ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ನಟ

Last Updated 11 ಸೆಪ್ಟೆಂಬರ್ 2011, 7:20 IST
ಅಕ್ಷರ ಗಾತ್ರ

ರಂಗಭೂಮಿಯಲ್ಲಿ ನಿರಂತರವಾಗಿ ಹಗಲಿರುಳು ದುಡಿದು ಪರದೆಯ ಹಿಂದಕ್ಕೆ ಸರಿದವರು ಹಿರಿಯೂರು ತಾಲ್ಲೂಕಿನ ಪರಮೇನಹಳ್ಳಿಯ ಪಟೇಲ್ ತಿಪ್ಪೇಸ್ವಾಮಿ.

1957ರಿಂದ ಬಾಲ ನಟನಾಗಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿ ವೈವಿಧ್ಯಮಯ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಗಮಸೆಳೆದವರು ತಿಪ್ಪೇಸ್ವಾಮಿ.

ಸೊಂಡೆಕೆರೆಯ ಮಂಜುನಾಥೇಶ್ವರ ನಾಟಕ ಸಂಘ, ಧಾರವಾಡ ಜಿಲ್ಲೆಯ ನರೇಗಲ್‌ನ ಯಡಿಯೂರು ಸಿದ್ಧಲಿಂಗೇಶ್ವರ ನಾಟ್ಯ ಸಂಘ, ದಾವಣಗೆರೆಯ ಜಯಲಕ್ಷ್ಮೀ ನಾಟಕ ಸಂಘ, ಚಿತ್ರದುರ್ಗದ ಕುಮಾರೇಶ್ವರ ನಾಟಕ ಸಂಘ, ಕೆಬಿಆರ್ ಡ್ರಾಮಾ ಕಂಪೆನಿ, ಗುಬ್ಬಿ ಚನ್ನಬಸವೇಶ್ವರ ನಾಟಕ ಸಂಘ, ವಿಶ್ವಭಾರತಿ ಕಲಾ ಸಂಘಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಾಜ್ಯಾದ್ಯಂತ ನಡೆದ ನಾಟಕ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ.

ಐತಿಹಾಸಿಕ, ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿರುವ ತಿಪ್ಪೇಸ್ವಾಮಿ ರೇಣುಕಾ ಮಹಾತ್ಮೆ, ಮೈಸೂರು ಹುಲಿ ಟಿಪ್ಪು ಸುಲ್ತಾನ್, ಸಂತ ಶಿಶುನಾಳ ಷರೀಫ್, ರಾಜಾ ಹರೀಶಚಂದ್ರ, ಮುಂಡೆ ಮಗ, ಧರ್ಮದೇವತೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿ ಗಮನಸೆಳೆದವರು.

`ಭಂಡ ಬಡ್ಡಿ ಮಗ~ ನಾಟಕದಲ್ಲಿ ಧೀರೇಂದ್ರ ಗೋಪಾಲ್ ಜತೆ, ಗೌಡ್ರ ಗದ್ಲದಲ್ಲಿ ಸುಧೀರ್ ಜತೆ ಅಭಿನಯಿಸಿರುವ ಪಟೇಲ್ ತಿಪ್ಪೇಸ್ವಾಮಿ ಅವರು, 1983ರಿಂದ 2006ರವರೆಗೆ ಸಕ್ರಿಯವಾಗಿ ವೃತ್ತಿರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಬರಗೂರು ರಾಮಚಂದ್ರ ನಿರ್ದೇಶನಕ `ಶಬರಿ~ ಚಲನಚಿತ್ರ ತಳವಾರ ನಾಯಕನ ಪಾತ್ರದಲ್ಲಿ ಅಭಿನಯಿಸಲು ಅವಕಾಶ ದೊರೆತಿತ್ತು.

ರಂಗಭೂಮಿಯ ಹಳೇಯ ಮತ್ತು ಇಂದಿನ ಸ್ಥಿತಿಗತಿ ಕುರಿತು ತಮ್ಮ ಅನುಭವಗಳನ್ನು ಪಟೇಲ್ ತಿಪ್ಪೇಸ್ವಾಮಿ, `ಪ್ರಜಾವಾಣಿ~ ಜತೆ ಹಂಚಿಕೊಂಡಿದ್ದಾರೆ.

* ರಂಗಭೂಮಿ ಗೀಳು ಬೆಳೆದಿದ್ದು ಹೇಗೆ?
ಗುರುಗಳಾದ ಜಗನ್ನಾಥಪ್ಪ ಮತ್ತು ತಿಪ್ಪೇರುದ್ರಪ್ಪ ಅವರು ಮಾರ್ಗದರ್ಶನ ನೀಡಿದರು. ನಮ್ಮ ತಂದೆಯೂ ಹವ್ಯಾಸಿ ಕಲಾವಿದರು. ಹೀಗಾಗಿ ನಾಟಕಗಳ ಬಗ್ಗೆ ಆಸಕ್ತಿ ಬೆಳೆಯಿತು. ಬಾಲಕನಾಗಿದ್ದಲೇ ನಾಟಕಗಳಲ್ಲಿ ಅಭಿನಯಿಸಿದೆ. ನಂತರ ಹಲವಾರು ನಾಟಕ ಸಂಘಗಳಲ್ಲಿ ಪಾಲ್ಗೊಂಡಿದ್ದೆ. ಎಚ್.ಎಂ. ನಾಯಕ ನಾಟಕದಲ್ಲಿ ಚಾಂದ್‌ಖಾನ್ ಪಾತ್ರ. ದೇವಿ ಮಹಾತ್ಮೆ ನಾಟಕದಲ್ಲಿ ಶುಂಭಾಸುರ ಪಾತ್ರದಲ್ಲಿ ಅಭಿನಯಿಸಿದ್ದೆ.

*ರಂಗಭೂಮಿ ಅಂದು-ಇಂದು ಹೇಗೆ?
ಅಂದಿನ ರಂಗಭೂಮಿ ಉತ್ತಮವಾಗಿತ್ತು. ಕಲೆಯ ಶ್ರೀಮಂತಿಕೆ ಇತ್ತು. ಮನರಂಜನೆ ರಸವತ್ತಾಗಿತ್ತು. ಇಂದಿನ ನಾಟಕಗಳಲ್ಲಿ ತಿರುಳಿಲ್ಲ. ಆದ್ದರಿಂದಲೇ ಪ್ರೇಕ್ಷಕರು ಬರುತ್ತಿಲ್ಲ.  ಗ್ರಾಮೀಣ ಪ್ರದೇಶದಲ್ಲೂ ಈಗ ನಾಟಕದ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಗುಣಮಟ್ಟ ಕಡಿಮೆಯಾಗುತ್ತಿದೆ. ಹಣ ನೀಡಿ ಪಾತ್ರಗಳನ್ನು ಪಡೆಯುವ ಸ್ಥಿತಿ ಬಂದಿದೆ.

ಇದರಿಂದ ನಿಜವಾದ ಕಲಾವಿದರಿಗೆ ಅನ್ಯಾಯವಾಗುತ್ತಿದೆ. ಸ್ವಂತ ಬಂಡವಾಳ ಹೊಂದಿರುವವರು ಕಲಾವಿದರಾಗುತ್ತಿದ್ದಾರೆ. ದಿಢೀರನೆ ಸಿನಿಮಾ ನಟರಾಗಿಯೂ ಪರಿವರ್ತನೆಯಾಗುತ್ತಿದ್ದಾರೆ. ಕಲೆಗಿಂತ ಹಣಕ್ಕೆ ಮೌಲ್ಯ ಬಂದಿರುವುದು ಶೋಚನೀಯ ಸಂಗತಿ. ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯಗಳು ನಡೆಯಬೇಕು.

*ರಂಗಭೂಮಿ ಸುಧಾರಣೆ ಹೇಗೆ?
ನಾಟಕಗಳ ಆಯ್ಕೆ, ಉತ್ತಮ ಸಂಭಾಷಣೆ, ಧ್ವನಿಯಲ್ಲಿನ ಏರಿಳಿತ, ಅಭಿನಯ ಪ್ರತಿಯೊಂದು ಅಂಶವೂ ಮುಖ್ಯವಾಗುತ್ತವೆ. ರಂಗಸಜ್ಜಿಕೆ ಸುಸಜ್ಜಿತವಾಗಿರಬೇಕು. ಜತೆಗೆ ಕಲಾವಿದರಿಗೂ ಅಭಿನಯದ ಬಗ್ಗೆ ಆಸಕ್ತಿ ಇರಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT