ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೀಲಾ ರಚಿತಾ

Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

‘ನನಗೆ ‘ಪ್ರೇಮಲೋಕ’ದ ಜೂಹಿ ಚಾವ್ಲಾರಂತೆ ಮುದ್ದುಮುದ್ದಾಗಿ ಕಾಣಿಸಿಕೊಳ್ಳಲು ಇಷ್ಟ’ ಎಂದು ನಕ್ಕರು ನಟಿ ರಚಿತಾ ರಾಮ್‌.
‘ಬುಲ್‌ಬುಲ್‌’ ಬೆಡಗಿ ‘ದಿಲ್‌ ರಂಗೀಲಾ’ ಚಿತ್ರದಲ್ಲಿ ಗಣೇಶ್‌ಗೆ ಜೋಡಿಯಾಗುತ್ತಿದ್ದಾರೆ.

‘ಮಳೆಯಲಿ ಜೊತೆಯಲಿ’ ಚಿತ್ರದ ಬಳಿಕ ಗಣೇಶ್‌ ಮತ್ತು ನಿರ್ದೇಶಕ ಪ್ರೀತಂ ಗುಬ್ಬಿ ಮತ್ತೆ ಜೊತೆಯಾಗಿದ್ದಾರೆ. ರಚಿತಾ ಈ ಚಿತ್ರದಲ್ಲಿ ಗೋವಾ ಹುಡುಗಿ. ‘ದಿಲ್ ರಂಗೀಲಾ’ದ ಹೆಚ್ಚಿನ ಬಣ್ಣಗಳು ಕಾಣುವುದು ಗೋವಾದಲ್ಲಿಯೇ. ಈ ಚಿತ್ರದಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುತ್ತಿರುವ ಅವರಿಗೆ, ‘ಪ್ರೇಮಲೋಕ’ದಲ್ಲಿ ಜೂಹಿ ಚಾವ್ಲಾರಂತೆ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುವುದು ಇಷ್ಟವಂತೆ. ಗ್ಲಾಮರ್‌ ಎಂದರೆ ದೇಹ ಪ್ರದರ್ಶನವಲ್ಲ. ಆಧುನಿಕ ದಿರಿಸಿನಲ್ಲಿ ಸಭ್ಯತೆಯ ಎಲ್ಲೆ ಮೀರದಿರುವುದು ಎಂದು ವ್ಯಾಖ್ಯಾನಿಸುತ್ತಾರೆ ಅವರು.

‘ಬುಲ್‌ಬುಲ್‌’ ಚಿತ್ರೀಕರಣ ಮುಗಿಯುತ್ತಿದ್ದಂತೆ ದಿನಕರ್‌ ತೂಗುದೀಪ ನಿರ್ದೇಶನದ ‘ದಿಲ್‌ ಕಾ ರಾಜ’ ಚಿತ್ರಕ್ಕೆ ರಚಿತಾ ಆಯ್ಕೆಯಾಗಿದ್ದರು. ಆದರೆ ದಿನಕರ್ ಕಥೆಯಲ್ಲಿ ಕೆಲ ಬದಲಾವಣೆಗೆ ಮುಂದಾಗಿರುವುದರಿಂದ ಸಿನಿಮಾ ಸೆಟ್ಟೇರುವುದು ತಡವಾಗಿದೆ. ಅದರ ನಡುವಿನ ಅವಧಿಯಲ್ಲಿ ‘ದಿಲ್‌ ರಂಗೀಲಾ’ ಮುಗಿಸುವುದು ರಚಿತಾ ಉದ್ದೇಶ.

‘ದಿಲ್‌ ರಂಗೀಲಾ’ದಲ್ಲಿ ಪ್ರೇಮಕಥೆಯೂ ಇದೆ, ಹಾಸ್ಯವೂ ಹೇರಳವಾಗಿದೆ. ಪ್ರೀತಂ ಗುಬ್ಬಿ ಕಥೆ ವಿವರಿಸುವಾಗ ನಗು ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಚಿತ್ರ ಪರಿಪೂರ್ಣ ಮನರಂಜನೆ ನೀಡುತ್ತದೆ ಎನ್ನುವ ರಚಿತಾರಿಗೆ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ಭರವಸೆ ಇದೆ.

ಮೊದಲ ಚಿತ್ರವೇ ನೂರು ದಿನದ ಪ್ರದರ್ಶನ ಪೂರೈಸಿದ ಖುಷಿಯಲ್ಲಿರುವ ರಚಿತಾ, ‘ನನ್ನ ಎಲ್ಲಾ ಸಿನಿಮಾಗಳೂ ನೂರು ದಿನ ಓಡಲಿ ದೇವರೇ’ ಎಂದು ಪ್ರಾರ್ಥಿಸುತ್ತಾರಂತೆ.

ಒಂದರ ಹಿಂದೊಂದು ಅವಕಾಶಗಳು ಬರುತ್ತಿದ್ದರೂ ರಚಿತಾ ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲ. ತೂಗುದೀಪ ಪ್ರೊಡಕ್ಷನ್‌ ಬ್ಯಾನರ್‌ನಿಂದ ಚಿತ್ರರಂಗಕ್ಕೆ ಬಂದಿರುವುದರಿಂದ ಅವರ ಚಿತ್ರಗಳಿಗೆ ಆದ್ಯತೆ. ಹೀಗಾಗಿ ‘ದಿಲ್‌ ಕಾ ರಾಜ’ ಮುಗಿಯುವವರೆಗೆ ಬೇರೆ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುತ್ತಾರೆ ಅವರು.

‘ಬುಲ್‌ಬುಲ್‌’ನಲ್ಲಿ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದರೂ, ಅದರ ಶ್ರೇಯಸ್ಸನ್ನು ರಚಿತಾ ನಿರ್ದೇಶಕರಿಗೆ ವರ್ಗಾಯಿಸುತ್ತಾರೆ. ತಮಗೆ ಬೇಕಾಗಿದ್ದನ್ನು ನಿರ್ದೇಶಕರು ಕಲಾವಿದರಿಂದ ಹೆಕ್ಕಿಸುತ್ತಾರೆ. ನಾವು ಅವರ ಹೇಳಿದಂತೆ ಅಭಿನಯಿಸುತ್ತೇವೆ ಅಷ್ಟೇ ಎಂದು ವಿನಯದಿಂದ ನುಡಿಯುತ್ತಾರೆ.

ರಚಿತಾರ ಅಕ್ಕ ನಿತ್ಯಾರಾಮ್‌ ಕೂಡ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಹಿಂದೆ ಧಾರಾವಾಹಿಯೊಂದರಲ್ಲಿ ನಟಿಸಿದ್ದರೂ, ಅವರು ಅಭಿನಯವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮದುವೆಯಾಗಿ ಕೌಟುಂಬಿಕ ಜವಾಬ್ದಾರಿಯಲ್ಲಿ ಮುಳುಗಿದ್ದ ನಿತ್ಯಾ, ಮನೆಯವರ ಒತ್ತಾಸೆ ಮೇರೆಗೆ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ.

‘ಚಿಕ್ಕಂದಿನಿಂದಲೂ ನಟಿಯಾಗಬೇಕು ಎಂಬ ಆಸೆ ಹೊತ್ತವಳು ಅಕ್ಕ. ಆದರೆ ಆಕೆ ಓದು, ಸಂಸಾರದಲ್ಲಿ ಮುಳುಗಿದಳು. ಎರಡನೇ ತರಗತಿಯಿಂದ, ಪಿಯುಸಿವರೆಗೂ ಯಾರು ಕೇಳಿದರೂ ಕೆಪಿಎಸ್‌ ಮಾಡಿ ಪೊಲೀಸ್‌ ಆಗುತ್ತೇನೆ, ಇಲ್ಲವೇ ಲಾಯರ್‌ ಆಗುತ್ತೇನೆ ಎನ್ನುತ್ತಿದ್ದವಳು ನಾನು. ಅಭಿನಯದ ಕನಸನ್ನು ಕಟ್ಟಿಕೊಂಡಿರಲೇ ಇಲ್ಲ. ಆದರೆ ಯಾವಾಗ ‘ಅರಸಿ’ ಧಾರಾವಾಹಿಯಲ್ಲಿ ಅವಕಾಶ ಅರಸಿ ಬಂದಿತೋ, ನನ್ನ ಹಾದಿಯೇ ಬದಲಾಯಿತು’ ಎಂದು ಗುಳಿಕೆನ್ನೆ ಅರಳಿಸಿ ನಗುತ್ತಾರೆ ರಚಿತಾ.

ಮೊದಲ ಹೆಜ್ಜೆಯಲ್ಲೇ ಯಶ ಕಂಡಿರುವುದು ರಚಿತಾರಿಗೆ ಖುಷಿ ತಂದಿದೆ. ಜೊತೆಗೆ ಯಶಸ್ವಿ ನಿರ್ದೇಶಕರ ಎರಡು ಚಿತ್ರಗಳು ಕೈಯಲ್ಲಿವೆ. ಹೀಗಿರುವಾಗ ಅಹಂಕಾರವೆನ್ನುವುದು ಸುಲಭವಾಗಿ ನಮ್ಮೊಳಗೆ ಇಳಿಯುತ್ತದೆ. ಕಲಾವಿದ ಬೆಳೆಯುವುದು, ಜನ ಮೆಚ್ಚುವುದು ಅಹಂನಿಂದ ದೂರವಿದ್ದಾಗ ಮಾತ್ರ. ಎಷ್ಟೇ ಚಿತ್ರಗಳನ್ನು ಮಾಡಲಿ, ಎಷ್ಟೇ ಸೋಲು ಗೆಲುವುಗಳನ್ನು ಕಾಣಲಿ ನಾನು ಬದಲಾಗುವುದಿಲ್ಲ ಎನ್ನುವ ರಚಿತಾ, ಆದ್ಯತೆ ನೀಡುವುದು ತಮ್ಮ ಪಾತ್ರಗಳಿಗಂತೆ. ಒಳ್ಳೆಯ ಪಾತ್ರ, ಕಥೆಯ ಜೊತೆ ನಿರ್ದೇಶಕ, ನಂತರ ನಿರ್ಮಾಣ ತಂಡವೂ ಮುಖ್ಯ ಎನ್ನುತ್ತಾರೆ ರಚಿತಾ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT