ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧರ ಊರಲ್ಲಿ ನೀರವ ಮೌನ

Last Updated 9 ಜನವರಿ 2013, 19:59 IST
ಅಕ್ಷರ ಗಾತ್ರ

ಜಮ್ಮು (ಪಿಟಿಐ): ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನಿ ಸೈನಿಕರಿಂದ ಹತ್ಯೆಗೊಳಗಾದ ಇಬ್ಬರು ಭಾರತೀಯ ಯೋಧರ ಮೃತ ದೇಹಗಳನ್ನು ರಾಜಧಾನಿ ದೆಹಲಿಗೆ ಬುಧವಾರ ತರಲಾಯಿತು. ರಾಷ್ಟ್ರಧ್ವಜದಿಂದ ಸುತ್ತಿದ ಹೇಮರಾಜ್ (29) ಮತ್ತು ಸುಧಾಕರ್ ಸಿಂಗ್ (28) ಅವರ ಮೃತದೇಹಗಳನ್ನು ಪೂಂಛ್ ಜಿಲ್ಲೆಯ ಗಡಿಯಿಂದ ರಾಜೌರಿಗೆ ಬೆಳಿಗ್ಗೆ ತರಲಾಗಿತ್ತು.

ರಾಜೌರಿಯಲ್ಲಿ, ಡೆಪ್ಯುಟಿ ಜನರಲ್ ಆಫೀಸರ್ ಕಮಾಂಡಿಂಗ್ (ಡಿವೈ- ಜಿಒಸಿ) ಬ್ರಿಗೇಡಿಯರ್ ಜೆ.ಸಿ.ತಿವಾರಿ ಅವರು ಮೃತದೇಹಗಳ ಮೇಲೆ ಹೂಗುಚ್ಛವಿಟ್ಟು ಅಂತಿಮ ನಮನ ಸಲ್ಲಿಸಿದರು. ನಂತರ ಹೆಲಿಕಾಪ್ಟರ್ ಮೂಲಕ ಜಮ್ಮು ವಿಮಾನ ನಿಲ್ದಾಣಕ್ಕೆ ತಂದು, ದೆಹಲಿಗೆ ಕಳುಹಿಸಿಕೊಡಲಾಯಿತು. ಹೇಮರಾಜ್, ಉತ್ತರ ಪ್ರದೇಶದ ಮಥುರಾ ಜಿಲ್ಲೆಯವರು. ಸುಧಾಕರ್ ಸಿಂಗ್ ಮಧ್ಯಪ್ರದೇಶದ ಸಿದಿ ಜಿಲ್ಲೆಗೆ ಸೇರಿದವರು. 

ಮಡುಗಟ್ಟಿದ ಶೋಕ
ಲಖನೌ (ಐಎಎನ್‌ಎಸ್):
ತಮ್ಮೂರಿನ ಮಗನನ್ನು ಕಳೆದುಕೊಂಡ ಮಥುರಾ ಜಿಲ್ಲೆಯ ಶೇರ್‌ನಗರ ಹಳ್ಳಿಯಲ್ಲಿ ಈಗ ನೀರವ ಮೌನ. ಅವರೆಲ್ಲ ಈಗ ಮಗನ ಕಳೇಬರವನ್ನು ಎದುರು ನೋಡುತ್ತಿದ್ದಾರೆ. ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನ ಸೈನಿಕರಿಂದ ಹತ್ಯೆಯಾದ ಯೋಧ ಹೇಮ್‌ರಾಜ್  ಮೂಲತಃ ಇದೇ ಶೇರ್‌ನಗರದವರು. ರಜಪುತಾನ್ ರೈಫಲ್ಸ್‌ನ 13ನೇ ಬೆಟಾಲಿಯನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೇಮರಾಜು ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳು ಇದ್ದಾರೆ.

ದೆಹಲಿಯ ಸೇನಾ ಮುಖ್ಯ ಕಚೇರಿಯಿಂದ `ಮಗನ ಸಾವಿನ ಸುದ್ದಿ ಕೇಳಿದ ಮೇಲೆ ಊರಿನಲ್ಲಿ ಮೌನದಷ್ಟೇ ಆಕ್ರೋಶವೂ ವ್ಯಕ್ತವಾಗುತ್ತಿದೆ' ಎಂದು ಮಥುರಾದ ಹೆಚ್ಚುವರಿ ಜಿಲ್ಲಾಧಿಕಾರಿ ಅನಿಲ್ ಮಿಶ್ರಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸ್ವಗ್ರಾಮದಲ್ಲಿ ಇಂದು ಅಂತ್ಯಕ್ರಿಯೆ
ಸಿದಿ (ಮಧ್ಯಪ್ರದೇಶ)(ಪಿಟಿಐ)
: ಪಾಕಿಸ್ತಾನಿ ಸೈನಿಕರಿಂದ ಹತ್ಯೆಯಾದ ಯೋಧ ಸುಧಾಕರ್ ಸಿಂಗ್ ಅವರ ದೇಹವನ್ನು ಇಲ್ಲಿನ ಚೌರ‌್ಹಾತ್ ಸಮೀಪದ ಸ್ವಗ್ರಾಮ ಧರ್‌ಹಿಯಾ ಹಳ್ಳಿಗೆ ಬುಧವಾರ ಸಂಜೆ ತರಲಾಗುತ್ತಿದ್ದು, ಗುರುವಾರ ಬೆಳಿಗ್ಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಸಂಬಂಧ ಮಧ್ಯಪ್ರದೇಶ ಪೊಲೀಸ್ ಅಧಿಕಾರಿಗಳು  ಧರ್‌ಹಿಯಾಗೆ ದೌಡಾಯಿಸಿದ್ದು, ಅಂತ್ಯಕ್ರಿಯೆಗೆ ಬೇಕಾದ ಸಿದ್ಧತೆ ಕೈಗೊಳ್ಳುತ್ತಿದ್ದಾರೆ ಎಂದು  ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಧರ್‌ಹಿಯಾ ಹಳ್ಳಿಯಲ್ಲಿ ಹುಟ್ಟಿದ 29ರ ಹರೆಯದ ಸುಧಾಕರ್ ಸಿಂಗ್ 2002ರಲ್ಲಿ ಭಾರತೀಯ ಸೇನೆ ಸೇರಿದ್ದರು. ರಜಪುತಾನ್ ರೈಫಲ್ಸ್ ರೆಜಿಮೆಂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೃತ ಸುಧಾಕರ್ ಸಿಂಗ್ ಅವರು ಪತ್ನಿ ದುಗ್ಸಾಂಗ್ ಮತ್ತು ನಾಲ್ಕು ತಿಂಗಳ ಎಳೆಯ ಪುತ್ರ ಇದ್ದಾರೆ.

ಪಾಕಿಸ್ತಾನ ಸೈನಿಕರು ಸೋಮವಾರ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿರುವ ಗಡಿ ನಿಯಂತ್ರಣ ರೇಖೆಯನ್ನು ಅಕ್ರಮವಾಗಿ ನುಸುಳಿ ಬಂದು ಸುಧಾಕರ್ ಸಿಂಗ್ ಮತ್ತು ಹೇಮರಾಜ್ ಎಂಬ ಇಬ್ಬರು ಯೋಧರನ್ನು ಹತ್ಯೆ ಮಾಡಿದ್ದರು. ಅದರಲ್ಲಿ ಹೇಮರಾಜ್ ಅವರ ಶಿರಚ್ಛೇದ ಮಾಡಿ, ರುಂಡವನ್ನು ತಾವೇ ಕೊಂಡೊಯ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT