ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತ ನೀಡಿ, ಜೀವ ಕೊಡಿ

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

 ಇಪ್ಪತ್ತುವರ್ಷಗಳ ಹಿಂದಿನ ಮಾತು. ದಾವಣಗೆರೆಯ ಪಡ್ಡೆಹುಡುಗರ ಗುಂಪಿನಲ್ಲಿ ಲೋಕಾಭಿರಾಮದ ಮಾತು ನಡೆಯುತ್ತಿತ್ತು. ಆತಂಕ, ಗಾಬರಿಯಿಂದ ಮಧ್ಯವಯಸ್ಕ ವ್ಯಕ್ತಿಯೊಬ್ಬ ಅತ್ತ ಬಂದರು. `ನೋಡೀಗ ಅವರು ನಮ್ಮ ಬಳಿ ಹಣ ಕೇಳುತ್ತಾರೆ. ಯಾರನ್ನೋ ಆಸ್ಪತ್ರೆಗೆ ಸೇರಿಸಿದ್ದೇನೆ ಹಣ ನೀಡಿ ಎನ್ನುತ್ತಾರೆ~ ಎಂದರು ಎಂಜಿನಿಯರಿಂಗ್ ಓದುತ್ತಿದ್ದ ಆದಿಕೇಶವ.

`ನನ್ನ ಮಗಳನ್ನು ಆಸ್ಪತ್ರೆಗೆ ಸೇರಿಸಿದ್ದೇನೆ...~, ಆ ವ್ಯಕ್ತಿ ಹಾಗೆನ್ನುತ್ತಿದ್ದಂತೆ ಘೊಳ್ಳನೆ ನಕ್ಕಿತ್ತು ಹುಡುಗರ ಗುಂಪು. ನಂಗೆ ಹಣ ಬೇಡಪ್ಪಾ, ರಕ್ತ ಬೇಕು. ನನ್ನ ಮಗಳ್ದು `ಒ ನೆಗೆಟಿವ್~. ಹೆರಿಗೆಯಾಗಿ ವಿಪರೀತ ರಕ್ತ ಹೋಗ್ಯದ. ಎಲ್ಲೂ ರಕ್ತ ಸಿಗ್ತಿಲ್ಲ. ರಕ್ತ ಸಿಕ್ಕಿಲ್ಲ ಅಂದ್ರೆ ಜೀವ ಉಳ್ಯೋದು ಕಷ್ಟ ಅಂದಾರೆ ಡಾಕ್ಟ್ರು~ ಎಂದರು ಆ ವ್ಯಕ್ತಿ. `ರಕ್ತ ತಾನೇ; ನಾನೇ ಕೊಡ್ತೇನೆ, ನನ್ನದು ಒ ನೆಗೆಟಿವೇ~ ಎನ್ನುತ್ತ ಅಚ್ಚರಿಯಿಂದ ನೋಡುತ್ತಿದ್ದ ಆ ವ್ಯಕ್ತಿ ಹಿಂದೆ ಹೊರಟರು ಆದಿಕೇಶವ.

ಹಾಗೆ ಹೊರಟ ಆದಿಕೇಶವ ಶಾಸ್ತ್ರಿ ರಕ್ತದಾನದಲ್ಲಿ ಈಗ ಶತಕ ಬಾರಿಸಿದ್ದಾರೆ. ಅಪರೂಪದ ಗುಂಪು ಹೊಂದಿರುವ ತಮ್ಮ ರಕ್ತವನ್ನು 103 ಬಾರಿ ನೀಡಿದ್ದಾರೆ. ರಕ್ತದಾನ ಮಾಡುವಂತೆ ಸ್ನೇಹಿತರನ್ನು, ಪರಿಚಯದವರನ್ನು, ಕುಟುಂಬದವರನ್ನು ಪ್ರೇರೇಪಿಸುತ್ತಾ ಎಷ್ಟೋ ಜೀವ ಉಳಿಸಿದ್ದಾರೆ.

ಬಿಇ ಮತ್ತು ಎಂಬಿಎ ಪದವೀಧರರಾಗಿರುವ ಕೆ.ಎ. ಆದಿಕೇಶವ ಪ್ರಕಾಶ ಶಾಸ್ತ್ರಿ, ಪ್ರಸ್ತುತ ಬೆಂಗಳೂರಿನಲ್ಲಿ ಸ್ನೇಹಿತರ ಜತೆ ಮಾನವ ಸಂಪನ್ಮೂಲ ಅಭಿವೃದ್ಧಿಗೆ ತರಬೇತಿ ನೀಡುತ್ತಿರುವ `ಮೈಂಡ್ ವ್ಯಾಲ್ಯು~ ಸಂಸ್ಥೆ ನಡೆಸುತ್ತಿದ್ದಾರೆ.

`ಒ ನೆಗೆಟಿವ್ ರಕ್ತದ ಬಾಣಂತಿಗೆ ರಕ್ತ ನೀಡಿದ ಘಟನೆ ನನ್ನ ಕಣ್ಣು ತೆರೆಸಿತು. ನಾವು ನೀಡುವ ರಕ್ತ ಅಮೂಲ್ಯ ಪ್ರಾಣ ಉಳಿಸುತ್ತಲ್ಲ, ಅದಕ್ಕಿಂತ ಹೆಚ್ಚಿನ ಸಮಾಜ ಸೇವೆ ಯಾವುದಿದೆ ಎಂದು ಅನ್ನಿಸಿತು. ಅದಕ್ಕಿಂತ ಮೊದಲು ಎನ್‌ಸಿಸಿ ಶಿಬಿರದಲ್ಲಿ ಐದಾರು ಬಾರಿ ರಕ್ತದಾನ ಮಾಡಿದ್ದೆ.

ಆದರೆ, ಆಗ ಹುಡುಗಾಟವಿತ್ತು. ನನ್ನದ್ದು ಅಪರೂಪದ ರಕ್ತದ ಗುಂಪಾಗಿದ್ದರಿಂದ ದಾವಣಗೆರೆಯ ವೈದ್ಯರೆಲ್ಲ ಸೂಕ್ತ ಗುಂಪಿನ ರಕ್ತ ಸಿಗದಾಗ ನನಗೆ ಹೇಳಿ ಕಳುಹಿಸುತ್ತಿದ್ದರು. ಹಾಗೆಯೇ ಸ್ನೇಹಿತರೆಲ್ಲ ಸೇರಿ ಲೈಫ್‌ಲೈನ್ ಎಂಬ ಸಂಸ್ಥೆ ಆರಂಭಿಸಿದೆವು. ಅದರ ಮೂಲಕ ರಕ್ತದಾನ ಶಿಬಿರ, ರಕ್ತದಾನದ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಿಯಮಿತವಾಗಿ ಮಾಡುತ್ತೇವೆ~ ಎನ್ನುತ್ತಾರೆ ಆದಿಕೇಶವ.

`ಕಾಲೇಜು ದಿನಗಳಲ್ಲಿ ನಾನು ಅತ್ಯುತ್ತಮ ಫುಟ್‌ಬಾಲ್ ಆಟಗಾರನಾಗಿದ್ದೆ. ರಾಜ್ಯ ಮಟ್ಟದಲ್ಲೂ ಆಟವಾಡಿದ್ದೆ.  ಸೈಕ್ಲಿಂಗ್ ಅಂದರೆ ಪಂಚಪ್ರಾಣವಾಗಿತ್ತು. ಅಪಘಾತದಲ್ಲಿ ಕಾಲು ಮುರಿದ ಮೇಲೆ ಫುಟ್‌ಬಾಲ್, ಸೈಕ್ಲಿಂಗ್ ಎಲ್ಲವನ್ನೂ ಬಿಡಬೇಕಾಯಿತು. ಆದರೆ, ಜೀವಗಳನ್ನು ಉಳಿಸುವ ರಕ್ತದಾನ ಕಾರ್ಯದಲ್ಲಿ ತೊಡಗಿಕೊಂಡೆ. ಅದಕ್ಕಾಗಿ ಅಂತಹ ವಿಷಾದವಿಲ್ಲ~ ಅನ್ನುತ್ತಾರೆ ಅವರು.

`ಒಮ್ಮೆ ರಕ್ತ ನೀಡಿದಲ್ಲಿ ಮೂರು ತಿಂಗಳವರೆಗೆ ರಕ್ತ ನೀಡುವಂತಿಲ್ಲ. ಆಗಷ್ಟೇ ತಿಂಗಳ ಹಿಂದೆ ರಕ್ತ ನೀಡಿದ್ದೆ. ಹಿಮೋಫಿಲಿಯಾದಿಂದ ಬಳಲುತ್ತಿದ್ದ  ಶಿರಸಿಯ ಪುಟ್ಟ ಬಾಲಕನಿಗೆ ತುರ್ತಾಗಿ ರಕ್ತ ಬೇಕಿತ್ತು. ಆತನಿಗೆ ಹಿಮೋಫಿಲಿಯಾ ಇದೆ ಎಂದು ಗೊತ್ತಿಲ್ಲದ ದಂತವೈದ್ಯರು ಮುಂಜಾಗ್ರತೆ ವಹಿಸದೇ ಹಲ್ಲು ಕಿತ್ತಿದ್ದರು.
 
ಅತಿಯಾದ ರಕ್ತಸ್ರಾವದಿಂದ ಆ ಬಾಲಕ ನಿತ್ರಾಣಗೊಂಡಿದ್ದ. ಆಗ, ಧೈರ್ಯ ಮಾಡಿ 200 ಎಂಎಲ್ ರಕ್ತ ನೀಡಿದೆ. ತಲಸೆಮಿಯಾದಿಂದ ಬಳಲುತ್ತಿದ್ದ ಕ್ರೈಸ್ತ ಬಾಲಕನೊಬ್ಬನಿಗೆ ಒಮ್ಮೆ ರಕ್ತ ನೀಡಿ ಜೀವ ಉಳಿಸಿದ್ದೆ. ಆತ ಪ್ರತಿ ವರ್ಷ ಕ್ರಿಸ್‌ಮಸ್ ಕೇಕ್ ಕಳುಹಿಸುತ್ತಾನೆ~ ಎನ್ನುತ್ತ ನೆನಪಿನ ಬುತ್ತಿ ಬಿಚ್ಚುತ್ತಾರೆ ಆದಿಕೇಶವ.

ಅವರು ತಮ್ಮ ಕುಟುಂಬದವರನ್ನೂ ರಕ್ತದಾನಕ್ಕೆ ಪ್ರೇರೇಪಿಸಿದ್ದಾರೆ. ಸ್ವತಃ ಅಂಗವಿಕಲರಾಗಿದ್ದರೂ ಇವರ ಸಹೋದರ ಹಲವು ಬಾರಿ ರಕ್ತದಾನ ಮಾಡಿದ್ದಾರೆ. ಇವರ ಪತ್ನಿ ಉಷಾ ಮದುವೆಯ ದಿನವೇ ರಕ್ತದಾನ ಮಾಡಿದ್ದರು.

`ನೀವು ನೀಡುವ 300 ಮಿಲಿ ಲೀಟರ್ ರಕ್ತ, ಅಪಘಾತಕ್ಕೆ ತುತ್ತಾದ ವ್ಯಕ್ತಿಗೆ, ರೋಗಪೀಡಿತ ಪುಟ್ಟ ಕಂದಮ್ಮನಿಗೆ, ಹೆರಿಗೆ ಕೋಣೆಯಲ್ಲಿ ಒದ್ದಾಡುತ್ತಿರುವ ಗರ್ಭಿಣಿಗೆ ಜೀವದಾನ ನೀಡೀತು. ಆರೋಗ್ಯವಂತರಾಗಿದ್ದಲ್ಲಿ ಒಮ್ಮೆಯಾದರೂ ಮರೆಯದೇ ರಕ್ತದಾನ ಮಾಡಿ~ ಎನ್ನುವುದು ಅವರ ಮೊರೆ. ಸಂಪರ್ಕ ಸಂಖ್ಯೆ: 78994 75111

ರಕ್ತದಾನಕ್ಕೆ ಒಂದಿಷ್ಟು ಮಾಹಿತಿ..
* 18ರಿಂದ 60 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
* ನೆಗಟಿವ್ ರಕ್ತದ ಗುಂಪು ಅಪರೂಪ. ಹೀಗಾಗಿ ಒ, ಎ, ಬಿ, ಎಬಿ ನೆಗೆಟಿವ್ ಗುಂಪಿನ ರಕ್ತಗಳಿಗೆ ಭಾರೀ ಬೇಡಿಕೆ.
* ರಕ್ತ ಹೆಪ್ಪುಗಟ್ಟದೇ ಇರುವ ಹಿಮೋಫಿಲಿಯಾ ಅಥವಾ ಕುಸುಮ ರೋಗ ಮತ್ತು ರಕ್ತದ ಕಣಗಳು ಉತ್ಪಾದನೆಯಾಗದೇ ರಕ್ತಹೀನತೆ ಆಗುವ ತಲಸೆಮಿಯಾ ರೋಗಿಗಳಿಗೆ ನಿಯಮಿತವಾಗಿ ರಕ್ತ ಬೇಕಾಗುತ್ತದೆ (ಈ ಎರಡೂ ನ್ಯೂನತೆಗಳು ವಂಶವಾಹಿಯಲ್ಲಿನ ದೋಷದಿಂದ ಬರುತ್ತವೆ)
* ರಕ್ತವನ್ನು ಎ,ಬಿ ಮತ್ತು ಒ ಗುಂಪುಗಳಲ್ಲಿ ವರ್ಗೀಕರಿಸಿದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಕಾರ್ಲ್ ಲ್ಯಾಂಡ್‌ಸ್ಟೈನರ್ ಜನ್ಮದಿನದ ನೆನಪಿನಲ್ಲಿ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನ ಆಚರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT