ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆ ಪರಿಸರದಲ್ಲಿ ಆಕ್ರೋಶ

Last Updated 11 ಅಕ್ಟೋಬರ್ 2011, 9:15 IST
ಅಕ್ಷರ ಗಾತ್ರ

ಪಡುಬಿದ್ರಿ: ಕಲ್ಲಿದ್ದಲು ಆಧಾರಿಯ ನಂದಿಕೂರಿನ ಉಡುಪಿ ಪವರ್ ಕಾರ್ಪೊರೇಷನ್ ಸಂಸ್ಥೆ ಎರಡನೇ ಹಂತ ಆರಂಭಿಸಲು ಅನುಮತಿ ನೀಡುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿಕೆ ನೀಡಿರುವುದು ಸ್ಥಳೀಯ ಜನರಲ್ಲಿ ಆಕ್ರೋಶ, ಆತಂಕಕ್ಕೆ ಕಾರಣವಾಗಿದೆ.

ಒಂದು ವರ್ಷಗಳ ಹಿಂದೆ 600ಮೆ.ವಾ ವಿದ್ಯುತ್ ಉತ್ಪಾದನೆ ಆರಂಭಿಸಿದ ಯುಪಿಸಿಎಲ್ ಕಂಪೆನಿಗೆ 600 ಮೆ.ವಾ ಸಾಮರ್ಥ್ಯದ ಇನ್ನೊಂದು ಘಟಕ ಆರಂಭಿಸಲು ಹಲವಾರು ಅಡೆತಡೆಗಳು ಎದುರಾಗಿತ್ತು. ಒಂದನೇ ಹಂತ ಆರಂಭವಾದಂದಿನಿಂದಲೇ ಯೋಜನಾ ಪ್ರದೇಶದ ಸುತ್ತಮುತ್ತಲ ಪ್ರದೇಶದಲ್ಲಿ ಪರಿಸರ, ಜನರ ಹಾಗೂ ಜಾನುವಾರುಗಳ ಮೇಲೆ ಗಂಭೀರ ಸಮಸ್ಯೆ ಎದುರಾಯಿತು.
 
ಇದರಿಂದ ರೊಚ್ಚಿಗೆದ್ದ ಜನರಿಂದ ಹಲವಾರು ಭಾರೀ ಪ್ರತಿಭಟನೆ ನಡೆಸಿ ಕಂಪೆನಿ ಬಂದ್ ಮಾಡಲು. ಕಳೆದ 10ದಿನಗಳ ಹಿಂದೆಯೂ ಕಂಪೆನಿಯ ಎದುರು ಪ್ರತಿಭಟನೆ ನಡೆಸಿದ ಸ್ಥಳೀಯರು ಇದೇ ರೀತಿ ಸಮಸ್ಯೆ ತಂದೊಡ್ಡಿದಲ್ಲಿ 10ದಿನಗಳ ಒಳಗಾಗಿ ಕಂಪೆನಿಗೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಈ ನಡುವೆಯೇ ಸರ್ಕಾರ ಎರಡನೇ ಹಂತಕ್ಕೆ ಅನುಮತಿ ನೀಡಿದ್ದರಿಂದ ಸ್ಥಳೀಯರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.

ಅಕ್ಷಮ್ಯ ಅಪರಾಧ: `ರಾಜ್ಯ ಸರ್ಕಾರ ಯುಪಿಸಿಎಲ್ ಕಂಪೆನಿಗೆ ಎರಡನೇ ಹಂತಕ್ಕೆ ಅವಕಾಶ ನೀಡಿರುವುದು ದೊಡ್ಡ ತಪ್ಪು. ಈಗಾಗಲೇ ಕಂಪೆನಿಯು ಕಾನೂನು ಬಾಹಿರವಾಗಿ ಕಾರ್ಯಾಚರಿಸುತ್ತಿದೆ. ಕಂಪೆನಿಯಿಂದ ಈಗಾಗಲೇ ಪರಿಸರ ನಾಶವಾಗಿದೆ ಎಂಬುವುದನ್ನು ಕೂಡಾ ಪರಿಸರ ಇಲಾಖೆ ದೃಢಪಡಿಸಿದೆ. ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯದೆ ಮತ್ತೊಂದು ಹಂತವನ್ನು ಆರಂಭಿಸುತ್ತಿರುವುದು ಅಕ್ಷಮ್ಯ ಅಪರಾಧ~ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಹೆಗ್ಡೆ ಅಭಿಪ್ರಾಯ ಪಟ್ಟಿದ್ದಾರೆ.

ಬಣ್ಣ ಬದಲಾಯಿತು: `ಸದಾನಂದ ಗೌಡರು ಸಂಸದರಾಗಿದ್ದಾಗ ನೀಡಿದ ಹೇಳಿಕೆಗೂ, ಈಗ ಕಂಪೆನಿಗೆ ಅನುಮತಿ ನೀಡುವುದಾಗಿ ಹೇಳಿರುವುದಕ್ಕೂ ತಾಳೆಯಾಗುತ್ತಿಲ್ಲ. ಜನರೊಂದಿಗೆ ಇದ್ದೇವೆ ಎನ್ನುತ್ತಾ ಇನ್ನೊಂದು ಬಾಗಿಲಲ್ಲಿ ಕಂಪೆನಿಗೆ ಅನುಮತಿ ನೀಡಿದ್ದು ಎಷ್ಟುಮಾತ್ರಕ್ಕೂ ಸರಿಯಲ್ಲ. ಈ ಮೂಲಕ ಬಿಜೆಪಿ ಪಕ್ಷದ ನಿಜ ಬಣ್ಣ ಬಯಲಾದಂತಾಗಿದೆ~ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಅವಕಾಶ ಬೇಡ: `ಯೋಜನೆಯಿಂದ ನಿತ್ಯ ಹಲವು ಸಮಸ್ಯೆ ಎದುರಿಸುತ್ತಿದ್ದೇವೆ, ಕೃಷಿ ಭೂಮಿಯಂತೂ ನಾಶವಾಗಿದೆ. ಉಪ್ಪು ನೀರಿನ ಸಮಸ್ಯೆಗೆ ಕೊನೆ ಇಲ್ಲದಾಗಿದೆ. ಇನ್ನೊಂದೆಡೆ ಹಾರು ಬೂದಿಯ ಸಮಸ್ಯೆಯಲ್ಲಿ ಇದ್ದೇವೆ. ಅಲ್ಲದೆ ನಮ್ಮ ಪರಿಸರದಲ್ಲಿ ಹಲವರು ಅಸ್ತಮಾ, ಚರ್ಮರೋಗದಂತಹ ಹಲವು ರೋಗಗಳು ಈಗ ಕಾಣಿಸಿಕೊಳ್ಳುತ್ತಿವೆ. ಇಷ್ಟೆಲ್ಲಾ ಆದರೂ ಇದೀಗ ಎರಡನೇ ಘಟಕಕ್ಕೆ ಅನುಮತಿ ನೀಡಿದ್ದು ಸರಿಯಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತು ಸ್ಥಳೀಯ ಜನರ ಹಿತದೃಷ್ಟಿಯಿಂದ ಅವಕಾಶ ನೀಡದೆ ಕಂಪೆನಿಯನ್ನು ಶಾಶ್ವತ ಮುಚ್ಚಬೇಕು~ ಎಂಬುದು ಅದಮಾರು ನಿವಾಸಿ ದಿನೇಶ್ ಎಸ್ ಅಭಿಪ್ರಾಯ.

ಹುಸಿಯಾದ ಸದಾನಂದ ಗೌಡ ಭರವಸೆ

ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿ ಆಗುವ 10ದಿನ ಮೊದಲು ಯುಪಿಸಿಎಲ್ ಯೋಜನೆಯಿಂದ ಸಮಸ್ಯೆಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ, ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದರು. ಜನರಿಗೆ ಇಷ್ಟೆಲ್ಲಾ ತೊಂದರೆ ನೀಡುವ ಈ ಕಂಪೆನಿ ನಮಗೆ ಬೇಡ. ನಿಮ್ಮಂದಿಗೆ ನಾನೂ ಕೂಡಾ ಹೋರಾಟ ನಡೆಸುತ್ತೇನೆ ಎಂದಿದ್ದರು. ಅಲ್ಲದೆ ಬೆಂಗಳೂರಿನ ಪರಿಸರ ಇಲಾಖೆಯ ಅಧಿಕಾರಿಗಳಿಗೆ ವರದಿ ತಯಾರಿಸಲು ಸೂಚನೆ ನೀಡಿದ್ದರು.ಅವರ ಆದೇಶದಂತೆ ವಿಮಾನದಲ್ಲಿ ಬಂದ ಅಧಿಕಾರಿಗಳು ಎರಡು ದಿನ ಯೋಜನಾ ಪ್ರದೇಶದಲ್ಲಿ ಅಧ್ಯಯನ ನಡೆಸಿ ಯೋಜನೆ ಲೋಪಗಳ ಬಗ್ಗೆ ವರದಿ ನೀಡಿದ್ದರು.

ಕಳೆದ ವಾರ ಯುಪಿಸಿಎಲ್ ಯೋಜನಾ ಪ್ರದೇಶದಲ್ಲಿರುವ ಕೊಳಚೂರು ಗರಡಿ ಹಾಗೂ ಕೊಳಚೂರು ಮನೆಗೆ ಭೇಟಿ ನೀಡಿದ್ದ ಸ್ಥಳೀಯ ಶಾಸಕ ಲಾಲಾಜಿ ಮೆಂಡನ್‌ಕೂಡಾ `ಯುಪಿಸಿಎಲ್ ಯೋಜನೆಯಿಂದ ಸ್ಥಳೀಯ ಜನರಿಗೆ ನಿತ್ಯ ಸಮಸ್ಯೆ ಉಂಟಾಗುತ್ತಿರುವುದರಿಂದ ರಾಜ್ಯ ಸರ್ಕಾರ ಪರಿಸರ ಇಲಾಖೆಯ ವರದಿಯಂತೆ ಎರಡನೇ ಹಂತ ಆರಂಭಿಸಲು ಅನುಮತಿ ನೀಡಿಲ್ಲ~ ಎಂದಿದ್ದರು. ಜನಪ್ರತಿನಿಧಿಗಳು ಭರವಸೆಯಂತೆ ನಡೆದುಕೊಳ್ಳದಿರುವುದು ಸ್ಥಳೀಯರನ್ನು ಮತ್ತಷ್ಟು ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT