ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿಯಿಂದ ಸದೃಢ ಸಮಾಜ ನಿರ್ಮಾಣ

Last Updated 13 ಜನವರಿ 2011, 5:50 IST
ಅಕ್ಷರ ಗಾತ್ರ

ಹೊಳಲ್ಕೆರೆ: ರಂಗಭೂಮಿಯಿಂದ ಸದೃಢ, ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ ಎಂದು ಡಯೆಟ್ ಉಪ ನಿರ್ದೇಶಕ (ಅಭಿವೃದ್ಧಿ) ಎಂ. ಮಲ್ಲಣ್ಣ ಹೇಳಿದರು.
ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ನಡೆಯುತ್ತಿರುವ ‘ತಿರುಕನೂರಿನಲ್ಲಿ ರಂಗದಾಸೋಹ’ ನಾಟಕೋತ್ಸವದಲ್ಲಿ ಬುಧವಾರ ಅವರು ಮಾತನಾಡಿದರು.

ರಂಗಭೂಮಿ ಕೇವಲ ಮನರಂಜನೆಗೆ ಸೀಮಿತವಲ್ಲ. ಅದು ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತದೆ. ನಾಟಕಗಳು ಜನರಿಗೆ ಉತ್ತಮ ಸಂದೇಶ ತಿಳಿಸುವ ಕಾರ್ಯ ಮಾಡುತ್ತವೆ. ಇಲ್ಲಿ ಶಿಕ್ಷಣಾರ್ಥಿಗಳು ಮತ್ತು ವಿದ್ಯಾರ್ಥಿಗಳೇ ತರಬೇತಿ ಪಡೆದು ನಾಟಕಗಳನ್ನು ಅಭಿನಯಿಸುತ್ತಿರುವುದು ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಣವೇ ಸಮಾಜದ ಶಕ್ತಿ. ಅದು ಬದುಕಿಗೆ ಬೆಳಕಿದ್ದಂತೆ. ಇಂತಹ ಪವಿತ್ರ ಸ್ಥಳದಲ್ಲಿ ವಿದ್ಯಾಸಂಸ್ಥೆಗಳನ್ನು ಕಟ್ಟಿ, ಬೆಳೆಸಿ, ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡಿದ ರಾಘವೇಂದ್ರ ಸ್ವಾಮೀಜಿಗಳ ಕಾರ್ಯ ಅಭಿನಂದನೀಯ. ಶಿಕ್ಷಣ ಕ್ಷೇತ್ರದಲ್ಲಿಯೂ ನಾಟಕ ಪ್ರಧಾನ ಪಾತ್ರ ವಹಿಸಲಿದ್ದು, ಬೋಧನೆಯಲ್ಲಿ ರಂಗಕಲೆ ಅಳವಡಿಸಿಕೊಂಡರೆ ಕಲಿಕೆ ಪರಿಣಾಮಕಾರಿಯಾಗುತ್ತದೆ. ಕಲಿತ ಅಂಶಗಳು ಹೆಚ್ಚು ಕಾಲ ಸ್ಮೃತಿಯಲ್ಲಿ ಉಳಿಯುತ್ತವೆ ಎಂದರು.

ಆಶ್ರಮದ ಆಡಳಿತಾಧಿಕಾರಿ ಹಾಗೂ ಸಾಹಿತಿ ರಾಘವೇಂದ್ರ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಸರ್ಕಾರದ ಅನುದಾನ ಕಡಿಮೆಯಾದರೂ, ಅಭಿಮಾನಿಗಳೇ ಪ್ರೀತಿಯಿಂದ ನೀಡಿದ ಹಣದಿಂದ ಆಶ್ರಮದ ಚಟುವಟಿಕೆಗಳು ಸರಾಗವಾಗಿ ನಡೆಯುತ್ತಿವೆ. ಆಶ್ರಮ ಹುಟ್ಟುಹಾಕಿದ ರಂಗಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ. ಆಶ್ರಮಕ್ಕೆ ಅಭಿಮಾನಿಗಳು ನೀಡಿದ ಹಣ ದ್ವಿಗುಣವಾಗಿ ಮತ್ತೆ ಅವರಿಗೇ ಸಲ್ಲುತ್ತದೆ. ಆದ್ದರಿಂದ ಯಾರೂ ದಾನ ನೀಡುವಲ್ಲಿ ಹಿಂಜರಿಯಬಾರದು ಎಂದು ಮನವಿ ಮಾಡಿದರು.

ಟಿ. ನರಸೀಪುರದ ಬೌದ್ಧ ಮಿಷನರಿ ಬಾಂತೆ ಬುದ್ಧಪ್ರಕಾಶ್ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.ಯೋಗ ತರಬೇತುದಾರ ಸಂತೋಷ್‌ಕುಮಾರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗನಮನ ಸಲ್ಲಿಸಿದರು. ಡಾ. ಚಂದ್ರಶೇಖರ ಕಂಬಾರ ರಚನೆ ಹಾಗೂ ಮಂಜುನಾಥ ಬಡಿಗೇರ ನಿರ್ದೇಶನದ ‘ಸಾಂಬಶಿವ ಪ್ರಹಸನ’ ನಾಟಕವನ್ನು ಸರ್ವಸೇವಾ ಬೋಧಕ ಶಿಕ್ಷಣಾಲಯ ಪ್ರಶಿಕ್ಷಣಾರ್ಥಿಗಳು ಅಭಿನಯಿಸಿದರು.ಸಹಾಯಕ ಆಡಳಿತಾಧಿಕಾರಿಗಳಾದ ಕೆ.ಡಿ. ಬಡಿಗೇರ, ಶಿವರಾಮಯ್ಯ, ಭಕ್ತವತ್ಸಲ, ಹಂಜಿ ಶಿವಸ್ವಾಮಿ, ಕುಮಾರ್, ಗಣೇಶ್, ಶ್ರೀಪಾದ ರಾಜು, ರಂಗಾಭೋವಿ, ಸುಂದರ ರಾಜ್, ಸುರೇಶ್, ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

‘ರಂಗದಾಸೋಹದಲ್ಲಿ ಇಂದು’
ನೇತೃತ್ವ:
ಮಧುರೆಯ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಸಮಾರೋಪ ಭಾಷಣ: ರಂಗಾಯಣ ನಿರ್ದೇಶಕ ಪ್ರೊ.ಲಿಂಗದೇವರು ಹಳೇಮನೆ. ಅತಿಥಿಗಳು: ಸಂಸದರಾದ ಜಿ.ಎಂ. ಸಿದ್ದೇಶ್ವರ, ಜನಾರ್ದನಸ್ವಾಮಿ, ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ, ಟಿ.ಎಂ. ರಂಗಸ್ವಾಮಿ, ಪ್ರಕಾಶ್ ಎಚ್. ಹಳಲಗೇರಿ, ರವೀಂದ್ರ ಕಣ್ಣೂರ್, ಪ್ರೊ.ಜಿ.ಎನ್. ಮಲ್ಲಿಕಾರ್ಜುನಪ್ಪ, ಪ್ರೊ.ಇ. ಚಿತ್ರಶೇಖರ್, ನೀಲಮ್ಮ, ಕೆ.ಎಂ. ವೀರೇಶ್, ವಿಶ್ವನಾಥಯ್ಯ, ಬಿಇಒ ಎಸ್.ಆರ್. ಮಂಜುನಾಥ್, ಕುಮಾರಸ್ವಾಮಿ, ನಾಗೇಂದ್ರ ಶೆಟ್ಟಿ, ಸುರಯ್ಯಾ ಪರ್ವಿನ್, ಬಸವರಾಜ್, ಕಿರುತೆರೆ ಕಲಾವಿದ ವಿ. ಚಿದಾನಂದ, ಪತ್ರಕರ್ತ ನರೇನಹಳ್ಳಿ ಅರುಣ್‌ಕುಮಾರ್, ವೆಂಕಟೇಶ್, ಕೃಷ್ಣಮೂರ್ತಿ, ಪಿ.ಎಸ್. ಮೂರ್ತಿ.

ನಾಟಕ: ‘ಕತೆಯ ಹುಚ್ಚಿನ ಕರಿ ಟೋಪಿ ಗಿಯರಾಯ’, ರಚನೆ: ರಾಘವೇಂದ್ರ ಪಾಟೀಲ, ನಿರ್ದೇಶನ: ಮಂಜುನಾಥ ಬಡಿಗೇರ. ಅಭಿನಯ: ಆಶ್ರಮದ ವಿದ್ಯಾರ್ಥಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT