ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಕ್ಕೆ ಮೈ-ಮನ ಪುಳಕ

Last Updated 19 ಏಪ್ರಿಲ್ 2011, 4:30 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದ ವಾತಾವರಣ ಸೋಮವಾರ ಎಂದಿನಂತೆ ಇರಲಿಲ್ಲ. ಜನ, ನೇಸರನ ಆಗಮನಕ್ಕಾಗಿ ಕಾಯಲೇ ಇಲ್ಲ. ಆತ ಇನ್ನೂ ನಿದ್ರಾವಸ್ಥೆಯಲ್ಲಿ ಇದ್ದಾಗಲೇ ಜನ ಲಗುಬಗೆಯಿಂದ ನವಿಲೆ ಮೈದಾನದ ದಾಂಗುಡಿ ಇಟ್ಟರು. ಸೂರ್ಯನ ಕಿರಣಗಳು ಭೂಮಿಗೆ ಮುತ್ತಿಕ್ಕುವಷ್ಟರಲ್ಲಿ ಮನೆಯತ್ತ ಹೆಜ್ಜೆ ಹಾಕಿದರು.  ಇದು ನಗರದಲ್ಲಿ ಹಮ್ಮಿಕೊಂಡಿದ್ದ ಯೋಗ ಗುರು ರಾಮದೇವ್ ಬಾಬಾ ಅವರ ಯೋಗ ಶಿಬಿರದ ಪರಿಣಾಮ!

ಪತಂಜಲಿ ಯೋಗ ಸಮಿತಿ ಮತ್ತು ಭಾರತ್ ಸ್ವಾಭಿಮಾನ್ ಟ್ರಸ್ಟ್ ಸಂಯುಕ್ತವಾಗಿ ನವಿಲೆಯ ಕೆಎಸ್‌ಸಿಎ ಮೈದಾನದಲ್ಲಿ ಹಮ್ಮಿಕೊಂಡಿದ್ದ ಉಚಿತ ಯೋಗ ಶಿಬಿರದಲ್ಲಿ ಯೋಗದ ಅಪರೂಪದ ಭಂಗಿಗಳು ಬಾಬಾ ರಾಮದೇವ್ ಅವರು ಪ್ರದರ್ಶಿಸಿದಾಗ, ಯೋಗ ಪ್ರಿಯರಲ್ಲಿ ಸಂಚಲನ ಉಂಟಾಯಿತು. ಮನಸೋತ ಮಲೆನಾಡಿಗರು:  ಮಕ್ಕಳು- ಮರಿಗಳು, ಹಿರಿಯರು, ವೈದ್ಯರು, ರೋಗಿಗಳು, ರಾಜಕೀಯ ಮುಖಂಡರು ಸೇರಿದಂತೆ ಮಲೆನಾಡಿಗರು ಆ ಯೋಗ ಮಾಂತ್ರಿಕನಿಗೆ ಮನಸೋತರು.

ಬೆಳಗಿನ ಪ್ರಶಾಂತ ವಾತಾವರಣದಲ್ಲಿ ಬಾಬಾ ರಾಮದೇವ್ ಮಂದಸ್ಮಿತರಾಗಿ ಪಾದರಸದಂತೆ ವೇದಿಕೆಯಲ್ಲಿ ಒಂದೊಂದೇ ಆಸನಗಳನ್ನು ಹೇಳಿಕೊಡುತ್ತಿದ್ದರೆ ನೆರೆದಿದ್ದ ಯೋಗ ಪ್ರಿಯರು ಅದನ್ನು ಅನುಸರಿಸುದಕ್ಕಿಂತ ದಿಗ್ಭ್ರಾಂತರಾಗಿ ನೋಡುತ್ತಿದ್ದುದೇ ಹೆಚ್ಚು. ಯೋಗ ಗುರು, ತನ್ನ ಎಂದಿನ ಧಾಟಿಯಲ್ಲಿ ನಗುಮೊಗದಲ್ಲಿ ಆಗಾಗ್ಗೆ ಹಾಸ್ಯ ಚಟಾಕಿಗಳನ್ನು ಹಾರಿಸುತ್ತ ಯೋಗದ ಮಹತ್ವವನ್ನು ಅರ್ಥಪೂರ್ಣವಾಗಿ ಹೇಳಿಕೊಡುವ ಮೂಲಕ ಜನರನ್ನು ಮಾಯಾಲೋಕಕ್ಕೆ ಕೊಂಡೊಯ್ದರು.

ಪ್ರಾಣಾಯಾಮದ ವಿಭಾಗಗಳಾದ ಪ್ರಾಣಾಯಾಮ, ಕಪಾಲಭಾತಿ, ಅನುಲೋಮ ಮತ್ತು ವಿಲೋಮ, ಭ್ರಾಮರೀ, ಉದ್ಗೀತ, ಉಜ್ಜಾಯಿ ಮೊದಲಾದ ಆಸನಗಳನ್ನು ವಿವರಣೆಯೊಂದಿಗೆ ಹಾಕಿ, ಮೈ-ಮನ ಪುಳಕಗೊಳ್ಳುವಂತೆ ಮಾಡಿದರು. ನೆಮ್ಮದಿ-ಆರೋಗ್ಯ ನಮ್ಮಲ್ಲೇ ಇವೆ: ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಎಲ್ಲವೂ ನಮ್ಮ ದೇಹದ ಒಳಗೇ ಇದೆ. ಆದರೆ, ಅದನ್ನು ಹೊರಗಡೆ ಹುಡುಕುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದೇವೆ. ಹೊರಡೆಯಿಂದ ಔಷಧಿಗಳನ್ನು ಹಾಕಿ ಆರೋಗ್ಯ ಪಡೆಯಲು ಯತ್ನಿಸುತ್ತಿದ್ದೇವೆ. ಆದರೆ, ಅದಕ್ಕೆ ನಮ್ಮೊಳಗೆ ಪರಿಹಾರವಿದೆ. ಅದನ್ನು ಪಡೆಯುವ ಮಾರ್ಗ ತಿಳಿಯಬೇಕು ಎಂದು ತಿಳಿಸಿದರು.   

ಯೋಗ ಯಾತ್ರೆ ರಾಮನ ಊರು ದ್ವಾರಕಾದಿಂದ ಶುರುವಾಗಿ ಈಗ ಶಿವನಮೊಗೆ (ಶಿವಮೊಗ್ಗ) ಬಂದು ನಿಂತಿದೆ. ಈವರೆಗೆ 10 ಕೋಟಿ ಜನ ಯಾತ್ರೆಯಲ್ಲಿ ಸದಸ್ಯರಾಗಿದ್ದಾರೆ. ರೋಗ ಮುಕ್ತ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದತ್ತ ಯಾತ್ರೆ ದಾಪುಗಾಲು ಹಾಕುತ್ತಿದೆ. ಇದೊಂದು ಐತಿಹಾಸಿಕ ಯಾತ್ರೆಯಾಗಲಿದೆ. ಪ್ರತಿ ಗ್ರಾಮದಲ್ಲಿ ಯೋಗ ಕೇಂದ್ರ ಮಾಡಲು ಉದ್ದೇಶಿಸಿದ್ದು, ಒಟ್ಟು 11 ಲಕ್ಷ ಯೋಗ ಕೇಂದ್ರಗಳನ್ನು ತೆರೆಯುವ ಗುರಿ ಹೊಂದಲಾಗಿದೆ ಎಂದು ರಾಮದೇವ್ ವಿವರಿಸಿದರು.

‘ಜೀವನದ ಸಾರ್ಥಕತೆ ನಿಮಗೆ ಆಗಬೇಕೆ? ಹಾಗಿದ್ದರೆ, ನನ್ನ ಜತೆ ಹರಿದ್ವಾರಕ್ಕೆ ಬನ್ನಿ. ಸನ್ಯಾಸತ್ವ ಬೇಡ ಎನ್ನುವುದಾದರೆ ಸ್ಥಳೀಯ ಆಯುರ್ವೇದ ಚಿಕಿತ್ಸೆಯೂ ಇದೆ. ಆದರೆ, ಜೀವನದ ಸಾರ್ಥಕತೆ ನಿಮಗೂ ಸಿಗಲಿ ಎಂಬುದು ನನ್ನ ಆಶಯ’ ಎಂದರು.ಯೋಗ ಶಿಬಿರದಲ್ಲಿ ಪಾಲ್ಗೊಳ್ಳಲು ಅಚ್ಚುಕಟ್ಟು ವ್ಯವಸ್ಥೆ ಮಾಡಲಾಗಿತ್ತು. ದಾರಿ ಉದ್ದಕ್ಕೂ ಬೆಳಕಿನ ವ್ಯವಸ್ಥೆ, ದೂರದಲ್ಲಿದ್ದವರಿಗೆ ಅನುಕೂಲವಾಗಲು ಸ್ಕ್ರೀನ್‌ನಲ್ಲಿ ಬಿತ್ತರವಾಗುವಂತೆ ಮಾಡಲಾಗಿತ್ತು. ಒಂದೆಡೆ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಡಲಾಗಿತ್ತು. ಅಷ್ಟೇ ಅಲ್ಲ, ವೇದಿಕೆ ಪಕ್ಕದಲ್ಲಿ ಕಪ್ಪುಹಣ, ಭ್ರಷ್ಟಾಚಾರದ ವಿರುದ್ಧ ಜನರಿಂದ ಸಹಿ ಸಂಗ್ರಹವನ್ನೂ ಮಾಡಲಾಯಿತು.

 ಕೆಂಪುಗೂಟ ವಾಹನದವರ ಯೋಗಾಯೋಗಾ...
ನವಿಲೆ ಮೈದಾನದ ಒಂದು ಭಾಗದಲ್ಲಿ ಬಹುತೇಕ ಕೆಂಪುಗೂಟದ ವಾಹನಗಳೇ ಇದ್ದವು! ರಾಜಕೀಯ ಮುಖಂಡರು, ಶಾಸಕರು, ಅಧಿಕಾರಿಗಳು ಸೇರಿದಂತೆ ಗಣ್ಯರು ಬಾಬಾ ರಾಮದೇವ್ ಜತೆಗೆ ಸುಮಾರು ಎರಡು ಗಂಟೆ ಯೋಗ ಅಭ್ಯಾಸ ಮತ್ತು ಪ್ರಾಣಯಾಮವನ್ನೂ ಮಾಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಸಭಾಪತಿ ಡಿ.ಎಚ್. ಶಂಕರಮೂರ್ತಿ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಶಾಸಕ ಕೆ.ಜಿ. ಕುಮಾರಸ್ವಾಮಿ, ಜಿಲ್ಲಾಮಟ್ಟದ ಅಧಿಕಾರಿಗಳು ಕೆಲಕಾಲ ಯೋಗಾಭ್ಯಾಸ ಮಾಡಿ ‘ರಿಲ್ಯಾಕ್ಸ್’ ಆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT