ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗು...ಗುಂಗು

Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವರ್ಷವಿಡೀ ದುಡಿದ ದೇಹಕ್ಕೆ ಒಂದಷ್ಟು ವಿಶ್ರಾಂತಿ, ಮನಸ್ಸಿಗೆ ಆಹ್ಲಾದ, ವಯಸ್ಸು ನೆನಪಾಗದಂಥ ಉತ್ಸಾಹ ಮರಳಿ ಬರುವುದೇ ಈ ಕ್ರಿಸ್ಮಸ್‌ ಸಂದರ್ಭದಲ್ಲಿ. ಹೀಗಾಗಿಯೇ ಕ್ರಿಸ್ಮಸ್‌ಗೆ ‘ಸೆಲಬ್ರೇಷನ್‌’ ಎಂದು ಕರೆಯಲಾಗುತ್ತದೆ.

ಕ್ರಿಸ್ಮಸ್‌ ಅಡುಗೆ ಆಯಾಯ ಪ್ರದೇಶದ ಆಹಾರ ಸಂಸ್ಕೃತಿಯನ್ನು ಅವಲಂಬಿಸಿದೆ. ಆದರೂ ಕ್ರಿಸ್ಮಸ್‌ ಕೇಕ್‌, ಕ್ರಿಸ್ಮಸ್‌ ಪುಡ್ಡಿಂಗ್‌ ಮತ್ತು ಟರ್ಕಿ ಕೋಳಿ ಖಾದ್ಯ ಸಾಮಾನ್ಯವಾದವು. ಕೆಲವೊಬ್ಬರು ಒಂದು ತಿಂಗಳ ಮುಂಚೆಯಿಂದಲೇ ಕ್ರಿಸ್ಮಸ್‌ಗಾಗಿ ಖಾದ್ಯ, ವೈನ್‌ಗಳ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಪ್ಲಮ್‌ ಕೇಕ್‌ ತಯಾರಿಸಲು ಕೆಲವು ವಾರಗಳ ಹಿಂದೆಯೇ ಒಣ ಹಣ್ಣುಗಳನ್ನು ವೈನ್‌ಗಳಲ್ಲಿ ನೆನೆಸಿಟ್ಟು ಅವುಗಳಿಂದ ತಯಾರಿಸಿದ ಕೇಕ್‌ ಸೇವಿಸಲು ಸಿದ್ಧವಾಗಿದೆ.

‘ಕ್ರಿಸ್ಮಸ್‌ ಆಚರಣೆ ಕೂಡಾ ಬೇರೆ ಧರ್ಮಗಳ ಹಬ್ಬಗಳಂತೆಯೇ ಇರುತ್ತದೆ. ಅದು ಸಂಭ್ರಮ, ಸಡಗರದ ಹಬ್ಬ. ಹೀಗಾಗಿ ಅಂದು ತಮಗಿಷ್ಟದ ಆಹಾರವನ್ನು ಸೇವಿಸಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಮಕ್ಕಳಿಗೆ ಕೇಕ್‌, ಚಾಕೊಲೇಟ್‌ಗಳಾದರೆ, ವಯಸ್ಕರು ವೈನ್‌ ಹೀರುತ್ತ ಮಾಂಸಾಹಾರಗಳಿಂದ ಸಿದ್ಧಪಡಿಸಿದ ಆಹಾರವನ್ನು ಸವಿಯುವುದು ಸಾಮಾನ್ಯ. 25ರಂದು ಉಪಾಹಾರ ಹಾಗೂ ಮಧ್ಯಾಹ್ನದ ಭೋಜನ ಒಟ್ಟಿಗೆ ಸೇರಿ ಮಾಡಲಾಗುತ್ತದೆ. ಇದನ್ನೇ ‘ಕ್ರಿಸ್ಮಸ್ ಬ್ರಂಚ್‌’ ಎಂದೂ ಕರೆಯುವುದುಂಟು’ ಎನ್ನುವುದು ಫೈರ್‌ವೆಲ್‌ ಮ್ಯಾರಿಯಟ್‌ನ ಮುಖ್ಯ ಶೆಫ್‌ ಪಿ. ಮಹೇಶ್‌ ಅವರ ಅನಿಸಿಕೆ.

ಭಾರತದಲ್ಲೂ ಕ್ರಿಸ್ಮಸ್‌ನ ಹಲವು ರೂಪಗಳನ್ನು ಕಾಣಬಹುದು. ಉತ್ತರ ಭಾರತೀಯರದ್ದು ಒಂದು ರೀತಿಯಾದರೆ, ದಕ್ಷಿಣದವರದ್ದು ಮತ್ತೊಂದು ರೀತಿ. ಅದರಲ್ಲೂ ಬೆಂಗಳೂರಿನಲ್ಲಿ ಇತ್ತೀಚೆಗೆ ಕ್ರಿಸ್ಮಸ್‌ ಆಚರಣೆ ಮತ್ತಷ್ಟು ರಂಗಿನಿಂದ ಕೂಡಿರುತ್ತದೆ. ಕ್ರಿಸ್ಮಸ್ ಬ್ರಂಚ್‌ನಲ್ಲಿ ಕೋಳಿ, ಕುರಿ, ದನ, ಹಂದಿ, ಮೀನು, ಸಿಗಡಿ ಸೇರಿದಂತೆ ತರಹೇವಾರಿ ಮಾಂಸದ ಖಾದ್ಯಗಳು ಒಳಗೊಂಡಿರುತ್ತವೆ. ಬೆಂಗಳೂರು ನಗರದಲ್ಲಿರುವ ತಾರಾ ಹೋಟೆಲ್‌ಗಳು ಕ್ರಿಸ್ಮಸ್‌ಗಾಗಿಯೇ ಸುಮಾರು 800 ಟರ್ಕಿ ಕೋಳಿಗಳನ್ನು ಆಮದು ಮಾಡಿಕೊಂಡಿವೆಯಂತೆ. ಉಳಿದಂತೆ ಆಂಗ್ಲೋ ಇಂಡಿಯನ್‌ ಅವರ ಆಚರಣೆಯಿಂದ ಪ್ರೇರಣೆಗೊಂಡವರು ಟರ್ಕಿಯ ಮಾಂಸದಿಂದ ಮನೆಯಲ್ಲಿ ಖಾದ್ಯ ತಯಾರಿಸುವುದೂ ಉಂಟು. ಹೆಚ್ಚು ಕೊಬ್ಬಿನಂಶ ಹೊಂದಿರುವ ಇದರ ರುಚಿಯನ್ನು ಒಮ್ಮೆ ಸವಿದರೆ ಮರೆಯುವ ಮಾತೇ ಇಲ್ಲ. ಹೀಗಾಗಿಯೇ ಇದನ್ನು ‘ಹಬ್ಬದ ಹಕ್ಕಿ’ ಎಂದೂ ಕರೆಯಲಾಗುತ್ತದೆ’ ಎಂದೆನ್ನುತ್ತಾರೆ ಮಹೇಶ್‌.

‘ಚರ್ಚ್‌ನಿಂದ ಪ್ರಾರ್ಥನೆ ಮುಗಿಸಿ ಮನೆಗೆ ಬಂದು ಅಡುಗೆ ಆರಂಭಿಸುವ ಹೊತ್ತಿಗೆ ಹತ್ತು ಗಂಟೆಯಾಗಿರುತ್ತದೆ. ಬಿರಿಯಾನಿ ಅಂದಿನ ಊಟದ ಪ್ರಮುಖ ಆಹಾರ. ಉಳಿದಂತೆ ಕೇಕ್‌ ಹಾಗೂ ಸಿಹಿ ತಿಂಡಿಗಳು ಇದ್ದೇ ಇರುತ್ತವೆ. ರೋಸ್‌ ಕುಕ್ಕೀಸ್‌, ಶಂಕರಪೋಳೆ ಇತ್ಯಾದಿಗಳು ಕ್ರಿಸ್ಮಸ್‌ನ ಅಚ್ಚುಮೆಚ್ಚಿನ ತಿಂಡಿಗಳು. ಊಟದಲ್ಲಿ ಕುರಿ ಹಾಗೂ ಕೋಳಿಯ ಬಗೆಬಗೆಯ ಖಾದ್ಯಗಳನ್ನು ಸಿದ್ಧಪಡಿಸಿ ಬಂಧುಗಳೊಂದಿಗೆ ಮಧ್ಯಾಹ್ನದ ಭೋಜನ ಸವಿಯುವುದೇ ಒಂದು ದೊಡ್ಡ ಸಂಭ್ರಮ. ಮಕ್ಕಳು ಹಲವು ಕ್ರೀಡೆಗಳಲ್ಲಿ ತೊಡಗಿಕೊಳ್ಳುತ್ತಾರೆ. ದೊಡ್ಡವರು ಪ್ರಸಕ್ತ ವಿಷಯ, ಹಾಸ್ಯ, ಆಹಾರ ಹೀಗೆ ಬಗೆಬಗೆಯ ವಿಷಯಗಳ ಕುರಿತು ಹರಟುತ್ತಾ ಹಬ್ಬದ ದಿನವನ್ನು ಕಳೆಯುತ್ತಾರೆ. ಇನ್ನೂ ಕೆಲವರು 26ನೇ ತಾರೀಕು ಬಂದರೂ ಪಾರ್ಟಿ ನಿಲ್ಲಿಸುವ ಮನಸ್ಸು ಮಾಡುವುದಿಲ್ಲ’ ಎಂದು ಗೃಹಿಣಿ ಮಣಿ ಮನೋಹರ್‌ ಹಬ್ಬದ ಸಂಭ್ರಮವನ್ನು ವಿವರಿಸುತ್ತಾರೆ.

ಒಟ್ಟಿನಲ್ಲಿ ಸಂಭ್ರಮ ಸಡಗರ ಕ್ರಿಸ್ಮಸ್‌ನಲ್ಲಿ ಹೊಟ್ಟೆ ತುಂಬಾ ಉಂಡು, ಬಾಯಿ ತುಂಬಾ ಮಾತನಾಡಿ, ಉಡುಗೊರೆಗಳನ್ನು ಹಂಚಿಕೊಳ್ಳುವುದರ ಜತೆಗೆ ಬರಲಿರುವ ಹೊಸ ವರ್ಷದ ಸ್ವಾಗತಕ್ಕೆ ಅಣಿಯಾಗುವುದಾಗಿದೆ.

ಕ್ರಿಸ್ಮಸ್‌ಗಾಗಿ ಜಿಂಜರ್‌ಬ್ರೆಡ್‌ ಕುಕ್ಕೀಸ್‌
ಆಧುನಿಕ ಕ್ರಿಸ್ಮಸ್‌ನ ಹೊಸ ಸೇರ್ಪಡೆ ಜಿಂಜರ್‌ ಬ್ರೆಡ್‌ ಕುಕ್ಕೀಸ್‌ ಎಂಬ ಸಿಹಿ ತಿನಿಸು. ಹೆಸರೇ ಸೂಚಿಸುವಂತೆ, ಇದನ್ನು ಶುಂಠಿ, ಜೇನು ಅಥವಾ ಬೆಲ್ಲದಿಂದ ತಯಾರಿಸಲಾಗುತ್ತದೆ. ಬಿಸ್ಕತ್ತು ಹಾಗೂ ಲೋಫ್‌ ಕೇಕ್‌ನಂತಿರುವ ಜಿಂಜರ್‌ಬ್ರೆಡ್‌ ಕುಕ್ಕೀಸ್‌ ಹಲವು ರೂಪದಲ್ಲಿ ಲಭ್ಯ. ಸಂಕ್ರಾಂತಿ ಸಕ್ಕರೆ ಅಚ್ಚಿನಂತೆ ಬಗೆಬಗೆಯ ಗೊಂಬೆಯಾಕಾರದಲ್ಲಿರುವ ಜಿಂಜರ್‌ಬ್ರೆಡ್‌ ಕುಕ್ಕೀಸ್‌ ಅನ್ನು ಕೆಲವರು ಮನೆಯಲ್ಲಿ ತಯಾರಿಸುತ್ತಾರೆ. ಬಹುತೇಕರು ಇವುಗಳನ್ನು ಅಂಗಡಿಯಿಂದ ತಂದು ಮನೆಯಲ್ಲಿ ಅಲಂಕಾರಕ್ಕಾಗಿ ಬಳಸಿ ನಂತರ ಸೇವಿಸುವುದು ವಾಡಿಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT