ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗೇಶ್ವರ್ ವಿರುದ್ಧ 14 ಕೇಸು ದಾಖಲು

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೆಗಾಸಿಟಿ (ಬೆಂಗಳೂರು) ಡೆವಲಪರ್ಸ್ ಅಂಡ್ ಬಿಲ್ಡರ್ಸ್‌ ಲಿಮಿಟೆಡ್‌ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಹಾಗೂ ಅವರ ಕುಟುಂಬ ಸದಸ್ಯರು ಸೇರಿದಂತೆ ಎಂಟು ಜನರ ವಿರುದ್ಧ ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವಾಲಯದ ಗಂಭೀರ ವಂಚನೆ ಪ್ರಕರಣಗಳ ತನಿಖಾ ಸಂಸ್ಥೆಯು (ಎಸ್‌ಎಫ್‌ಐಓ) ನಗರದ ಎಂಟನೇ ಎಸಿಎಂಎಂ ನ್ಯಾಯಾಲಯದಲ್ಲಿ ಗುರುವಾರ ಒಟ್ಟು 14 ಮೊಕದ್ದಮೆಗಳನ್ನು ದಾಖಲಿಸಿದೆ.

ಯೋಗೇಶ್ವರ್ (ಎಂಡಿಬಿಎಲ್‌ನ ವ್ಯವಸ್ಥಾಪಕ ನಿರ್ದೇಶಕ), ಅವರ ಪತ್ನಿ ಎನ್.ಮಂಜುಕುಮಾರಿ, ಸಹೋದರ ಸಿ.ಪಿ.ಗಂಗಾಧರೇಶ್ವರ್ (ಕಾರ್ಯನಿರ್ವಾಹಕ ನಿರ್ದೇಶಕ), ಬಾಮೈದ ಪಿ.ಮಹದೇವಯ್ಯ (ನಿರ್ದೇಶಕ), ಎಚ್.ಪಿ.ರಮೇಶ್ (ಕಾರ್ಯನಿರ್ವಾಹಕೇತರ ನಿರ್ದೇಶಕ), ಸಾಂಬಶಿವರಾವ್, ಅರುಣ್ ಚರಂತಿಮಠ್ (ಅಧ್ಯಕ್ಷ) ಮತ್ತು ಅವರ ಪತ್ನಿ ಸುಜಾತಾ ಚರಂತಿಮಠ್ ವಿರುದ್ಧ ಮೊಕದ್ದಮೆಗಳು ದಾಖಲಾಗಿವೆ.

ಎಸ್‌ಎಫ್‌ಐಓ ಪರ ವಕೀಲ ಬಿ.ಪಿ.ಪುಟ್ಟಸಿದ್ದಯ್ಯ ಅವರು ಸಲ್ಲಿಸಿದ ದೂರನ್ನು ಗುರುವಾರ ವಿಚಾರಣೆಗೆ ಸ್ವೀಕರಿಸಿದ ನ್ಯಾಯಾಧೀಶ ಕಿರಣ್‌ಕಿಣಿ ಅವರು ವಿಚಾರಣೆಯನ್ನು ಜೂನ್ 11ಕ್ಕೆ ಮುಂದೂಡಿದರು. ಮೆಗಾಸಿಟಿ (ಬೆಂಗಳೂರು) ಡೆವಲಪರ್ಸ್ ಅಂಡ್ ಬಿಲ್ಡರ್ಸ್‌ ಲಿಮಿಟೆಡ್‌ನ (ಎಂಡಿಬಿಎಲ್) ವಂಚನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ನೀಡಿದ್ದ ದೂರುಗಳನ್ನು ಆಧರಿಸಿ ಎಸ್‌ಎಫ್‌ಐಓ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಸಾಕಷ್ಟು ವಿವರಗಳನ್ನು ಸಂಗ್ರಹಿಸಿದ್ದರು.

1994ರ ಆಗಸ್ಟ್‌ನಲ್ಲಿ ಎಂಟಿಬಿಎಲ್ ಸಂಸ್ಥೆಯನ್ನು ಆರಂಭಿಸಿದ್ದ ಯೋಗೇಶ್ವರ್ ಮತ್ತು ಇತರೆ ಆರೋಪಿಗಳು ನಿವೇಶನ ನೀಡುವ ನೆಪದಲ್ಲಿ ಸುಮಾರು 60 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ. ಆ ಮೂಲಕ ಆರೋಪಿಗಳು ಹೂಡಿಕೆದಾರರ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
 
ನಿವೇಶನ ಹಾಗೂ ಫ್ಲಾಟ್‌ಗಳನ್ನು ನೀಡುವುದಾಗಿ ನಂಬಿಸಿ ಸುಮಾರು 9,600 ಜನರಿಂದ ಹಣ ಪಡೆದು ವಂಚಿಸಿದ್ದಾರೆ. ಅಲ್ಲದೇ ಕಂಪೆನಿ ಕಾಯ್ದೆಗಳನ್ನು ಸಹ ಉಲ್ಲಂಘಿಸಿದ್ದಾರೆ. ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಎರಡು ಸಾವಿರಕ್ಕೂ ಹೆಚ್ಚು ಪುಟಗಳಿರುವ 14 ಬುಕ್‌ಲೆಟ್‌ಗಳಲ್ಲಿ ವಂಚನೆಯ ವಿವರಗಳನ್ನು ಉಲ್ಲೇಖಿಸಲಾಗಿದೆ.

`ವಂಚನೆ, ನಂಬಿಕೆ ದ್ರೋಹ, ನಕಲಿ ದಾಖಲೆ ಪತ್ರ ಸೃಷ್ಟಿ, ಸುಳ್ಳು ಮಾಹಿತಿ ನೀಡಿ ವಂಚನೆ, ಸಾರ್ವಜನಿಕರ ಹಣ ದುರ್ಬಳಕೆ ಮತ್ತಿತರ ಆರೋಪಗಳಿಗೆ ಸಂಬಂಧಿಸಿದಂತೆ ಐಪಿಸಿ ಅನ್ವಯ ಆರು ಕ್ರಿಮಿನಲ್ ಪ್ರಕರಣ ಹಾಗೂ ಕಂಪೆನಿ ವ್ಯವಹಾರಗಳ ಕಾಯ್ದೆ ಉಲ್ಲಂಘನೆ ಸಂಬಂಧ ಎಂಟು ಪ್ರಕರಣಗಳನ್ನು ದಾಖಲಿಸಲಾಗಿದೆ~ ಎಂದು ವಕೀಲ ಪುಟ್ಟಸಿದ್ದಯ್ಯ `ಪ್ರಜಾವಾಣಿ~ಗೆ ತಿಳಿಸಿದರು.

`ಕಂಪೆನಿ ವ್ಯವಹಾರಗಳ ಕಾಯ್ದೆ ಉಲ್ಲಂಘಿಸಿರುವ ಸಂಬಂಧ ದಾಖಲಿಸಿರುವ ದೂರುಗಳ ವಿಚಾರಣೆಯ ದಿನಾಂಕವನ್ನು ನ್ಯಾಯಾಧೀಶರು ನಿಗದಿಪಡಿಸಿಲ್ಲ~ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT