ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಾಯಣದ ಅಂಗಳದಲ್ಲಿ ಬಹುರೂಪಿ ರಂಗು

Last Updated 15 ಜನವರಿ 2012, 9:50 IST
ಅಕ್ಷರ ಗಾತ್ರ

ಮೈಸೂರು: ಅತ್ತ ಮಂಗಳೂರಿನ ಕಡಲ ಕಿನಾರೆಯಲ್ಲಿ `ಯುವಜನೋತ್ಸವ~ ಸಂಭ್ರಮವಾದರೆ, ಇತ್ತ ರಾಜಧಾನಿಯಲ್ಲಿ `ಬೆಂಗಳೂರು ಹಬ್ಬ~ದ ಸಡಗರ..ಇವೆರಡರ ಮಧ್ಯೆ ಇರುವ ಮಲ್ಲಿಗೆ ನಗರಿ ಮೈಸೂರಿನಲ್ಲಿ `ಬಹುರೂಪಿ~ಯ ಸಡಗರ, ಸಂಭ್ರಮ..

-ಹೌದು. ಸಂಕ್ರಾಂತಿ ಹಬ್ಬದ ಖುಷಿ ಇಮ್ಮಡಿಗೊಳ್ಳಲು ಈ ಎಲ್ಲ ಅಂಶಗಳೂ ಕಾರಣವಾಗಿವೆ. ಕಲಾಮಂದಿರ ರಂಗಾಯಣ ಆವರಣದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಭಾವಚಿತ್ರ, ಬಣ್ಣದ ಬಾವುಟಗಳು ರಾರಾಜಿಸುತ್ತಿವೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ಕಲಾವಿದರ ದಂಡು ಕುಕ್ಕರಹಳ್ಳಿ ಕೆರೆ ಆವರಣದ ತಂಗಾಳಿಯಲ್ಲಿ ಬೀಡು ಬಿಟ್ಟಿದೆ.

ಅನಿಷ್ಟ ಪದ್ಧತಿಗೆ ಕಡಿವಾಣ ಹಾಕಿ: ಜ. 14 ರಿಂದ 22ರ ವರೆಗೆ ನಡೆಯಲಿರುವ `ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ~ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಭಾನುವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, `ರಾಜ್ಯದ ವಿಜಾಪುರ, ಬಾಗಲಕೋಟೆ, ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ 6 ಸಾವಿರಕ್ಕೂ ಅಧಿಕ ಮಕ್ಕಳು ಎಚ್‌ಐವಿ ಪೀಡಿತರಾಗಿದ್ದಾರೆ. ಸರ್ಕಾರ ದೇವದಾಸಿ ಪದ್ಧತಿ ನಿಷೇಧಿಸಿದ್ದರೂ ಆ ಭಾಗದಲ್ಲಿ ಇನ್ನೂ ಈ ಪದ್ಧತಿ ಆಚರಣೆಯಲ್ಲಿದೆ. ಈ ಹಿನ್ನೆಲೆಯಲ್ಲಿ ರಂಗಾಯಣ ಕಲಾವಿದರು ನಾಟಕಗಳ ಮೂಲಕ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕಲು ಮುಂದಾಗಬೇಕು~ ಎಂದು ಸಲಹೆ ನೀಡಿದರು.

`ಶೇ 4.2ರಷ್ಟು ಕಾಲೇಜು ವಿದ್ಯಾರ್ಥಿಗಳಲ್ಲಿ ಎಚ್‌ಐವಿ ಕಂಡುಬಂದಿದ್ದು, ಅತ್ಯಂತ ಆಘಾತಕಾರಿ ವಿಷಯವಾಗಿದೆ. ಆದ್ದರಿಂದ ನಾಟಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ 10ನೇ ವರ್ಷಕ್ಕೆ ಕಾಲಿಟ್ಟಿರುವುದು ಸಂತಸದ ಸಂಗತಿ. ಈ ಬಾರಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಕೇಂದ್ರವಾಗಿ ಇಟ್ಟುಕೊಂಡು ಬಹುರೂಪಿ ನಡೆಯುತ್ತಿರುವುದು ಮೆಚ್ಚುಗೆಯ ವಿಷಯ~ ಎಂದು ಶ್ಲಾಘಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್ ಮಾತನಾಡಿ, `ಬಹುರೂಪಿ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿ, ದೇವದಾಸಿ ಪದ್ಧತಿ ಹಾಗೂ ಅಸ್ಪೃಶ್ಯತೆ ಹೋಗಲಾಡಿಸಲು ರಂಗಾಯಣ ಕಲಾವಿದರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಲು ಮುಂದಾದರೆ ಸರ್ಕಾರದಿಂದ ಹೆಚ್ಚುವರಿ ಅನುದಾನ ನೀಡಲಾಗುವುದು~ ಎಂದು ಭರವಸೆ ನೀಡಿದರು.

ಹಿರಿಯ ಕಲಾವಿದ ಎಚ್.ಜಿ.ದತ್ತಾತ್ರೇಯ ಮಾತನಾಡಿ, `ಸರ್ಕಾರದ ವಿರುದ್ಧ ಚಾಟಿ ಬೀಸಬೇಕು ಎಂದು ಬಂದಿದ್ದೆ. ಆದರೆ, ಸಚಿವ ರಾಮದಾಸ್ ಹಾಗೂ ಆಯುಕ್ತ ಮನು ಬಳಿಗಾರ್ ಅವರ ಮಾತು, ಕಾಳಜಿಯನ್ನು ಕಂಡು ಸುಮ್ಮನಾಗಿದ್ದೇನೆ~ ಎಂದು ನಗೆ ಚಟಾಕಿ ಹಾರಿಸಿದರು.

`ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ಹೆಚ್ಚು ಅನುದಾನ ನೀಡುತ್ತಿರುವುದು ಸ್ವಾಗತಾರ್ಹ. ನಾಡಿನ ಎಲ್ಲೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು, ತಲೆಬಿಸಿ ಕಡಿಮೆ ಆಗಬೇಕು~ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 51 ಮಂದಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಿರು ಪರಿಚಯ ಒಳಗೊಂಡಿರುವ `ಜ್ಞಾನದೀಪ~ ಪುಸ್ತಕ ಹಾಗೂ `ಬಹುರೂಪಿ ರಂಗ ಸಜ್ಜಿಕೆ~ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

ಸಾಹಿತಿ ಡಾ.ದೇಜಗೌ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಲಾವಿದೆ ರಾಮೇಶ್ವರಿ ವರ್ಮ, ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್, ರಂಗಾಯಣ ನಿರ್ದೇಶಕ ಡಾ.ಬಿ.ವಿ.ರಾಜಾರಾಂ, ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಹಾಜರಿದ್ದರು.

`ಮೌನಿ~ ಚಿತ್ರಕ್ಕೆ ಉತ್ತಮ ಸ್ಪಂದನೆ
ಹಿರಿಯ ಕಲಾವಿದ ದತ್ತಾತ್ರೇಯ, ಅನಂತನಾಗ್ ಅಭಿನಯದ `ಮೌನಿ~ ಚಿತ್ರವನ್ನು ರಂಗಾಯಣದ ಶ್ರೀರಂಗದಲ್ಲಿ ಪ್ರದರ್ಶಿಸುವ ಮೂಲಕ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರ ನಿರ್ದೇಶಕ ಲಿಂಗದೇವರು, `ಚಿತ್ರರಂಗದ ಪರಿಸ್ಥಿತಿ ಉತ್ತಮವಾಗಿಲ್ಲ. ಚಲನಚಿತ್ರಗಳನ್ನು ಏಕೆ ನೋಡುತ್ತೀರಿ ಎಂದು ಜನರನ್ನು ಕೇಳಿದರೆ ಎರಡು ಗಂಟೆ ನೆಮ್ಮದಿಯಾಗಿ ನಿದ್ರಿ ಸಬಹುದು ಎಂದು ಉತ್ತರಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕಲಾತ್ಮಕ ಚಿತ್ರಗಳನ್ನು ನಿರ್ಮಿಸುವುದು ಸವಾಲಿನ ಕೆಲಸ~ ಎಂದರು.

ದತ್ತಾತ್ರೇಯ ಮಾತನಾಡಿ, `ಮೈಸೂರು ಸಾಂಸ್ಕೃತಿಕ ನೆಲೆ. ಇಂತಹ ಸ್ಥಳದಲ್ಲೇ ಸತ್ವವಿರುವ ನಾಟಕ, ಚಲನಚಿತ್ರಗಳು ಪ್ರದರ್ಶನಗೊಳ್ಳಬೇಕು~ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಸ್ತು ಪ್ರದರ್ಶನ, ರಂಗಭಿತ್ತಿಚಿತ್ರ ಪ್ರದರ್ಶನ ಹಾಗೂ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.
ಹಿರಿಯ ಕಲಾವಿದೆ ರಾಮೇಶ್ವರಿ ವರ್ಮ ಹಾಜರಿದ್ದರು.

ಮೊಬೈಲ್ ಜಾಮರ್
ಭೂಮಿಗೀತ ರಂಗಮಂದಿರದಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತ, ಸಂದೇಶ ಕಳುಹಿಸುತ್ತ ನಾಟಕ ನೋಡುವ ಪ್ರೇಕ್ಷಕರಿಗೆ ಈ ಬಾರಿ ನಿರಾಸೆ ಕಾದಿದೆ. ನಿಶ್ಯಬ್ದ ಕಾಪಾಡುವ ದೃಷ್ಟಿಯಿಂದ ಭೂಮಿಗೀತದಲ್ಲಿ `ಮೊಬೈಲ್ ಜಾಮರ್~ ಅಳವಡಿಸಲಾಗಿದೆ. `ಭೂಮಿಗೀತ ರಂಗಮಂದಿರದಲ್ಲಿ ಜಾಮರ್ ಅಳವಡಿಸಲಾಗಿದೆ. ಮೊಬೈಲ್‌ಗಳು ನಿಷ್ಕ್ರಿಯವಾಗಿರುತ್ತವೆ. ದಯವಿಟ್ಟು ಸಹಕರಿಸಿ~ ಎಂಬ ಬೋರ್ಡ್ ನಿಮ್ಮನ್ನು ಸ್ವಾಗತಿಸುತ್ತದೆ.

ಮೊಬೈಲ್‌ನಲ್ಲಿ ಮಾಹಿತಿ
ರಂಗಾಯಣದ ಕಾರ್ಯಕ್ರಮಗಳ ಬಗ್ಗೆ ನಿಮ್ಮ ಮೊಬೈಲ್ ಫೋನ್‌ಗೆ ಮಾಹಿತಿ ಬರಬೇಕೆ? ಹಾಗಾದರೆ JOIN RANGAYANA ಎಂದು ಎಸ್ಸೆಮ್ಮೆಸ್ ಮಾಡಿ 09219592129 ನಂಬರ್‌ಗೆ ಕಳುಹಿಸಿ. (JOIN   ಮತ್ತು RANGAYANA  ಮಧ್ಯೆ SPACE ಇರಬೇಕು, ಹಾಗೂ ಎಲ್ಲ ಅಕ್ಷರಗಳೂ  CAPITAL ನಲ್ಲಿರಬೇಕು).ಎಸ್‌ಎಂಎಸ್‌ಗೆ ಯಾವುದೇ ಶುಲ್ಕವಿರುವುದಿಲ್ಲ.

ಲಿಪಿ-ಬಹುರೂಪಿ
ಸುಚಿತ್ರಾ ಆರ್ಟ್ ಗ್ಯಾಲರಿಗೆ ಭೇಟಿ ನೀಡಿದರೆ ಇಂದಿರಾಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ಐನ್‌ಸ್ಟಿನ್, ಸಿಪಿಕೆ, ದೇಜಗೌ ನಿಮ್ಮನ್ನು ಸ್ವಾಗತಿಸುತ್ತಾರೆ! ಹಾಗಂತ ಆಶ್ಚರ್ಯ ಪಡಬೇಡಿ. ಮೈಸೂರು ಆರ್ಟ್ ಸೆಂಟರ್ ವತಿಯಿಂದ `ದೃಶ್ಯ ಕಲೆಗೊಂದು ಅಸದೃಶ ನೆಲೆ~ ಎಂಬ ಶೀರ್ಷಿಕೆಯಡಿ ಏರ್ಪಡಿಸಿರುವ `ಲಿಪಿ-ಬಹುರೂಪಿ~ ಪ್ರದರ್ಶನದಲ್ಲಿ ಎಲ್ಲ ಸಾಹಿತಿಗಳು, ವಿಜ್ಞಾನಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹಸ್ತಾಕ್ಷರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ದೇಜಗೌ ಅಭಿನಯದ ಚಲನಚಿತ್ರ!
ಸಿ.ಲಕ್ಷ್ಮಣ್ ನಿರ್ದೇಶನದ `ನನ್ನ ಗೋಪಾಲ~ ಮಕ್ಕಳ ಚಲನಚಿತ್ರದಲ್ಲಿ ಹಿರಿಯ ಸಾಹಿತಿ, ನಾಡೋಜ ಡಾ.ದೇಜಗೌ ಅಭಿನಯಿಸಿದ್ದಾರೆ. ಈ ಚಿತ್ರದ ಪೋಸ್ಟರ್ ಬಹುತೇಕರ ಗಮನ ಸೆಳೆಯುತ್ತಿದೆ. ಬೆಂಗಳೂರಿನ ರಂಗಕಹಳೆ ಕ್ರಿಯೇಷನ್ ಚಿತ್ರ ನಿರ್ಮಾಣದ ಹೊಣೆ ಹೊತ್ತಿದೆ.

ನಾಟಕಗಳ ಛಾಯಾಚಿತ್ರ ಪ್ರದರ್ಶನ
ರಂಗಕರ್ಮಿ ರಾಜಶೇಖರ ಕದಂಬ ಅವರು ಕಲಾಮಂದಿರದಲ್ಲಿ ಏರ್ಪಡಿಸಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ನಾಟಕಗಳ ಛಾಯಾಚಿತ್ರಗಳ ಪ್ರದರ್ಶನ ಅತ್ಯಾಕರ್ಷಕವಾಗಿದೆ. ಸಿರಿ ಸಂಪಿಗೆ, ಬೆಪ್ಪು ತಕ್ಕಡಿ; ಬೋಳೆ ಶಂಕರ್, ಅಲಿಬಾಬಾ ಮತ್ತು ನಲ್ವತ್ತು ಕಳ್ಳರು, ಯಯಾತಿ, ಹಯವದನ, ಟಿಪ್ಪುವಿನ ಕನಸುಗಳು, ಕಿಸಾಗೌತಮಿ, ಮೂಕಜ್ಜಿಯ ಕನಸುಗಳು, ಹರಕೆಯ ಕುರಿ, ಪುಷ್ಪರಾಣಿ, ನಾಗಮಂಡಲ ಹೀಗೆ ಹತ್ತಾರು ನಾಟಕಗಳ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ.

ರೊಟ್ಟಿ, ಎಣಗಾಯಿ ಪಲ್ಯ
ವಸ್ತು ಪ್ರದರ್ಶನ ಮಳಿಗೆಯಲ್ಲಿ ಆರಂಭಿಸಿರುವ ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಎಣಗಾಯಿ ಪಲ್ಯದ ರುಚಿ ಸವಿಯಲು ಜನ ಮುಗಿಬೀಳುತ್ತಿದ್ದಾರೆ. ರೊಟ್ಟಿಯ ಪಕ್ಕದಲ್ಲೇ ಇರುವ ಧಾರವಾಡ ಗಿರ್ಮಿಟ್ (ಕಳ್ಳೆಪುರಿ) ಹಾಗೂ ಮಿರ್ಚಿ (ಬಜ್ಜಿ) ಬಾಯಲ್ಲಿ ನೀರೂರಿಸುತ್ತವೆ. ಕಬ್ಬಿನ ಹಾಲು, ಚಾಟ್ಸ್ ಗಳಿಗೂ ಕೊರತೆ ಇಲ್ಲ.

`ರಂಗ ಪಾಕ~ದ ರುಚಿ
ಬಹುರೂಪಿ ನಾಟಕೋತ್ಸವ ನೋಡಲು ಬರುವ ಕಲಾ ಪ್ರೇಕ್ಷಕರಿಗೆ ಭರ್ಜರಿ ಭೋಜನ ಉಣಬಡಿಸಲು `ರಂಗಪಾಕ~ ಆರಂಭವಾಗಿದೆ. ಕಲಾಮಂದಿರದ ಆವರಣದಲ್ಲಿ ವರ್ಷವಿಡೀ ತೆರೆದಿರುವ ಉಪಾಹಾರ ಮಂದಿರಕ್ಕೆ ನೂಕು ನುಗ್ಗಲು ಹೆಚ್ಚಾಗಿದೆ. ಇಡ್ಲಿ, ವಡೆ, ದೋಸೆ, ಖಾರಾ ಬಾತ್, ಕೇಸರಿ ಬಾತ್ ಸೇರಿದಂತೆ ಹಲವು ಬಗೆಯ ತಿಂಡಿಗಳೊಂದಿಗೆ `ರಂಗಾಸಕ್ತರ~ ರುಚಿ ತಣಿಸಲು `ರಂಗ ಪಾಕ~ ಸಿದ್ಧವಾಗಿದೆ.

ಪುಸ್ತಕ ಪ್ರದರ್ಶನ
ವಸ್ತು ಪ್ರದರ್ಶನದಲ್ಲಿ 15 ಮಳಿಗೆಗಳನ್ನು ಪುಸ್ತಕ ಪ್ರದರ್ಶನಕ್ಕೆ ನೀಡಲಾಗಿದೆ. ಮೈಸೂರು ವಿವಿ ಪ್ರಸಾರಾಂಗ, ಕಣಿವೆ ಪ್ರಕಾಶನ, ನವಕರ್ನಾಟಕ ಸೇರಿದಂತೆ ವಿವಿಧ ಪ್ರಕಾಶನಗಳ ಪುಸ್ತಕಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯ ಇವೆ. ಕೆಲವು ಪುಸ್ತಕಗಳಿಗೆ ಶೇ 50ರಷ್ಟು ರಿಯಾ ಯಿತಿ ನೀಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT