ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆ ಮಾಹಿತಿ ನೀಡಲು ಜನಪ್ರತಿನಿಧಿಗಳ ಆಗ್ರಹ

ಚಳ್ಳಕೆರೆ: ತಾಲ್ಲೂಕು ಪಂಚಾಯ್ತಿಯಲ್ಲಿ ಸಾಮಾನ್ಯ ಸಭೆ
Last Updated 15 ಡಿಸೆಂಬರ್ 2012, 6:48 IST
ಅಕ್ಷರ ಗಾತ್ರ

ಚಳ್ಳಕೆರೆ: ಕೃಷಿ ಇಲಾಖೆ ವತಿಯಿಂದ 2012-13ನೇ ಸಾಲಿನಲ್ಲಿ ರೈತರಿಗೆ ಅನುಕೂಲವಾಗುವಂತೆ ಬೀಜ ಗ್ರಾಮ ಯೋಜನೆಯನ್ನು ಜಾರಿಗೆ ತರಲಾಗಿದೆ. ಬರಪೀಡಿತ ಪ್ರದೇಶದಲ್ಲಿ ಮುಂದಿನ ಮುಂಗಾರು ಬಿತ್ತನೆಗೆ ಬಿತ್ತನೆ ಬೀಜದ ಕೊರತೆ ನೀಗಿಸಲು ಈ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಜಿ.ಎಸ್. ಸ್ಫೂರ್ತಿ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಇಲಾಖೆ ಪ್ರಗತಿ ವರದಿ ವಿವರಿಸುತ್ತಾ ಮಾತನಾಡಿದರು.ಈ ಯೋಜನೆಯಿಂದ ರೈತರೇ ಬಿತ್ತನೆ ಬೀಜವನ್ನು ಬೆಳಯಬೇಕು. ಇಲಾಖೆ ಇಂತಹ ಬೀಜಗಳನ್ನು ಕೊಂಡು ರಿಯಾಯಿತಿ ದರದಲ್ಲಿ ರೈತರಿಗೆ ವಿತರಣೆ ಮಾಡಲಾಗುವುದು.

ನೀರಾವರಿ ಜಮೀನು ಇರುವವರು ಇಂತಹ ಯೋಜನೆಗೆ ಅರ್ಹರು. ರಾಷ್ಟ್ರೀಯಾ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಒಕ್ಕಣೆ ಕಣ ಹಾಗೂ ಎರೆಹುಳು ತೊಟ್ಟಿ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಇದೆ ಎಂದು ತಿಳಿಸಿದರು.

ಸದಸ್ಯ ಸತ್ಯಣ್ಣ ಮಾತನಾಡಿ, ರೈತರಿಗೆ ವಿತರಿಸಬೇಕಾದ ತಾಡಪಾಲುಗಳು ಇಲಾಖೆಗೆ ಬಂದರೂ ಜನಪ್ರತಿನಿಧಿಗಳಿಗೆ ಮಾಹಿತಿ ನೀಡುವುದಿಲ್ಲ. ಸಭೆಯಲ್ಲಿ ವರದಿ ಓದಿ ಹೋಗುವುದನ್ನು ಮಾತ್ರ ಕೃಷಿ ಇಲಾಖೆ ಅಧಿಕಾರಿಗಳು ರೂಢಿಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಟಿ. ತಿಪ್ಪೇಶ್, ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಗಳಿಗೆ ಇಲಾಖೆ ವತಿಯಿಂದ ಸಿಗುವ ಸೌಲಭ್ಯಗಳ ಮಾಹಿತಿಯನ್ನು ಎಲ್ಲರಿಗೂ ತಿಳಿಸಬೇಕು ಎಂದರು.

ರೈತರು ಕೆಲಸ ಇಲ್ಲದೇ ಗುಳೇ ಹೋಗುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಕೊಡಲು ಪಂಚಾಯ್ತಿ ಪಿಡಿಒಗಳಿಗೆ ಏನಾಗಿದೆ? ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದರೆ, ಪ್ರತಿಯೊಂದು ಊರಲ್ಲೂ ಕೆಲಸ ಹುಡುಕಿಕೊಂಡು ಜನರು ಬೆಂಗಳೂರು ಕಡೆಗೆ ಹೋಗಿದ್ದಾರೆ. ಸಭೆಯಲ್ಲಿ ಬರೀ ಭರವಸೆಗಳನ್ನು ನೀಡಬೇಡಿ. ಕೆಲಸ ಮಾಡಿ ಎಂದು ಜಾಜೂರು ಕ್ಷೇತ್ರದ ಸದಸ್ಯ ಯು. ಮಲ್ಲಿಕಾರ್ಜುನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಳಗೆರೆ ಕ್ಷೇತ್ರದ ಸದಸ್ಯ ಜೈರಾಂ ಮಾತನಾಡಿ, ಜನಪ್ರತಿನಿಧಿಗಳ ಗಮನಕ್ಕೆ ಬಾರದೇ ಗ್ರಾಮಸಭೆ ಮಾಡಲಾಗುತ್ತಿದೆ. ಕೂಲಿಕಾರರಿಗೆ ಅನುಕೂಲ ಆಗುವಂತೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿಯಲ್ಲಿ ಕೆಲಸಗಳನ್ನು ಕೊಡುತ್ತಿಲ್ಲ ಎಂದು ಆರೋಪಗಳ ಸುರಿಮಳೆಗೈದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಯಾರು ಹೇಳಿದ್ದು? ಗ್ರಾಮ ಸಭೆಗೆ ನೀವೇ ಹಾಜರಾಗಿಲ್ಲ. ನೀವು ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಇಒ ತಿಪ್ಪೇಸ್ವಾಮಿ ಕೊಂಚ ಏರಿದ ದನಿಯಲ್ಲಿ ಮಾತನಾಡಿದರು. ಇದರಿಂದ ಸಭೆಯಲ್ಲಿ ಸದಸ್ಯ ಜೈರಾಂ ಹಾಗೂ ಇಒ ನಡುವೆ ಮಾತಿಗೆ ಮಾತು ಬೆಳೆದು ಜಟಾಪಟಿಗೆ ಇಳಿದ ಪ್ರಸಂಗವೂ ಜರುಗಿತು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸದಸ್ಯರಾದ ಸಿ.ಟಿ. ಶ್ರೀನಿವಾಸ್ ಹಾಗೂ ಜೆ. ತಿಪ್ಪೇಶ್‌ಕುಮಾರ್ ಇಬ್ಬರನ್ನೂ ಸಮಾಧಾನ ಪಡಿಸಿ, ಸದಸ್ಯರನ್ನು ಒಮ್ಮತದಿಂದ ತೆಗೆದುಕೊಂಡು ಹೋಗಬೇಕು ಬದಲಾಗಿ ಜನಪ್ರತಿನಿಧಿಗಳ ಮೇಲೆ ಹಾರಿಹಾಯುವುದನ್ನು ಬಿಟ್ಟು ಸಮಾಧಾನದಿಂದ ಉತ್ತರಿಸಬೇಕು ಎಂದು ಇಒ ಅವರಿಗೆ ತಿಳಿ ಹೇಳಿದರು.

ಪಿ. ಮಹಾದೇವಪುರ ಸದಸ್ಯ ನರಸಿಂಹಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಎಷ್ಟು ಮಂದಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಎಷ್ಟು ಸೌಲಭ್ಯಗಳು ದೊರೆತಿವೆ? ಅಪಾಯಕಾರಿ ಕೆಲಸಗಳಲ್ಲಿ ತೊಡಗಿರುವ ಬಾಲಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆಯೇ? ಎಂದು ಪ್ರಶ್ನಿಸಿದರು.   

ಕಾರ್ಮಿಕ ಇಲಾಖೆ ಅಧಿಕಾರಿ ಷಫೀವುಲ್ಲಾ ಪ್ರತಿಕ್ರಿಯಿಸಿ, ಮುಂದಿನ ಸಭೆಯಲ್ಲಿ ಎಲ್ಲಾ ಮಾಹಿತಿ ನೀಡುವುದಾಗಿ ತಿಳಿಸಿದರು. ನಂತರ ಸಿದ್ದೇಶ್ವರನದುರ್ಗ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ಪಟ್ಟಭದ್ರರು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಹವಣಿಸತ್ತಿದ್ದಾರೆ.

ಇದರಿಂದಾಗಿ ಗ್ರಾಮದಲ್ಲಿ ಯಾವುದೇ ಸಮಯದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಗಳು ಸಂಭವಿಸಬಹುದಾದ ಸನ್ನಿವೇಶ ನಿರ್ಮಾಣ ಆಗಿದೆ. ಒಂದು ತಿಂಗಳಿನಿಂದ ಗ್ರಾಮದಲ್ಲಿ ಪೊಲೀಸ್ ತುಕಡಿಯೂ ಇದೆ. ಅದ್ದರಿಂದ, ಕೂಡಲೇ ತಾಲ್ಲೂಕು ಆರೋಗ್ಯಾಧಿಕಾರಿಗಳು ಸಮಸ್ಯೆ ಬಗೆಹರಿಸಬೇಕಾಗಿ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಚಿದಾನಂದಪ್ಪ, ಉಪಾಧ್ಯಕ್ಷೆ ವಿನೋದಾಬಾಯಿ, ಇಒ ತಿಪ್ಪೇಸ್ವಾಮಿ, ವ್ಯವಸ್ಥಾಪಕ ನಾಗಪ್ಪ, ಮೈಲಾರಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT