ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗನ್ ಸ್ಟೈಲ್‌ನಲ್ಲಿ ಗಂಗಮ್ಮನ ಕುಣಿತ

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಇದು ಗಂಗ್ನಮ್ ಸ್ಟೈಲ್ ಅಲ್ಲ, ‘ಗಂಗಮ್ಮನ ಸ್ಟೈಲ್’ ಎಂದರು ಗುರುಕಿರಣ್. ಗಂಗ್ನಮ್ ಸ್ಟೈಲ್ ಎಂದಾಗ ಪುಟ್ಟ ಮಕ್ಕಳೂ ಹೆಜ್ಜೆ ಹಾಕುತ್ತವೆ. ಇನ್ನು ನಮ್ಮವಳೇ ಆದ ಗಂಗಮ್ಮನ ಸ್ಟೈಲ್ ನೃತ್ಯ ಕಂಡು ಕುಣಿಯದೆ ಇರುತ್ತಾರೆಯೇ ಎನ್ನುವ ಹುಮ್ಮಸ್ಸಿನಲ್ಲಿ ಅವರು ಕುಣಿಸುವ ಹಾಡೊಂದನ್ನು ಸೃಷ್ಟಿಸಿದ್ದಾರೆ. ಕನ್ನಡದ ರಂಗನ ಸ್ಟೈಲ್‌ನ ಈ ಹಾಡಿಗೆ ಹೆಜ್ಜೆಹಾಕಲು ಉತ್ತರ ದಿಕ್ಕಿನಿಂದ ಗಂಗಮ್ಮ ಬಂದಿದ್ದಾಳೆ.

ಶೀರ್ಷಿಕೆಯ ಕಾರಣಕ್ಕೆ ಗಮನ ಸೆಳೆದಿರುವ ‘ರಂಗನ್ ಸ್ಟೈಲ್’ ಚಿತ್ರದತ್ತ ಜನರನ್ನು ಆಕರ್ಷಿಸಲು ಈಗಾಗಲೇ ಚಿತ್ರತಂಡ ಕಸರತ್ತುಗಳನ್ನು ಪ್ರಾರಂಭಿಸಿದೆ. ನಟ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಹೊಸಬರ ಚಿತ್ರಕ್ಕೆ ಬಲ ತಂದಿದ್ದರೆ, ದೇಶವಿದೇಶಗಳಲ್ಲಿ ಜನಪ್ರಿಯತೆ ಗಳಿಸಿರುವ ‘ಝಲಕ್ ದಿಕ್ಲಾಜ’ ಖ್ಯಾತಿಯ ನೃತ್ಯಪಟು ಭಾರತಿ ಸಿಂಗ್ ‘ಗಂಗಮ್ಮನ ಸ್ಟೈಲ್’ ಹಾಡಿಗೆ ಮೈ ಭಾರ ಮರೆತು ಕುಣಿದಿದ್ದಾರೆ.

ಈ ಹಾಡಿನ ಪರಿಕಲ್ಪನೆ, ಸಾಹಿತ್ಯ, ಸಂಗೀತ ನಿರ್ದೇಶನ ಗುರುಕಿರಣ್ ಅವರದ್ದು. ಹೊಸಬರ ಚಿತ್ರಕ್ಕೆ ಅನಗತ್ಯ ವೆಚ್ಚ ಮಾಡುವುದು ಬೇಡ ಎಂದುಕೊಂಡಿದ್ದ ಗುರುಕಿರಣ್, ನಿರ್ಮಾಪಕರ ಹಟಕ್ಕೆ ಮಣಿದು ಶ್ರೇಯಾ ಘೋಷಾಲ್, ಸೋನು ನಿಗಮ್‌ ಅವರಿಂದ ಹಾಡಿಸಿದ್ದಾರಂತೆ.

ಮೊದಲ ಬಾರಿಗೆ ನಿರ್ದೇಶಕನ ಟೊಪ್ಪಿ ಧರಿಸಿರುವ ಪ್ರಶಾಂತ್ ತಮ್ಮ ಬಹುಕಾಲದ ಕನಸು ಈಡೇರುತ್ತಿರುವ ಖುಷಿಯಲ್ಲಿದ್ದರು. ಸೀಡಿ ಅಂಗಡಿಯಲ್ಲಿ ಕೆಲಸ ಮಾಡುವ ಯುವಕನೊಬ್ಬನ ಪ್ರೇಮಕಥೆಯನ್ನು ಅವರು ಚಿತ್ರದಲ್ಲಿ ಹೇಳಿದ್ದಾರಂತೆ. ನಿರ್ದೇಶಕರಾಗಿ ಪ್ರಶಾಂತ್‌ಗೆ ಒಳ್ಳೆಯ ಭವಿಷ್ಯವಿದೆ ಎನ್ನುವುದು ಸಂಕಲನಕಾರ ಸೌಂದರ್‌ರಾಜ್ ಅನಿಸಿಕೆ ಮತ್ತು ಹಾರೈಕೆ.

ಎಂ.ಡಿ. ಶ್ರೀಧರ್ ಮುಂತಾದ ನಿರ್ದೇಶಕರ ಬಳಿ ಕೆಲಸ ಮಾಡಿರುವ ಅನುಭವವಿರುವ ಪ್ರಶಾಂತ್, ‘ಚೆಲ್ಲಾಟ’ ಚಿತ್ರದ ವೇಳೆ ‘ಮುಂದೆ ನಾನು ಸಿನಿಮಾ ಮಾಡಿದರೆ, ನೀವೇ ಸಂಗೀತ ನಿರ್ದೇಶನ ಮಾಡಬೇಕು’ ಎಂದು ಗುರುಕಿರಣ್‌ಗೆ ಹೇಳಿದ್ದರಂತೆ. ಅಲ್ಲದೆ ‘ಜಾಲಿಡೇಸ್’ ಸಂದರ್ಭದಲ್ಲಿ ನಟ ಪ್ರದೀಪ್ ಜೊತೆಗೂ ಒಪ್ಪಂದ ಮಾಡಿಕೊಂಡಿದ್ದರು. ಸಿನಿಟೆಕ್ ಸೂರಿ, ಪ್ರಶಾಂತ್ ಆಸೆಯಂತೆ ಕ್ಯಾಮೆರಾ ಕಣ್ಣಾಗಿದ್ದಾರೆ.

ಸಂಭಾಷಣಾಕಾರ ಮಂಜು ಮಾಂಡವ್ಯ, ‘ಇದು ಸಾಮಾನ್ಯ ಪ್ರೇಮಕಥೆಗಳಿಗಿಂತ ವಿಭಿನ್ನ’ ಎಂದರು. ನಾಯಕನಟ ಪ್ರದೀಪ್ ಅವರಿಗಾಗಿಯೇ ಸಂಭಾಷಣೆಯಲ್ಲಿ ಹೊಸ ಪ್ರಯೋಗಗಳನ್ನು ಅವರು ನಡೆಸಿದ್ದಾರಂತೆ.

ತಬಲಾ ನಾಣಿ ಚಿತ್ರದುದ್ದಕ್ಕೂ ನಾಯಕನ ಜೊತೆ ಕಾಣಿಸಿಕೊಳ್ಳುತ್ತಾರೆ. ಈ ಬಗೆಯ ಪಾತ್ರ ತಮಗೆ ವಿಶೇಷವೇನಲ್ಲ ಎಂಬ ಭಾವ ಅವರ ಮಾತಿನಲ್ಲಿತ್ತು. ‘ನಾಯಕನಿಗೆ ಜೋಡಿ ಕೊಡುತ್ತಾರೆ. ಆದರೆ ನನಗೆ ಜೋಡಿಯೇ ಇಲ್ಲ. ಕೊಟ್ಟರೂ ಮುಖ ಮುಚ್ಚಿಸಿರುತ್ತಾರೆ’ ಎಂದು ‘ವಿಕ್ಟರಿ’ ಚಿತ್ರದ ತಮ್ಮ ಪಾತ್ರವನ್ನು ನೆನಪಿಸಿಕೊಂಡು ನಾಣಿ ನಕ್ಕರು.

ಕರಾವಳಿ ತೀರದ ಮೂವರು ಸಹೋದರರು ‘ಆರೇಂಜ್ ಬ್ರದರ್ಸ್’ ಹೆಸರಿನಲ್ಲಿ ಚಿತ್ರ ನಿರ್ಮಿಸಿದ್ದಾರೆ. ನವೆಂಬರ್ ಮೊದಲ ವಾರದಲ್ಲಿ ‘ರಂಗನ್ ಸ್ಟೈಲ್’ ಚಿತ್ರವನ್ನು ತೆರೆಗಾಣಿಸುವುದು ಅವರ ಉದ್ದೇಶ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT