ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಾಯಣದ ನಿರ್ದೇಶಕರಾಗಿ ಬಿ.ವಿ.ರಾಜಾರಾಂ ಅಧಿಕಾರ ಸ್ವೀಕಾರ

Last Updated 8 ಸೆಪ್ಟೆಂಬರ್ 2011, 10:00 IST
ಅಕ್ಷರ ಗಾತ್ರ

ಮೈಸೂರು: ಲಿಂಗದೇವರು ಹಳೆಮನೆ ನಿಧನದಿಂದ ತೆರವಾಗಿದ್ದ ಮೈಸೂರಿನ ರಂಗಾಯಣದ ನಿರ್ದೇಶಕರಾಗಿ ಡಾ.ಬಿ.ವಿ.ರಾಜಾರಾಂ ಬುಧವಾರ ಅಧಿಕಾರ  ಸ್ವೀಕರಿಸಿದರು.

ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿದ ನಂತರ ಮಾತನಾಡಿದ ರಾಜಾರಾಂ `40 ವರ್ಷಗಳಿಂದ ನನಗೆ ರಂಗಭೂಮಿ ನಂಟಿದೆ. ರಂಗಾಯಣದ ಜೊತೆ ಉತ್ತಮ ಸಂಬಂಧವಿದ್ದು, ಸಿ.ಬಸವಲಿಂಗಯ್ಯ, ಪ್ರಸನ್ನ ಅವರು ನಿರ್ದೇಶಕರಾಗಿದ್ದಾಗ ಇಲ್ಲಿಗೆ  ಬರುತ್ತಿದ್ದೆ.

ರಂಗಾಯಣವನ್ನು ದೇಶದಲ್ಲಿ ಪ್ರತಿಷ್ಠಿತ ಕನ್ನಡ ರೆಪರ್ಟರಿಯಾಗಿ ಮಾಡುವ ಉದ್ದೇಶವಿದೆ. ರಾಜ್ಯದ ಪ್ರತಿಭೆಗಳನ್ನು ಬಳಸಿಕೊಂಡು ಅದ್ಬುತ ಪ್ರದರ್ಶನ ನೀಡುವ ಮೂಲಕ ಕರ್ನಾಟಕದ ರಂಗಪ್ರತಿಭೆಯನ್ನು ಎಲ್ಲಾ ಕಡೆ ಪ್ರದರ್ಶಿಸುವಂತೆ ಮಾಡುತ್ತೇನೆ~ ಎಂದರು.

 `ಹಳೆ ಮತ್ತು ಹೊಸ ತಲೆಮಾರಿನ ಕಲಾವಿದರನ್ನು ಒಂದುಗೂಡಿಸಿಕೊಂಡು ರಂಗಾಯಣಕ್ಕೆ ಒಂದು ಹೊಸ ರೂಪ ನೀಡುವುದಾಗಿ ಹೇಳಿದ ಅವರು `ರಾಷ್ಟ್ರೀಯ ನಾಟಕ ಶಾಲೆ~ಯಂತೆಯೇ ರಂಗಾಯಣವನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿದರು.

ಕಾಲೇಜು, ಬಹುರೂಪಿ ಹಾಗೂ ದಸರಾ ನಾಟಕಗಳಲ್ಲಿ ರಂಗಾಯಣದ ಕಲಾವಿದರನ್ನು ಒಟ್ಟಾಗಿ ಸೇರಿಸಿ ಉತ್ತಮ ನಾಟಕಗಳನ್ನು ಪ್ರದರ್ಶಿಸಲಾಗುವುದು. ಕಾ.ತ.ಚಿಕ್ಕಣ್ಣ ಅವರು ಹೆಚ್ಚುವರಿ ನಿರ್ದೇಶಕರಾಗಿ ಉತ್ತಮ ಕೆಲಸಗಳನ್ನು ಮಾಡಿದ್ದು, ಅವುಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.

ಮೈಸೂರಿನಲ್ಲೂ ಇದ್ದು ಕೆಲಸ ಮಾಡುತ್ತೇನೆ. ರಂಗಾಯಣದಲ್ಲಿ ಹೊಸ ಯೋಜನೆ ಜಾರಿಗೆ ತರುವ ಸಂಬಂಧ ಚರ್ಚಿಸಿ ಉತ್ತಮ ಕೆಲಸ ಮಾಡುತ್ತೇನೆ. ರಂಗಾಯಣ ನಿರ್ದೇಶಕರಾಗಿ ಬರಲು ನಾನು ಯಾವುದೇ ಲಾಭಿ ಮಾಡುವ ಅಗತ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಂಗಕರ್ಮಿಗಳಾದ ರಾಜಶೇಖರ ಕದಂಬ, ಶ್ರೀಕಂಠಗುಂಡಪ್ಪ, ಎಚ್.ಕೆ.ರಾಮನಾಥ್, ನಾಟಕ ಅಕಾಡೆಮಿ ಸದಸ್ಯ ನಾಗಚಂದ್ರ, ಕೃಷ್ಣಜನಮನ ಇತರರು ನಿರ್ದೇಶಕರಿಗೆ ಶುಭ ಕೋರಿದರು.

ನಿರ್ದೇಶಕರ ಪರಿಚಯ
56 ವಯಸ್ಸಿನ ಡಾ.ಬಿ.ವಿ.ರಾಜಾರಾಂ 100ಕ್ಕೂ ಹೆಚ್ಚಿನ ನಾಟಕಗಳಲ್ಲಿ ನಟ, ನಿರ್ದೇಶಕ, ಸಂಘಟಕ ಮತ್ತು ರಂಗತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಮೂಕಿ ಟಾಕಿ ಪ್ರದರ್ಶನ ನೀಡಿದ್ದಾರೆ. ದೂರದರ್ಶನ ಮತ್ತು ಆಕಾಶವಾಣಿ ಕಲಾವಿದರಾಗಿ ಕೆಲಸ ಮಾಡಿರುವ ಇವರು ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಮುಖ್ಯಮಂತ್ರಿ ನಾಟಕವನ್ನು ನಿರ್ದೇಶಿಸುವ ಮೂಲಕ ಮುಖ್ಯಮಂತ್ರಿ ಚಂದ್ರು ಅವರನ್ನು ರಂಗಕ್ಕೆ ತಂದ ಕೀರ್ತಿ ಇವರದು. `ಅಜಿತನ ಸಾಹಸಗಳು ಧಾರಾವಾಹಿಯಲ್ಲಿ ಅಜಿತನ ಪಾತ್ರ ನಿರ್ವಹಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಡಾ.ಗುಬ್ಬಿವೀರಣ್ಣ ರಂಗಪೀಠದಲ್ಲಿ 2003-04ರಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 38 ವರ್ಷಗಳು ರಂಗ ಚಟುವಟಿಕೆಯಲ್ಲಿ ತೊಡಗಿರುವ ಇವರ ಪ್ರಮುಖ ನಾಟಕಗಳೆಂದರೆ ಅಚಲಾಯತನ,  ಮೂಕಿ-ಟಾಕಿ, ಮೂಕಜ್ಜಿಯ ಕನಸುಗಳು, ಮೈಸೂರು ಮಲ್ಲಿಗೆ, ಮಂದ್ರ, ಕುವೆಂಪು ನಾಟಕಗಳು, ಕೈಲಾಸಂ ನಾಟಕಗಳು, ಶ್ರೀರಂಗರ ನಾಟಕಗಳು. 1971ರಲ್ಲಿ ಕಲಾಗಂಗೋತ್ರಿ ಹವ್ಯಾಸಿ ಕಲಾತಂಡ ಸ್ಥಾಪಿಸಿದ್ದು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT