ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೇರಿದ ಒಕ್ಕಲಿಗರ ಸಂಘದ ಚುನಾವಣೆ

ನಾಳೆ ಮತದಾನ n ಮತದಾರರ ವಶೀಲಿಗೆ ಕಸರತ್ತು
Last Updated 4 ಜನವರಿ 2014, 10:57 IST
ಅಕ್ಷರ ಗಾತ್ರ

ರಾಮನಗರ: ರಾಜ್ಯದ ಬಲಿಷ್ಠ ಕೋಮುಗಳಲ್ಲಿ ಒಂದಾಗಿರುವ ಒಕ್ಕಲಿಗ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾದ ಒಕ್ಕಲಿಗರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಇದೇ 5 ರಂದು (ಭಾನುವಾರ) ಚುನಾವಣೆ ನಡೆಯಲಿದ್ದು, ಚುನಾವಣಾ ಪ್ರಚಾರ ರಂಗೇರಿದೆ.

ಒಕ್ಕಲಿಗ ಸಮುದಾಯದ ಸೀಮೆ ಎಂದೇ ಪ್ರಖ್ಯಾತವಾಗಿರುವ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದ್ದು, ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಸಂಘದ ಒಟ್ಟು 35 ನಿರ್ದೇಶಕರ ಸ್ಥಾನಗಳ ಪೈಕಿ 15 ನಿರ್ದೇಶಕರು ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಯಿಂದಲೇ ಆಯ್ಕೆಯಾಗಲಿದ್ದಾರೆ.

ಹಾಗಾಗಿ ಬಹುತೇಕರ ದೃಷ್ಟಿ ಈ ಮೂರು ಜಿಲ್ಲೆಗಳತ್ತ ನೆಟ್ಟಿದೆ. ಸಂಘದ ಹಾಲಿ ಅಧ್ಯಕ್ಷರು, ನಿರ್ದೇಶಕರೇ ಅಲ್ಲದೆ ವಿಧಾನಸಭಾ, ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಸೋಲುಂಡ ವಿವಿಧ ಪಕ್ಷದ ಅಭ್ಯರ್ಥಿಗಳು, ಬೆಂಗಳೂರು ಹಾಲು ಒಕ್ಕೂಟದ (ಬಮೂಲ್‌)
ನಿರ್ದೇಶಕರು, ಅವರ ಸಂಬಂಧಿಗಳು ಹಾಗೂ ಸರ್ಕಾರಿ ನೌಕರರು, ನಿವೃತ್ತ ನೌಕರರು ಸ್ಪರ್ಧಿಸಿದ್ದಾರೆ.

ಸಮುದಾಯದ ಘಟಾನುಘಟಿ ಗಳು, ಆರ್ಥಿಕ ಸ್ಥಿತಿವಂತರು ಚುನಾವ ಣೆಯಲ್ಲಿ ಸ್ಪರ್ಧಿಸಿದ್ದು, ಚುನಾವಣೆ ಯನ್ನು ಅತ್ಯಂತ ಪ್ರತಿಷ್ಠೆಯಾಗಿ ತೆಗೆದು ಕೊಂಡಿದ್ದಾರೆ. ಹಾಗಾಗಿ ಅಭ್ಯರ್ಥಿಗಳು ಗೆಲುವಿಗಾಗಿ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ವಿಧಾನ ಸಭೆ ಮತ್ತು ಲೋಕಸಭಾ ಚುನಾವ ಣೆಯನ್ನು ನಾಚಿಸುವ ರೀತಿಯಲ್ಲಿ ಸಂಘದ ಆಡಳಿತ ಮಂಡಳಿ ಚುನಾವಣೆ ನಡೆಸುತ್ತಿದೆ.

ಜಿಲ್ಲೆಯ 32 ಅಭ್ಯರ್ಥಿಗಳು:
ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಯ 15 ನಿರ್ದೇಶಕರ ಸ್ಥಾನಕ್ಕೆ 140 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದರಲ್ಲಿ ರಾಮನಗರ ಜಿಲ್ಲೆಯ ನಾಲ್ಕೂ ತಾಲ್ಲೂಕಿನವರೇ 32 ಮಂದಿಯಾಗಿದ್ದಾರೆ. ಚನ್ನಪಟ್ಟಣ ತಾಲ್ಲೂಕಿನ 18, ಕನಕಪುರದ 7 ರಾಮನಗರದ 3, ಮಾಗಡಿಯ 4 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಿಲ್ಲೆಯಿಂದ ಬೆಂಗಳೂರಿಗೆ ವಲಸೆ ಹೋಗಿರುವ 20ಕ್ಕೂ ಹೆಚ್ಚು ಮಂದಿ ಸ್ಪರ್ಧಿಸಿದ್ದಾರೆ.

ಹಾಲಿ ಅಧ್ಯಕ್ಷ ಕೆಂಚಪ್ಪಗೌಡ, ಅಪ್ಪಾಜಿಗೌಡ, ಕೆ.ಮಲ್ಲಯ್ಯ, ಎಂ.ನಾಗರಾಜು, ಕೆ.ವಿ.ಚಂದ್ರಶೇಖರ್‌ ನೇತೃತ್ವದಲ್ಲಿ ಕೂಟಗಳನ್ನು ರಚಿಸಿಕೊಂಡು ಒಟ್ಟು 75 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉಳಿದ 80 ಅಭ್ಯರ್ಥಿಗಳು ಪಕ್ಷೇತರರಾಗಿದ್ದಾರೆ.

ಘಟಾನುಘಟಿಗಳು: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ರಾಮಗನರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮರಿದೇವರು ಅವರೂ ಸಂಘದ ಚುನಾವಣೆಯ ಅಖಾಡದಲ್ಲಿ ದ್ದಾರೆ.  ವಿಧಾನ ಪರಿಷತ್ತಿನ ಪದವೀ ಧರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಗಡಿಯ ಆ.ದೇವೇಗೌಡ ಅವರು ಈ ಚುನಾವಣೆ ಯಲ್ಲಿ ಸ್ಪರ್ಧಿಸಿದ್ದಾರೆ.

ಕಳೆದ ಬಾರಿಯ ಸಂಘದ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಚನ್ನಪಟ್ಟಣದ ಪ್ರೊ. ಕೆ.ಮಲ್ಲಯ್ಯ, ಡಾ. ಅಪ್ಪಾಜಿಗೌಡ (ಇಬ್ಬರು ಒಂದೊಂದು ಸಿಂಡಿಕೇಟ್‌ನ ನಾಯಕರು), ಎಂ.ಎ.ಆನಂದ್‌ ಹಾಗೂ ಮಲ್ಲಿಕಾರ್ಜುನೇಗೌಡ (ಜಿ.ಪಂ ಸದಸ್ಯೆ ಕಲ್ಪನಾ) ಅವರು ಪುನರ್‌ ಆಯ್ಕೆ ಬಯಸಿದ್ದಾರೆ.

ಅಲ್ಲದೆ ಬಮೂಲ್‌ ಅಧ್ಯಕ್ಷ ಉಲ್ಲೂರು ಮಂಜುನಾಥ್‌ (ಹೊಸಕೋಟೆ), ನಿರ್ದೇಶಕರಾದ ಸಿ.ಹನುಮಂತೇಗೌಡ (ದೊಡ್ಡಬಳ್ಳಾಪುರ), ದಿಬ್ಬೂರು ಜಯಣ್ಣ (ಬೆಂಗಳೂರು ಉತ್ತರ), ಮಾಗಡಿಯ ನರಸಿಂಹಮೂರ್ತಿ ಅವರ ಸಹೋದರ ಕೃಷ್ಣಮೂರ್ತಿ ಅವರು ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಇವರ ಪರವಾಗಿ ವಿವಿಧ ಹಾಲು ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಪ್ರಚಾರದಲ್ಲಿ ತೊಡಗಿದ್ದಾರೆ.

ರಂಗೇರಿರುವ ಪ್ರಚಾರ:
ಮತದಾರರ ಮೊಬೈಲ್‌ಗಳಿಗೆ ಎಸ್‌ಎಂಎಸ್‌, ಮನೆ ಬಾಗಿಲಿಗೆ ಭಿತ್ತಿಪತ್ರಗಳು, ಕೈಪಿಡಿಗಳು, ಜಿಲ್ಲೆಯ ನಗರ– ಪಟ್ಟಣಗಳಲ್ಲಿ ಕಟೌಟ್‌, ಬ್ಯಾನರ್‌, ಬಂಟಿಂಗ್‌ಗಳನ್ನು ಅಳವಡಿಸಿ ಜನಾಂಗದ ಮತದಾರರನ್ನು ಸೆಳೆಯಲಾಗುತ್ತಿದೆ.

ಅಲಲ್ಲಿ ಔತಣ ಕೂಟ, ಬಾಡೂಟಗಳು ನಡೆಯುತ್ತಿದ್ದು, ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನೂ ಮತದಾರರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಜತೆಗೆ ವಿವಿಧ ಬಗೆಯ ಉಡುಗೊರೆಗಳನ್ನೂ ನೀಡಲಾಗುತ್ತಿದೆ.  ಒಂದೊಂದು ಮತಕ್ಕೆ 300ರಿಂದ 600 ರೂಪಾಯಿ ನೀಡಲಾಗುತ್ತಿದೆ ಎಂದು ಗೊತ್ತಾಗಿದೆ.

ಪ್ರಚಾರಕ್ಕೆ ಬರುವ ಅಭ್ಯರ್ಥಿಗಳು ಆರೋಪ ಮತ್ತು ಪ್ರತ್ಯಾರೋಪಗಳನ್ನೂ ಮಾಡುತ್ತಿದ್ದಾರೆ. ಸಂಘದ ಅಭಿವೃದ್ಧಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆಯೂ ಪ್ರಸ್ತಾಪಿಸುತ್ತಿದ್ದಾರೆ.

ಮತದಾರರ ಸಂಖ್ಯೆಯಲ್ಲಿ ಹೆಚ್ಚಳ:
ಐದು ವರ್ಷದ ಹಿಂದೆ ನಡೆದ ಸಂಘದ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಕೇವಲ 2,400 ಇದ್ದ ಮತದಾರರ ಸಂಖ್ಯೆ ಈ ವರ್ಷದ 19,187ಕ್ಕೆ ಏರಿಕೆಯಾಗಿದೆ. ಮತದಾರರ ಸಂಖ್ಯೆಯ ಭಾರಿ ಹೆಚ್ಚಳ ಆಗಿರುವುದು ಚುನಾವಣೆ ರಂಗೇರುವಂತೆ ಮಾಡಿದೆ. ಚನ್ನಪಟ್ಟಣದಲ್ಲಿ ಅತಿ ಹೆಚ್ಚು ಎಂದರೆ 9,158 ಸದಸ್ಯರಿದ್ದರೆ, ಮಾಗಡಿಯಲ್ಲಿ ಅತಿ ಕಡಿಮೆ ಎಂದರೆ 2,436 ಮತದಾರರು ಇದ್ದಾರೆ. ಸಂಘವು ಮುಕ್ತ ಸದಸ್ಯತ್ವಕ್ಕೆ ಅವಕಾಶ ನೀಡಿದ ಕಾರಣ ಮತದಾರರ ಸಂಖ್ಯೆಯಲ್ಲಿ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಆನೇಕಲ್‌:  ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಗೆ ತಾಲ್ಲೂಕಿನಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿವೆ. ಜನವರಿ 5ರಂದು ಚುನಾವಣೆ ನಿಗ ದಿಯಾಗಿದ್ದು ನಾಲ್ಕು ತಂಡಗಳು ಚುನಾ ವಣಾ ಕಣದಲ್ಲಿ ಹೆಚ್ಚಿನ ಪ್ರಚಾರದಲ್ಲಿ ತೊಡಗಿರುವೆ. ಆನೇಕಲ್‌ ತಾಲ್ಲೂಕಿ ನಿಂದ ಮೂವರು  ಕಣದ ಲ್ಲಿದ್ದು ತಮ್ಮ ಪ್ರಭಾವವನ್ನು ಬಳಸಿ ತಮ್ಮ ತಂಡದ ಪರವಾಗಿ ಮತ ಯಾಚನೆಯಲ್ಲಿ ತೊಡ ಗಿದ್ದಾರೆ.

ಪ್ರೊ.ಮಲ್ಲಯ್ಯ ಅವರ ನೇತೃ ತ್ವದ ತಂಡದಲ್ಲಿ ಅತ್ತಿಬೆಲೆ ಪಬ್ಲಿಕ್‌ ಶಾಲೆಯ ನಿರ್ದೇಶಕ ನಾಯನಹಳ್ಳಿ ನಾರಾಯಣಗೌಡ, ಡಾ.ಅಪ್ಪಾಜಿಗೌಡ ಅವರ ನೇತೃತ್ವದ ತಂಡದಲ್ಲಿ ಜಿ.ಪಂ. ಮಾಜಿ ಸದಸ್ಯ ರಾದ ಮಂಚನ ಹಳ್ಳಿ ಸಂಪಂಗಿರಾಮಯ್ಯ ಹಾಗೂ ಪ್ರೊ.ಎಂ. ನಾಗರಾಜು ಅವರ ತಂಡದಲ್ಲಿ ಉಪನ್ಯಾಸಕ ನಾಗಯ್ಯನ ದೊಡ್ಡಿ  ಎಸ್‌. ಮಂಜುನಾಥ್‌ ಕಣದಲ್ಲಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳು
ರಾಮನಗರ: ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ಮರಿದೇವರು, ಗುನ್ನೂರಿನ ಅಳಿಯ ಕಾಳೇಗೌಡ, ಸರ್ಕಾರಿ ಜೂನಿಯರ್‌ ಕಾಲೇಜಿನ ಕನ್ನಡ ಉಪನ್ಯಾಸಕ ಮಂಜುನಾಥ್‌ ಕಣದಲ್ಲಿದ್ದಾರೆ.

ಮಾಗಡಿ: ಪೂಜಾರಿ ಪಾಳ್ಯದ ಕೃಷ್ಣಮೂರ್ತಿ, ಆ.ದೇವೇಗೌಡ, ರಾಮಣ್ಣ, ಸಿ.ಎಂ.ಮಾರೇಗೌಡ ಅಖಾಡದಲ್ಲಿದ್ದಾರೆ. 

ಕನಕಪುರ: ಕೊತ್ತನೂರಿನ ಕೆ.ಪಿ.ನಾಗೇಶ್‌, ಹುಳಗೊಂಡನಹಳ್ಳಿಯ ಎಚ್‌.ಬಿ.ಚಂದ್ರಶೇಖರ್‌, ವಿರೂಪಸಂದ್ರದ ಶಿವಣ್ಣೇಗೌಡ, ಸುರನಹಳ್ಳಿಯ ಜಯರಾಂ, ಕನಕಪುರದ ಪಿ.ನಟರಾಜ್‌, ಕಬ್ಬಾಳಿನ ಆನಂದ್‌, ಏರಿಂದ್ಯಾಪನಹಳ್ಳಿಯ ಶಿವಣ್ಣ ಸ್ಪರ್ಧಿಸಿದ್ದಾರೆ.

ಚುನಾವಣಾ ಅಖಾಡದಲ್ಲಿರುವ ಜಿಲ್ಲೆಯವರು
ಚನ್ನಪಟ್ಟಣ:
ಡಾ. ಅಪ್ಪಾಜಿಗೌಡ, ಮಲ್ಲಿಕಾರ್ಜುನೇಗೌಡ, ಎಂ.ಎ.ಆನಂದ್‌, ಪ್ರೊ. ಕೆ. ಮಲ್ಲಯ್ಯ, ಕುಕ್ಕೂರು ದೊಡ್ಡಿ ಶಿವಣ್ಣ, ಡಾ. ಬಿ.ಎಲ್‌.ಪ್ರಸನ್ನ ಕುಮಾರ್‌, ಕದರ ಮಂಗಲದ ಮರಿಮಲ್ಲಯ್ಯ, ಎಚ್‌.ಸಿ.ಜಯಮುತ್ತು, ಡಾ.ಶಿವಕುಮಾರ್‌, ರಾಂಪುರದ ಸುರೇಶ್‌ ಕುಮಾರ್‌, ಮಾಕಳಿಯ ಗಾಯಿತ್ರಿ ದೇವಿ, ಕೋಮನಹಳ್ಳಿಯ ಹನುಮಂತೇಗೌಡ, ಹಾರೋಕೊಪ್ಪದ ಶಾಂತಕುಮಾರ್‌, ಕೋಟೆಯ ಮಹದೇವಮ್ಮ, ಇಗ್ಗಲೂರಿನ ಟಿ.ಪಾಪಣ್ಣ, ರಾಂಪುರದ ಆರ್‌.ಲಿಂಗಯ್ಯ, ರವೀಂದ್ರಕಾಂತ್‌, ತಗಚಗೆರೆಯ ಶಿವಣ್ಣ ಸ್ಪರ್ಧಿಸಿದ್ದಾರೆ.

ಜಿಲ್ಲೆಯ ಒಕ್ಕಲಿಗ ಸಂಘದ ಸದಸ್ಯರಲ್ಲಿ (ಮತದಾರರು)ಹೆಚ್ಚಳ
ತಾಲ್ಲೂಕು 2008–09 2014
ರಾಮನಗರ 600 3,621
ಚನ್ನಪಟ್ಟಣದ 1100 9,158
ಕನಕಪುರ 300 3,972
ಮಾಗಡಿ 400 2,436
ಒಟ್ಟು 2,400 19,187

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT