ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್ ಸಂಭ್ರಮಕ್ಕೆ ಮಳೆ ಅಡ್ಡಿ

Last Updated 6 ಆಗಸ್ಟ್ 2013, 8:29 IST
ಅಕ್ಷರ ಗಾತ್ರ

ಬೀದರ್: `ರಂಜಾನ್' ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಭರ್ಜರಿ ವಹಿವಾಟಿನ ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳಿಗೆ ನಿರಂತರ ಮಳೆ ಆತಂಕ ಮೂಡಿಸಿದೆ. 

`ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಈ ಬಾರಿ ವ್ಯಾಪಾರ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ರಂಜಾನ್‌ನ ಮೊದಲ ಎರಡು ವಾರವನ್ನು ಮಳೆ ನುಂಗಿ ಹಾಕಿತು. ನಂತರದ 10 ದಿನಗಳ ಕಾಲ ಉತ್ತಮ ವ್ಯಾಪಾರ ಇತ್ತು. ಈಗ ಮತ್ತೆ ಮಳೆ ಸುರಿಯತೊಡಗಿದೆ ಎಂಬುದು ವ್ಯಾಪಾರಿಗಳ ಆತಂಕ.

ಮಳೆಯಿಂದ ಜನ ಹೊರಗೆ ಬರುತ್ತಿಲ್ಲ. ಶೇ 50 ರಷ್ಟು ವ್ಯಾಪಾರ ಮಾತ್ರ ಆಗುತ್ತಿದೆ. ಲಾಭ ಇರಲಿ,  ಹಾಕಿದ ಖರ್ಚು ಬಂದರೂ ಸಾಕು ಎನ್ನುವಂಥ ಸ್ಥಿತಿ ಇದೆ ಎಂಬ ಅಳಲು ಕಿರಾಣಿ ವ್ಯಾಪಾರಿ ಅಬ್ದುಲ್ ಸಮದ್ ಅವರದು. ಬಟ್ಟೆ ವ್ಯಾಪಾರಿ ಸೈಯದ್ ಆಸಿಫ್ ಹುಸೇನ್ ಅವರದು ಇಂಥದೇ ಅನಿಸಿಕೆ.

ರಂಜಾನ್‌ಗಾಗಿ ಬಟ್ಟೆಗಳನ್ನು ಸ್ಟಾಕ್ ಮಾಡಿಕೊಳ್ಳಲಾಗಿದೆ. ಇನ್ನೂ ನಾಲ್ಕೈದು ದಿನ ಮಳೆ ಆಗದಿದ್ದರೆ ಉತ್ತಮ ವ್ಯಾಪಾರ ಆಗಬಹುದು. ಕಳೆದ ವರ್ಷಕ್ಕೆ ಹೋಲಿಸಿದರೆ ಬೆಲೆಯಲ್ಲಿ ಶೇ 20 ರಿಂದ 30 ರಷ್ಟು ಏರಿಕೆ ಆಗಿದೆ ಎಂದು ಹೇಳುತ್ತಾರೆ ಅವರು.

ಇನ್ನೇನು ಹಬ್ಬ ಸಮೀಪಿಸಿದ್ದರಿಂದ ಮಳೆ ಇದ್ದರೂ ಜನ ನಿಧಾನವಾಗಿ ಮಾರುಕಟ್ಟೆಗೆ ಬರಲಾರಂಭಿಸಿದ್ದಾರೆ. ಅಗತ್ಯ ಸಾಮಗ್ರಿಗಳನ್ನು ಖರೀದಿಸತೊಡಗಿದ್ದಾರೆ. ಆದರೆ, ಬೆಲೆ ಏರಿಕೆ ಕೊಂಚ ವಿಚಲಿತಗೊಳಿಸಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಗ್ರಾಹಕರೊಬ್ಬರು.
ದರ ಕಡಿಮೆ ಕೊಳ್ಳುವವರಿಲ್ಲ!

ಒಂದು ತಿಂಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಹಣ್ಣು ಹಂಪಲುಗಳ ಬೆಲೆಯಲ್ಲಿ ಸಾಕಷ್ಟು ಇಳಿಕೆ ಆಗಿದೆ. ಆದರೂ, ಕೊಳ್ಳುವವರೇ ಇಲ್ಲ... ನಗರದ ಹಳೆಯ ಭಾಗದ ಹಣ್ಣು ಹಂಪಲು ವ್ಯಾಪಾರಿ ಮಹಮ್ಮದ್ ಖಲೀಲ್ ಅವರ ಪ್ರತಿಕ್ರಿಯೆ ಇದು.
ರಂಜಾನ್ ಹಬ್ಬಕ್ಕಾಗಿ 21ಕ್ಕೂ ಹೆಚ್ಚು ಬಗೆಯ ಹಣ್ಣು ಹಂಪಲುಗಳು ಮಾರುಕಟ್ಟೆ ಪ್ರವೇಶಿಸಿವೆ.

ಕೆ.ಜಿ.ಗೆ. 180 ರೂ. ಆಗಿದ್ದ ಸೇಬು ಈಗ 100 ರೂ., ಡಜನ್ ಬಾಳೆಹಣ್ಣು 30 ರೂ.ಗಳಿಂದ ರೂ. 15 ರಿಂದ 25, ಒಂದು ದಾಳಿಂಬೆ ಹಣ್ಣು ರೂ. 25-30 ರಿಂದ ರೂ. 5 ರಿಂದ 15, ಕೆ.ಜಿ. ಕಲ್ಲಂಗಡಿ ರೂ. 20 ರಿಂದ ರೂ. 10-15, ಅಂಜೂರು ರೂ. 120 ರಿಂದ ರೂ. 80 ರೂ., ಚಿಕ್ಕು ರೂ. 60 ರಿಂದ ರೂ. 30-40 ರೂ., ದ್ರಾಕ್ಷಿ ರೂ 120 ರಿಂದ ರೂ. 80, ಖರ್ಬೂಜು ರೂ. 60 ರಿಂದ ರೂ. 30, ಒಂದು ಅನಾನಸ್ ರೂ. 60 ರಿಂದ ರೂ. 30ಕ್ಕೆ ಇಳಿಕೆ ಆಗಿದೆ ಎಂದು ವಿವರಿಸುತ್ತಾರೆ.

ಖರ್ಜೂರ ಬೆಲೆಯೂ ಭಿನ್ನ!
ರಂಜಾನ್ ಮಾಸದಲ್ಲಿ ಖರ್ಜೂರಕ್ಕೆ ವಿಶೇಷ ಸ್ಥಾನ. ಅತಿ ಹೆಚ್ಚು ಮಾರಾಟವಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ 70 ರೂ.ಗಳಿಂದ 2,000 ರೂ.ಗೆ ಕೆ.ಜಿ. ಇರುವ ಉತ್ತಮ ಗುಣಮಟ್ಟದ ಖರ್ಜೂರು ಕಂಡು ಬರುತ್ತಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಷ್ಟೊಂದು ವ್ಯಾಪಾರ ಇಲ್ಲ ಎಂದು ಹೇಳುತ್ತಾರೆ ಕಿರಾಣಿ ಅಂಗಡಿ ವ್ಯಾಪಾರಿ ಸುರೇಂದ್ರಕುಮಾರ್ ಗಾದಾ.

ಖರ್ಜೂರಿನಲ್ಲಿ 20-25 ಬಗೆ ಇವೆ. ತಮ್ಮ ಬಳಿ 120 ರೂ.ಗೆ. ಕೆ.ಜಿ. ಇರುವ `ಮಗ್ದಿ' ಖರ್ಜೂರಿಗೆ ಹೆಚ್ಚಿನ ಬೇಡಿಕೆ ಇದೆ. ಜಾಹಿದಿ, ಇರಾನಿ ಖರ್ಜೂರು 70 ರೂ.ಗೆ. ಕೆ.ಜಿ, ಕಿವಿಯಾ, ಹಾರ್ಮೋನಿ, ಟುನೇಶಿಯಾ 200 ರೂ.ಗೆ. ಕೆ.ಜಿ., ಮರಿಯಂ 300 ರೂ.ಗೆ. ಕೆ.ಜಿ. ಸಪಾವಿ 600 ರೂ.ಗೆ. ಕೆ.ಜಿ. ಹಾಗೂ ಅಜ್ವಾ ಖರ್ಜೂರು ರೂ. 2,000 ಕೆ.ಜಿ. ಇದೆ.


`ಶೀರ್‌ಕುರ್ಮಾ' ದುಬಾರಿ!
ರಂಜಾನ್ ಹಬ್ಬದ ವಿಶೇಷ ಖಾದ್ಯ ಆಗಿರುವ ಶೀರ್‌ಕುರ್ಮಾದ ಸವಿ ಈ ಬಾರಿ ದುಬಾರಿ ಆಗಲಿದೆ. ಶೀರಕುರ್ಮಾ ಸಿದ್ಧಪಡಿಸಲು ಬೇಕಾಗುವ ಸಾಮಗ್ರಿ ಬೆಲೆಯಲ್ಲಿ ಶೇ 10 ರಷ್ಟು ಹೆಚ್ಚಳ ಆಗಿರುವುದು ಇದಕ್ಕೆ ಕಾರಣ.

ಶೀರ್‌ಕುರ್ಮಾ ಸಿದ್ಧಪಡಿಸಲು ಶಾವಗಿ, ಬಾದಾಮ್, ಗೋಡಂಬಿ, ಚಿರಂಜಿ, ಪಿಸ್ತಾ, ಅಕ್ರೋಡ್, ಸುಕ್ಕಾ ಖರ್ಜೂರು, ಸಕ್ಕರೆ, ಕಲ್ಲಂಗಡಿ, ಖರ್ಬೂಜು, ಸಕ್ಕರೆ, ಹಾಲು ಬಳಸಲಾಗುತ್ತದೆ ಎಂದು ತಿಳಿಸುತ್ತಾರೆ ವ್ಯಾಪಾರಿಯೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT