ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗು ತುಂಬಿದ ತಾರೆಯರು

Last Updated 30 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಗ್ರೇಟರ್ ನೊಯಿಡಾ (ಪಿಟಿಐ): ಚೊಚ್ಚಲ ಇಂಡಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ-1 ರೇಸ್ ಪ್ರೇಕ್ಷಕರಿಗೆ ಹಲವು ರೀತಿಯಲ್ಲಿ ಸ್ಮರಣೀಯ ಎನಿಸಿಕೊಂಡಿತು. ಬುದ್ಧ ಸರ್ಕೀಟ್‌ನಲ್ಲಿ ವಿವಿಧ ಕಡೆ ಇರುವ ಸ್ಟ್ಯಾಂಡ್‌ಗಳಲ್ಲಿ ಭಾನುವಾರ ಸುಮಾರು 95 ಸಾವಿರಕ್ಕೂ ಅಧಿಕ ಪ್ರೇಕ್ಷಕರು ನೆರೆದಿದ್ದರು.

ವಿಶ್ವದ ಪ್ರಮುಖ ಚಾಲಕರನ್ನು ಹತ್ತಿರದಿಂದ ನೋಡುವ ಜೊತೆಗೆ ಭಾರತದ ಕ್ರಿಕೆಟ್ ಹಾಗೂ ಬಾಲಿವುಡ್ ತಾರೆಯರನ್ನು ನೋಡುವ ಅವಕಾಶವೂ ಹಲವರಿಗೆ ಲಭಿಸಿತು. ಬಾಲಿವುಡ್ ಮತ್ತು ಕ್ರಿಕೆಟ್ ಆಟಗಾರರ ದಂಡೇ ಅಲ್ಲಿ ನೆರೆದಿತ್ತು.

ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಹರಭಜನ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್ ಹಾಜರಿದ್ದರು. `ಫಾರ್ಮುಲಾ ಒನ್ ರೇಸ್ ನಿಜವಾಗಿಯೂ ಅದ್ಭುತ. ಆದರೆ ಜನಪ್ರಿಯತೆಯಲ್ಲಿ ಅದು ಕ್ರಿಕೆಟ್‌ನ್ನು ಮೀರಿಸಲು ಸಾಧ್ಯವಿಲ್ಲ~ ಎಂದು ಯುವರಾಜ್ ನುಡಿದರು. `ಭಾರತದಲ್ಲಿ ಜನಪ್ರಿಯತೆಯ ದೃಷ್ಟಿಯಲ್ಲಿ ಕ್ರಿಕೆಟ್‌ನ್ನು ಮೀರಿಸಲು ಎಫ್-1 ಗೆ ಸಾಧ್ಯವಿಲ್ಲ.

ಏಕೆಂದರೆ ಇದು ವರ್ಷಕ್ಕೊಮ್ಮೆ ನಡೆಯುತ್ತದೆ. ಆದರೆ ಈ ರೇಸ್‌ಗೆ ಭಾರತದಲ್ಲಿ ಉಜ್ವಲ ಭವಿಷ್ಯವಿದೆ~ ಎಂದು ಯುವರಾಜ್ ತಿಳಿಸಿದರು. `ರೇಸ್‌ನ ಆರಂಭದ ಕ್ಷಣ ರೋಮಾಂಚನ ಉಂಟುಮಾಡಿದೆ. ಕಾರುಗಳ ಎಂಜಿನ್‌ನ ಶಬ್ದವನ್ನು ಬೇರೆಲ್ಲೂ ಕೇಳಲು ಸಾಧ್ಯವಿಲ್ಲ~ ಎಂದರು.

ಬುದ್ಧ ಟ್ರ್ಯಾಕ್‌ನಲ್ಲಿ ಬಾಲಿವುಡ್ ತಾರೆಯರ ಸಾನಿಧ್ಯ ರೇಸ್‌ಗೆ ಹೊಸ ರಂಗು ತುಂಬಿತು. ಶಾರೂಖ್ ಖಾನ್, ಅರ್ಜುನ್ ರಾಂಪಾಲ್, ಸಂಜಯ್ ಕಪೂರ್, ಫರ್ದೀನ್ ಖಾನ್, ದೀಪಿಕಾ ಪಡುಕೋಣೆ, ಪ್ರೀತಿ ಜಿಂಟಾ ಒಳಗೊಂಡಂತೆ ಪ್ರಮುಖ ನಟ, ನಟಿಯರು ರೇಸ್ ವೀಕ್ಷಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಚಾಂಪಿಯನ್ ಸೆಬಾಸ್ಟಿಯನ್ ವೆಟೆಲ್‌ಗೆ ಟ್ರೋಫಿ ನೀಡಿದರು.

ವೆಲ್ಡನ್, ಸಿಮೊನ್‌ಚೆಲಿ ಸ್ಮರಣೆ: ಇತ್ತೀಚೆಗೆ ರೇಸಿಂಗ್ ವೇಳೆ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ಚಾಲಕರಾದ ಡ್ಯಾನ್ ವೆಲ್ಡನ್ ಮತ್ತು ಮಾರ್ಕೊ ಸಿಮೊನ್‌ಚೆಲಿ ಅವರಿಗೆ ಬುದ್ಧ ಟ್ರ್ಯಾಕ್‌ನಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಇಂಡಿಯನ್ ಗ್ರ್ಯಾನ್ ಪ್ರಿ ರೇಸ್‌ನಲ್ಲಿ ಪಾಲ್ಗೊಂಡ ಎಲ್ಲ 12 ತಂಡಗಳ ಚಾಲಕರು ಹಾಗೂ ಹಿರಿಯ ಅಧಿಕಾರಿಗಳು ಬುದ್ಧ ಟ್ರ್ಯಾಕ್‌ನ ಗ್ರ್ಯಾಂಡ್ ಸ್ಟ್ಯಾಂಡ್‌ನ ಮುಂಭಾಗದಲ್ಲಿ ಸಾಲಾಗಿ ನಿಂತು ಒಂದು ನಿಮಿಷದ ಮೌನ ಆಚರಿಸಿದರು. ಸಚಿನ್ ತೆಂಡೂಲ್ಕರ್ ಕೂಡಾ ಪಾಲ್ಗೊಂಡಿದ್ದರು. ಅವರನ್ನು ಫಾರ್ಮುಲಾ-1 ಮುಖ್ಯಸ್ಥ ಬೆರ್ನೀ ಎಕ್ಸೆಲ್‌ಸ್ಟೋನ್ ಆಹ್ವಾನಿಸಿದ್ದರು.

ಲಾಸ್ ಏಂಜಲೀಸ್‌ನಲ್ಲಿ ನಡೆದ ಇಂಡಿ ಕಾರ್ ರೇಸ್ ವೇಳೆ ನಡೆದ ಅಪಘಾತದಲ್ಲಿ ವೆಲ್ಡನ್ ಸಾವನ್ನಪ್ಪಿದ್ದರು. ಸಿಮೊನ್‌ಚೆಲಿ ಮಲೇಷ್ಯನ್ ಮೋಟೋ ಜಿಪಿ (ಬೈಕ್ ರೇಸ್) ವೇಳೆ ನಡೆದ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದರು. ಇಂಡಿಯನ್ ಗ್ರ್ಯಾನ್ ಪ್ರಿ ರೇಸ್‌ನಲ್ಲಿ ಮೊದಲ ಮೂರು ಸ್ಥಾನ ಪಡೆದ ಸೆಬಾಸ್ಟಿಯನ್ ವೆಟೆಲ್, ಜೆನ್ಸನ್ ಬಟನ್ ಮತ್ತು ಫೆರ್ನಾಂಡೊ ಅಲೊನ್ಸೊ ರೇಸ್ ಬಳಿಕವೂ ಇವರಿಬ್ಬರನ್ನು ಸ್ಮರಿಸಿದರು. ಈ ಮೂವರೂ ತಮ್ಮ ಗೆಲುವನ್ನು ಮೃತರಿಗೆ ಅರ್ಪಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT