ ನಡೆದ ಭಾರತದ ಸ್ಪರ್ಧಿಯ ಆಯ್ಕೆಗೆ 350 ಜನರು ಭಾಗವಹಿಸಿದ್ದರು. ಚೀನಾ ಪ್ರವಾಸ ಒಂದು ತಿಂಗಳದ್ದಾಗಿದ್ದು, ಎಲ್ಲ ಖರ್ಚುವೆಚ್ಚವನ್ನ ಚೀನಾ ದೇಶವೇ ಭರಿಸಲಿದೆ~ ಯೋಗ ಶಿಕ್ಷಕ ಎಚ್.ಬಿ.ಗೋವಿಂದ್ `ಪ್ರಜಾವಾಣಿ~ಗೆ ತಿಳಿಸಿದರು. ಅವರು ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

`ಯೋಗದಿಂದ ಆರೋಗ್ಯ, ಜ್ಞಾಪಕಶಕ್ತಿ ಮತ್ತು ಏಕಾಗ್ರತೆ ಮೂಡಿ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ. ಶಾಲೆಯಲ್ಲಿ ಎಲ್ಲ ಮಕ್ಕಳಿಗೆ ವಾರಕ್ಕೆ ಒಂದು ಅವಧಿಯಂತೆ ಯೋಗವನ್ನು ಕಲಿಸಲಾಗುತ್ತಿದೆ. ಯೋಗದಲ್ಲಿ ಮುಂದಿರುವ ವಿದ್ಯಾರ್ಥಿಗಳು ವ್ಯಾಸಂಗದಲ್ಲೂ ಮುಂದಿರುತ್ತಾರೆ~ ಎಂದು ಸಂಸ್ಥೆಯ ಪ್ರಾಂಶುಪಾಲೆ ಪ್ರೇಮಲತಾರಾಮಕೃಷ್ಣಾರೆಡ್ಡಿ ತಿಳಿಸಿದರು.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT