ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗದ ಮೂಲಕ ನಿರಶನ ಆರಂಭ

Last Updated 4 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಕಪ್ಪು ಹಣದ ವಿರುದ್ಧ `ರಣ ಕಹಳೆ~ ಮೊಳಗಿಸಿರುವ ಯೋಗ ಗುರು ಬಾಬಾ ರಾಂದೇವ್ ಸಹಸ್ರಾರು ಶಿಷ್ಯರ ಸಮ್ಮುಖದಲ್ಲಿ ಶನಿವಾರ ಬೆಳಗಿನ ಜಾವ ರಾಮಲೀಲಾ ಮೈದಾನದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಯೋಗ-ಭಜನೆ ನಡುವೆ  ಶುರುವಾದ ಸತ್ಯಾಗ್ರಹದಲ್ಲಿ ಎಲ್ಲ ಧರ್ಮಗಳ ಮುಖಂಡರು ಕಾಣಿಸಿಕೊಳ್ಳುವುದರೊಂದಿಗೆ ಇದು ಯಾವುದೋ ಒಂದು ಧರ್ಮದ `ಅಜೆಂಡಾ~ ಅಲ್ಲ ಎಂಬ ಸಂದೇಶ ರವಾನಿಸಲಾಯಿತು.

ಬೆಳಗಿನ ಜಾವ 4.30ಕ್ಕೆ ರಾಮಲೀಲಾ ಮೈದಾನಕ್ಕೆ ಆಗಮಿಸಿದ ಬಾಬಾ ಅವರಿಗೆ ಶಿಷ್ಯರು ಅದ್ದೂರಿ ಸ್ವಾಗತ ನೀಡಿದರು. ಕಪ್ಪು ಹಣದ ವಿರುದ್ಧದ ಸಮರಕ್ಕೆ ತುದಿಗಾಲಲ್ಲಿ ನಿಂತಿದ್ದ ಶಿಷ್ಯರನ್ನು ಉದ್ದೇಶಿಸಿ ಮಾತನಾಡಿದ ರಾಂದೇವ್, `ಜೀವನದಲ್ಲಿ ಯಾವುದೂ ಅಸಾಧ್ಯ ಅಲ್ಲ. ಎಲ್ಲವೂ ಸಾಧ್ಯ. ನಾವು ಒಗ್ಗಟ್ಟಿನಿಂದ ಹೋರಾಡಿದರೆ ಯಾವ ಶಕ್ತಿಯೂ ನಮ್ಮನ್ನು ಸೋಲಿಸಲಾಗದು~ ಎಂದು ಗುಡುಗಿದರು.

`ವಿದೇಶದಲ್ಲಿರುವ ಕಪ್ಪು ಹಣವನ್ನು ಮರಳಿ ತರಬೇಕು. ಕಪ್ಪು ಹಣ ಹೊಂದಿರುವವರನ್ನು ವಿಚಾರಣೆಗೆ ಗುರಿಪಡಿಸಬೇಕು. ಈ ಉದ್ದೇಶಕ್ಕಾಗಿ `ಫಾಸ್ಟ್ ಟ್ರ್ಯಾಕ್ ಕೋರ್ಟ್~ಗಳನ್ನು ತೆರೆಯಬೇಕು ಮೊದಲಾದ ಬೇಡಿಕೆಗಳು ಈಡೇರುವವರೆಗೆ ಚಳವಳಿ ನಿಲ್ಲದು~ ಎಂದು ಬಾಬಾ ಘೋಷಿಸಿದರು. ಕಾರಣವೇ ಇಲ್ಲದೆ ಅನಗತ್ಯವಾಗಿ ತಮ್ಮನ್ನು ಟೀಕಿಸುತ್ತಿರುವವರಿಗೆ ಬಾಬಾ ತಿರುಗೇಟು ಕೊಟ್ಟರು.

ಹಿಂದು ಸನ್ಯಾಸಿಗಳಾದ ಸಾಧ್ವಿ ರಿತಂಬರಾ, ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಮುಸ್ಲಿಂ- ಕ್ರಿಶ್ಚಿಯನ್ ಧಾರ್ಮಿಕ ಮುಖಂಡರು ವೇದಿಕೆಯ ಮೇಲೆ ಬಾಬಾ ಅವರ ಜತೆ ಕಾಣಿಸಿಕೊಂಡರು.ಎಲ್ಲ ಧರ್ಮಗಳ ಮುಖ್ಯಸ್ಥರನ್ನು ಶಿಷ್ಯರಿಗೆ ಪರಿಚಯಿಸುವ ಮೂಲಕ ರಾಂದೇವ್ ತಮ್ಮ ಚಳವಳಿ ಹಿಂದೆ ಆರ್‌ಎಸ್‌ಎಸ್- ಸಂಘ ಪರಿವಾರ ಇಲ್ಲ ಎಂಬುದನ್ನು ನಿರೂಪಿಸಲು ಪ್ರಯತ್ನಿಸಿದರು.

ಯೋಗ- ಭಜನೆ- ಪದಗಳ ನಡು ನಡುವೆ ತಮ್ಮ ಎಂದಿನ ಹಾಸ್ಯ ಬೆರೆಸಿದ ದಾಟಿಯಲ್ಲಿ ಮಾತನಾಡಿದ ಬಾಬಾ, `ಈ ಉಪವಾಸ ಸತ್ಯಾಗ್ರಹ ನಮ್ಮ ಸಹೋದರ- ಸಹೋದರಿಯರಿಗೆ ಆರೋಗ್ಯ ತಂದುಕೊಡುವ ಜತೆಗೆ ರಾಷ್ಟ್ರಕ್ಕೆ ಸಂಪತ್ತು ಬರಲಿದೆ ಎಂದರು.

ಶಿಷ್ಯರೊಬ್ಬರಿಂದ 11 ಲಕ್ಷದ ಚೆಕ್ ಸ್ವೀಕರಿಸಿದ ಬಾಬಾ, `ಈ ಫೋಟೋ ತೆಗೆದುಕೊಳ್ಳಿ. ಇದು ಕಪ್ಪು ಹಣವಲ್ಲ~ ಎಂದು ಹಾಸ್ಯದ ಮೂಲಕ ಟೀಕಾಕಾರರಿಗೆ ಚುಚ್ಚಿದರು. ಚಳವಳಿಗೆ ರಾಜಕೀಯ ಮುಖಂಡರು ಬೆಂಬಲ ಸೂಚಿಸಬಹುದು. ಭಾಷಣ ಮಾಡಲು ಅವಕಾಶವಿಲ್ಲ. ಭಾಷಣಕ್ಕೆ ಅವಕಾಶ ಕೊಟ್ಟರೆ ವಿವಾದ ಸೃಷ್ಟಿಯಾಗುತ್ತದೆ ಎಂದು ಸಲಹೆ ಮಾಡಿದರು.

`ಕಪ್ಪು ಹಣದ ವಿರುದ್ಧ ಸಮರ ಸಾರುವ ಮೂಲಕ ದೇಶವನ್ನು ಎಚ್ಚರಗೊಳಿಸಿದ್ದೇವೆ. ಈಗಾಗಲೇ 55 ಲಕ್ಷ ಕರೆಗಳು ಬಂದಿವೆ. ಇದು ಒಂದು ಕೋಟಿ ಮೀರಬಹುದು. ತಮ್ಮ ಹೋರಾಟಕ್ಕೆ ಜನ ಕೊಡುತ್ತಿರುವ ಬೆಂಬಲಕ್ಕೆ ಇದು ಸಾಕ್ಷಿ~ ಎಂದು ಸ್ಪಷ್ಟಪಡಿಸಿದರು.

ಸತ್ಯಾಗ್ರಹ ಬೆಂಬಲಿಸಿದ ಸಾಧು- ಸಂತರು ಯೋಗ ಗುರುಗಳನ್ನು ಟೀಕಿಸುತ್ತಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್  ಮೇಲೆ ಮುಗಿಬಿದ್ದರು. ಅತ್ಯಂತ ಕೆಟ್ಟ ರಾಜಕೀಯ ಭಾಷೆ ಬಳಸಿ ಸಿಂಗ್ ಅವರ ಮೇಲೆ `ವಾಗ್ದಾಳಿ~ ನಡೆಸಿದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ರಾಂದೇವ್ `ಯಾರನ್ನು ವೈಯಕ್ತಿಕವಾಗಿ ಟೀಕೆ ಮಾಡುವುದು ಬೇಡ. ನಮ್ಮ ಈ ಹೋರಾಟ ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧ ಅಲ್ಲ~ ಎಂದು ಕಿವಿ ಮಾತು ಹೇಳಿದರು.

ಗುರೂಜಿ ಮಾತು ಕೇಳಲು ರಾಜಧಾನಿಯ ಜನ ಬೆಳಗಿನ ಜಾವದಿಂದಲೇ ರಾಮಲೀಲಾಕ್ಕೆ ಆಗಮಿಸುತ್ತಿದ್ದರು. ಭಾಷಣ ಕೇಳಿದ ಬಳಿಕ ಬಹಳಷ್ಟು ಮಂದಿ ಹಿಂತಿರುಗುತ್ತಿದ್ದರು. ಉತ್ತರದಿಂದ ದಕ್ಷಿಣದವರೆಗೆ ಎಲ್ಲ ರಾಜ್ಯಗಳ ಪ್ರತಿನಿಧಿಗಳು ರಾಮಲೀಲಾಕ್ಕೆ ಬಂದಿದ್ದಾರೆ, ಬಾಬಾ ಕರೆಗೆ ಸ್ಪಂದಿಸಿದವರಲ್ಲಿ ಮಹಿಳೆಯರೇ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT