ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಿಸಿದ ಚಿತ್ರಗೀತೆ, ಗಮನ ಸೆಳೆದ ನಾಟಕೋತ್ಸವ

Last Updated 13 ಫೆಬ್ರುವರಿ 2012, 5:30 IST
ಅಕ್ಷರ ಗಾತ್ರ

ಹಾವೇರಿ (ಬ್ಯಾಡಗಿ, ಕನಕದಾಸ ವೇದಿಕೆ): `ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು. ಬಿಸಿಯಾಗಿದೆ ನಿಶೆ ಏರಿದೆ, ಮೀತಿ ಮೀರಿದೆ ಜೋಪಾನ... ಜಟಕಾ ಕುದರೆ ಹತ್ತಿ ಪೇಟೆಗೆ ಹೋಗಮ್ಮಾ... ಜರದಾ ಬೀಡಾ ತಿಂದು ಕರಗಾ ನೋಡಮ್ಮಾ... ಕೂಗು ಕೋಳಿಗೆ ಕಾರಾ ಮಸಾಲೆ...

ಒಂದು ಕಾಲದಲ್ಲಿ ಪಡ್ಡೆ ಹುಡುಗರನ್ನು ಹುಚ್ಚೆದ್ದು ಕುಣಿಸಿದ್ದ ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ ಹಾಗೂ ರಾಣಿ ಮಹಾರಾಣಿ ಚಿತ್ರ ಗೀತೆಗಳು, ಮೂಲ ಗಾಯಕಿಯ ಧ್ವನಿಯಿಂದಲೇ ಹೊರ ಹೊಮ್ಮಿದಾಗ ಯುವಜನರು ಕುಳಿತ ಜಾಗದಲ್ಲಿಯೇ ಎದ್ದು ನಿಂತು ತಾಳಕ್ಕೆ ತಕ್ಕ ಹೆಜ್ಜೆ ಹಾಕುವ ಮೂಲಕ ಜಿಲ್ಲಾ ಉತ್ಸವದ ಸಾಂಸ್ಕೃತಿ ಕಾರ್ಯಕ್ರಮಕ್ಕೆ ರಂಗುತಂದರು.

ಶನಿವಾರ ಆರಂಭವಾದ ಜಿಲ್ಲಾ ಉತ್ಸವದ ಪ್ರಮುಖ ಆಕರ್ಷಣೆ ಆಗಿದ್ದ ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ ಅವರ ತಂಡದ ಚಲನ ಚಿತ್ರಗೀತೆಗಳ ಕಾರ್ಯಕ್ರಮ ಸಂಘಟಕರ ಹಾಗೂ ಜನರ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಉತ್ಸವದ ಉದ್ಘಾಟನಾ ಸಮಾರಂಭಕ್ಕೆ ಜನರು ಇಲ್ಲದಿದ್ದರೂ ಮಂಜುಳಾ ಗುರುರಾಜ ಅವರ ಕಾರ್ಯಕ್ರಮ ಹೆಚ್ಚಿನ ಜನರು ಅದರಲ್ಲೂ ಯುವಕರೆ ಹೆಚ್ಚಾಗಿ ಬಂದಿದ್ದರು.

ಇದನ್ನು ಅರ್ಥ ಮಾಡಿಕೊಂಡ ಗಾಯಕಿ ಮಂಜುಳಾ ಗುರುರಾಜ ಅವರು ಯುವಜನರನ್ನು ಮೆಚ್ಚಿಸಲು ಅವರ ಹಾಡಿರುವ ಪ್ರಮುಖ ಹಾಡುಗಳನ್ನು ಹಾಡಿದರು. ತಮಗೆ ಉತ್ತಮ ಗಾಯಕಿ ಪ್ರಶಸ್ತಿ ತಂದುಕೊಟ್ಟ ಚಿನ್ನಾರಿ ಮುತ್ತ ಚಿತ್ರದ ಮತ್ತು ಡಾ. ರಾಜಕುಮಾರ ಜತೆ ಸೇರಿ ಹಾಡಿರುವ ಕೆಲ ಹಾಡುಗಳು  ಜನಸ್ತೋಮವನ್ನು ರಂಜಿಸಿದವು.

ಮಂಜುಳಾ ಅವರ ತಂಡದ ಸಹ ಸದಸ್ಯರಾದ ಮುರಳಿಧರ, ವಿನೋದ ಹಾಗೂ ಮಂಗಳಾ ಅವರು ಮಂಜುಳಾ ಗುರುರಾಜ್ ಅವರಿಗೆ ಕೆಲ ಹಾಡುಗಳಿಗೆ ಸಾಥ್ ನೀಡಿದರೆ, ಅದೇ ತಂಡದ ಯುವಕರು `ಚಮಕ್ ಚಲ್ಲೋ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಬೋರ್ಡ್ ಇರದ ಬಸ್‌ನು ನಾ ಏರಿ ಬಂದ ಪೋಕರಿ...~ ಎನ್ನುವ ಹಾಡುಗಳಿಗೆ ಹೆಜ್ಜೆ ಹಾಕಿ ಯುವ ಜನಾಂಗವನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು.

ಆದರೆ, ಮಂಜುಳಾ ಗುರುರಾಜ್ ಅವರು ಸಂಗೀತ ತಂಡ ಬಂದಿದ್ದರೂ, ಬಹುತೇಕ ಹಾಡುಗಳಿಗೆ ಹಿನ್ನೆಲೆ ಸಂಗೀತಕ್ಕೆ ಸಿಡಿಗಳನ್ನು ಬಳಸಿ ಹಾಡಿರುವುದು ಜನರಲ್ಲಿ ಬೇಸರ ಮೂಡಿಸಿತು.

ಇದಕ್ಕೂ ಮುನ್ನ ನಡೆದ ಧಾರವಾಡದ ವೆಂಕಟೇಶಕುಮಾರ ಅವರ ಹಿಂದೂಸ್ತಾನಿ ಸಂಗೀತ, ಹಾವೇರಿ ಕುಲಕರ್ಣಿ ಶಾಸ್ತ್ರೀಯ ನೃತಯ ಮತ್ತು ಸಂಗೀತ ಶಾಲಾ ತಂಡ, ನಾಟ್ಯಾಂಜಲಿ ನೃತ್ಯ ಕಲಾ ತಂಡ, ಬ್ಯಾಡಗಿಯ ಎಂ.ಡಿ.ಎಚ್. ಶಾಲಾ ತಂಡ, ಶಿವಮೊಗ್ಗದ ಗೀತಾ ದಾದಾರ ಅವರ ತಂಡ, ಹಾವೇರಿ ಗೌರಿ ತರಿಕೇರಿ ಕಲಾ ತಂಡಗಳ ನೃತ್ಯ ವೈಭವ ಜನಮನ ಸೂರೆಗೊಂಡವು.

ಕರ್ನಾಟಕದ ಬಿಸ್ಮಿಲ್ಲಾಖಾನ್ ಎಂದೇ ಖ್ಯಾತಿ ಪಡೆದಿರುವ ಹೆಡಿಗ್ಗೊಂಡದ ಬಸವರಾಜ ಭಜಂತ್ರಿ ಅವರ ಶಹನಾಯಿ ವಾದನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶುಭ ಆರಂಭ ನೀಡಿದರೆ, ರಿಚರ್ಡ್ ಲೂಯಿಸ್ ಹಾಗೂ ಮೈಸೂರ ಆನಂದ ಅವರ ನಗೆ ಚಾವಡಿ ಸೇರಿದ ಜನಸ್ತೋಮವನ್ನು ನಗೆ ಗಡಲಲ್ಲಿ ತೇಲುವಂತೆ ಮಾಡಿತು.

ಇವುಗಳ ಜತೆಗೆ ಬ್ಯಾಡಗಿಯ ಶಿವಕುಮಾರ ಹಡಗಲಿ, ಪ್ರಕಾಶ ಕೊರವರ, ಹಾವೇರಿಯ ವಿಜಯಲಕ್ಷ್ಮಿ ಮಾಳವಾಡ, ಗುಂಡೇನಹಳ್ಳಿಯ ಶಿವಬಸವ ಬಣಕಾರ ಅವರ ಸುಗಮ ಸಂಗೀತ, ಕರೂರಿನ ರಿಂದಮ್ಮ ಜಾಧವ ತಂಡ ಡೊಳ್ಳು ಕುಣಿತ, ತಿಳುವಳ್ಳಿಯ ನಾಗರಾಜ ಜೋಗಿ ತಂಡ ಕಿನ್ನರಿ ಜೋಗಿ, ರಾಣೆಬೆನ್ನೂರಿನ ಬಸವಣ್ಣೆಪ್ಪ ಅಟವಾಳಗಿ ಅವರ ವೀರಗಾಸೆ ಜನರನ್ನು ರಂಜಿಸಿದವು.

ಗಮನ ಸೆಳೆದ ನಾಟಕೋತ್ಸವ: ಬ್ಯಾಡಗಿಯ ಎನ್‌ಬಿಬಿ ಲಯನ್ಸ್ ಶಾಲಾ ಆವರಣದಲ್ಲಿನ ಮಹಾದೇವ ಬಣಕಾರ ರಂಗವೇದಿಕೆಯಲ್ಲಿ ನಡೆದ ನಾಟಕೋತ್ಸವ ಜನರ ಗಮನ ಸೆಳೆಯಿತು.

ಶಿಗ್ಗಾವಿ ತಾಲ್ಲೂಕಿನ ಕ್ಯಾಲಕೊಂಡ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರದರ್ಶನ ನೀಡಿದ ಮಹಾ ಪರಿವರ್ತನ ನಾಟಕದಲ್ಲಿ, ಪ್ರಾಚೀನ ಆದಿವಾಸಿಗಳ ಜೀವನ ಶೈಲಿಯಲ್ಲಿಯಾಗುವ ಬದಲಾವಣೆಯನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಿಸಿ ಜನರ ಚಪ್ಪಾಳೆ ಗಿಟ್ಟಿಸಿದರೆ, ಹಾವೇರಿ ರಂಗತರಂಗ ಕಲಾ ತಂಡದ ಕಲಾವಿದರು ಅಭಿನಯಿಸಿದ `ಮರಮಾತನಾಡಿತು~ ಎಂಬ ಪರಿಸರ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿಯಾಯಿತು. ಬ್ಯಾಡಗಿ ತಾಲ್ಲೂಕಿನ ಕದಮನಹಳ್ಳಿ ಪಶುಪತಿ ಶಿವಾನಂದ ನಾಟ್ಯ ಸಂಘದ ಕಲಾವಿದರು ಪ್ರದರ್ಶನ ನೀಡಿದ `ರೇಣುಕಾ ಮಹಾತ್ಮ~ ಪೌರಾಣಿಕ ನಾಟಕ ಕೂಡಾ ಜನರನ್ನು ರಂಜಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT