ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಾಸಕ್ತ ವಕೀಲರ ಆಸಕ್ತ ಮುಖ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸಮಾನಾಸಕ್ತ ಯುವ ವಕೀಲರು ಸೇರಿ ತಮ್ಮ ಎಂದಿನ ಹರಟೆ, ಚರ್ಚೆಯ ಸಂದರ್ಭದಲ್ಲಿ ಹುಟ್ಟಿಕೊಂಡ ಹೊಸ ತಂಡ ಬೆಂಗಳೂರು ರಂಗಾಸಕ್ತ ವಕೀಲರು. ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಮಾನ ಅಭಿರುಚಿಯುಳ್ಳ ವಕೀಲರು ಸೇರಿ ತಮ್ಮ ರಜಾದಿನಗಳಲ್ಲಿ ರಂಗಶಿಬಿರಗಳನ್ನು ಆಯೋಜಿಸಿಕೊಂಡು ಒಂದು ಹೊಸನಾಟಕದೊಂದಿಗೆ ರಂಗಭೂಮಿಗೆ ಹೆಜ್ಜೆಯಿಟ್ಟಿದ್ದಾರೆ. ಅವರ ಹೊಸತಂಡದ ಮೊದಲ ಪ್ರಯೋಗವೇ  `ಈ ಮುಖದವರು~.

ಅಮೆರಿಕದ ರೆಗಿನಾಲ್ಡ್ ರೋಸ್ ಎಂಬ ನಾಟಕಕಾರ ಮತ್ತು ಟೆಲಿಚಿತ್ರಕತೆಗಾರ ಬರೆದ 12 ಆ್ಯಂಗ್ರಿ ಮೆನ್ ಎಂಬ ಇಂಗ್ಲಿಷ್ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದವರು ರಂಗನಿರ್ದೇಶಕರು, ಕತೆಗಾರರು ಹಾಗೂ ನಾಟಕಕಾರರಾದ ಎಸ್. ಸುರೇಂದ್ರನಾಥರು. ಇನ್ನು ಇದರ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತು ಯಶಸ್ವಿಯಾದವರು ಪ್ರಮೋದ್ ಶಿಗ್ಗಾಂವ್.

ಸುಮಾರು ಐವತ್ತರ ದಶಕದಲ್ಲಿ ರಚಿತವಾದ ಮೂಲ ಇಂಗ್ಲಿಷ್ ನಾಟಕ  12 ಆ್ಯಂಗ್ರಿಮೆನ್ ಹಲವಾರು ಭಾಷೆಗಳಿಗೆ ಅನುವಾದಗೊಂಡಿದೆ. ಅಷ್ಟೆ ಅಲ್ಲ ಹಲವು ಭಾಷೆಗಳಲ್ಲಿ ಸಿನಿಮಾ ಆಗಿಯೂ ಪ್ರಸಿದ್ಧವಾಗಿದೆ. ಇದೇ ಕಥಾಹಂದರವನ್ನು ಇಟ್ಟುಕೊಂಡು ಇತ್ತೀಚೆಗೆ ಕನ್ನಡದಲ್ಲಿ ಬಂದ ಬಹುತಾರಾಗಣದ ಚಿತ್ರವನ್ನೂ ನೆನೆಯಬಹುದು.

ಹತ್ತೊಂಭತ್ತು ವರ್ಷದ ಹುಡುಗನೊಬ್ಬನನ್ನು, ತನ್ನ ತಂದೆಯನ್ನು ಕೊಲೆಗೈದ ಆರೋಪದ ಮೇಲೆ ಬಂಧಿಸಲಾಗಿದೆ. ಕೊಲೆಯನ್ನು ನೋಡಿದೆ ಎಂದು ಹೇಳಿದ ಪ್ರತ್ಯಕ್ಷಸಾಕ್ಷಿಗಳಾದ ಒಬ್ಬ ಹಣ್ಣುಹಣ್ಣು ಮುದುಕ, ಮತ್ತೋರ್ವ ಹೆಂಗಸಿನ ವಿಚಾರಣೆಯ ನಂತರ ಕೋರ್ಟು ಯಾವ ತೀರ್ಮಾನಕ್ಕೂ ಬರಲಾಗದೆ ಒಂದು ವಿಶೇಷ ಆಯೋಗವನ್ನು ನಿಯೋಜಿಸಿದೆ. ಹತ್ತುಜನರ ಆ ನಿಯೋಗದಲ್ಲಿ ಸಮಾಜದ ಹಲವು ವೃತ್ತಿ, ವರ್ಗಗಳಿಂದ ಬಂದ ಒಬ್ಬೊಬ್ಬ ನ್ಯಾಯಾಧಿಕಾರಿಯಿದ್ದಾನೆ.
 
ಅವರೆಲ್ಲರೂ ಸೇರಿ ಒಮ್ಮತದಿಂದ ನೀಡಿದ ತೀರ್ಪಿನ ಅನುಸಾರ ಕೋರ್ಟು ಅವನನ್ನು ಅಪರಾಧಿಯನ್ನಾಗಿಯೋ, ಅಥವ ನಿರಪರಾಧಿಯನ್ನಾಗಿಯೋ ತೀರ್ಪು ನೀಡುತ್ತದೆ.
ಆ ಹತ್ತು ಜನರ ಆಯೋಗದಲ್ಲಿ ಒಬ್ಬೇಒಬ್ಬನ ತೀರ್ಪು ಬೇರೆಯಾದರೂ ನಡೆಯುವುದಿಲ್ಲ.
 
ಒಮ್ಮತವಿರಲೇಬೇಕು. ಆ ಒಮ್ಮತಕ್ಕಾಗಿ ಅವರೆಲ್ಲ ಈಗಾಗಲೇ ಹಲವು ದಿನಗಳಿಂದ ಸೇರುತ್ತಲೇ ಇದ್ದಾರೆ. ನಾಟಕ ಪ್ರಾರಂಭವಾದಾಗ 9 ಜನರು ಅವನನ್ನು ಅಪರಾಧಿ ಎಂದು ಒಪ್ಪಿದ್ದಾಗ ಒಬ್ಬೇ ಒಬ್ಬ ಮಾತ್ರ ನಿರಪರಾಧಿ ಎಂದು ಎದುರು ನಿಲ್ಲುತ್ತಾನೆ.
 
ಆ ಒಬ್ಬ ನ್ಯಾಯಾಧಿಕಾರಿಯ ತರ್ಕ, ಆಲೋಚನೆ, ಸಮಯೋಚಿತ ವಿಶ್ಲೇಷಣೆಯ ತರುವಾಯ ಒಬ್ಬೊಬ್ಬರೇ ತಮ್ಮ ತೀರ್ಪನ್ನು ಬದಲಾಯಿಸಿಕೊಂಡು, ಸತ್ಯವನ್ನು ಅರಿತುಕೊಂಡು ನಾಟಕ ಮುಕ್ತಾಯದ ಹಂತದಲ್ಲಿ ಅಪರಾಧಿ ಎಂದು ಖಂಡತುಂಡವಾಗಿ ವಾದಿಸುತ್ತಿದ್ದವರೆಲ್ಲ ಅವನನ್ನು ನಿರಪರಾಧಿ ಎಂದು ಸರ್ವಸಮ್ಮತವಾಗಿ ಒಪ್ಪಿಕೊಳ್ಳುವ ಮೂಲಕ ನಾಟಕ ಅಂತ್ಯವನ್ನು ಕಾಣುತ್ತದೆ.

ನಮ್ಮ ಇವತ್ತಿನ ಶಾಸನ, ನ್ಯಾಯ, ಕಾನೂನು, ತೀರ್ಪುಗಳ ಸಂದರ್ಭದಲ್ಲಿ ಈ ನಾಟಕ ಅತ್ಯಂತ ಪ್ರಸ್ತುತತೆಯನ್ನು ತೋರಗೊಡುತ್ತಿದೆ. ಈಗಾಗಲೇ ಹಲವು ವರ್ಷಗಳಿಂದ ಹಲವು ಆಯೋಗಗಳನ್ನು ನೋಡುತ್ತಬಂದಿದ್ದೇವೆ. ನೀರಿಗೊಂದು, ನೆಲಕ್ಕೊಂದು, ವಿಷಗಾಳಿಗೊಂದು, ತರಂಗಕ್ಕೊಂದು, ಅಕ್ರಮಕ್ಕೊಂದು, ಸಕ್ರಮಕ್ಕೊಂದು, ಹೀಗೆ ಪ್ರತಿಯೊಂದಕ್ಕೂ ಒಂದೊಂದು ಆಯೋಗವು ರೂಪುಗೊಳ್ಳುತ್ತಲೇ ಇದೆ.

ಅಂಥ ಒಂದು ಆಯೋಗ ಇತ್ತು ಎಂದು ತಿಳಿಯುವುದೇ ನಮಗೆ ಒಂದೋ ಮತ್ತೆ ಹಿಂಸಾಚಾರ ಭುಗಿಲೆದ್ದಾಗ, ಅಥವಾ ಆಯೋಗದ ಹೊರೆಗಟ್ಟಲೆ ತೀರ್ಪು ಹೊರಬಿದ್ದಾಗ! ಪ್ರಸ್ತುತ ನಾಟಕವು ಒಂದು ಆಯೋಗದ ಕಷ್ಟನಷ್ಟಗಳನ್ನು, ಜಟಿಲವಾದ ಸತ್ಯದ ಅನ್ವೇಷಣೆಯನ್ನು, ಸುಳ್ಳಿನ ವಿಜಂಬಣೆಯನ್ನು, ವೈಯಕ್ತಿಕತೆ ಮತ್ತು ಸತ್ಯನಿಷ್ಟತೆಯನ್ನು ನಿಭಾಯಿಸುವಲ್ಲಿ ತಲೆದೋರುವ ಸಂದಿಗ್ದಗಳನ್ನು ತುಂಬ ಮನಮುಟ್ಟುವಂತೆ ನಿರೂಪಿಸುತ್ತದೆ.

ಒಂದು ಒಳ್ಳೆಯ ನಾಟಕವನ್ನು ಆರಿಸಿಕೊಂಡು ಉತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ  ಬೆಂಗಳೂರು ರಂಗಾಸಕ್ತ ವಕೀಲರು  ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ನಿಜಕ್ಕೂ ಒಂದು ಆಯೋಗದಲ್ಲಿ ಹೇಗೆ ಸಮಾಜದ ಹಲವು ವೃತ್ತಿ, ವರ್ಗಗಳಿಂದ ಬಂದ ಪ್ರತಿನಿಧಿಗಳು ತೀರ್ಪುಗಾರಿಕೆ ಮಾಡಿದರೆ ಸತ್ಯದ ಹಲವು ಮಗ್ಗಲುಗಳ ಅನಾವರಣ ಸಾಧ್ಯವೋ ಹಾಗೆಯೇ ರಂಗಭೂಮಿಯಲ್ಲಿಯೂ ಕೂಡ ಸಮಾಜದ ಹತ್ತುಹಲವು ಕ್ಷೇತ್ರಗಳಿಂದ ಬಂದು ಸೇರಿಕೊಂಡಾಗ ರಂಗಭೂಮಿಯ ಹರಹು ಹಿಗ್ಗುತ್ತದೆ. ಹಾಗೆಂದು ಅವರೆಲ್ಲ ಕಲೆ, ರಂಗಭೂಮಿಗೆ ತಾವೇನೋ ಉಪಕಾರ ಮಾಡುತ್ತಿದ್ದೇವೆ ಎಂಬ ಹುಸಿ ಉದಾತ್ತ ಮನೋಭಾವದಿಂದ ಬಂದರೆ ಆಗುವುದಿಲ್ಲ. ಕಲೆ, ರಂಗಭೂಮಿಯಿಂದ ಬದುಕನ್ನು ಹೊಸದಿಕ್ಕಿನಿಂದ ನೋಡಿ ಕಲಿಯುವ ಮನೋಭಾವದಿಂದ ಬಂದರೆ ಮಾತ್ರ ಎರಡೂ ಕ್ಷೇತ್ರಕ್ಕೆ ಲಾಭವಾಗಬಲ್ಲುದು.

ಈ ರೀತಿಯ ಮನೋಸ್ಥಿತಿಯನ್ನು ಹೊತ್ತ ತಂಡದ ಬದ್ಧತೆ ಪ್ರದರ್ಶನದ ಉದ್ದಕ್ಕೂ ಕಾಣುತ್ತದೆ. ಇವರನ್ನೆಲ್ಲ ಹುರಿಗೊಳಿಸಿ, ರಂಗಭೂಮಿಯ ಆಳ-ಅಗಲಗಳನ್ನು ತೋರಿಸಿಕೊಟ್ಟು ಸಮರ್ಥವಾಗಿ ನಾಟಕವನ್ನು ಕಟ್ಟಿದವರು ನಿರ್ದೇಶಕರು.

ಕರ್ನಾಟಕದಾದ್ಯಂತ ಸುಮಾರು 60ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ ಕನ್ನಡ ರಂಗಭೂಮಿಯಲ್ಲಿ ನಿರ್ದೇಶಕರಾಗಿ, ರಂಗವಿನ್ಯಾಸಕರಾಗಿ, ವಸ್ತ್ರವಿನ್ಯಾಸಕರಾಗಿ ಹೆಸರಾಗಿದ್ದಾರೆ ಪ್ರಮೋದ್ ಶಿಗ್ಗಾಂವ್.  ಪಂಪ ಭಾರತ,  ಸುಲ್ತಾನ್ ಟಿಪ್ಪು, ಸೆಜುವಾನ್ ನಗರದ ಸಾಧ್ವಿ,  ಘಾಸಿರಾಂ ಕೊತ್ವಾ ,  ಮಿತ್ತಬೈಲ್ ಯಮುನಕ್ಕ, ಇವರ ನಿರ್ದೇಶನದ ಪ್ರಮುಖ ನಾಟಕಗಳು. ಪ್ರತಿಯೊಬ್ಬ ನಟರನ್ನೂ ಒಂದೊಂದು ಪಾತ್ರವನ್ನಾಗಿ ರೂಪುಗೊಳಿಸುವಲ್ಲಿ ನಿರ್ದೇಶಕರ ಶ್ರಮ ಎದ್ದುಕಾಣುತ್ತದೆ. ಹಾಗೆಯೇ ನಟರೂ ಕೂಡ ತಮ್ಮ ವೃತ್ತಿಯ ಗೊಜಗೊಂಡಗಳನ್ನೆಲ್ಲ ಮರೆತು, ಪಾತ್ರಗಳಲ್ಲಿ ತಲ್ಲೆನರಾಗಿ ಅಭಿನಯಿಸಿದ್ದು ಶ್ಲಾಘನೀಯ. ರಾಘವೇಂದ್ರ ಬಿವಿಡಿ, ಎಂ. ರವಿಕುಮಾರ್, ಎಚ್‌ಎಮ್ ವಿಜಯ್‌ಕುಮಾರ್, ರಾಘವೇಂದ್ರ ಕಟ್ಟಿಮನಿ, ಆನಂದ್ ವಿ, ಜಿಟಿ ಯತೀಶ್, ದಿನೇಶ್ ಎ. ಎಸ್. ಎಂ. ದಿವಾಕರ ಮದ್ದೂರ್, ನಾಚೇಗೌಡ ಎಲ್ಲರೂ ಪಾತ್ರಗಳಾಗಿ ತಾದಾತ್ಮ್ಯ ಸಾಧಿಸಿದ್ದರು.

ಅದರಲ್ಲೂ ಕಿರಣ್ ವಿ. ಆರ್. ಮತ್ತು ಶ್ರೀಕಾಂತ್ ಪಾಟೀಲ್ ಅವರು ವೃತ್ತಿಪರ ನಟರಿಗೂ ಕಡಿಮೆಯಿರದಂತೆ ಅಭಿನಯಿಸಿದ್ದು ಪ್ರಯೋಗದ ಯಶಸ್ಸಿಗೆ ಇನ್ನೂ ಸಹಾಯಮಾಡಿತು. ಹಲವು ಸಣ್ಣಪುಟ್ಟ ಲೋಪದೋಷಗಳನ್ನು ಹೊರತುಪಡಿಸಿದರೆ ಒಂದು ಹೊಸ ತಂಡಕ್ಕೆ ಇದಕ್ಕಿಂತ ಒಳ್ಳೆಯ ಮುನ್ನುಡಿ ಬೇಕಿಲ್ಲ. ಇನ್ನೂ ಹೆಚ್ಚಿನ ಪ್ರದರ್ಶನಗಳನ್ನು ನೀಡುತ್ತ, ನಿರಂತರವಾದ ರಂಗಚಟುವಟಿಕೆಯಲ್ಲಿ ಭಾಗಿಯಾಗುವುದರ ಮೂಲಕ ಕನ್ನಡ ರಂಗಭೂಮಿ ಮತ್ತು ನ್ಯಾಯಾಂಗ ಎರಡಕ್ಕೂ ಸಮ್ಯಕ್‌ನ್ಯಾಯವನ್ನು ಒದಗಿಸುವಂತಾಗಲಿ ಎಂದು ಹಾರೈಸೋಣ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT