ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಲೋಕದ ನಂಟಿನಲ್ಲಿ...

ನನ್ನ ಕಥೆ
Last Updated 3 ಜುಲೈ 2013, 19:59 IST
ಅಕ್ಷರ ಗಾತ್ರ

ಶಾಲಾ ದಿನಗಳಲ್ಲೊಮ್ಮೆ ವೇದಿಕೆಯನ್ನೇರುವ ಪ್ರಯತ್ನ ಮಾಡಿದ್ದನ್ನು ಬಿಟ್ಟರೆ ನಾನು ವೇದಿಕೆಯನ್ನೇರಿದ್ದು ರಕ್ತರಾತ್ರಿ ನಾಟಕಕ್ಕೆ ಸೈನಿಕ ಪಾತ್ರಧಾರಿಯಾಗಿ. ಆಗ ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಅಭಿನಯ ಕಲಿಯಲು ಹೋಗುತ್ತಿದ್ದ ಸಂದರ್ಭದಲ್ಲಿ ಪೌರಾಣಿಕ ನಾಟಕದಲ್ಲಿ ಅಭಿನಯಿಸುವುದಕ್ಕೆ ಅವಕಾಶ ಸಿಕ್ಕಿತು.

ಆ ನಾಟಕಕ್ಕೆ ಸೈನಿಕ ಪಾತ್ರಧಾರಿಗಳ ಕೊರತೆ ಬಿದ್ದಿದ್ದರಿಂದ ನನಗೆ ಕರೆದಿದ್ದರು. ಅವಕಾಶಗಳ ನಿರೀಕ್ಷೆಯಲ್ಲಿದ್ದ ನಾನು ರಿಹರ್ಸಲ್‌ಗಳಲ್ಲಿ ಚೆನ್ನಾಗಿಯೇ ಭಾಗವಹಿಸಿದ್ದೆ. ಆದರೆ ಯಾರೊಂದಿಗೂ ಹೆಚ್ಚು ಬೆರೆಯದ ನನಗೆ ಕಲಾಕ್ಷೇತ್ರದ ವೇದಿಕೆ, ನೆರೆದಿದ್ದ ಪ್ರೇಕ್ಷಕರನ್ನು ಕಂಡು ನಡುಕ ಆರಂಭವಾಯಿತು. ಜನರೆಡೆಗೆ ಮುಖಮಾಡಿ ಯುದ್ಧ ಮಾಡಬೇಕಿದ್ದವನು ಜನರಿಗೆ ಬೆನ್ನು ಮಾಡಿ ಅಭಿನಯಿಸಲಾರಂಭಿಸಿದ್ದೆ.

ನಡುಕದಲ್ಲಿ ಬೆವರತೊಡಗಿದ್ದ ನಾನು, ಯುದ್ಧ ಮುಗಿದು ಸಾಯುವವರೆಗೂ ಪ್ರೇಕ್ಷಕರಿಗೆ ಮುಖ ತೋರಿಸಿರಲಿಲ್ಲ. ಆದರೆ ಇಂದು ಕರ್ನಾಟಕದ ಪ್ರತೀ ಊರಿನ ಎಲ್ಲಾ ರಂಗ ವೇದಿಕೆಯ ಮೇಲೆ ಅಭಿನಯಿಸಿದ್ದೇನೆ ಎಂಬ ಹೆಗ್ಗಳಿಕೆ ನನ್ನದು. ಅದನ್ನು ನೆನೆದರೆ ಈಗ ಹೆಮ್ಮೆ ಅನ್ನಿಸುತ್ತದೆ.

ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮ ನನ್ನ ಹುಟ್ಟೂರು. ಅಪ್ಪ ಲಿಂಗಪ್ಪ, ತಾಯಿ ಶಿವಮ್ಮ. ಇಬ್ಬರು ಅಕ್ಕಂದಿರು, ಒಬ್ಬ ಅಣ್ಣ ಇದ್ದ ತುಂಬು ಸಂಸಾರ. ಅಪ್ಪನಿಗೆ ನಾಟಕವೆಂದರೆ ಅದಮ್ಯ ಪ್ರೀತಿ. ಊರಿನಲ್ಲಿ ನಡೆಯುತ್ತಿದ್ದ ಕುರುಕ್ಷೇತ್ರ, ಶನಿಮಹಾತ್ಮೆ, ನಳದಮಯಂತಿ ನಾಟಕಗಳಲ್ಲಿ ಪಾತ್ರಗಳನ್ನು ಮಾಡುತ್ತಿದ್ದರು. ನಾಟಕದ ಅಭ್ಯಾಸವನ್ನು ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಅಪ್ಪ, ನಮ್ಮನ್ನು ತೊಡೆಯ ಮೇಲೆ ಮಲಗಿಸಿಕೊಂಡು ನಾಟಕದ ಸಂಭಾಷಣೆಗಳನ್ನು, ಹಾಡುಗಳನ್ನು ಹೇಳುತ್ತಿದ್ದರು.

ಜೊತೆಗೆ ಅಲ್ಲಿ ನಡೆಯುವ ಪ್ರತಿಯೊಂದು ಘಟನೆಗಳನ್ನು ರೋಚಕವಾಗಿ ವಿವರಿಸುತ್ತಿದ್ದರು. ನಾಟಕದ ದಿನ ಎಲ್ಲರೂ ಹೋಗಿ ನಾಟಕವನ್ನು ನೋಡಿ ಆನಂದಿಸುತ್ತಿದ್ದೆವು. ಬಹುಶಃ ಆಗೆಲ್ಲ ನಟನಾಗಬೇಕೆಂಬ ಆಸೆ ನನ್ನಲ್ಲಿ ಚಿಗುರದಿದ್ದರೂ, ಕಲೆಯಲ್ಲಿ ಆಸಕ್ತಿಯನ್ನು ಮೂಡಿಸಿದ್ದಿರಬಹುದು. ಅವೆಲ್ಲ ಘಟನೆಗಳು ಪುಟ್ಟ ಮನಸ್ಸಿನ ಸುಪ್ತ ಮನಸ್ಸಿನಾಳಕ್ಕೆ ಲಗ್ಗೆ ಹಾಕಿರಬೇಕು, ಕೆಲ ವರ್ಷಗಳ ನಂತರ ನನಗೆ ಅದರ ಅರಿವಾಯಿತು.

ಸ್ನೇಹಿತರ ಕುತಂತ್ರದಿಂದ ಪಂಚತಾರಾ ಹೋಟೆಲೊಂದಕ್ಕೆ ರೂಮ್ ಬಾಯ್ ಕೆಲಸಕ್ಕೆ ಸೇರಿದ ನಾನು ಅಮ್ಮನನ್ನು ನೋಡಿಕೊಳ್ಳುವ ಸಲುವಾಗಿ ಕೆಲ ತಿಂಗಳು ಕೆಲಸ ಮಾಡಿದೆ. ಮೋಸದಿಂದ ಅಲ್ಲಿಗೆ ಸೇರಿದ್ದರೂ, ಸೇರಿದ್ದು ಮೋಸವಾಗಲಿಲ್ಲ. ನಾನು ಕಲಾವಿದನಾಗಿ ರೂಪುಗೊಳ್ಳುವುದಕ್ಕೆ ಅದೇ ಕಾರಣವಾಯಿತು ಎಂಬುದು ಕುತೂಹಲಕರ ಸಂಗತಿ. ಹೃತಿಕ್ ರೋಷನ್ ಸಂಬಂಧಿಯೊಬ್ಬರದ್ದಾದ ಆ ಹೋಟೆಲ್‌ಗೆ, ಭಾರತೀಯ ಚಿತ್ರರಂಗದ ಎಲ್ಲಾ ಭಾಷೆಯ ಕಲಾವಿದರು ಬರುತ್ತಿದ್ದರು. ಅವರುಗಳನ್ನು ದೇವರಂತೆ ಕಾಣುತ್ತ, ಅವರನ್ನ ನೋಡಿ ರೋಮಾಂಚನಗೊಳ್ಳುತ್ತಿದ್ದೆ.

ಆದರೆ ದಿನಗಳು ಉರುಳಿದಂತೆ, ಕೆಲಸ ಮುಗಿಸಿ ಮನೆಗೆ ಹೋಗಿ ಮಲಗಿಕೊಂಡಾಗ `ನೀನು ಅವರನ್ನ ನೋಡಿ ಅಚ್ಚರಿಗೊಳ್ಳೋದಲ್ಲ. ನಿನ್ನನ್ನ ಕಂಡು ಇತರರು ರೋಮಾಂಚನಗೊಳ್ಳುವ ಮಟ್ಟಕ್ಕೆ ಬೆಳೆಯಬೇಕು' ಎಂದು ಅನ್ನಿಸತೊಡಗಿತು. ಹಾಗಾಗಿ ಅಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲೇ ನೃತ್ಯ ಶಾಲೆಗೆ ಸೇರಿಕೊಂಡು, 3 ವರ್ಷ ನೃತ್ಯಾಭ್ಯಾಸವನ್ನು ಮಾಡಿದೆ. ಕ್ರಮೇಣ ಕೆಲಸದಲ್ಲಿ ಆಸಕ್ತಿ ಕುಂದಿ, ಕಲಾವಿದನಾಗಿ ಬೆಳೆಯಬೇಕೆಂಬ ಆಸೆ ಮನಸ್ಸಿನ ಮೇಲೆ ಒತ್ತಡವನ್ನು ಹೇರತೊಡಗಿತು.

ಆ ಛಲದ ಬೆನ್ನೇರಿ ಕೆಲಸವನ್ನು ಬಿಟ್ಟು ಅಮ್ಮನಲ್ಲಿ ನನ್ನ ಆಸೆಯನ್ನು ನಿವೇದಿಸಿಕೊಂಡೆ. ಅದಕ್ಕವರು `ಈ ಪ್ರಶ್ನೆಯನ್ನು ನಿನಗೇ ಕೇಳಿಕೊಂಡು ನಿನ್ನ ಜೀವನವನ್ನು ರೂಪಿಸಿಕೊ. ಕಲಾವಿದನಾಗಲು ಬಯಸಿದರೆ ನಿನ್ನ ಬೆನ್ನಿಗೆ ನಾನು ನಿಲ್ಲುತ್ತೇನೆ' ಎಂಬ ಭರವಸೆಯನ್ನಿತ್ತರು. ರೆಕ್ಕೆ ಬಲಿತ ಹಕ್ಕಿಯಂತಾದ ನಾನು ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ಸೇರಿ ಅಲ್ಲಿ 1 ವರ್ಷ ನಟನಾ ತರಬೇತಿಯನ್ನು ಪಡೆದುಕೊಂಡೆ. ನಾನು ತಲುಪಬೇಕಾಗಿರುವ ಮಟ್ಟಕ್ಕೆ ಅದು ಸಾಲದೆನ್ನಿಸಿ, ಅಲ್ಲಿಗೆ ಬರುತ್ತಿದ್ದ ನೀನಾಸಂನ ತರಬೇತುದಾರರಲ್ಲಿ ನನ್ನ ತುಡಿತವನ್ನು ಹಂಚಿಕೊಂಡೆ.

ಅವರ ಮಾರ್ಗದರ್ಶನದಂತೆ ನೀನಾಸಂಗೆ ಅರ್ಜಿ ಹಾಕಿ, ಸಂದರ್ಶನ ನೀಡಿದೆ. ಆದರೆ ಮೊದಲ ಪ್ರಯತ್ನದಲ್ಲಿ ಅನುತ್ತೀರ್ಣನಾಗಿದ್ದ ನಾನು, ಅಮ್ಮನಿಗೆ ನೀನಾಸಂನಲ್ಲಿ ಅವಕಾಶ ಸಿಕ್ಕಿದೆಯೆಂದು ಸುಳ್ಳು ಹೇಳಿ, ಸಾಣೇಹಳ್ಳಿಯ ಶಿವಸಂಚಾರ ತಂಡಕ್ಕೆ ಸೇರಿಕೊಂಡೆ. ಆ ಸಂಚಾರಿ ರಂಗ ತಂಡದಲ್ಲಿ ಸೇರಿ ಒಂದು ವರ್ಷ ತಿರುಗಾಟದಲ್ಲಿ ಪಾಲ್ಗೊಂಡು, ಕಾಲಜ್ಞಾನಿ ಕನಕದಾಸ, ಪಂಪನಿಗೆ ಬಿದ್ದ ಕನಸು, ಮುಕ್ತಧಾರಾ, ಸೂರ್ಯಶಿಖಾರಿ, ಮಾದಾರ ಚೆನ್ನಯ್ಯ ನಾಟಕಗಳನ್ನು ಮಾಡಿದೆ.

ಅಲ್ಲಿ ನನಗೆ ಕೆಲಸ ಮಾಡಿದ್ದು ಬಹಳ ಖುಷಿ ನೀಡಿತ್ತು. ಏಕೆಂದರೆ ಅಪ್ಪನ ಊರು ಬಿಟ್ಟರೆ ಧರ್ಮಸ್ಥಳವನ್ನಷ್ಟೇ ನೋಡಿದ್ದ ಆ 10 ತಿಂಗಳುಗಳಲ್ಲಿ ನನಗೆ ಕರ್ನಾಟಕವನ್ನು ನೋಡುವ, ಅಲ್ಲಿನ ಪರಿಸರ, ಜನ, ಊಟ ಎಲ್ಲವನ್ನೂ ಅನುಭವಿಸುವ ಅಪೂರ್ವವಾದ ಅವಕಾಶ ದೊರೆತಿತ್ತು. ಅಲ್ಲಿಯ ತಿರುಗಾಟದ ನಂತರ ನನ್ನ ಆಸೆಯಂತೆ ಮತ್ತೆ ನೀನಾಸಂಗೆ ಅರ್ಜಿ ಹಾಕಿ, ಪ್ರವೇಶ ಪಡೆದಿದ್ದೆ. ಗುರುಕುಲ ಪದ್ಧತಿಯ ಆ ಶಾಲೆಯಲ್ಲಿ ಬೆಳಗ್ಗೆ 6ಕ್ಕೆ ಆರಂಭವಾದ ತರಗತಿಗಳು ಎಷ್ಟು ಗಂಟೆಗೆ ಮುಗಿಯುತ್ತವೆಂಬುದು ಯಾರಿಗೂ ತಿಳಿಯುತ್ತಿರಲಿಲ್ಲ.

ವ್ಯಾಯಾಮ, ಧ್ವನಿ ಸಂಸ್ಕೃತಿ, ಮುಖವಾಡ ತಯಾರಿಕೆ, ಪ್ರಸಾದನ ಕಲೆ ಸೇರಿದಂತೆ ರಂಗ ಪ್ರಸಂಗಕ್ಕೆ ಬೇಕಾದ ಎಲ್ಲಾ ಅವಶ್ಯಕ ವಿದ್ಯೆಗಳನ್ನು 1 ವರ್ಷದಲ್ಲಿ ಕಲಿತೆ. ಅಲ್ಲಿ ವಿಗಡ ವಿಕ್ರಮರಾಯ, ಯಾರಂದರು, ಸ್ವಯಂವರ, ಎರಡು ಅಂತ್ಯಗಳು-ಎರಡು ಅಭಿಷೇಕಗಳು, ಚಂದ್ರಬಲ-ತಾರಾ ಬಲ ಎಂಬ ನಾಟಕಗಳಲ್ಲಿ ಅಭಿನಯಿಸಿದ್ದೆ. ಪ್ರತಿಯೊಂದು ನಾಟಕವೂ ಒಳ್ಳೆಯ ಅನುಭವವನ್ನು ನೀಡಿದ್ದವು. ಅಲ್ಲಿನ ರಘುನಂದನ್, ಚನ್ನಕೇಶವ ಹಾಗೂ ಮಂಜು ಕೊಡಗು ಗುರುಗಳನ್ನು ನಾನು ಸದಾ ನೆನೆಯುತ್ತೇನೆ.

ಅಲ್ಲಿನ ತರಬೇತಿಯ ನಂತರ ನೀನಾಸಂನ ತಿರುಗಾಟದಲ್ಲಿ ಭಾಗಿಯಾಗಿ ಮತ್ತೊಂದು ವರ್ಷ ಸಂಚಾರಿ ರಂಗಯಾತ್ರೆಯಲ್ಲಿ ಮುಳುಗಿಹೋದೆ. ನಂತರ ಬೆಂಗಳೂರಿಗೆ ಬಂದು ಛಾಯಾಚಿತ್ರಗಳನ್ನು ತೆಗೆಸಿಕೊಂಡು ನಟನೆಗೆ ಅವಕಾಶಗಳು ಸಿಗುವುದೆಂಬ ಆಸೆಯಿಂದ ಬೆಂಗಳೂರಿನ ಗಲ್ಲಿ ಗಲ್ಲಿಗಳನ್ನು ಸುತ್ತಿದೆ. ಅಭಿನಯವೊಂದನ್ನೇ ಕಲಿತಿದ್ದ ನನಗೆ ಅಭಿನಯ ಹಾಗೂ ನಾಟಕಗಳನ್ನು ಹೇಳಿಕೊಡುವುದಕ್ಕೆ, ನಾಟಕಗಳ ನಿರ್ದೇಶನ ಮಾಡುವುದಕ್ಕೆ, ಶಿಬಿರಗಳಿಗೆ ಕೆಲಸ ಮಾಡುವಂಥ ಸಣ್ಣ ಪುಟ್ಟ ಕೆಲಸಗಳಿಗೆ ಅವಕಾಶ ಸಿಕ್ಕವೇ ಹೊರತು, ಬದುಕಿಗೊಂದು ಸೂರು ಸಿಗಲೇ ಇಲ್ಲ.

ಮತ್ತೊಂದು ವಸಂತವನ್ನು ನೀನಾಸಂನ ಸಂಚಾರಿ ರಂಗ ಯಾತ್ರೆಯಲ್ಲಿ ಕಳೆಯುತ್ತಿರುವ ಸಮಯದಲ್ಲಿ `ಆಕಾಶ ಬೇರಿ' ನಾಟಕ ಮೈಸೂರಿನಲ್ಲಿ ಪ್ರದರ್ಶನವಾಗುವುದರಲ್ಲಿತ್ತು. ಆಗ ಧಾರಾವಾಹಿಯೊಂದಕ್ಕೆ ಪ್ರತಿಭಾಶೋಧವನ್ನು ಮಾಡಲು ಮೈಸೂರಿಗೆ ಬಂದಿದ್ದ ನಿರ್ದೇಶಕ ಹೇಮಂತ ಹೆಗಡೆ ಅಂದು ನಮ್ಮ ನಾಟಕಕ್ಕೆ ಆಗಮಿಸಿದ್ದರು. ಮುಖ್ಯ ಪಾತ್ರಧಾರಿ ಬಸಾನಿಯೋ ಪಾತ್ರವಹಿಸಿದ್ದ ನನ್ನ ಅಭಿನಯವನ್ನು ಮೆಚ್ಚಿದ ಹೇಮಂತ್ `ಎಲ್ಲರಂಥಲ್ಲ ನಮ್ಮ ರಾಜಿ' ಎಂಬ ಧಾರಾವಾಹಿಗೆ ನಾಯಕನಾಗಿ ಅಭಿನಯಿಸಲು ಆಹ್ವಾನವಿತ್ತರು. ಅವಕಾಶಕ್ಕಾಗಿ ಕಾದು ಕುಳಿತಿದ್ದ ನಾನು ಅದರಲ್ಲಿ ಅಭಿನಯಿಸಿದೆ.

ಕಾರಣಾಂತರಗಳಿಂದ ಕೆಲ ದಿನಗಳ ನಂತರ ಧಾರಾವಾಹಿ ನಿಂತುಹೋಯಿತಾದರೂ, ಅದರ ನಂತರ ಈಟೀವಿಯಲ್ಲಿ ಪ್ರಸಾರವಾಗುತ್ತಿದ್ದ ಕುಲಗೌರವ, ಹೆಳವನಕಟ್ಟೆ ಗಿರಿಯಮ್ಮ ಧಾರಾವಾಹಿಗಳಲ್ಲಿ ಪಾತ್ರಗಳು ಲಭ್ಯವಾದವು. ಅವುಗಳು ಮುಗಿದ ನಂತರ ಮತ್ತೆ ಖಾಲಿ ಉಳಿಯುವ ಪರಿಸ್ಥಿತಿ ಬಂದೊದಗಿದಾಗ ಅವಕಾಶಗಳಿಗಾಗಿ ಬಾಗಿಲು ತಟ್ಟಿ, ಸೋತುಹೋದೆ. ಅವಕಾಶವನ್ನು ಪಡೆಯುವ ಸಲುವಾಗಿ ಬಸ್ ಟಿಕೆಟ್ಟಿಗೆ ಹಣವಿಲ್ಲದಿದ್ದರೂ ಇಡೀ ಬೆಂಗಳೂರನ್ನು ನಡೆದಾಡಿಕೊಂಡೇ ಓಡಾಡಿದೆ. ಆಗಲೂ ಏನೂ ಪ್ರಯೋಜನವಾಗದೇ ಜರ್ಜರಿತಗೊಂಡಿದ್ದ ನಾನು ಇದ್ಯಾವುದೂ ಬೇಡವೆಂದುಕೊಂಡು ಹಿಮಾಲಯಕ್ಕೆ ತೆರಳಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೆ.

ಅದೇ ಸಮಯಕ್ಕೆ ಮತ್ತೆ ನೀನಾಸಂನಿಂದ ಕರೆಬಂದಿದ್ದರಿಂದ ಮನಸ್ಸು ರಂಗದ ಕಡೆ ವಾಲಿತು. ಆಗ ನಾನು ಅದೇ ತಂಡದ ಸದಸ್ಯರೊಂದಿಗೆ ಚರ್ಚಿಸಿ ಭೂಮಿಗೀತ ಎಂಬ ತಂಡವನ್ನು ಹುಟ್ಟು ಹಾಕಿದೆ. ಸಂಗೀತದ ಗಂಧವಿರುವ ನನ್ನ ಗೆಳೆಯರನ್ನು ಕಟ್ಟಿಕೊಂಡು, ಕನ್ನಡದ ಎಲ್ಲಾ ರೀತಿಯ ಹಾಡುಗಳನ್ನು ಒಟ್ಟುಗೂಡಿಸಿ ಹಾಡುವ ಕಾರ್ಯಕ್ರಮವನ್ನು ಆಯೋಜಿಸಿದೆವು. ತಿರುಗಾಟದ ಸಮಯದಲ್ಲೇ ಸಮಯ ವ್ಯರ್ಥಮಾಡದೇ ಶಾಲಾ ಕಾಲೇಜುಗಳಿಗೆ ತೆರಳಿ ಅವಕಾಶಗಳನ್ನು ಕೇಳಿಕೊಂಡು ಕಾರ್ಯಕ್ರಮಗಳನ್ನು ನೀಡತೊಡಗಿದೆವು.

ಕೇವಲ 10 ತಿಂಗಳಲ್ಲಿ 150 ಕಾರ್ಯಕ್ರಮಗಳನ್ನು ನೀಡಿದೆವು. ಒಳ್ಳೆ ಪ್ರತಿಕ್ರಿಯೆ ಲಭಿಸಿತ್ತು. ನಂತರ ಮತ್ತೆ ಕೆಲ ದಿನಗಳ ನಂತರ ರಾಘವೇಂದ್ರ ಮಹಿಮೆ ಧಾರಾವಾಹಿಯಲ್ಲಿ ರಾಮಾಚಾರ್ಯ ಪಾತ್ರಧಾರಿಯಾಗಿ ಅವಕಾಶ ಸಿಕ್ಕಿತು. ರಾಘವೇಂದ್ರ ಸ್ವಾಮಿಗಳ ಆಶೀರ್ವಾದವೆಂಬಂತೆ, ಅದರ ನಂತರ ಹಲವಾರು ಅವಕಾಶಗಳು ನನ್ನನ್ನು ಹುಡುಕಿಕೊಂಡು ಬಂದವು. ಅದಾದ ಮೇಲೆ ದೇವಿ, ಅರುಣರಾಗ, ಪ್ರೀತಿ ಪ್ರೇಮ, ಆತ್ಮಕತೆಗಳು ಧಾರಾವಾಹಿಯಲ್ಲಿ ಒಳ್ಳೇ ಪಾತ್ರಗಳೇ ಲಭಿಸಿದವು. ಈಗ ಈಟೀವಿಯ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಂಜುಂಡಿ ಎಂಬ ಪಾತ್ರಧಾರಿಯಾಗಿ ಅಭಿನಯಿಸುತ್ತಿದ್ದೇನೆ.

60 ನಾಟಕಗಳಲ್ಲಿ ಅಭಿನಯಿಸಿರುವ ನಾನು ಸುಮಾರು 3000 ಪ್ರದರ್ಶನಗಳನ್ನು ನೀಡಿದ್ದೇನೆ. ನನ್ನ ಪಾಲಿಗೆ ಬಂದ ಪ್ರತೀ ಪಾತ್ರವೂ ವಿಶೇಷವಾಗಿಯೇ ಇರುತ್ತಿದ್ದವು. ನಾನು ಮಾಡಿದ ಎಷ್ಟೋ ಪಾತ್ರಗಳನ್ನು ಮೆಚ್ಚಿ ಬಂದು ಹಲವು ಮಂದಿ ಹಾರೈಸಿದ್ದಾರೆ. ಶಿವಸಂಚಾರದಲ್ಲಿ ನಿರ್ವಹಿಸಿದ ಬಸವಣ್ಣನ ಪಾತ್ರವನ್ನು ನೋಡಿದ ಪ್ರೇಕ್ಷಕರು ಬಂದು ನನ್ನ ಕಾಲಿಗೆ ಬಿದ್ದುದನ್ನು ನಾನು ಎಂದೂ ಮರೆಯಲಾರೆ. ನಾಟಕದಲ್ಲಿ ಅಭಿನಯಿಸುವಾಗ ಪ್ರತೀ ಪಾತ್ರಕ್ಕೆ ಚೆನ್ನಾಗಿ ಹೋಂವರ್ಕ್ ಮಾಡುತ್ತಿದ್ದೆ. ಇಂಥ ವಿದ್ಯೆಯನ್ನು ಕಲಿಸಿದ ನೀನಾಸಂನನ್ನು ಎಂದೂ ಮರೆಯಲಾರೆ.

ನನಗೆ ಧಾರಾವಾಹಿ ಅಥವಾ ನಾಟಕದಲ್ಲಿ ಒಂದನ್ನು ಆಯ್ಕೆಗೆ ಬಿಟ್ಟರೆ ನನ್ನ ಆಯ್ಕೆ ನಾಟಕವೇ. ನಮಗೆ ಪಾತ್ರಗಳನ್ನು ಮಾಡುವ ಯೋಗ್ಯತೆ ಇದ್ದರೂ ಪಾತ್ರಗಳು ಸಿಗದಿದ್ದಾಗ ಬೇಸರವಾಗುತ್ತದೆ. ಆದರೆ ನನ್ನ ಪ್ರತಿಭೆಯ ಮೇಲೆ ಅಗಾಧ ನಂಬಿಕೆಯಿದ್ದು, ಕೊಟ್ಟ ಯಾವ ಪಾತ್ರವನ್ನಾದರೂ ನಿಭಾಯಿಸುವ ಶಕ್ತಿ ನನ್ನಲ್ಲಿದೆ. ಕಲಿತಿರುವ ಪಾಠಗಳು ನನ್ನ ಜೀವನಕ್ಕೆ ಭದ್ರ ಬುನಾದಿಯನ್ನು ಹಾಕಿದೆ. ನಾನು ಅಭಿನಯಿಸಿದ ಧಾರಾವಾಹಿಗಳಲ್ಲಿದ್ದ ಭಾರತೀಶ್, ಸತೀಶ್‌ಕೃಷ್ಣ ಹಾಗೂ ಎಂ.ಎ ಓದಿಗೆ ಸಹಾಯ ಮಾಡುತ್ತಿರುವ ನನ್ನ ಸ್ನೇಹಿತೆ ಅಪೂರ್ವರಿಗೆ ನಾನೆಂದೂ ಚಿರಋಣಿ.
-ನಿರೂಪಣೆ: ರೂಪಶ್ರೀ ಕಲ್ಲಿಗನೂರ್ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT